ಕಾಣಿಕೆ – ಬಿಎಂಶ್ರೀ
ಕವಿ – ಬಿ.ಎಂ.ಶ್ರೀಕಂಠಯ್ಯ

ಮೊದಲು ತಾಯ ಹಾಲ ಕುಡಿದು,
ಲಲ್ಲೆಯಿಂದ ತೊದಲಿ ನುಡಿದು,
ಕೆಳೆಯರೊಡನೆ ಬೆಳೆದು ಬಂದ
   ಮಾತದಾವುದು–
ನಲ್ಲೆಯೊಲವ ತೆರೆದು ತಂದ
   ಮಾತದಾವುದು–

ಸವಿಯ ಹಾಡ, ಕಥೆಯ ಕಟ್ಟಿ,
ಕಿವಿಯಲೆರೆದು, ಕರುಳ ತಟ್ಟಿ
ನಮ್ಮ ಜನರು,ನಮ್ಮ ನಾಡು,
   ಎನಿಸಿತಾವುದು-
ನಮ್ಮ ಕವಿಗಳೆಂಬ ಕೋಡು
   ತಲೆಗದಾವುದು–

ಕನ್ನಡ ನುಡಿ, ನಮ್ಮ ಹೆಣ್ಣು,
ನಮ್ಮ ತೋಟದಿನಿಯ ಹಣ್ಣು ;
ಬಳಿಕ, ಬೇರೆ ಬೆಳೆದ ಹೆಣ್ಣು
   ಬಳಿಗೆ ಸುಳಿದಳು ;
ಹೊಸೆದು ರಸದ ಬಳ್ಳಿ ಹಣ್ಣು
   ಒಳಗೆ ಸುಳಿದಳು.

ಪಡುವ ಕಡಲ ಹೊನ್ನ ಹೆಣ್ಣು,
ನನ್ನ ಜೀವದುಸಿರು ಕಣ್ಣು,
ನಲಿಸಿ, ಕಲಿಸಿ, ಮನವನೊಲಿಸಿ
   ಕುಣಿಸುತಿರುವಳು ;
ಒಮ್ಮೆ ಇವಳು, ಒಮ್ಮೆ ಅವಳು,
   ಕುಣಿಸುತಿರುವಳು

ಹೀಗೆ ನನಗೆ ಹಬ್ಬವಾಗಿ,
ಇನಿಯರಿಬ್ಬರನ್ನು ತೂಗಿ,
ಇವಳ ಸೊಬಗನವಳು ತೊಟ್ಟು,
   ನೋಡ ಬಯಸಿದೆ ;
ಅವಳ ತೊಡಿಗೆ ಇವಳಿಗಿಟ್ಟು,
   ಹಾಡ ಬಯಸಿದೆ.

ಬಲ್ಲವರಿಗೆ ಬೆರಗೆ ಇಲ್ಲಿ?
ಅರಿಯದವರು ನಾಲ್ವರಲ್ಲಿ
ಕಳೆಯ ಬೆಳಕು ಹೊಳೆಯಲಂದು
   ದಣಿದು ಹೋದೆನು.
ಬಡವನಳಿಲು ಸೇವೆಯೆಂದು
   ಧನ್ಯನಾದೆನು.

*      *    *    *   *

32 thoughts on “ಕಾಣಿಕೆ – ಬಿಎಂಶ್ರೀ”

  1. ಇಂಗ್ಲೀಷ್ ಗೀತಗಳ ಈ ಸುಂದರ ಮುನ್ನುಡಿ ಪದ್ಯ ಬಹಳ ದಿನಗಳ ನಂತರ ಮತ್ತೆ ಓದಲು ಸಿಕ್ಕಿತು ಧನ್ಯವಾದಗಳು.
    ಮಂಜುಳ ಗುರುರಾಜ್ ಇದನ್ನು ಹಾಡಿದ್ದು ಕೇಳಿದ್ದೆ ಇನ್ಯಾವುದಾದರೂ ಗಾಯಕರು ಈ ಪದ್ಯ ಹಾಡಿದ್ದಾರೆಯೇ? ಸಾದ್ಯವಾದರೆ ಕೇಳಿಸುವಿರಾ?

