ಅನಿವಾಸಿಗಳು ಹಣಕಾಸಿನ ವಿಷಯದಲ್ಲಿ ಭಾಗ್ಯವಂತರೆಂದು ಕರುಬುವವರೇ ಹೆಚ್ಚು. ಆದರೆ ಕೆಲವು ವಿಷಯಗಳಲ್ಲಿ ಅವರಷ್ಟು ದುರದೃಷ್ಟವಂತರೇ ಇಲ್ಲವೆಂದು ನನ್ನ ಭಾವನೆ. ಸಡಗರದಲ್ಲಿ, ವೈಭವದ ನಡುವೆ ನಡೆದ ಅಕ್ಕನ ಮಗಳ ಮದುವೆಯನ್ನು ಕಂಪ್ಯೂಟರಿನಲ್ಲಿ ಸ್ಕ್ಯಾನ್ ಆಗಿ ಬಂದ ಚಿತ್ರಗಳ ಮೂಲಕ ಕಂಡು ಸಂಭ್ರಮಪಡುವ ನಮ್ಮ ನಿರಾಸೆ,ನಿಟ್ಟುಸಿರು ಯಾರಿಗೆ ಅರ್ಥವಾಗುತ್ತದೆ? ಅಪ್ಪ,ಅಮ್ಮನ ಶ್ರಾದ್ಧದ ದಿನ ಮನಸ್ಸನ್ನು ಸುತ್ತಿಕೊಳ್ಳುವ ಪಾಪಪ್ರಜ್ಞೆಯಿಂದ ಅಂದು ಊಟ ಬೇಕೆನ್ನಿಸುವುದಿಲ್ಲ. ಹಬ್ಬಹುಣ್ಣಿಮೆಗಳಲ್ಲಂತೂ ಮನಸ್ಸಿನ ಕತ್ತಲೆ ಕೊಠಡಿಗಳಲ್ಲಿ ನಡೆಯುವ ನೆನಪುಗಳ ದಾಂದಲೆಯನ್ನು ತಡೆದುಕೊಳ್ಳುವುದು ಇನ್ನೂ ಕಷ್ಟ.
ಹಣವೇ ಎಲ್ಲಾ ಅಂದುಕೊಂಡವರಿಗೂ ಹಣ ಎಲ್ಲವೂ ಅಲ್ಲ ಎಂಬ ಸತ್ಯ ದರ್ಶನವಾಗುವುದು ಇಲ್ಲೇ! ಹಾಗಿದ್ದರೂ ಅಲ್ಲೇಕಿದ್ದೀರಿ? ಅಮೆರಿಕಾ ಮೋಹ ಬಿಡಿಸಿಕೊಳ್ಳುವುದು ಕಷ್ಟ ಅಲ್ಲವೇ ಎಂದು ಹಂಗಿಸುವವರಿಗೆ ಉತ್ತರಿಸುವ ಉಸಾಬರಿ ನನಗೆ ಬೇಕಿಲ್ಲ. ಯಾಕೆಂದರೆ, ಅಲ್ಲಿಯ ಬವಣೆ ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದು, ಇಲ್ಲಿಯ ಉಸುಕಿನಲ್ಲಿ ಒಮ್ಮೆ ಸಿಕ್ಕಿಕೊಂಡು ಬಿಡಿಸಿಕೊಳ್ಳಲು ಹೆಣಗುವವರ ಪಾಡು ಅವರಿಗೆ ಅರ್ಥವಾಗುವುದಿಲ್ಲ ಎಂದು ನನಗೆ ಗೊತ್ತಾಗಿದೆ.
