ಕವಿ – ಚಂದ್ರಶೇಖರ ಪಾಟೀಲ
ಸಂಗೀತ – ಸಿ. ಅಶ್ವಥ್
ಗಾಯಕ – ಸಿ. ಅಶ್ವಥ್
ಎಲ್ಲೋ ಹುಟ್ಟಿ
ಎಲ್ಲೋ ಬೆಳೆದು
ಒಳಗೊಳಗೇ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ
ಒಳಗೊಳಗೇ ಕೊರೆಯುವವಳು
ಸದಾ….
ಗುಪ್ತಗಾಮಿನಿ
ನನ್ನ ಶಾಲ್ಮಲಾ|
ಹಸಿರು ಮುರಿವ ಎಲೆಗಳಲ್ಲಿ
ಬಸಿರ ಬಯಕೆ ಒಸರುವವಳು
ತುಟಿ ಬಿರಿಯುವ ಹೂಗಳಲ್ಲಿ
ಬೆಂಕಿ ಹಾಡು ಉಸುರುವವಳು
ಸದಾ…
ತಪ್ತಕಾಮಿನಿ ನನ್ನ ಶಾಲ್ಮಲಾ|
ಭೂಗರ್ಭದ ಮೌನದಲ್ಲಿ
ಜುಂಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ
ಕನಸಿನಲ್ಲಿ ತುಳುಕುವವಳು
ಸದಾ..
ಸುಪ್ತಮೋಹಿನಿ ನನ್ನ ಶಾಲ್ಮಲಾ|
ನನ್ನ ಬದುಕ ಭುವನೇಶ್ವರಿ
ನನ್ನ ಶಾಲ್ಮಲಾ
ನನ್ನ ಹೃದಯ ರಾಜೇಶ್ವರಿ
ನನ್ನ ಶಾಲ್ಮಲಾ
ಸದಾ…
ಗುಪ್ತಗಾಮಿನಿ ನನ್ನ ಶಾಲ್ಮಲಾ|
**********************
ತಪ್ತಕಾಮಿನಿ – ಸುಪ್ತಮೋಹಿನಿ – ಗುಪ್ತಗಾಮಿನಿ …
ಚಂಪೂ (ಪಾ) ಕಾವ್ಯ ಚೆನ್ನಾಗಿದೆ!
ಜೀವ ಹಿಂಡಿ ಹಿಪ್ಪೆ ಮಾಡುವವಳಾದರೆ, ಪದ್ಯಕ್ಕೆ ಇನ್ನೊಂದು ಚರಣವನ್ನು ಸೇರಿಸಿ ಅದರಲ್ಲಿ ‘ದುಷ್ಟಡಾಕಿಣಿ’ ಎಂದು ಪ್ರಾಸ ಮಾಡಿ ಆಕೆಯ ಗ್ರಾಸವಾಗಬಹುದಿತ್ತೋ ಏನೊ!
ಜೋಶಿಯವರೇ, ಈ ಕವನ ಬರೀ ಜೀವ ಹಿಂಡಿ ಹಿಪ್ಪೆ ಮಾಡುವ ಹೆಣ್ಣು/ಹೆಂಡತಿಯ ಬಗೆಗೆ ಇದ್ದರೆ ಚಂಪಾ ನೀವಂದಂತೆ ಬರೆದಿರುತ್ತಿದ್ದರೋ ಏನೋ. 🙂
ಆದರೆ ಈ ಕವನದಲ್ಲಿ, ಧಾರವಾಡದ ಸನಿಹ ಹುಟ್ಟಿ,ಹರಿಯುವ ಶಾಲ್ಮಲಾ ನದಿಯನ್ನು ಹೆಣ್ಣಿನೊಡನೆ ಸಮೀಕರಿಸಲಾಗಿದೆ- (ನಾನು ಅರ್ಥ ಮಾಡಿಕೊಂಡಂತೆ). ದಾಹ ನೀಗುವ ಜೀವ ನದಿಯನ್ನು” ದುಷ್ಟ ಡಾಕಿಣಿ” ಎನ್ನುವ ದುಸ್ಸಾಹಸವನ್ನು ಚಂಪಾ ಮಾಡಿರಲಾರರು.
ಅಬ್ಬಾ….
ಶ್ರೀ ತ್ರೀ ಅವರೆ,
ನೀವು ಪ್ರಾಣ ಹಿಂಡುತಿ ಬಗ್ಗೆ ಹೇಳ್ತಾ ಇದ್ದೀರಾ?
ಅಷ್ಟು ಬೈದು ಕೂಡ ಚಂಪಾ ಅವರೇಗೆ ‘ನನ್ನ ಹೃದಯ ರಾಜೇಶ್ವರಿ’ ಅಂದ್ರೋ ಗೊತ್ತಾಗಿಲ್ಲ. 🙂
ಅನ್ವೇಷಿಗಳ ಅನುಭವ ಹಾಗಿದ್ದರೆ ನನ್ನ ತಕರಾರೇನಿಲ್ಲ! 🙂
ಇದರ ಸಾಹಿತ್ಯವನ್ನು ಇಲ್ಲಿ ಇರಿಸಿದ್ದಕ್ಕೆ ಧ.ವಾ.
ಹಸಿರು ಮುರಿವ ಎಲೆಗಳಲ್ಲಿ
ಬಸಿರ ಬಯಕೆ ಒಸರುವವಳು
ಇದು ಅಮೋಘ ಕಲ್ಪನೆ.
ತುಟಿ ಬಿರಿಯುವ ಹೂಗಳಲ್ಲಿ
ಬೆಂಕಿ ಹಾಡು ಉಸುರುವವಳು
ಇದು ಅರ್ಥವಾಗದ್ದು 🙁
ಇಂತಿ
ಭೂತಾಪಿ
ಕವನ ಅರ್ಥವಾಗಲಿಲ್ಲವೆಂದ ಭೂತದ ಪ್ರಾಮಾಣಿಕತೆಗೆ ಮೆಚ್ಚುಗೆ 🙂
ಇವಳು ಪಿತ್ತದೋಷಿಣಿ ‘ಚಂಪಾ’ರ ಶಾಲ್ಮಲಾ!
ಕಾಕಾ, ಶಾಲ್ಮಲಾ ನಿಮ್ಮೂರಿನವಳು. ಅವಳು ಪಿತ್ತದೋಷಿಣಿಯೊ, ಪಿತ್ತಹಾರಿಣಿಯೋ ನೀವೇ ಹೇಳಬೇಕು 🙂