  2. ಮಾಲಾ, ನಾನು ಈ ಕವಿತೆಯನ್ನು ಹಾಡಿನ ರೂಪದಲ್ಲಿ ಕೇಳಿಯೇ ಇಲ್ಲ. ಮಂಜುಳಾ ಗುರುರಾಜ್ ಈ ಹಾಡು ಹಾಡಿರುವ ವಿಷಯ ತಿಳಿದಿದ್ದು ಈಗಲೇ, ನಿಮ್ಮಿಂದಲೇ.

  3. ಇಲ್ಲಿ ಬಿಎಂಶ್ರೀಯವರು ಕನ್ನಡ ಮತ್ತು ಇನ್ನೊಂದು ಭಾಷೆಯೊಂದಿಗೆ ಅವರ ಸಾಹಿತ್ಯಿಕ ಸಂಬಂಧದ ಬಗ್ಗೆ ಹೇಳ್ತಾ ಇದಾರೆ ಅನಿಸುತ್ತೆ.ಅಲ್ವಾ ತ್ರಿವೇಣಿಯವರೇ?

    ಈ ಸಾಲುಗಳಲಿ
    >ಹೀಗೆ ನನಗೆ ಹಬ್ಬವಾಗಿ,
    ಇನಿಯರಿಬ್ಬರನ್ನು ತೂಗಿ,
    ಇವಳ ಸೊಬಗನವಳು ತೊಟ್ಟು,
    ನೋಡ ಬಯಸಿದೆ ;
    ಅವಳ ತೊಡಿಗೆ ಇವಳಿಗಿಟ್ಟು,
    ಹಾಡ ಬಯಸಿದೆ.

    ಅವರು ಕನ್ನಡದ್-ಇಂಗ್ಲೀಷ್ ಭಾಷಾಂತರದ ಬಗ್ಗೆ ಹೇಳಿರಬಹುದಾ?

    1. ಹೌದು!
      ಭಾಷಾಂತರ ಮಾತ್ರವಲ್ಲದೇ ಕನ್ನಡ – ಇಂಗ್ಲೀಷ್ ಸಂಸ್ಕೃತಿ ಸಮನ್ವಯತೆಗಳ ಕೊಳು-ಕೊಡುಗೆಗಳನ್ನು ಬಣ್ಣಿಸಲಾಗಿದೆ!

  4. ಶಿವು ಅವರೇ,
    ನಿಮ್ಮ ಊಹೆ ನಿಜ ಬಿ.ಎಂ.ಶ್ರೀ.ಅವರು ಇಂಗ್ಲಿಷ್-ಕನ್ನಡ ಭಾಷಾಂತರದ ಬಗ್ಗೆ ಈ ಕವನದಲ್ಲಿ ಹೇಳಿದ್ದಾರೆ `ಇಂಗ್ಲಿಷ್ ಗೀತೆಗಳು’ ಬಿ.ಎಂ .ಶ್ರೀ ಅವರು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿರುವ ಕವನಗಳ
    ಸಂಕಲನ. ಈ ಸಂಕಲನದ ಮುನ್ನುಡಿ ಪದ್ಯ ಈ `ಕಾಣಿಕೆ’.