ಇವತ್ತೂ ನನ್ನಲ್ಲಿ ಮತ್ತೆ ಅದೇ ಶೂನ್ಯ ಭಾವ. ಅಲ್ಲಿ , ನಮ್ಮೂರಿನಲ್ಲಿ ನುಡಿಹಬ್ಬದ ತೇರು ಹೊರಟಿದ್ದರೆ ಯಥಾಪ್ರಕಾರ ನಾನು ಇಲ್ಲೇ. ಉದಯ ವಾರ್ತೆಗಳಲ್ಲಿ ಸಮ್ಮೇಳನದ ಸಿದ್ಧತೆಗಳು, ಅತಿಥಿಗಳ ಉಪಚಾರಕ್ಕೆಂದು ಪೇರಿಸಿರಿಟ್ಟಿರುವ ಹೋಳಿಗೆಗಳು, ಕಣ್ಣು ತುಂಬುತ್ತವೆ. ಕುಮಾರಣ್ಣ ಚಂಪಾ ಮುಖದಲ್ಲಿ ನೀರಿಳಿಸಿದ್ದು, ಯಾರೋ ಯಾವುದೋ ಕಾರಣಗಳಿಗೆ ಬರುವುದಿಲ್ಲವೆಂದಿದ್ದು, ಕುವೆಂಪು,ಕೆ.ವಿ,ಸುಬ್ಬಣ್ಣ ಚಿತ್ರಗಳೇ ಕಾಣೆಯಾಗಿರುವುದು…. ಸಮಾರಂಭಕ್ಕೆ ಹೋಗದಿದ್ದರೂ ಸುದ್ದಿಗಳಿಗಂತೂ ಬರವಿಲ್ಲ. ಉದಯ ಟಿವಿಯಲ್ಲಿ ನಿಸಾರ್ ಅಹಮದ್ ದಂಪತಿಯನ್ನು ಜೊತೆಯಲ್ಲಿ ಕಂಡು, ನಮ್ಮ ಮನೆಯ ಹತ್ತಿರವೇ ವಾಸಿಸುವ ಅವರ(ನಿಸಾರ್ ಅಹಮದ್) ಮಗಳ ನೆನಪಾಯಿತು. ನನ್ನಂತೆಯೇ ಅನಿವಾಸಿಯಾಗಿರುವ ಅವರು ಈ ಸಂಭ್ರಮವನ್ನು ಕೊನೆಪಕ್ಷ ಟಿವಿಯಲ್ಲಾದರೂ ನೋಡಿರುತ್ತಾರಾ? ಅನುಮಾನ.
ಇಂಗ್ಲಿಷ್ ಮಾತಾಡಲು ತಡವರಿಸುವ ಅಚ್ಚಕನ್ನಡಿಗ ಮುಖ್ಯಮಂತ್ರಿಗೆ ಕನ್ನಡ ಸಮ್ಮೇಳನಕ್ಕೆ ಆಹ್ವಾನವೇ ಹೋಗಿಲ್ಲವೆಂದರೆ ನಂಬುವುದೇ ಕಷ್ಟವಾಗುತ್ತದೆ. ಕನ್ನಡದ ಹಬ್ಬಕ್ಕೆ ಕರೆಯಬೇಕೇ? ಏಕೆ ? ಎಂಬ ವಾದಗಳೂ ಇವೆ. ಅಣ್ಣನ ಮನೆಗೇ ಆದರೂ ಆಹ್ವಾನ ಬೇಕೆಂದು ಬಯಸುವ ನಾವು ನಾಡಿನ ಮುಖ್ಯಮಂತ್ರಿಯೊಬ್ಬ ಕರೆಯದಿದ್ದರೂ ಬರಲಿ ಎಂದು ನಿರೀಕ್ಷಿಸುವುದು ಸ್ವಲ್ಪ ದುಬಾರಿ ಆಸೆಯೇ ಅನ್ನಿಸಿತು. ಈ ಸಂದರ್ಭವನ್ನೇ ನೆಪ ಮಾಡಿಕೊಂಡು ಕುಮಾರಸ್ವಾಮಿಯವರನ್ನು ಹಳಿಯುವವರಿಗೂ ಕಡಿಮೆ ಇಲ್ಲ. ಬಾಯಿದ್ದವನು ಬರಗಾಲದಲ್ಲೂ ಬದುಕಿದ ಎಂಬಂತೆ, ಮಾತು ಬಲ್ಲವರಿಗೆ ತಮಗೆ ಬೇಕಾದಂತೆ ನಾಲಿಗೆ ಹೊರಳಿಸುವುದೂ ಗೊತ್ತಿರುತ್ತದೆ.
ಯಾರದು ತಪ್ಪೋ? ಯಾರು ಒಪ್ಪೋ. ಒಟ್ಟಿನಲ್ಲಿ ಎಲ್ಲಾ ಕಡೆ ರಾಜಕೀಯ. ನಮಗೆ ಅರ್ಥವಾಗದ ವಿಷಯ. ಈ ಬಗ್ಗೆ ತಲೆಕೆಡಿಸಿಕೊಳ್ಳುವುದೇಕೆ?.. ಬಿಡಿ.
