ಕವಿ –  ಡಿ.ಎಸ್.ಕರ್ಕಿ

ಹಾಡು ಕೇಳಿ

ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ
ಹಚ್ಚೇವು ಕನ್ನಡದ ದೀಪ||

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿಡಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ|| 

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ
ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ?
ನಾಡೊಲವೆ ನೀತಿ ಹಿಡಿ ನೆನಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ||

ಕರುನಾಡಿನವರಿವ ನೆರೆತೀವಿ ಭಾವ-
ದಲಿ ಜೀವನಾಡಿ ನುಡಿಸೇವು
ತೆರೆತೆರೆದ ಕಣ್ಣಿನಲಿ ನೇಹವೆರೆದು
ನವ ಜ್ಯೋತಿಯನ್ನೆ ಮುಡಿಸೇವು
ನಮ್ಮನ್ನವುಂಡು ಅನ್ಯಾಯಗೈಯು
ವಂಥವರ ಹುಚ್ಚ ಬಿಡಿಸೇವು
ಇಹುದೆಮಗೆ ಛಲವು
ಕನ್ನಡರ ಬಲವು ಕನ್ನಡದ ಒಲವು ಹಿಡಿನೆನವು
ನಮ್ಮದೆಯ ಕೆಚ್ಚುನೆಚ್ಚುಗಳನೂಡಿ ಹಚ್ಚೇವು ಕನ್ನಡದ ದೀಪ||

ನಮ್ಮವರು ಗಳಿಸಿದಾ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ
ಕಡೆದೇವು ಇರುಳ
ಪಡೆದೇವು ತಿರುಳ ಹಿಡಿನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ||
*                          *                             *

ಕನ್ನಡ ಬಾಂಧವರಿಗೆಲ್ಲ ಸುವರ್ಣ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!

6 thoughts on “ಹಚ್ಚೇವು ಕನ್ನಡದ ದೀಪ – ಡಿ.ಎಸ್.ಕರ್ಕಿ”

 1. ಕವನ ತುಂಬಾ ಚೆನ್ನಾಗಿದೆ, ನಾನು ಹೈಸ್ಕೂಲ್ ನಲ್ಲಿ ಇದ್ದಾಗ ಈ ಹಾಡನ್ನು ಕನ್ನಡ ರಾಜ್ಯೋತ್ಸವಕ್ಕೆ ಹಾಡಿದ್ದೆ(ಗೆಳತಿಯರ ಜೊತೆ). ಈಗ ಮತ್ತೆ ಈ ಹಾಡು ಹಳೆಯ ನೆನಪಿನಂಗಳಕ್ಕೆ ಕರೆದೊಯ್ದಿದೆ.

  ಈ ಹಾಡಲ್ಲಿ ಬರೆದಿರುವ ಕೆಲವು ಸಾಲುಗಳು ಈಗಿನ ಕನ್ನಡದ ಜನತೆಗೆ ತಕ್ಕಂತಿದೆ ಅನ್ನಿಸತ್ತೆ. ‘ಬಹುದಿನಗಳಿಂದ ಮೈ ಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು’ ಹೌದು , ಕನ್ನಡ ರಾಜ್ಯೋತ್ಸವ ಬರುವವರೆಗೆ ಕನ್ನಡವನ್ನ ಮೂಟೆ ಕಟ್ಟಿಟ್ಟು ಅದು ಬಂದಾಗ ಧೂಳು ಹೊಡೆದು ಕನ್ನಡದ ಅಭಿಮಾನ ಮೆರೆಸುವವರು. ಅವತ್ತಿನ ದಿನ ಕಳೆದರೆ ಮುಗಿಯಿತು ಇನ್ನು ಮುಂದಿನ ರಾಜ್ಯೋತ್ಸವದ ತನಕ ಅದರ ಯೋಚನೆ ಇರಲ್ಲ. ಇನ್ನು ಮುಂದಿನ ಸಾಲು ‘ನಮ್ಮನ್ನವುಂಡು ಅನ್ಯಾಯಗೈಯ್ಯುವಂಥವರ ಹುಚ್ಚು ಬಿಡಿಸೇವು’ ಅದನ್ನ ಮಾಡಲು ಮಾತ್ರ ನಮ್ಮ ಕನ್ನಡಿಗರಿಗೆ ಈ ಜನ್ಮದಲ್ಲಿ ಸಾದ್ಯವಿಲ್ಲ ಅನ್ನಿಸತ್ತೆ. ಬೇರೆಯವರಿಗೆ ಮಣೆ ಹಾಕುವುದರಲ್ಲಿ ನಿಸ್ಸೀಮರು ನಮ್ಮವರು.

