ಕಲ್ಯಾಣ್

ಚಿತ್ರ – ಯಜಮಾನ (೨೦೦೦)
ಸಾಹಿತ್ಯ – ಕೆ.ಕಲ್ಯಾಣ್
ಸಂಗೀತ – ರಾಜೇಶ್ ರಾಮನಾಥ್
ಗಾಯಕ – ರಾಜೇಶ್ ಕೃಷ್ಣನ್

ಹಾಡು ಕೇಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೇ ತಂಗಾಳಿ
ನೀ ಹೇಳೇ ತಂಗಾಳಿ

ಮನಸಾರೆ ಮೆಚ್ಚಿಕೊಳುವೆ
ಹೃದಯಾನ ಬಿಚ್ಚಿಕೊಡುವೆ

ಈ ಭೂಮಿ ಇರುವರೆಗೂ
ನಾ ಪ್ರೇಮಿಯಾಗಿರುವೆ ||ಪ್ರೇಮ ಚಂದ್ರಮ||

ಬಾನಲಿ ಹುಣ್ಣಿಮೆಯಾದರೆ ನೀ
ಸವೆಯಬೇಡ ಸವೆಯುವೆ ನಾ

ಮೇಣದ ಬೆಳಕೇ ಆದರೂ ನೀ
ಕರಗಬೇಡ ಕರಗುವೆ ನಾ

ಹೂದೋಟವೇ ಆದರೆ ನೀನು
ಹೂಗಳ ಬದಲು ಉದುರುವೆ ನಾ

ಹೇಳೆ ತಂಗಾಳಿ
ನೀ ಹೇಳೆ ತಂಗಾಳಿ ||ಪ್ರೇಮ ಚಂದ್ರಮ||

ಈ ಪ್ರತಿರೂಪ ಬಿಡಿಸಲು ನಾ
ನೆತ್ತರಲೆ ಬಣ್ಣವನಿಡುವೆ

ಈ ಪ್ರತಿಬಿಂಬವ ಕೆತ್ತಲು ನಾನು
ಎದೆಯ ರೋಮದ ಉಳಿಯಿಡುವೆ

ಕವಿತೆಯ ಹಾಗೆ ಬರೆದಿಡೆನು
ಉಸಿರನೆ ಬಸಿದು ಪದವಿಡುವೆ

ಹೇಳೆ ತಂಗಾಳಿ
ನೀ ಹೇಳೆ ತಂಗಾಳಿ ||ಪ್ರೇಮ ಚಂದ್ರಮ||

********************

16 thoughts on “ಯಜಮಾನ – ಪ್ರೇಮ ಚಂದ್ರಮ”

 1. ಈ ಹಾಡಿನ ಯಶಸ್ಸು ಯಾರಿಗೆ ಸೇರಬೇಕು ? ಅತ್ಯದ್ಭುತವಾಗಿ ಹಾಡಿದ ರಾ.ಕೃ ಗೋ, ಮನೋಹರವಾಗಿ ಪದಜೋಡಣೆ ಮಾಡಿರುವ ಕೆ.ಕ ಗೋ ? ಇರಲಿ ಇಬ್ಬರಿಗೂ hats off.

  “ಮೇಣದ ಬೆಳಕೇ ಆದರೂ ನೀ ಕರಗಬೇಡ ಕರಗುವೆ ನಾ…”, “ಈ ಪ್ರತಿಬಿಂಬವ ಕೆತ್ತಲು ನಾ ಎದೆಯ ರೋಮದ ಉಳಿಯಿಡುವೆ” ಹೀಗೆ ಬರೆಯುವುದು ಒಬ್ಬ ಹೃದಯವಂತ ಕವಿಗೆ ಮಾತ್ರ ಸಾಧ್ಯ. ಭೇಷ್ ಕಲ್ಯಾಣ್.

  ನಿಮ್ಮನ್ನು ಮರೆಯಲು ಆಗುತ್ತದೆಯೇ ಸ್ವಾಮಿ ರಾಜೇಶ್ ರಾ ಅವರೆ ? ನಿಮ್ಮ ರಾಗ ಸಂಯೋಜನೆಯಿಂದ ಇದನ್ನು evergreen-song ಮಾಡಿದ್ದೀರಿ.