ದೊಡ್ಡಣ್ಣನಿಗೆ ಕರೆ ಮಾಡಿದ್ದೆ. ಅಣ್ಣ ಸಮ್ಮೇಳನಕ್ಕೆ ಹೊರಟಿದ್ದ. ಅಣ್ಣಾ, ಅಲ್ಲಿಯ ಸಮ್ಮೇಳನದಲ್ಲಿ ಮಾರಾಟಕ್ಕಿರುವ ಪುಸ್ತಕಗಳಲ್ಲಿ ನನಗೂ ಕೆಲವು ತೆಗೆದುಕೋ ಎಂದೆ. ಸರಿ, ಯಾವ ಪುಸ್ತಕಗಳು ಬೇಕು? ಪಟ್ಟಿ ಕೊಡು ಅಂದ. ಅಂಗಡಿಯ ರಾಶಿ ಸೀರೆಗಳ ನಡುವೆ ಕುಳಿತು ನನ್ನ ಮೆಚ್ಚಿನ ಸೀರೆ ಆರಿಸುವ ಬದಲು, ಮನೆಯಲ್ಲಿಯೇ ಕುಳಿತು ಇಂತಹ ಬಣ್ಣದ, ಅಂಚಿನ ಸೀರೆ ಬೇಕೆಂದು ಕೇಳುವಂತಾಯಿತು ನನ್ನ ಸ್ಥಿತಿ. ಉತ್ತರಿಸುವುದು ಕಷ್ಟವಾದರೂ ಕೆಲವು ಹೆಸರುಗಳನ್ನು ಹೇಳಿದೆ. ಅಣ್ಣ ಗೊಣಗಿದ – ನಾನೇನೋ ಇಲ್ಲಿ ತಂದಿಡುತ್ತೇನೆ. ನೀನು ಬಂದು, ಇಲ್ಲಿಂದ ತೆಗೆದುಕೊಂಡು ಹೋಗುವುದು ಅದು ಯಾವ ಕಾಲಕ್ಕೋ?” …..
ಆಮೇಲೆ ಮಾತು ಬೇರೆ ಎಲ್ಲೆಲ್ಲೋ ಸಾಗಿತು.
ಹೌದು ವೇಣಿ, ಈ ಹಬ್ಬದ ಸುಸಂಧಿಯನ್ನು “ತಪ್ಪಿಸಿಕೊಂಡಿರುವ” ಕನ್ನಡದ ಕರುಗಳು ನಾವು. ಶಿವಮೊಗ್ಗದಲ್ಲಿ ಸಾಹಿತ್ಯ “ನಂದನ” ತೆರೆದುಕೊಂಡಿರುವಾಗ “ನಮ್-ದನ”ಗಳ ಹಿಂದೆ “ನಮ್-ಹಟ್ಟಿ”ಯಲ್ಲಿ ಮುಲುಗುತ್ತಿರುವ ನಮ್ಮ ವಿಧಿಗೆ ಸಧ್ಯಕ್ಕೆ ಸಾಂತ್ವನ ಟೀವಿ ಮತ್ತು ವಿ.ಕೆ. ಹಾಗೂ ದಟ್ಸ್’ಕನ್ನಡದಂಥ ಇತರ ಮಾಧ್ಯಮಗಳು.
ಜ್ಯೋತಿ,ಜೋಶಿಯವರ ದನಗಳು ನಿನ್ನ ಮೇಲೂ ಪ್ರಭಾವ ಬೀರಿದಂತಿದೆ. 🙂
ಮೇಡಮ್,
ಅಲ್ಲೆಲ್ಲೋ ದೂರದ ದೇಶದಲ್ಲಿದ್ದುಕೊಂಡು ಸಮ್ಮೇಳನಕ್ಕೆ ಹೋಗಲಿಕ್ಕಾಗುತ್ತಿಲ್ಲ ಎಂದು ಚಡಪಡಿಸುತ್ತಿದ್ದೀರಿ. ಆದರೆ ನಾನು, ನನ್ನಂಥವರು ಇಲ್ಲೇ ಬೆಂಗಳೂರಿನಲ್ಲಿದ್ದುಕೊಂಡು ನಮ್ಮೂರಿನಲ್ಲಿ ನಡೆಯುತ್ತಿರುವ ಸಂಭ್ರಮದಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ರಜೆ ಇಲ್ಲ, ಬ್ಯುಸಿ, ಇತ್ಯಾದಿ ನೆಪಗಳನ್ನು ನನಗೆ ನಾನೇ ಕೊಟ್ಟುಕೊಂಡಿದ್ದೇನೆ. ಅದಕ್ಕೂ ಮಜಾ ಅನ್ನಿಸಿದ್ದು ನಿನ್ನೆ ಮನೆಗೆ ಫೋನ್ ಮಾಡಿದಾಗ. ಅಪ್ಪ ಅಂದ: ‘ಕೊನೆಕೊಯ್ಲು ಮರಾಯ, ಸಿಕ್ಕಾಪಟ್ಟೆ ಕೆಲಸ, at least ಒಂದು ದಿನನಾದ್ರು attend ಮಾಡ್ಲಿಕ್ಕೆ try ಮಾಡ್ತೀನಿ’ ಅಂತ.
