ಬಾರೊ ಸಾಧನಕೇರಿಗೆ – ಅಂಬಿಕಾತನಯದತ್ತ

photo: totalkannada.com

ಕವಿ – ಅಂಬಿಕಾತನಯದತ್ತ
ಗಾಯಕಿ – ಎಂ.ಡಿ.ಪಲ್ಲವಿ
ಸಂಗೀತ – ಪ್ರವೀಣ್ ಗೋಡ್ಕಿಂಡಿ

ಹಾಡು ಕೇಳಿ 

ಬಾರೊ ಸಾಧನಕೇರಿಗೆ
ಮರಳಿ ನಿನ್ನೀ ಊರಿಗೆ

ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ

ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ?

ಮಲೆಯ ಮೊಗವೆ ಹೊರಳಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಹೂಗೂ ಬೆರಳಿದೆ
ನೆಲಕೆ ಹರಯವು ಮರಳಿದೆ

ಭೂಮಿ ತಾಯೊಡಮುರಿದು ಎದ್ದಳೋ
ಶ್ರಾವಣದ ಸಿರಿ ಬರಲಿದೆ

ಮರವು ಮುಗಿಲಿಗೆ ನೀಡಿದೆ
ಗಿಡದ ಹೊದರೊಳು ಹಾಡಿದೆ
ಗಾಳಿಯಲ್ಲೂ ಆಡಿದೆ
ದುಗುಡ ಇಲ್ಲಿಂದೋಡಿದೆ

ಹೇಳು ಗೆಳೆಯ ಬೇರೆ
ಎಲ್ಲೀತರದ ನೋಟವ ನೋಡಿದೆ
ಈತರದ ನೋಟವ ನೋಡಿದೆ?

******************

12 thoughts on “ಬಾರೊ ಸಾಧನಕೇರಿಗೆ – ಅಂಬಿಕಾತನಯದತ್ತ”

 1. ಭುತಾ says:

  ವಿಶ್ವಕವಿ ಎಂಬ ಪಟ್ಟ ಒಂದಿದ್ದರೆ, ಅದು ಬೇಂದ್ರೆ ಮಾಸ್ತರ್ರಿಗೆ ಸೇರ್ಬೇಕು.

  ಬಾರೊ ಸಾಧನ ಕೇರಿಗೆ,
  ಮರಳಿ ನಿನ್ನೀ ಊರಿಗೆ!

  ನಾಡು ಬಿಟ್ಟಿರುವ ನಮ್ಮನ್ನೆಲ್ಲ ಊರು ಸೇರುಬಾ ಎಂದು ಕರೆಯುವ ಪರಿ 🙂

  ನಂದನದ ತುಣುಕೊಂದು ಬಿದ್ದಿದೆ
  ನೋಟ ಸೇರದು ಯಾರಿಗೆ?

  ನಮಗೆ ಹೊಟ್ಟೆ ಉರೊಸೊಕ್ಕೆ ಇದು 🙁

  ಭೂಮಿ ತಾಯೊಡಮುರಿದು ಎದ್ದಳೋ
  ಶ್ರಾವಣದ ಸಿರಿ ಬರಲಿದೆ

  ಇದು ಉತ್ಪ್ರೇಕ್ಷೆಯ ಮಹಾಪೂರ. ನನ್ನಲ್ಲಿ ವರ್ಣಿಸಲು ಪದಗಳಿಲ್ಲ ಎಂಬುದು ಉತ್ಪ್ರೇಕ್ಷೆಯಲ್ಲ 🙂

  ಹೇಳು ಗೆಳೆಯ ಬೇರೆ
  ಎಲ್ಲೀತರದ ನೋಟವ ನೋಡಿದೆ
  ಈತರದ ನೋಟವ ನೋಡಿದೆ?

  ಖಂಡಿತವಾಗಿಯು ನೋಡಿಲ್ಲ.

  ಈ ಅಭೂತಪೂರ್ವ ಕವನವನ್ನು ಇಲ್ಲಿ ಇರಿಸಿ, ಅದರ ಸಾಹಿತ್ಯ ಒದಗಿಸಿದ್ದಕ್ಕೆ, ನಿಮಗೆ ವಂದನೆಗಳು.