 2. ಈ ಹಾಡನ್ನ ಕೇಳಿದಾಗೆಲ್ಲಾ ನನಗೆ ಮಿಮಿಕ್ರಿ ದಯಾನಂದ್ ಅವರದ್ದೇ ನೆನಪು ಬರುತ್ತದೆ. ಯಾಕೇಂದ್ರೆ ಹಿಂದೆ ಒಂದು ಕಾರ್ಯಕ್ರಮದಲ್ಲಿ ಅವರು ಈ ಒಂದು ಹಾಡನ್ನ ತಗೊಂಡು ಒಬ್ಬೊಬ್ಬ ನಟರು ಯಾವ ಯಾವ ಥರಹ ಅಭಿನಯಿಸುತ್ತಾರೆ ಅಂತ ತೋರಿಸಿದ್ದರು. ಅದನ್ನ ನೆನೆಸಿಕೊಂಡರೇ ನನಗೆ ನಗು ಬರತ್ತೆ ಅದ್ರಲ್ಲೂ ಅಂಬಿ ಥರ ಅನುಕರಣೆ ತುಂಬಾ ತಮಾಷೆಯಾಗಿತ್ತು.

  ‘ಈ ಪ್ರತಿಬಿಂಬವ ಕೆತ್ತಲು ನಾ ಎದೆಯ ರೋಮವ ಉಳಿಯಿಡುವೆ’ 🙂 🙂 !!!!!!!!!!!??? ಯಾವ ಥರವೋ ಅರ್ಥ ಆಗ್ಲಿಲ್ಲ

 3. ತ್ರಿವೇಣಿಯವರೇ,

  ಮತ್ತೊಂದು ಅದ್ಬುತ ಹಾಡಿನೊಂದಿಗೆ ಬಂದಿದ್ದೀರಾ..
  ಎನು ಗೊತ್ತಾ..ಇವತ್ತು ಡ್ರೈವ್ ಮಾಡಬೇಕಾದರೆ ಈ ಹಾಡು ಕೇಳ್ತಾ ಇದ್ದೆ..ಇಲ್ಲಿ ಬಂದಾಗ ಅದೇ ಹಾಡು 🙂

  ಪ್ರೇಮಕವಿ ಕಲ್ಯಾಣ್‍ಗೆ ಈ ಸುಂದರ ಹಾಡು ನೀಡಿದ್ದಕ್ಕೆ ವಂದನೆಗಳು

 4. ಮೀರಾ ರವರು ಹೇಳಿದ ಹಾಗೆ, ಅದೇ ಪ್ರಶ್ನೆ ಕೇಳುವವನಿದ್ದೆ.

  ಬಹುಷಃ, ತಮಿಳಿನಿಂದ ಸಾಹಿತ್ಯವನು ಎರವಲು ಪಡೆದಿರುವುದರಿಂದ ಹೀಗಾಗಿದ್ದಿಯೇನೊ.

  “ಹೂದೋಟವೆ ಆದರೆ ನೀನು, ಹೂಗಳಬದಲು ಉದುರುವೇ ನಾ”, ನೆನಸಿಕೊಂಡ್ರೆ ಭಯ ಆಗುತ್ತೆ 🙂

  ಇಂತಿ
  ಭೂತ

 5. ಭೂತ ಮತ್ತು ಮೀರಾ, “ಎದೆಯ ರೋಮದ ಉಳಿಯುಡುವೆ” – ಈ ಸಾಲು ಅರ್ಥಹೀನ ಅಂತ ನನಗೆ ಅನ್ನಿಸಲಿಲ್ಲ. ನನಗೆ ಅರ್ಥವಾಗಿರೋದನ್ನು ನಿಮಗೆ ಇಲ್ಲಿ ಅರ್ಥ ಮಾಡಿಸುವುದು ಕಷ್ಟ. ಆದರೂ ಪ್ರಯತ್ನಿಸುತ್ತೇನೆ –