ಎಲ್ಲರೂ ತಮ್ಮ ತಮ್ಮ ಬ್ಯುಸಿಗಳಲ್ಲಿ ಮುಳುಗಿರುವಾಗ ಕನ್ನಡ ಎಲ್ಲಿ, ಸಾಹಿತ್ಯ ಎಲ್ಲಿ, ಸಮ್ಮೇಳನವೆಲ್ಲಿ? ‘ಛೇ!’ ಅನ್ನಿಸಿತು.
೧. ಕನ್ನಡದ ಕೆಲ್ಸಕ್ಕೆ ಕರೆಸಿಕೊಂಡ್ ಹೋಗಬೇಕ (ಮು.ಮಂ. ಗಳೆ)?
೨. ಕನ್ನಡಿಗರಲ್ಲಿ ರಾಜಕೀಯ ಬೇಕೊ, ಕನ್ನಡಕ್ಕಾಗಿ ರಾಜಕೀಯ ಬೇಕೊ?
ನಾಚಿಕೆಗೇಡು 🙁
ಇದರ ಬಗ್ಗೆ ಕನ್ನಡಪ್ರಭದಲ್ಲಿ ಒಂದು ಲೇಖನ, ಸಂಪಾದಕರಿಂದ.
ಎಲ್ಲರಿಗು ಅನ್ವಯ್ಸುತ್ತೆ :ಓ
ಇಂತಿ
ನೊಂದ ಭೂತ
ಸುಶ್ರುತ, ಅಲ್ಲೇ ಇದ್ದರೆ ನಾನೂ ಹೋಗುತ್ತಿದ್ದೆನೋ ಇಲ್ಲವೋ. ಯಾಕೆಂದರೆ ನಾವು ಅಲ್ಲಿದ್ದಾಗಲೂ ಎಷ್ಟೋ ಸಮ್ಮೇಳನಗಳು ನಡೆದಿದ್ದವು. ನಾನು ಹೋಗಿರಲಿಲ್ಲ.
ಒಟ್ಟಿನಲ್ಲಿ, ಅಡಿಗರ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ…” ನಿಜ ಅನ್ನೋದು, ಆಗಾಗ prove ಆಗ್ತಾ ಇರತ್ತೆ. 🙂
‘at least ಒಂದು ದಿನನಾದ್ರು attend ಮಾಡ್ಲಿಕ್ಕೆ try ಮಾಡ್ತೀನಿ’ ಅಂದ ನಿಮ್ಮ father ಗೆ ನೀವೇನು reply ಮಾಡಿದ್ರಿ?
ನೊಂದ ಭೂತಕ್ಕೆ ನನ್ನ ಸಂತಾಪವಿದೆ.
ಈ ಲೇಖನವನ್ನು ಮೊದಲೇ ಓದಿದ್ದೆ. ಕನ್ನಡದ ಮೇಲಾಗಿರುವ ಇತ್ತೀಚಿನ ೧೦ ಅತ್ಯಾಚಾರಗಳು – ಈ ಪಟ್ಟಿ ನೋಡಿ ಬೇಸರವಾಯಿತು.
“ತಮಿಳುನಾಡಿನಂತೆ ಯಾವ ರಾಜ್ಯ ತನ್ನ ಭಾಷಾ ಸ್ವಾಭಿಮಾನ ಉಳಿಸಿಕೊಂಡಿದೆಯೋ ಆ ರಾಜ್ಯಕ್ಕೆ ಮಾತ್ರ ಕೇಂದ್ರ ಸರ್ಕಾರದಲ್ಲಿ ಪ್ರಾಧಾನ್ಯತೆ ದೊರೆಯುತ್ತಿದೆ ಎಂಬುದನ್ನು ಮನಗಾಣಬೇಕು” – ಎಂಬ ಸಂಪಾದಕರ ನುಡಿ ಅರ್ಥಪೂರ್ಣವಾಗಿದೆ.