    ಹೊಸಗನ್ನಡಸಾಹಿತ್ಯದಲ್ಲಿ `ಇಂಗ್ಲಿಷ್ ಗೀತೆಗಳನ್ನು’ ಒಂದು ಮೈಲಿಗಲ್ಲಾಗಿ ಪರಿಗಣಿಸುತ್ತಾರೆ. ಮುಂದೆ ಕನ್ನಡದಲ್ಲಿ ಬಂದ ಭಾವಗೀತೆಗಳಿಗೆ ಸ್ಪೂರ್ತಿಯಾಯಿತು ಈ ಇಂಗ್ಲಿಷ್ ಗೀತೆಗಳು ಕನ್ನಡಕ್ಕೆ ಪೂರ್ತಿಯಾಗಿ ಅಪರಿಚಿತವಾದ ಭಾಷೆಯಿಂದ` ಶ್ರೀ’ ಅವರು ಅನುವಾದ ಮಾಡಿದ್ದರೂ ಅವರ ಅನುವಾದ ಎಷ್ಟು ಸೊಗಸಾಗಿದೆಯೆಂದರೆ, ಅದರ ಮೂಲ ಪಾಶ್ಚಾತ್ಯ ಎಂದು ಬಹು ಜನರಿಗೆ (ಈ ಕವನಗಳನ್ನು ಕೇವಲ ಹಾಡಿನ ರೂಪದಲ್ಲಿ ಕೇಳಿದವರಿಗೆ) ಗೊತ್ತೇ ಇರುವುದಿಲ್ಲ.
    ನಾವುಗಳೆಲ್ಲಾ ಸಾಮಾನ್ಯವಾಗಿ ಶಾಲೆಯಲ್ಲಿ ಓದಿದ `ವಸಂತ ಬಂದ ಋತುಗಳ ರಾಜ ತಾ ಬಂದ’ ಇದೇ ಸಂಕಲನದ್ದು. ಬಹುಶಃ `ಚಿಮ್ಮುತ ನಿರಿಯನು ಬನದಲಿ ಬಂದಳು ಬಿಂಕದ ಸಿಂಗಾರಿ…’ ಎಂಬ ಜನಪ್ರಿಯ ಹಾಡೂ ಇದೇ ಸಂಕಲನದಲ್ಲಿ ಇರಬೇಕು
    THOMAS NASHE ನ ಪದ್ಯ `Spring, the Sweet Spring’
    ` ವಸಂತ ಬಂದ…’ ಪದ್ಯ ಮೂಲ. ಮೂಲ ಪದ್ಯ ಇಲ್ಲಿ ಕೊಟ್ಟಿದ್ದೇನೆ ನನಗೆ ನೆನಪಿರುವ ಮೊದಲ ಕೆಲವು ಸಾಲಿನ ಅನುವಾದ ಕೂಡಾ ಕೊಡಲು ಪ್ರಯತ್ನಿಸಿದ್ದೇನೆ.
    THOMAS NASHE
    Spring, the Sweet Spring

    Spring, the sweet spring, is the year’s pleasant king,
    Then blooms each thing, then maids dance in a ring,
    Cold doth not sting, the pretty birds do sing:
    Cuckoo, jug-jug, pu-we, to-witta-woo!

    The palm and may make country houses gay,
    Lambs frisk and play, the shepherds pipe all day,
    And we hear aye birds tune this merry lay:
    Cuckoo, jug-jug, pu-we, to-witta-woo!

    The fields breathe sweet, the daisies kiss our feet,
    Young lovers meet, old wives a-sunning sit,
    In every street these tunes our ears do greet:
    Cuckoo, jug-jug, pu-we, to-witta-woo!
    Spring, the sweet spring!

    1592 1600

    ವಸಂತ ಬಂದ ಋತುಗಳ ರಾಜ ತಾ ಬಂದ
    ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ
    ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ
    ಕೂವೂ,ಜಗ್ ಜಗ್, ಪೂವಿ ಟ್ಟೂವಿಟ್ಟಾವೂ…
    ಎಷ್ಟು ಸುಂದರ ಅನುವಾದ ನೋಡೀ…

    ಎರಡನೇ ನುಡಿಯ Lambs frisk and play, the shepherds pipe all day, ಎಂಬ ಸಾಲನ್ನು ಬಿ.ಎಂ ಶ್ರೀ `ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ’ ಎಂದು ಸೊಗಸಾಗಿ ಭಾಷಾಂತರಿಸಿದ್ದಾರೆ
    ಇದನ್ನೇ ಬಹುಶಃ ಅವರು
    ಇವಳ ಸೊಬಗನವಳು ತೊಟ್ಟು,
    ನೋಡ ಬಯಸಿದೆ ;
    ಅವಳ ತೊಡಿಗೆ ಇವಳಿಗಿಟ್ಟು,
    ಹಾಡ ಬಯಸಿದೆ.