  ಶಿಲ್ಪಿಗೆ ತಾನು ಕೆತ್ತಲಿರುವ ಶಿಲ್ಪದ ಮೇಲೆ ಎಷ್ಟೇ ಪ್ರೀತಿಯಿದ್ದರೂ ಉಳಿಯ ಪೆಟ್ಟಿನಿಂದ ಅದನ್ನು ತಪ್ಪಿಸಲು ಸಾಧ್ಯವಿಲ್ಲ.ಹಾಗಾಗಿ ಇಲ್ಲಿ ಪ್ರೇಮಿ ತನ್ನ ಪ್ರೇಮಭರಿತ ಎದೆಯ ರೋಮವನ್ನೇ ಉಳಿಯಾಗಿಸಿಕೊಂಡಿದ್ದಾನೆ . – ಈರೀತಿ ಈಗಾಗಲೇ ಎಷ್ಟೋ ಕವಿಗಳು ಬರೆದಿರಬಹುದು, ಇದರಲ್ಲೇನು ಸ್ವಾರಸ್ಯವಿಲ್ಲ. – ಸ್ವಾರಸ್ಯವಿರುವುದು ಮುಂದೆ…..

  ಎದೆಯ ರೋಮವನ್ನು ಉಳಿಯಾಗಿಸಲು ಮೊನಚುಗೊಳಿಸಿದಾಗ, ಅದರಿಂದಲೂ ಕಿಂಚಿತ್ತಾದರೂ ನೋವಾಗಲು ಸಾಧ್ಯವಿದೆಯಲ್ಲವೇ? ಈ ಮಹಾನ್ ಪ್ರೇಮಿಗೆ ಆ ನೋವನ್ನೂ ಕೂಡ ಪ್ರೇಯಸಿಗೆ ಉಂಟುಮಾಡುವ ಮನಸ್ಸಿಲ್ಲ.ಹಾಗಾಗಿ ಅವನು ಇಲ್ಲಿ ಕಡೆದಿಡಲು ಬಯಸುತ್ತಿರುವುದು ಪ್ರೇಯಸಿಯನ್ನಲ್ಲ, ಆಕೆಯ ಪ್ರತಿಬಿಂಬವನ್ನು!!! –  “ಈ ಪ್ರತಿಬಿಂಬವ ಕೆತ್ತಲು ನಾನು….ಎದೆಯ ರೋಮದ ಉಳಿಯಿಡುವೆ”

  ಶ್ರೀನಿ ಹೇಳಿರುವಂತೆ, ಇದು ಒಬ್ಬ ಹೃದಯವಂತ ಕವಿ ಮಾತ್ರ ಬರೆಯಬಲ್ಲ ಸಾಲುಗಳು – ಹೃದಯವಂತರಿಗಾಗಿ ಮಾತ್ರ!! 🙂

 6. ಶಿವ್, ನಿಮ್ಮ ಪಾತರಗಿತ್ತಿಯ ಇತ್ತೇಚೆಗಿನ  ಸವಿ ಓಲೆ….ಪೋಸ್ಟ್ ನೋಡಿದ ಮೇಲೆ , ನಿಮಗೆ ಪ್ರಪಂಚವೆಲ್ಲಾ ಪ್ರೇಮಮಯವಾಗಿ , ಸುಂದರವಾಗಿ ಕಾಣಿಸ್ತಾ ಇರೋದರಲ್ಲಿ ಏನೇನೂ ಆಶ್ಚರ್ಯವಿಲ್ಲ. 🙂

  ಅಂದ ಹಾಗೆ, ಈ ಬಾರಿ ಹಾಡನ್ನು ನಾನು ಹಿಡ್ಕೊಂಡು ಬರಲಿಲ್ಲ. ಹಾಡೇ ನನ್ನನ್ನು ಹಿಡ್ಕೊಂಡು ಹೋಯ್ತು!! 🙂

 7. ಭೂತಪ್ಪ, ಮುಂದಿನ ಸಲ ನೀನು ಗಾಳಿ ಸಂಚಾರ ಹೊರಟಾಗ ಈ ಹಾಡಿನ ತಮಿಳು ಲಿಂಕ್ ಹಿಡ್ಕೊಂಡು ಬಾ… ರಾಜೇಶ್ ಅವರ ನವಿರಾದ ದನಿಯಲ್ಲಿ, ಮೃದು,ಮಧುರ ಕನ್ನಡದಲ್ಲಿ ಇಂಪಾಗಿ ಕೇಳಿಸುವ ಈ ಹಾಡು ಅಲ್ಲೂ ಇಷ್ಟೇ ಚೆನ್ನಾಗಿದೆಯಾ ಎಂದು ಕೇಳಿ ನೋಡ್ತೀನಿ.