೧) ‘ಕರು’ನಾಡ ನುಡಿಹಬ್ಬ, ಅದರ ‘ಕೊರ’ಗುಗಳು, ಓರೆ’ಕೋರೆ’ಗಳು, ‘ಕರು’ಬುವವರು, ‘ಕರೆ’ಯೋಲೆ ‘ಕಿರಿ’ಕಿರಿ ಮುಂತಾದ ‘ಕುರು’ಕಲು ತಿಂಡಿ ನನಗೆ ಈ ಪೋಸ್ಟ್ನಲ್ಲಿ ಕರ ಮುಗಿಯದೇ, ಕರ ಕೊಡದೇ ಸಿಕ್ಕಿತು!
೨) ಶಿರಹಟ್ಟಿ, ಹಟ್ಟಿಯಂಗಡಿ ಮುಂತಾದ ಊರುಗಳಿವೆ ಕರ್ನಾಟಕದಲ್ಲಿ. ಅಷ್ಟೇ ಏಕೆ, ರಾಯಚೂರಿನಲ್ಲಿ ‘ಹಟ್ಟಿ’ ಎಂದೇ ಒಂದೂರಿದೆ. ಮುಂದಿನ ಸಮ್ಮೇಳನಗಳನ್ನು ಇವುಗಳ ಪೈಕಿ ಯಾವುದಾದರೂ ಊರಲ್ಲಿ ಮಾಡೋಣವಂತೆ. ಆಗ ನಮ್-ಹಟ್ಟಿಯಲ್ಲಿ ಕೊರಗುವ ಕರುಗಳು ಕುಣಿಕುಣಿಯಬಹುದು (ಕಟ್ಟಿದ ಹಗ್ಗದ ‘ಕುಣಿ’ ಬಿಚ್ಹಿದರೆ ಮಾತ್ರ)
೩) “ನಲಿನೀಪತ್ರಮಿವಾಂಭಸಿ…” ಅಂತ ಒಂದು ಪಡೆನುಡಿಯಿದೆ. ಅದನ್ನು “ನಲಿನೀಪತ್ರಮಿವಾಂ’ಬ್ಯುಸಿ'” ಎಂದು ಪರಿಷ್ಕರಿಸಿ, ಬ್ಯುಸಿ-ಬಿಸಿಗಳಾವುವುದನ್ನೂ ತಾಗಿಸಿಕೊಳ್ಳದೆ (ತಾವರೆ ಎಲೆಯು ಹೇಗೆ ಕೊಳಕುನೀರಲ್ಲಿದ್ದೂ ಅದನ್ನು ತಾಗಿಸಿಕೊಳ್ಳುವುದಿಲ್ಲವೋ ಆ ಪರಿಯಲ್ಲಿ) ಸಮ್ಮೇಳನಕ್ಕೆ ಹಾಜರಾದರಾಯಿತಪ್ಪ, ಅದರಲ್ಲಿ ಪರಿತಾಪವೇಕೆ?
೪) ನಮೋ’ಭೂತ’ನಾಥಾ… ನಮೋ ದೇವದೇವಾ… ನಮೋ ಭಕ್ತಪಾಲ… ನಮೋ ದಿವ್ಯತೇಜ… ಕನ್ನಡಪ್ರಭದ ಅಂತರ್ಜಾಲ ಆವೃತ್ತಿಯ ಲಿಂಕುಗಳನ್ನು ಉಲ್ಲೇಖಿಸುವಾಗ ವಿಶೇಷಕ್ರಮವೊಂದನ್ನು ಕೈಗೊಳ್ಳಬೇಕಾಗುತ್ತದೆ, ಇಲ್ಲವಾದರೆ ಆ ಲಿಂಕು ‘ನೀರಿನ ಮೇಲಿನ ಗುಳ್ಳೆಯ ತೆರದಿ… ೩ ದಿನದ ಬಾಳಿದು ಜಗದಿ…’ ಎಂದು ಮಾರನೇ ದಿನಕ್ಕೇ ಮರಣಹೊಂದುತ್ತದೆ. ಕೈಗೊಳ್ಳಬೇಕಾದ ವಿಶೇಷಕ್ರಮ ಏನು ಎಂಬುದನ್ನು ನಿನ್ನ ಮಿತ್ರ ‘ಮನ’ ಇಲ್ಲಿ ಮನದಟ್ಟುಮಾಡಿದ್ದಾನೆ, ನಿನ್ನ ಮನದೊಳಗೆ ತುರುಕಿಸಿಕೋ!