    ಎಂದು ಕಾಣಿಕೆ ಪದ್ಯದಲ್ಲಿ ಹಾಡಿರಬೇಕು

    ಸದ್ಯಕ್ಕೆ `ಇಂಗ್ಲಿಷ್ ಗೀತೆಗಳು’ ನನ್ನ ಬಳಿ ಇಲ್ಲ(ಬೆಂಗಳೂರಲ್ಲಿದೆ!)
    ಇಲ್ಲಿ ಬರೆದಿರುವುದೆಲ್ಲಾ ನೆನಪಿನಿಂದ ಬರೆದಿರುವುದು ತಪ್ಪುಗಳಿರುವ ಸಂಭವವಿದೆ ತಪ್ಪಾಗಿದ್ದರೆ ತಿದ್ದಿ. ತ್ರಿವೇಣಿಯವರೇ, ನಿಮ್ಮಲ್ಲಿ ಈ ಪುಸ್ತಕ ಇರಬೇಕು ಅಲ್ಲವೇ?
    ಸಾದ್ಯವಾದರೆ `ವಸಂತ’ ಪದ್ಯವನ್ನೂ ಮತ್ತು ಇನ್ನೊಂದೆರಡು ಒಳ್ಳೆ ಕವನಗಳನ್ನು ಪ್ರಕಟಿಸಿ ಅಂತ ಕೋರಿಕೆ .

  5. `ಇಂಗ್ಲಿಷ್ ಗೀತೆಗಳು’ ಕುರಿತಾದ ಸುಂದರ ವಿವರಣೆಗೆ ಬಹಳ ಧನ್ಯವಾದಗಳು ಮಾಲಾ. ನಿಮ್ಮಂತೆ ಎಲ್ಲರೂ ಅವರಿಗೆ ತಿಳಿದ ವಿಷಯಗಳನ್ನು ಇಲ್ಲಿ ಹಂಚಿಕೊಂಡರೆ ಚೆನ್ನಾಗಿರುತ್ತದೆ.

    ನೀವು ಬರೆದಂತೆ “ಬಿಂಕದ ಸಿಂಗಾರಿ” ಈ ಸಂಕಲನದ್ದೇ. ಅದರಂತೆ ಮೈಸೂರು ಅನಂತಸ್ವಾಮಿಯವರು ಹಾಡಿರುವ ”ಕರುಣಾಳು ಬಾ ಬೆಳಕೆ” (Lead, kindly Light) ಕೂಡ ಇದರದ್ದೇ. ಇನ್ನೊಂದು ಹಾಡು ನೀವು ಆಕಾಶವಾಣಿಯಲ್ಲಿ ಕೇಳಿರಬಹುದು – “ಅಡವಿ ಮರದಡಿಯಲ್ಲಿ ನಿನ್ನೊಡನೆ ಕೆಡೆದಲ್ಲಿ, ಇನಿಯ ಹಕ್ಕಿಯ ಕೊರಳ ತನ್ನ ದನಿಯಲಿ ತಂದು ನಲಿವನಾರೈ..ಇತ್ತ ಬಾ….ಇತ್ತ ಬಾರೈ.”

    ಈ ಪುಸ್ತಕ ನನ್ನಲ್ಲೂ ಇಲ್ಲ. ಕೆಲವು ಹಾಡುಗಳಿವೆ. ಬರೆಯುತ್ತೇನೆ ಸದ್ಯದಲ್ಲೇ.

  6. your ‘blog ‘is nice. I have covered a report on the works of” B.M.Shri’. in the ‘Sampada kannada site’. Please read and give your comments. This is just the report and the gist of Dr. LSS gave a comprenhesive look on those works of Shri. LSS was one of his students, and gave us the insight of his friendship and the nature of his ‘guru’. In that way it was very special to us. Lots of written things are available in books. But nothing like the ‘pratyaksha pramana’ !

    cheers,
    laxmivenkatesh

  7. ತಾಯೇ ಬಾರ ಮುಖವ ತೊರ ಕನ್ನಡಿಗರ ಮಾತೇಯೆ
    ಹರಸು ತಾಯೇ ಸುತರ ಕಾಯೇ ನಮ್ಮ ಜನ್ಮದಾತಯೇ

    ಈ ಪದ್ಯ ಕಾಣಲಿಲ್ಲ.

  8. ನುಡಿ
    “ನಿಮ್ಮಂತೆ ಎಲ್ಲರೂ ಅವರಿಗೆ ತಿಳಿದ ವಿಷಯಗಳನ್ನು ಇಲ್ಲಿ ಹಂಚಿಕೊಂಡರೆ ಚೆನ್ನಾಗಿರುತ್ತದೆ.”