 8. ಓಹ್ ಈ ಥರಹ ಅರ್ಥ ಇದು. ನನಗೆ ಹೊಳಿಲಿಲ್ಲ.

  “ಈ ಪ್ರತಿಬಿಂಬವ ಕೆತ್ತಲು ನಾ”, ಇದು ಉತ್ಪ್ರೇಕ್ಷಾಲಂಕಾರವಾಗಿ ತೆಗೆದು ಕೊಂಡಿರುವುದಾದರೆ, ನಿಮ್ಮ ವ್ಯಾಖ್ಯಾನ ಒಪ್ಪುವುದಿಲ್ಲ.

  ಕಲ್ಯಾಣಪ್ಪನೆ ಕೇಳ್ಬೇಕು 🙂

  ಇನ್ನು ಆ ತಮಿಳು ಹಾಡು ಕೇಳಿದ್ದು ಯಾವ್ದೊ ವಾದ್ಯಘೋಷ್ಟಿಯಲ್ಲಿ. ಅದರ ಕೊಂಡಿ –

  http://www.musicindiaonline.com/music/tamil/s/movie_name.5605/

  ಎರಡನೆ ಹಾಡು ಕೇಳಿ.

  ಕಲ್ಯಾಣ್ ಗೆ ಯಾವ ವಿದವಾದ ನಮಸ್ಕಾರನು ಈ ಸಾಹಿತ್ಯಕ್ಕಾಗಿ ಕೊಡಲಿಚ್ಚಿಸುವುದಿಲ್ಲ.

  ಇಂತಿ
  ಭೂತ

 9. ಭೂತ, ಲಿಂಕ್‍ಗೆ ಧನ್ಯವಾದ. ಕವಿಗೆ ಬೇಕಿರುವುದು ನಿಮ್ಮ ನಮಸ್ಕಾರವಲ್ಲ. ಮೆಚ್ಚಿಗೆ. ಅದನ್ನು ಕಲ್ಯಾಣ್‍ಗೆ ಕೊಡದಿದ್ದರೂ, ಮೂಲ ಸಾಹಿತ್ಯ ಬರೆದ ಕವಿಗೇ ಕೊಡಬಹುದಲ್ಲ? 🙂

  ನನಗೆ ತಮಿಳು ಅರ್ಥವಾಗಲ್ಲ. ನಾನು ಮೆಚ್ಚೋದು ಕಲ್ಯಾಣ್‍ನೇ!

 10. ಭೂತಪ್ಪನವರೇ ತಮಿಳು ಹಾಡಿನ ಕೊಂಡಿಯನ್ನು ಕೊಟ್ಟು ತುಂಬಾ ಉಪಕಾರ ಮಾಡಿದ್ದೀರಿ, ನಾನು ಬಹಳ ಹಿಂದೆ ಈ ಗೀತೆ ಕೇಳಿದ್ದೆ ಆದರೆ ಅದರ ಸಾಹಿತ್ಯಕ್ಕೆ ಹೆಚ್ಚು ಗಮನ ಕೊಟ್ಟಿರಲಿಲ್ಲ, ಈಗ ಅದನ್ನ ಸರಿಯಾಗಿ ಕೇಳಿದೆ ತುಂಬಾ ಧನ್ಯವಾದಗಳು.