  ಇಂತಿ
  ಭೂತಲ್ಪ

 2. ಈ ಹಾಡನ್ನ ಕೇಳುತ್ತಿದ್ದರೆ(ಸಾಹಿತ್ಯ ಓದುತ್ತಿದ್ದರೆ) ನನ್ನ ಮಲೆನಾಡಿನ ಊರು ನೆನಪಿಗೆ ಬರುತ್ತದೆ. ಮಳೆಗಾಲ ಕಳೆದು ವಸಂತ ಶುರುವಾದರೆ ಸಾಕು ಎಲ್ಲಿ ನೋಡಲು ಹಸಿರು, ಮರಗಿಡಗಳಲ್ಲಿ ಹೂಗಳು, ಇಡೀ ಸಹ್ಯಾದ್ರಿ ಪರ್ವತ ಮಳೆಯಿಂದ ಶುಭ್ರವಾಗಿ ಮೌನವಾಗಿ ತಪಸ್ಸು ಮಾಡುತ್ತಿರುವಂತೆ ಕಾಣುತ್ತದೆ. ಅಂಥ ಪ್ರಕೃತಿ ಸೊಬಗನ್ನ ನಾನು ಇಲ್ಲೆಲ್ಲೂ ಅನುಭವಿಸಿಲ್ಲ. ಇಂದಿಗೂ ಅಲ್ಲಿ ಕಳೆದ ದಿನಗಳು, ಆ ವಾತಾವರಣ ನನ್ನನ್ನು ಕಾಡುತ್ತಲೇ ಇರುತ್ತದೆ. ಈ ಹಾಡು ಪುನ: ಅಂಥದ್ದೇ ಅನುಭವ ತಂದು ಕೊಟ್ಟಿದೆ. ಬರುವೆ ನಾ ಸಾಧನ ಕೇರಿಗೆ ಮರಳಿ ನನ್ನೀ ಊರಿಗೆ ಎಂದು ಹೇಳಲು ನನ್ನಿಂದ ಸಾಧ್ಯವೇ? 🙁

  ಮಲೆಯ ಮೊಗವೇ ಹೊರಳಿದೆ , ಕೋಕಿಲ ಸವಿ ಕೊರಳಿದೆ ಇದು ನಂಗೆ ತುಂಬಾ ಇಷ್ಟವಾದ ಸಾಲುಗಳು. ಇದನ್ನು ನಾನು ಬರೀ ಓದುತ್ತಿಲ್ಲ ಬದಲಿಗೆ ನೋಡುತ್ತಿದ್ದೇನೆ.

  ಮತ್ತೆ ನನ್ನಲ್ಲಿಗೆ ಕರೆದೊಯ್ದದ್ದಕ್ಕೆ ಧನ್ಯವಾದಗಳು.:)

 3. sritri says:

  ಅಯ್ಯಯ್ಯಪ್ಪ, ಬೇಂದ್ರೆ ಕವಿತೆ ಓದಿ ಭೂತಪ್ಪನೂ ಕವಿಯಾಗ್ತಿರೋ ಹಾಗಿದೆಯಲ್ಲಪ್ಪಾ !!  ಭೂತದ ಬಾಯಲ್ಲಿ ಭಾವಗೀತೆ:)

  ನಂದನದ ತುಣುಕೊಂದು ಬಿದ್ದಿದೆ
  ನೋಟ ಸೇರದು ಯಾರಿಗೆ?

  ನಮಗೆ ಹೊಟ್ಟೆ ಉರೊಸೊಕ್ಕೆ ಇದು –

  ಹೌದು. ಬೇಂದ್ರೆಯವರು ಯಾರ ಹೊಟ್ಟೆ ಉರಿಸೋದಕ್ಕೆ ಈ ಸಾಲು ಬರೆಯದಿದ್ದರೂ ನಮ್ಮಂತಹ ಪರದೇಶಿಗಳಿಗೆ ಹಾಗೆಯೇ ಅನ್ನಿಸೋದು. 🙂