  ಇವತ್ತು ನಮ್ಮ ನಾಡಿನ ಗಾಳಿ, ನೀರು ಕುಡಿದು ನಮ್ಮವರನ್ನೇ ಬಿಕ್ಷುಕರು ಎನ್ನುವವರನ್ನ ಕ್ಷಮಿಸುವಷ್ಟು ಧಾರಾಳಿಗಳು ನಮ್ಮ ಕನ್ನಡಿಗರು. ಕನ್ನಡ ಮಾತನ್ನಾಡಿದರೇ ನಮಗೆ ಅವಮಾನ ಎಂದು ಭಾವಿಸುವ ಜನಾಂಗ ಬೆಳೆದಿರುವಾಗ ನಮ್ಮ ಮುಂದಿನ ಪೀಳಿಗೆಯ ಕಂದಮ್ಮಗಳಿಗೆ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ? ಮುಂದಿನ ಪೀಳಿಗೆಯಲ್ಲಿ ಕನ್ನಡದ ದೀಪ ಹಚ್ಚುವವರು ಯಾರು?

  ಒಟ್ಟಿನಲ್ಲಿ ಕನ್ನಡ ರಾಜ್ಯೋತ್ಸವದ ದಿನವಾದರೂ ಕನ್ನಡದ ದೀಪವನ್ನು ಹಚ್ಚಿದರೆ ಅದೇ ಕನ್ನಡದ ತಾಯಿಗೆ ನಾವು ನೀಡುವ ಒಂದು ಅಮೂಲ್ಯ ಕಾಣಿಕೆ. ಕಟುವೆನಿಸಿದರೆ ದಯಮಾಡಿ ಕ್ಷಮಿಸಿ.

 2. ತ್ರಿವೇಣಿಯವರೇ,

  >>ಒಡಲೊಡಲ ಕೆಚ್ಚಿನಾ ಕಿಡಿಗಳನ್ನು
  ಗಡಿನಾಡಿನಾಚೆ ತೂರೇವು

  ಇದು ಎಷ್ಟರ ಮಟ್ಟಿಗೆ ನಿಜ..ಗಡಿನಾಡಿನಾಚೆ ತೂರುವುದು ಇರಲಿ..ನಮ್ಮ ಜನ ನಮ್ಮ ನಾಡಿಗೆ ಕಿಚ್ಚು ಹಚ್ಚುವ ಕಾರ್ಯ ನಡೆಸಿಲ್ಲ..

  ಇರಲಿ..ಸುವರ್ಣ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು !

 3. ಮೀರಾ,ಶಿವು, ನಿಮ್ಮಿಬ್ಬರ ಮಾತುಗಳನ್ನೂ ಒಪ್ಪುತ್ತೇನೆ. ಆದರೆ ಮತ್ತೆ ಮತ್ತೆ ಅದೇ ನಿರಾಶಾವಾದದ ಮಾತುಗಳನ್ನು ಆಡಿಕೊಳ್ಳುವುದರಿಂದ ಏನು ಪ್ರಯೋಜನ? ಬೇರೆಯವರು ಏನಾದರೂ ಮಾಡಿಕೊಂಡು ಹೋಗಲಿ, ನಮ್ಮ ಕೈಲಾದದ್ದು ನಾವು ಮಾಡೋಣ. ಕನ್ನಡ ಅಭಿಮಾನವನ್ನು ನಮ್ಮೆದೆಯಲ್ಲಿ ಜೀವಂತವಾಗಿಟ್ಟುಕೊಳ್ಳೋಣ. ಆಗದೇ?

 4. ರೋಮಾಂಚನಗೊಳಿಸುವಂತಹ ಗೀತೆ.

  ಅದ್ಭುತ ಸಾಹಿತ್ಯ. ಕರ್ಕಿ ಬರೆದಾಗ ಯಾವ ಪರಿಸ್ಥಿತಿ ಇತ್ತೋ ಇವತ್ತಿಗೂ ಅದೇ ಪರಿಸ್ಥಿತಿ ಇದೆ.
  ಬದಲಿಸಲು ಪಣ ತೊಡಬೇಕಾದ ಸಮಯ ಎಂದೊ ಬಂದಾಯ್ತು.

  ನನ್ನ ಆಶಾವಾದ ಸುಳ್ಳಾಗದಿದ್ದಲ್ಲಿ, “ಹಚ್ಚೇವು ಕನ್ನಡದ ದೀಪ”, ಆಶಾವಾದ ಸುಳ್ಳಾದಲ್ಲಿ “ಹಚ್ಚೆವು ಕನ್ನಡದ ದೀಪ” 🙂

  ಇಂತಿ
  ಭೂತ

 5. ಕನ್ನಡ ನನ್ನುಸಿರು ದಯವಿಟ್ಟು ಎಲ್ಲರೂ ಕನ್ನಡ ವನ್ನು ಬಳಸುವಂತೆ ಮಾಡಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.