    ಕಿಡಿ

    “ಅವರಿಗೆ” = ಯಾರಿಗೆ? ಅವರವರಿಗೆ??

  9. ಶ್ರೀತ್ರೀಯವರೆ,

    “ಕಳೆಯ ಬೆಳಕು ಹೊಳೆಯಲಂದು,” ಇದು “ಕಲೆಯ ಬೆಳಕು ಹೊಳೆಯಲಂದು,” ಎಂದಾಗಬಾರದೆ? ಬಹುಶಃ, ಬಿಎಂಶ್ರೀಯವರು “ಕಳೆ” ಎಂದೇ ಬಳಸಿರಬಹುದು; ಆದರೂ, ಪದ್ಯದ ಭಾವಾರ್ಥವನ್ನು ಗ್ರಹಿಸಿದಾಗ, ಇಲ್ಲಿ ಯಾಕೋ, “ಕಲೆ”ಯೇ ಸೂಕ್ತವೆಂದು ತೋರುತ್ತದೆ. ಒಮ್ಮೆ ಪರಿಶೀಲಿಸುವಿರೊ?

  10. ಲಕ್ಷ್ಮೀ ವೆಂಕಟೇಶ್  ಅವರೇ,

    ತುಳಸಿವನಕ್ಕೆ ನಿಮಗೆ ಸುಸ್ವಾಗತ! 🙂  

    ಶ್ರೀ.ಎಲ್.ಎಸ್.ಎಸ್ ರವರ ‘ಹೃದಯಸ್ಪರ್ಶಿ ಭಾಷಣವನ್ನು ಬಹಳ ಚೆನ್ನಾಗಿ ವರದಿ ಮಾಡಿದ್ದೀರಿ. ಈ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು.
    ” ಕನ್ನಡ ಮಹಾನದಿಯಾಗಿ ಪ್ರವಹರಿಸಬೇಕಾದರೆ ಅದಕ್ಕೆ ಅನೇಕ ಉಪನದಿಗಳು ಬೇಕು- ಇಂಗ್ಲಿಷ್, ಆ ಉಪನದಿಗಳಲ್ಲೊಂದಾಗಬಾರದೇಕೆ “? “ಕನ್ನಡ ಚಕ್ರವರ್ತಿಯಾಗಿ ಮೆರೆಯಬೇಕಾದರೆ, ಆಸ್ಥಾನದಲ್ಲಿ ಸಾಮಂತರಿರಬೇಕು. ಇಂಗ್ಲಿಷ್ ಆ ಸಾಮಂತ ಭಾಷೆಯಾಗಿ ಬಂದರೆ ಅಡ್ಡಿಯೇನು “? – ಅದ್ಭುತ ವಿಚಾರಗಳು!

    ಕುವೆಂಪು ಅವರು ತಮ್ಮ ನೆನಪಿನ ದೋಣಿಯಲ್ಲೂ ಶ್ರೀಯವರ ಒಂದು ಸುಂದರ ಚಿತ್ರವನ್ನು ಕಟ್ಟಿಕೊಡುತ್ತಾರೆ. ಶ್ರೀಯವರಿಗೆ ಮೊದಲಿದ್ದ ಇಂಗ್ಲಿಷ್ ಪ್ರೇಮ, ನಂತರ ಅವರು ಮಾಡಿದ ಕನ್ನಡ ಸೇವೆ .. ಒಂದಕ್ಕೊಂದು ಹೊಂದುವುದೇ ಇಲ್ಲ!

    ತಾಯೇ ಬಾರ…. ಇಲ್ಲ ಅಂದಿರಾ? ತಾಯಿ ಬಂದು ಮೊಗ ತೋರಲಿದ್ದಾಳೆ ತಾಳಿ 🙂

     

  11. ಜೋಶಿಯವರೇ,

    ಅವರಿಗೆ – ಜೋಶಿಯವರಿಗೆ
    ಅವರಿಗೆ – ಮಾಲಾ ಅವರಿಗೆ
    ಅವರಿಗೆ – …… ಅವರಿಗೆ
    ತುಳಸಿವನದ ಅತಿಥಿಗಳೆಲ್ಲರಿಗೂ ಅನ್ವಯವಾಗುವಂತೆ ಬರೆದಿದ್ದೇನೆ.:) ಅದು “ಅವರವರಿಗೆ” ಎಂದು ಆಗಬೇಕಿತ್ತೇ?