 4. ಬೇಂದ್ರೆಯವರೂ ‘ಪನ್’ಟರಾಗಿದ್ದರು. “ನಂದನದ ತುಣುಕೊಂದು ಬಿದ್ದಿದೆ” ಎಂದು ಅವರು ಹೇಳಿದ್ದರ ಅರ್ಥ “ನಂ ದನದ ತುಣುಕೊಂದು ಬಿದ್ದಿದೆ” ಅಂದರೆ ನಮ್ಮ ದನ ಸ್ವಲ್ಪ ಸೆಗಣಿ ಹಾಕಿದೆ, ಸಾಧನಕೇರಿಯ ಹಾದಿಯಲ್ಲಿ ಬರುವಾಗ ಸೆಗಣಿ ತುಳಿಯಬೇಡಿ ಎಂಬ ಎಚ್ಚರ. ಒಂದು ವೇಳೆ ಸೆಗಣಿ ತುಳಿದು ನೀವು ಜಾರಿ ಬಿದ್ದರೆ, ‘ಜಾರಿ ಬಿದ್ದ ಜಾಣ’ ಆದರೆ ಆ ನೋಟ ಸೇರದು ಯಾರಿಗೆ?!
  🙂

  ಶ್ರೀವತ್ಸ ಜೋಶಿ

 5. sritri says:

  ಮೀರಾ, ನೀನು ಇಷ್ಟು ಸುಲಭವಾಗಿ ಇಲ್ಲಿಂದ ಅಲ್ಲಿಗೆ ಹೋಗಿ ಬರ್ತೀಯಾ ಅಂದ್ರೆ, ದಿನ ಒಂದೊಂದು ಹೊಸ ಊರಿಗೆ ಹೋಗಿ ರೌಂಡ್ ಹೊಡೆದುಕೊಂಡು ಬರಬಹುದು 🙂

 6. sritri says:

  ಜೋಶಿಯವರೆ, “ನಂ ದನ” ಅಂತ ಕುವೆಂಪು ಅವರು ಹೇಳಿದ್ರೆ ನಿಮ್ಮ ಮಾತನ್ನು ನಂಬಬಹುದಿತ್ತೇನೋ. ಬೇಂದ್ರೆಯವರ ಮನೆಯಲ್ಲಿ ಹಸು,ಕರುಗಳು ಇದ್ದ ಬಗ್ಗೆ ಎಲ್ಲೂ ಓದಿದ ನೆನಪಿಲ್ಲ ನನಗೆ 🙂

 7. ವೇಣಿ, ಜೋಶಿ ಅವರು ಬರೆದಿರುವುದು ‘ಸಾಧನ ಕೇರಿಯ ಹಾದಿಯಲ್ಲಿ’ ಅಂತ, ಹಾದಿಯಲ್ಲಿ ನಮ್ಮ ಮನೆಯ ಹಸು, ಕರುಗಳೇ ಸಗಣಿ ಹಾಕಬೇಕಾಗಿಲ್ಲ ಅಲ್ಲವೇ?:))

  ಶ್ರೀವತ್ಸ ಜೋಷಿಯವರೇ, ನಮ್ಮ ಊರಿನ ದೊಡ್ಡಬ್ರಾಹ್ಮಣರ ಕೇರಿಯ ಹಾದಿಯ(ಸಾಧನ ಕೇರಿಯ ಹಾದಿಯಲ್ಲ) ತುಂಬಾ ಬರೀ ಬೀಡಾಡಿ ದನಗಳ ಸಗಣಿಯೇ:) , ಆದರೆ ನಾನು ಯಾವತ್ತೂ ಜಾರಿ ಬಿದ್ದ ಜಾಣಿಯಾಗಲಿಲ್ಲ. ನೀವು ಬರೆದಿರುವುದನ್ನ ಓದಿ ಮಾತ್ರಾ ಸಿಕ್ಕಾಪಟ್ಟೆ ನಗು ಬಂತು.

