ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ || ಪಲ್ಲವಿ||
ಕೂಡುವಾಗಲಿ ನಿಂತಾಡುವಾಗಲಿ ಮತ್ತೆ
ಹಾಡುವಾಗಲಿ ಹರಿದಾಡುವಾಗಲಿ
ಖೋಡಿ ವಿನೋದದಿ ನೋಡದೆ ನಾ ಬಲು
ಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ||
ಊರಿಗೇ ಹೋಗಲಿ ಊರೊಳಗಿರಲಿ
ಕಾರಣಾರ್ಥಂಗಳೆಲ್ಲ ಕಾದಿರಲಿ
ವಾರಿಜನಾಭ ನರಸಾರಥಿ ಸನ್ನುತ
ಸಾರಿ ಸಾರಿಗೇ ನಾ ಬೇಸರದ್ಹಾಗೆ||
ಹಸಿವಿದ್ದಾಗಲಿ ಹಸಿವಿಲ್ಲದಾಗಲಿ
ರಸಕಸಿ ಇರಲಿ ಹರುಷಿರಲಿ
ವಸುದೇವಾತ್ಮಕ ಶಿಶುಪಾಲಕ್ಷಯಾ
ಅಸುರಾಂತಕ ನಿನ್ನ ಹೆಸರು ಮರೆಯದ್ಹಾಗೆ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟಿರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ||
ಕನಸಿನೊಳಾಗಲಿ ಕಳವಳಿಕಾಗಲಿ
ಮನಸುಗೊಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ಚರಣ ಕಮಲವನು
ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳೋ ಹಾಗೆ||
ಜ್ವರ ಬಂದಾಗಲಿ ಚಳಿ ಬಂದಾಗಲಿ
ಮರಳಿ ಮರಳಿ ಮತ್ತೆ ನಡುಗುವಾಗಲಿ
ಹರಿನಾರಾಯಣ ದುರಿತನಿವಾರಣನೆಂದು
ಇರುಳು ಹಗಲು ನಿನ್ನ ಸ್ಮರಣೆ ಮರೆಯದ್ಹಾಗೆ||
ಸಂತತ ಹರಿ ನಿನ್ನ ಸಾಸಿರ ನಾಮವು
ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಟ್ಠಲರಾಯನೆ
ಅಂತ್ಯ ಕಾಲದಲ್ಲಿ ಚಿಂತಿಸೋಹಾಗೇ||