  12. ಪ್ರದೀಪ್ ,

    ಕವಿತೆಯಲ್ಲಿ “ಕಳೆಯ ಬೆಳಕು ಹೊಳೆಯಲಂದು,” ಎಂದೇ ಇದೆ. ನೀವಂದಂತೆ , ಶ್ರೀಯವರು “ಕಲೆ” ಎಂಬ ಅರ್ಥದಲ್ಲಿಯೇ “ಕಳೆ” ಪದವನ್ನು ಬಳಸಿರಬಹುದೆಂದು ನನಗೆ ತೋರಿತು.

  13. ಪ್ರದೀಪ್, ವೇಣಿ, ನೀವುಗಳು ಹೇಳಿದ ಸಾಲು ಸರಿಯಾಗಿಯೇ ಇದೆಯೆಂದು ನನ್ನ ಅಭಿಮತ: “ಕಳೆಯ ಬೆಳಕು ಹೊಳೆಯಲಂದು…” ಇಲ್ಲಿ ಕಳೆ ಅನ್ನುವ ಪದ “ವರ್ಚಸ್ಸು, ತೇಜಸ್ಸು” ಅರ್ಥದಲ್ಲಿ ಬಂದಿದೆ. ಅದಕ್ಕೇ, ಕಳೆಯ `ಬೆಳಕು’ ಅಂದಿದ್ದು. ಇದು ಕಲೆ ಅನ್ನುವ ಅರ್ಥವಲ್ಲ.

  14. ಸ್ರಿತ್ರಿ ಯವರೇ,

    ಉತ್ತರಿಸಿದ್ದಕ್ಕೆ ಧನ್ಯವಾದಗಳು.

    ನನಗೇ,
    ‘ತಾಯೇ ಬಾರ ಮೋಗವ ತೊರ,
    ಕನ್ನಡಿಗರ ಮಾತೇಯೇ, ಹರಸು ಬಾರೇ
    ಸುತರ ಕಾಯೇ, ನಮ್ಮ ಜನ್ಮದಾತೇಯೇ’,
    ……….

    ಮೊದಲಿಗೆ, ಅದು ‘ಶ್ರೀ’ ರವರ ಕೃತಿಯೆ ? ಅನ್ನುವುದು ನನಗೆ ಸರಿಯಾಗಿ ನೆನಪಿಲ್ಲ.

  15. ಲಕ್ಷ್ಮೀ ವೆಂಕಟೇಶ್ ಅವರೇ ನಮಸ್ಕಾರ.

    ನನಗೆ ತಿಳಿದಂತೆ “ತಾಯೇ ಬಾರ” ಮಂಜೇಶ್ವರ ಗೋವಿಂದ ಪೈ ಅವರ ರಚನೆ. ಬಿ.ಎಂ.ಶ್ರೀಯವರದ್ದಲ್ಲ. ಯಾವುದಕ್ಕೂ ಸರಿಯಾಗಿ ತಿಳಿದು ಬರೆಯುತ್ತೇನೆ.