 8. sritri says:

  ಜೋಶಿಯವರೇ, ನಿಮ್ಮ ಕಿತಾಪತಿಗೆ ಏನು ಮಾಡೋಣ? ಇಷ್ಟು ದಿನ ನಂದನ ಅಂದರೆ ಇಂದ್ರನ ತೋಟದ  ಸುಂದರ ಚಿತ್ರ ಕಣ್ಮುಂದೆ ಬರುತ್ತಿತ್ತು. ಈಗ ನಂದನ ಅಂದರೆ ನಮ್ ದನ ಅಂತಾನೇ ಕೇಳಿಸುತ್ತಿದೆ. 🙂

 9. ಮೀರಾ ಕೃಷ್ಣmUರ್ತಿಯವರಿಗೆ:

  ಬೀಡಾಡಿ ದನಗಳು (ಮತ್ತು ಅದರಿಂದಾಗಿ ಅವುಗಳ ಸೆಗಣಿ) ಇರುವ ಕೇರಿಯನ್ನು ಸಾ’ದನ’ಕೇರಿ ಎನ್ನಬಹುದು!

  ತ್ರಿವೇಣಿಯವರಿಗೆ:

  ಇಂದ್ರನ ತೋಟವನ್ನು ನೀವು ನೋಡಿದ್ದು ಯಾವಾಗ?

 10. ಭುತಾ says:

  ಬಿಬಿನ, ಏಬಿನ, ನನಸಾ 🙂

 11. sritri says:

  ಭೂತದ ಭಾಷೆ ನಂಗೂ ಸ್ವಲ್ಪ ಸ್ವಲ್ಪ ಅರ್ಥ ಆಯ್ತು 🙂

 12. Shiv says:

  ಬೇಂದ್ರೆ ಅಜ್ಜನ ಸಾಧನಕೇರಿಗೆ ಕರಕೊಂಡು ಹೋಗಿದ್ದಕ್ಕೆ ವಂದನೆಗಳು ತ್ರಿವೇಣಿಯವರೇ!

Leave a Reply to ಭುತಾ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ನಿರಂತರ – ಬಿ. ಆರ್. ಲಕ್ಷ್ಮಣರಾವ್ನಿರಂತರ – ಬಿ. ಆರ್. ಲಕ್ಷ್ಮಣರಾವ್

ಕವಿ: ಬಿ. ಆರ್. ಲಕ್ಷ್ಮಣರಾವ್ ಕವನ ಸಂಕಲನ : ಸುಬ್ಬಾಭಟ್ಟರ ಮಗಳು ಪ್ರೇಮಕಥೆಗಳಿಗೆ ಕೊನೆಯುಂಟೆ ರಾಧಾ ಮಾಧವರಿರೊ ತನಕ? ಪ್ರೇಮ ಪ್ರವಾಹಕೆ ಯಾವ ತಡೆ ಜಾತಿ ಅಂತಸ್ತು ಧನ ಕನಕ? ಪ್ರಕೃತಿಯಂತೆಯೇ ಪ್ರೇಮ ಸಹ ನಿತ್ಯ ವಿನೂತನ; ಹೊಸ ಹೊಸ ಬಣ್ಣ,

ನನ್ನ ಹಾಗೆಯೆ – ಸು ರಂ ಎಕ್ಕುಂಡಿನನ್ನ ಹಾಗೆಯೆ – ಸು ರಂ ಎಕ್ಕುಂಡಿ

ನನ್ನ ಹಾಗೆಯೆ ಸು ರಂ ಎಕ್ಕುಂಡಿ ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ “ಈತನಾರು ತಾತ ಇಲ್ಲಿ ನಿಂತು ನೋಡುತಿರುವನು ಇಂದ್ರಗಿರಿಯ ನೆತ್ತಿಯಲ್ಲಿ ಏನು ಮಾಡುತಿರುವನು?” “ಇವನೆ ಬಾಹುಬಲಿಯು ಮಗು! ಧೀರತನದ ಮೂರ್ತಿಯು! ನುಡಿಯ

ಲಘುವಾಗೆಲೆ ಮನ – ಪುತಿನಲಘುವಾಗೆಲೆ ಮನ – ಪುತಿನ

ಕವಿ – ಪುತಿನ ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ನನಗಂಟಲು ನೀನಾಗುವೆ ಕಷ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು ನೀಲದಾಗಸದ ಹರಹೊಳು ಹಾರುತ