  ಎದೆಯ ರೋಮವನ್ನ ತೆಗೆದು ಪ್ರತಿಬಿಂಬವನ್ನ ಕಡೆಯೋದು ಅನ್ನೋದು ಅರ್ಥವಿಲ್ಲದ್ದು ಅಂತ ನನ್ನ ಅನಿಸಿಕೆ , ನಿನಗೆ ಅನ್ನಿಸಿರೋದು ನೀನು ಬರೆದಿದ್ದೀಯ, ನೀನು ಬರೆದಿರುವುದನ್ನು ಓದಿದ ನಂತರವೂ ನನಗೆ ಹಾಗೆ ಅನಿಸ್ತಾ ಇಲ್ಲ, ಪ್ರೇಮಿಯನ್ನ ನೋಯಿಸೋ ಬಗ್ಗೆ ಅನೋದು ಎಲ್ಲೂ ಕಾಣಿಸಲಿಲ್ಲ ನಂಗೆ, ಇನ್ನು ಇದರಲ್ಲಿ ಸ್ವಾರಸ್ಯ ಅನ್ನೋದು ಏನೂ ಉಳಿದಿಲ್ಲ. ಈ ರೀತಿ ಬರೆದಿರುವ ಅರ್ಥವನ್ನ ಭೂತಪ್ಪ ಹೇಳಿದಂತೆ ಕಲ್ಯಾಣಪ್ಪನೇ ಬಂದು ಹೇಳಬೇಕು.

  ಮೂಲ ಗೀತೆಯಲ್ಲಿ ಇರುವುದರ ಅರ್ಥ ಇದಕ್ಕಿಂತ ಚೆನ್ನಾಗಿದೆ ಮತ್ತೆ ತುಂಬಾ ಸರಳವಾಗಿದೆ. ಅದರಲ್ಲಿ ನನ್ನ ಕಣ್ಣಿನಲ್ಲಿರುವ ನಿನ್ನ ಪ್ರತಿಬಿಂಬವನ್ನ ನನ್ನ ಕಣ್ರೆಪ್ಪೆಯಿಂದ ಬರೆದಿಡುವೆ ಅಂತಿದೆ. (ಇಮೈ ಅಂದರೆ ಕಣ್ಣು ರೆಪ್ಪೆ ಅಂತ ಅರ್ಥ) ಮೂಲದಲ್ಲಿರುವ ಸಾಲುಗಳನ್ನ ಕನ್ನಡದಲ್ಲಿ ಭಟ್ಟಿ ಇಳಿಸುವಾಗ ಕಣ್ಣಿನ ರೆಪ್ಪೇಲಿರೋದೂ ರೋಮವೇ ತಾನೆ ಅದರ ಬದಲು ಎದೆಯ ಅಂತ ಬರೆದಿದ್ದಾರೆ ಅನ್ಸತ್ತೆ.

 11. ಇನ್ನು ರಾಗ ಸಂಯೋಜನೆ ಬಗ್ಗೆ ಎಸ್.ಎ.ರಾಜ್ ಕುಮಾರ್ ಅವರ ರಾಗವನ್ನ ಯಥಾವತ್ತಾಗಿ ಇಳಿಸಿದವರು ನಮ್ಮ ಕನ್ನಡದ ರಾಜೇಶ್ ರಾಮನಾಥನ್ ಅವರು. ಇಬ್ಬರು  ನಕಲುದಾರರಿಗೆ ನನ್ನಿಂದ ಕೂಡ ಯಾವ ಮೆಚ್ಚುಗೆಯೂ ಸಿಗುವುದಿಲ್ಲ.

 12. ತಮಿಳು ಗೀತೆಯಲ್ಲಿರುವ ಅರ್ಥವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಮೀರಾ. ಪೂರ್ತಿ ಹಾಡಿನ ಅರ್ಥ ತಿಳಿಸಿದರೆ ಚೆನ್ನಾಗಿತ್ತು.

