ಹರೆ ನೂರಿದ್ದರೂ ಮರವೊಂದೇ
ಬಂದವರಿಗೆ ಆಸರೆ ನೆರಳು
ನಡೆ ನುಡಿ ರೀತಿಗಳೆಷ್ಟೇ ಇದ್ದರೂ
ಒಂದೇ ಒಳಗಿನ ಹುರುಳು
ಪಂಪ ಬಸವ ಕವಿ ಕುಮಾರವ್ಯಾಸರ ಕಾವ್ಯದ ಉಸಿರೊಂದೇ
ಹಸುರಿನ ವೈಖರಿ ಸಾವಿರವಿದ್ದರೂ ಧರಿಸುವ ಬಸಿರೊಂದೇ
ಜಯ ಹೇ ಕನ್ನಡ ತಾಯಿ
ಜಯ ಹೇ ಕನ್ನಡ ತಾಯಿ… ।। ೧ ।।
ಹಲವು ನುಡಿಯಿಂದ ಕಂದರ ಕರೆಯುವ ಕನ್ನಡ ಸಿರಿಗನ್ನಡ ಮಾತೆ
ಶರಣ ಸಂತ ಅವಧೂತರ ದಾಸರ ಹೃದಯ ಮಿಡಿದ ಗೀತೆ
ಇಂದಿನ ಒಲವೇ ಎಂದಿಗೂ ಇರಲಿ ಹರಸೆಮ್ಮನು ಮಾತೆ
ಮುಂದಿನ ಬಾಳನು ಅರಳಿಸಿ ಬೆಳಗಿಸು ಕರ್ನಾಟಕ ಮಾತೆ
ಜಯ ಹೇ ಕನ್ನಡ ತಾಯಿ
ಜಯ ಹೇ ಕನ್ನಡ ತಾಯಿ… ।। ೨ ।।
ಕಾಮನಾ ಬಿಲ್ಲಿನಾಡು ನಾನಾ ಪಲುಕಿನ ಹಾಡು
ಹಲವಿದ್ದರೂ ಒಲವೊಂದೇ ಎನ್ನುವ ನಮ್ಮೊಲವಿನ ಕರುನಾಡು
ಕಾಮನಾ ಬಿಲ್ಲಿನಾಡು ನಾನಾ ಪಲುಕಿನ ಹಾಡು
ಹಲವಿದ್ದರೂ ಒಲವೊಂದೇ ನಮ್ಮೊಲವಿನ ಕರುನಾಡು ।। ೩ ।।
ಸಾಹಿತ್ಯ: ಎಚ್.ಎಸ್. ವೆಂಕಟೇಶಮೂರ್ತಿ