ಜೋಶಿಯವರೆ, ನೀವು ಹೇಳಿರುವ ಹಟ್ಟಿಗಳಲ್ಲಿ ಸಮ್ಮೇಳನ ಬೇಗ ಆಗಲಿ. ಸದ್ಯಕ್ಕೆ ನಮಗೆ ಹತ್ತಿರವಿರುವ ಹಟ್ಟಿ ಎಂದರೆ ಇದೊಂದೇ. 🙂
ಹಟ್ಟಿಗಳ ಪಟ್ಟಿ ಮಾಡುವಾಗ ಮರೆತುಹೋಗಿತ್ತು. ‘ಹಟ್ಟಿಕುದ್ರು’ವಿನಲ್ಲಿ (ಇದು ಕುಂದಾಪುರ ತಾ| ಉಡುಪಿ ಜಿಲ್ಲೆಯಲ್ಲಿರುವ ಹಟ್ಟಿ) ಸಾಹಿತ್ಯ ಸಮ್ಮೇಳನ ಆದರೆ ಎಚ್.ಡುಂಡಿರಾಜ್ ಅಧ್ಯಕ್ಷರು!
ಶ್ರೀತ್ರೀ ಅವರಿಗೆ ನನ್ನ ಪೂರ್ಣ ಬೆಂಬಲವಿದೆ.
ಹಟ್ಟಿಯಂಗಡಿಯೂ ಬೇಡ ಹಟ್ಟಿ ಕುದ್ರು ಕೂಡ ಬೇಡ.
ಪಿಜ್ಜಾ hutಟಿಯಂಗಡಿಯಲ್ಲೇ ಮುಂದಿನ ಕಸಾ ಸಮ್ಮೇಳನವಾಗಲಿ.
ನೀವು ಪ್ರಸ್ತಾಪಿಸಿದ busyನೆಸ್ನ ಪರಿಣಾಮಗಳೆಲ್ಲಾ ಇಲ್ಲಿವೆ.
ಜೋಶಿಗಳೆ,
ತುರುಕಿಸಿಕೊಂಡೆ 🙂
ಅನ್ವೇಷಿಗಳೇ, ಪಿಜ್ಜಾ hutಟಿಯಂಗಡಿಯಲ್ಲಿ ನಡೆಯುವ ಮುಂದಿನ ಕಸಾ ಸಮ್ಮೇಳನಕ್ಕೆ ನೀವೂ ಬನ್ನಿ. ನಿಮ್ಮ ಬೊಗಳೆಯನ್ನೂ ಕರೆದುಕೊಂಡು ಬನ್ನಿ. ಆಮೇಲೆ ಕರೆದಿಲ್ಲವೆಂದು ರಗಳೆ ತೆಗೆದೀರಿ.
ಭೂತವೇ, ನಿನ್ನ ಲಿಂಕನ್ನು ಭವಿಷ್ಯಕ್ಕೂ ಉಳಿಯುವಂತೆ ಮಾರ್ಪಡಿಸಲಾಗಿದೆ. ಚಿಂತಿಸದಿರು.
ಮನದಾಳದ ಮಾತುಗಳನ್ನು ಬಹಳ ಚೆನ್ನಾಗಿ ಬರೆದಿದ್ದೀರಿ. ದೂರದ ಬೆಟ್ಟ ನುಣ್ಣಗೆ ಎನ್ನುವಂತೆ, ತನಗೆ ಮಾತ್ರ ಕಷ್ಟ ದೂರವಿರುವರೆಲ್ಲರೂ ಸುಖಿಗಳು ಎಂದು ತಿಳಿಯುವುದು ಸಾಮಾನ್ಯ. ಆದರೆ ಎಲ್ಲರ ಮನೆಯ ದೋಸೆಯ ತೂತು ಎನ್ನುವ ವಿಷಯವನ್ನು ಅರಿತರೆ ಎಷ್ಟು ಚೆನ್ನ ಅಲ್ಲವೇ?
ಧನ್ಯವಾದಗಳು ತವಿಶ್ರೀಯವರೆ. ವೆಂಕಟೇಶ ಅಂತ ಹಾಕಿ ನಿಮ್ಮ ಹೆಸರು confuse ಆಗುವ ಹಾಗೆ ಮಾಡಿದ್ದೀರಿ 🙂