 13. ವೇಣಿ,
  ಪ್ರತೀ ಬಾರಿ ಈ ಹಾಡು ಕೇಳಿದಾಗಲೂ, “ಈ ಪ್ರತಿಬಿಂಬವ ಕೆತ್ತಲು ನಾನು, ಎದೆಯ ರೋಮದ ಉಳಿಯಿಡುವೆ” ಅನ್ನುವ ಸಾಲುಗಳು ಯಾಕೋ ಸರಿಯಿಲ್ಲ ಎಂದೇ ಅನ್ನಿಸಿದ್ದು. ಇಲ್ಲಿ ಕವಿತೆಯನ್ನು ಓದಿದಾಗ, “ಈ ಪ್ರತಿಬಿಂಬವ ಕೆತ್ತಲು ನಾನು, ಕಣ್ಣ ರೆಪ್ಪೆಯ ಎರವಿಡುವೆ” ಅನ್ನುವ ಸಾಲು ಸರಿಯಾಗಿತ್ತೇನೋ ಅನ್ನಿಸಿತ್ತು. ಹಾಗೇ, “ಹೂದೋಟವೆ ಆದರೆ ನೀನು, ಹೂಗಳ ಬದಲು ಉದುರುವೆ ನಾ” ಸಾಲುಗಳೂ ಮನಸ್ಸಿಗೆ ಹಿಡಿಸಿಲ್ಲ. ತಮಿಳು ಹಾಡು ಈಗ ಕೇಳಿದೆ, ಅಲ್ಲಿ – “…. ಹೂಗಳ ಬದಲು ಮುದುರುವೆ ನಾ” ಅನ್ನುವ ಅರ್ಥವಿದೆ ಅನ್ನಿಸಿತು, ಸರಿಯೇ? ಅದೇ ಹೆಚ್ಚು ಸಮರ್ಥ ಅನ್ಸತ್ತೆ. ಇದು ನವಿರಾದ ಪ್ರೇಮಗೀತೆಯಾದರೂ ಅಸಹಜ ನವಿರುತನ- ರಸಿಕತೆ, ರೋಚಕತೆ ತರುವ ಬದಲು ಇರುಸು-ಮುರುಸು ತರಿಸಿದರೆ ಚೆನ್ನಾಗಿರಲ್ಲ, ಅಲ್ಲವೆ? “ಎದೆಯ ರೋಮದ ಉಳಿಯಿಡುವ” ಚಿತ್ರಣ ರಸಿಕತೆ, ಕಲಾತ್ಮಕ, ಎರಡೂ ಅಲ್ಲ ಅಂತ ನನ್ನ ಅಭಿಪ್ರಾಯ.

  ಕಲ್ಯಾಣ್ ಒಬ್ಬ ಸಿನಿಮಾ ಸಾಹಿತಿ ಮಾತ್ರವಲ್ಲ, ಒಳ್ಳೆಯ ಕವಿ ಕೂಡಾ; ಒಪ್ಪಿಕೊಂಡೆ. ಆದರೆ, ಕೆಲವೊಮ್ಮೆ (ಕ್ಷಿಪ್ರ ಪ್ರಚಾರಕ್ಕೆ!?) ತೀರಾ ಕ್ಷುಲ್ಲಕ ಗಿಮಿಕ್ ಮಾಡುತ್ತಿದ್ದಾರೆ ಅನ್ನಿಸುತ್ತಿದೆ (ಇತ್ತೀಚೆಗೆ). ಎದೆಯ (ಜಗದ) ಹೊರ ಪದರ ಮೀರಿ, ಅವರ ಒಳಗಿನ ಕವಿಯ ಆತ್ಮಸಾಕ್ಷಿಯಾಗಿ ನಿಂತರೆ, ಇನ್ನೂ ಚೆನ್ನಾಗಿ ಬರೆಯಬಲ್ಲರು; ಅವಕ್ಕೆ “ಅಮೃತವರ್ಷಿಣಿ”ಯ ಹಾಡುಗಳು ಸಾಕ್ಷಿ.

  ಈ ಹಾಡಿಗಾಗಿ ಕವಿ, ಸಂಗೀತಗಾರ- ಇಬ್ಬರಿಗೂ ನನ್ನ ಮೆಚ್ಚುಗೆ “ಚೆನ್ನಾಗಿ ಅನುಕರಣೆ ಮಾಡಿದ್ದಾರೆ” ಅನ್ನುವಷ್ಟಕ್ಕೆ ಸೀಮಿತ.

 14. ಓಹ್ಹೋ!! ಇಡೀ ಪ್ರಪಂಚಾನೇ ನನ್ನ “ಪ್ರೇಮ ಚಂದ್ರಮ”ನಿಗೆ ಎದುರಾಗಿ ನಿಂತಿರೋ ಹಾಗಿದೆಯಲ್ಲಾ!!
  Analysis of prema chandrama ಚೆನ್ನಾಗಿ ನಡೀತಾ ಇದೆ. ನಡೀಲಿ….ಎಲ್ಲಾ ಹಾಡುಗಳನ್ನೂ ಹೀಗೆ ವಿಮರ್ಶೆಯ ಒರೆಗೆ ಹಚ್ಚಿ ನೋಡಿದರೆ ಚೆನ್ನಾಗಿರತ್ತೆ. 🙂

  ಒಟ್ಟಿನಲ್ಲಿ, ನನ್ನ ಹಾಡು ನನ್ನದು ಅಷ್ಟೆ…ನಿಮಗೇಕೆ ಕೊಡಬೇಕು ನಾನು ಸಮಜಾಯಿಷಿ? 🙂

 15. ಅದ್ಭುತವಾದ, ಹೃದಯವಂತರಿಗಾಗಿ ಮಾತ್ರ ಇರುವ ಗೀತೆಯಿದು.