  16. ನೋಡಿ ತ್ರಿವೇಣಿಯವರೆ,
    ಬಹುಶಃ ಈಗ ನನ್ನ ಹೆಸರು ನಿಮಗೆ ಪರಿಚಯವಾಗಿರಬಹುದು. ನಾನು ನಿಮ್ಮನ್ನು ’ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ ಕಂಡಿದ್ದೆ. ನನ್ನ ಪರಿಚಯಹೇಳಿಕೊಳ್ಳಲು ಏಕೋಸಂಕೋಚವಾಯಿತು. ನಿಮಗೆ ಗೊತ್ತಿದ್ದಂತೆ ಡಾ. ಎಚ್. ಆರ್ ಚಂದ್ರಶೇಖರ್ ರವರು, ’ಕರ್ಣಾಟಕ ಭಾಗವತ’ ವೆಂಬ ಉದ್ಗ್ರಂಥವನ್ನು ಸಂಪಾದಿಸಿ, ಅಮೆರಿಕನ್ನಡಿಗರ ಹೆಸರನ್ನು ಪ್ರಜ್ವಲಿಸುವಂತೆಮಾಡಿದ್ದಾರೆ. ಅದರಬಗ್ಗೆ ನಾನು ಸಾಕಷ್ಟು ದಿನಪತ್ರಿಕೆಗಳಲ್ಲಿ ಓದಿದ್ದೇನೆ. ನನಗೆ ನಿಮ್ಮ ದೇಶದ ಕನ್ನಡಿಗರಕೊಡುಗೆಯ ಬಗ್ಗೆ ಎಲ್ಲಿಲ್ಲದ ಗೌರವ. ಆದರೆ, ಆ ಹೊತ್ತಿಗೆಗಳಬಗ್ಗೆ ’ ಅಕ್ಕ ಸ್ಮರಣಸಂಚಿಕೆ,’ ಯಲ್ಲಿ ಒಂದು ಮಾತೂ ಬರೆಯದಿರುವು ನನ್ನ ಗಮನಕ್ಕೆ ಬಂದು ವಿಷಾದವಾಯಿತು. ನಿಮ್ಮ ಒಂದು ಕನ್ನಡ ಸಂಘ, ಮೇಲೆತಿಳಿಸಿದ ಗ್ರಂಥ ಸಂಪಾದಕರಿಗೆ, (ಲೇಖಕರಿಗೆ) ಉದಾರವಾಗಿ ೧೦ ಸಹಸ್ರಡಾಲರ್ ಹಣವನ್ನು ದಾನಮಾಡಿ ಪ್ರೋತ್ಸಾಹಕೊಟ್ಟಿರುವುದು ಅತ್ಯಂತ ಗಮನಾರ್ಹವಾದ ಸಂಗತಿಯೆನ್ನುವಮಾತನ್ನು ಇಲ್ಲಿ ದಾಖಲಿಸಲು ಇಚ್ಛಿಸುತ್ತೇನೆ. ಇದೇಕಳಕಳಿ ನಿಮ್ಮಲ್ಲಿರಲಿ. ಆದರೆ ಇಂತಹ ಸಂದರ್ಭ ಬಾರಿ-ಬಾರಿ ಬರುತ್ತದೆಯೇ ? ಏಕೆ ಅವರ ಹೆಸರನ್ನು ಕೈಬಿಟ್ಟರು. ಒಬ್ಬ ಒಳ್ಳೆಯ ಲೇಖಕಿಯಾಗಿ ನಿಮ್ಮ ಸ್ಪಷ್ಟ ಅಭಿಮತವೇನು ?

  17. ಶ್ರೀ ಲಕ್ಷ್ಮೀ ವೆಂಕಟೇಶ್ ಅವರಿಗೆ ನಮಸ್ಕಾರಗಳು. ನೀವು ಚಿಕಾಗೋ ಸಮ್ಮೇಳನಕ್ಕೆ ಬಂದಿದ್ದು ತಿಳಿದು ಸಂತೋಷವಾಯಿತು. ನಿಮ್ಮನ್ನು ಪರಿಚಯಿಸಿಕೊಂಡಿದ್ದರೆ ಇನ್ನೂ ಸಂತೋಷಪಟ್ಟಿರುತ್ತಿದ್ದೆ. ಸಮ್ಮೇಳನಗಳು ಸಾರ್ಥಕವಾಗುವುದೇ ಹೀಗಲ್ಲವೇ? ಅದರಲ್ಲಿ ಸಂಕೋಚಕ್ಕೆ ಅವಕಾಶವೇ ಇಲ್ಲ. ನಿಮ್ಮ ಮುಖ ಪರಿಚಯ ನನಗಿದ್ದಿದ್ದರೆ, ನಾನೇ ಗುರುತು ಹಿಡಿದು ಮಾತಾಡಿಸುತ್ತಿದ್ದೆ.