  ತ್ರಿ, “ಈ ಪ್ರತಿಬಿಂಬವ ಕೆತ್ತಲು ನಾನು….ಎದೆಯ ರೋಮದ ಉಳಿಯಿಡುವೆ” ಎಂಬುದರ ಬಗ್ಗೆ ನಿಮ್ಮ ವ್ಯಾಖ್ಯಾನ ಸೊಗಸಾಗಿದೆ. ಹೇಳಲು ಬೇರೇನೂ ಉಳಿಸಿಲ್ಲ ನೀವು. 🙂

  “ಹೂದೋಟವೆ ಆದರೆ ನೀನು, ಹೂಗಳ ಬದಲು ಉದುರುವೆ ನಾ” – ಈ ಸಾಲು ಬಹಳ ನಾಜೂಕಿನಿಂದ ರಚಿಸಲ್ಪಟ್ಟಿದೆ. ಹೂವು ತನ್ನ ಆಯುಸ್ಸು ಕಳೆದ ನಂತರ ಕೆಳಗುದುರುವ ಬದಲು, ಶಾಶ್ವತವಾಗಿ ತನ್ನ ಪರಿಮಳ ಬೀರುತ್ತ ಇರಲಿ, ಅದರ ಬದಲಿಗೆ ನನ್ನ ಆಯುಸ್ಸನ್ನು ಕೊಡುವೆ ಎಂದು ಕಾವ್ಯಾತ್ಮಕವಾಗಿ ಪ್ರಿಯತಮನಿಂದ ಕವಿ ಹೇಳಸಿರುವ ರೀತಿ, ನಿಜಕ್ಕೂ ಪ್ರಶಂಸನೀಯ.

  ಇದೇ ರೀತಿ “ಮೇಣದ ಬೆಳಕೆ ಆದರು ನೀ, ಕರಗಬೇಡ ಕರಗುವೆ ನಾ” ಸಾಲು ಕೂಡ. ಶಾಶ್ವತವಾಗಿ ನೀನು ಬೆಳಕನ್ನು ನೀಡುತಿರು, ಅದರ ಬದಲಿಗೆ ನಾನು ಕರಗುತ್ತಾ ಹೋಗುವೆ ಎಂದಿರುವುದು ಸಮರ್ಪಣಾ ಭಾವನೆಯ ದಿವ್ಯದರ್ಶನ.

  “ಇದು ಒಬ್ಬ ಹೃದಯವಂತ ಕವಿ ಮಾತ್ರ ಬರೆಯಬಲ್ಲ ಸಾಲುಗಳು” – ಮೆಚ್ಚಬೇಕಾದ ಸಾಲು!!
  ಶ್ರೀನಿಯವರಿಗೊಂದು ಧನ್ಯವಾದ ಈ ಸಾಲಿಗಾಗಿ… ಮತ್ತು ತ್ರಿ ಅವರಿಗೆ ಮತ್ತೊಂದು “ಹೃದಯವಂತರಿಗಾಗಿ ಮಾತ್ರ!!” ಈ ಸಾಲಿಗಾಗಿ 🙂

  – ಮನ

 16. “ಹೃದಯವಂತರಿಗಾಗಿ ಮಾತ್ರ!” – ಈ ಸಾಲನ್ನು ಉಪ್ಪಿ ಕೈಗೆ ಸಿಗದಂತೆ ಜೋಪಾನವಾಗಿ ಇಟ್ಕೋಬೇಕು. ನಾನೇ ಒಂದು ಸಿನಿಮಾ ತೆಗೆದರೆ ಬೇಕಾಗತ್ತೆ =))

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.