    ಶ್ರೀ ಚಂದ್ರಶೇಖರ ಅವರು ಕರ್ಣಾಟಕ ಭಾಗವತವನ್ನು ಹೊರತಂದಿರುವುದು ನಿಜಕ್ಕೂ ಶ್ರೇಷ್ಟ ಕೆಲಸ. ನೀವಂದಂತೆ, ಅಮೆರಿಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ. ಈ ಕೃತಿಯ ಹಿಂದೆ ಅವರ ವರ್ಷಗಳ ಪರಿಶ್ರಮವಿದೆಯೆಂದು ಬಲ್ಲೆ. ನಾನು ಪಾಲ್ಗೊಂಡಿದ್ದ “ಸಾಹಿತ್ಯ ಸಮಿತಿ”ಯಿಂದ “ಕರ್ಣಾಟಕ ಭಾಗವತ” ಕೃತಿಯನ್ನು ಮುಖ್ಯ ವೇದಿಕೆಯ ಮೇಲೆ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೆ, ಜಯಂತ ಕಾಯ್ಕಿಣಿಯವರು ಅಧ್ಯಕ್ಷತೆ ವಹಿಸಿ, ನಾನೇ ನಡೆಸಿಕೊಟ್ಟ “ಪುಸ್ತಕ ಪರಿಚಯ” ಕಾರ್ಯಕ್ರಮದಲ್ಲಿ ಕೃತಿ ಪರಿಚಯಕ್ಕಾಗಿ ಸುಮಾರು ೧೨ ನಿಮಿಷ ಕಾಲಾವಕಾಶ ನೀಡಲಾಗಿತ್ತು. ವಿವಿಧ ಅಭಿರುಚಿಯ ಜನರು ಸೇರುವ ಅಕ್ಕ ಸಮ್ಮೇಳನದಲ್ಲಿ ಯಾವುದೇ ಸಾಹಿತ್ಯ ಕೃತಿಗಾದರೂ ಇದಕ್ಕಿಂತ ಹೆಚ್ಚು ಅವಕಾಶ ನಿರೀಕ್ಷಿಸುವುದು ಕಷ್ಟ. ಸಾಹಿತ್ಯ ಕಾರ್ಯಕ್ರಮಗಳಿಗೆಂದೇ ಇಲ್ಲಿ “ಕನ್ನಡ ಸಾಹಿತ್ಯ ರಂಗ”ವು ಎರಡು ವರ್ಷಕ್ಕೊಮ್ಮೆ ಸಾಹಿತ್ಯೋತ್ಸವ ನಡೆಸುತ್ತದೆ.

    “ಸ್ಮರಣ ಸಂಚಿಕೆ” ಬಗ್ಗೆ ಕೇಳಿದ್ದೀರಿ. ನಾನು ಆ ಸಮಿತಿಯಲ್ಲಿರಲಿಲ್ಲ. ನಾನು ಕೂಡ ಆ ಹೊತ್ತಿಗೆಯನ್ನು ನೋಡಿದ್ದು ಸಮ್ಮೇಳನದ ದಿನವೇ. “ಕರ್ನಾಟಕ ಭಾಗವತ” ಕುರಿತ ಯಾವುದಾದರೂ ಲೇಖನವನ್ನು ಕಳಿಸಲಾಗಿತ್ತೇ? ಅದನ್ನು ನಿರಾಕರಿಸಲಾಯಿತೇ? ಕಾರಣ ನೀಡಲಾಗಿತ್ತೇ? – ಇದೊಂದೂ ನನಗೆ ತಿಳಿಯದು. “ಏಕೆ ಅವರ ಹೆಸರನ್ನು ಕೈಬಿಟ್ಟರು?” ಎಂದು ಕೇಳಿದ್ದೀರಿ. ನನಗೆ ತಿಳಿಯದ ವಿಷಯದ ಬಗ್ಗೆ ನಾನೇನು ಉತ್ತರಿಸಲಿ? ಅಕ್ಕ ವೆಬ್ ಸೈಟಿನಲ್ಲಿರುವ “ಸ್ಮರಣ ಸಂಚಿಕೆ” ಸಮಿತಿಯ ವಿಳಾಸಕ್ಕೆ ಪತ್ರ ಬರೆದು, ಸಂಬಂಧಪಟ್ಟವರಿಂದ ಮಾಹಿತಿ ಪಡೆಯಬಹುದಾಗಿದೆ.

  18. ಲಕ್ಷ್ಮೀ ವೆಂಕಟೇಶ ಅವರೇ, ನಿಮ್ಮ ಲೇಖನದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

Leave a Reply to mala Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.