ಆತ್ಮಿಕ ಸ್ನಾನ! ಇತ್ತೀಚೆಗೆ ಒಂದು ಲೇಖನದಲ್ಲಿ ಈ ಪದ ನೋಡಿದೆ.

ನಮ್ಮ ಮನೆಯಲ್ಲಿ, ಬೆಳಿಗ್ಗೆಯಿಂದ ಮಟಮಟ ಮಧ್ಯಾಹ್ನದವರೆಗೆ ಒಬ್ಬರಲ್ಲಾ ಒಬ್ಬರು ಬಾವಿ ಕಟ್ಟೆ ಹತ್ತಿರ ದಬದಬ ತಣ್ಣೀರು ಸುರಿದುಕೊಳ್ಳುತ್ತಾ ಮಡಿ ನೀರಿನ ಸ್ನಾನ ಮಾಡುತ್ತಿದ್ದುದು ಗೊತ್ತು. ಇದಾವುದು ಈ ಸ್ನಾನ ? ನನಗಂತೂ ಅರ್ಥವಾಗಲಿಲ್ಲ. ಆತ್ಮಿಕ ಅಂದರೆ ಇದು ಆತ್ಮಕ್ಕೋ,ಆಧ್ಯಾತ್ಮಿಕಕ್ಕೋ ಸಂಬಂಧಿಸಿರಬೇಕೇನೋ ಎಂದುಕೊಂಡೆ.

ಕನ್ನಡ ಕಸ್ತೂರಿ, ಬರಹ ನಿಘಂಟುಗಳನ್ನು ಹುಡುಕಿದೆ. ಅವೆರಡೂ ಈ ಪದ ತಮ್ಮಲ್ಲಿಲ್ಲವೆಂದು ತಾರಮ್ಮಯ್ಯ ಮಾಡಿಬಿಟ್ಟವು.

ನನ್ನ ,ಬುದ್ಧಿವಂತೆ (ಹಾಗೆಂದು ನನ್ನ ಅನುಮಾನ ಮಾತ್ರ! ಆಧಾರಗಳಿಲ್ಲ)ಸ್ನೇಹಿತೆಯೊಬ್ಬಳಿಗೆ ಇದರ ಅರ್ಥವೇನೆಂದು ಇಮೈಲ್ ಮಾಡಿ ಕೇಳಿದೆ. ಆ ಮಹರಾಯಿತಿ ಉತ್ತರ ಹೇಳುವುದಿರಲಿ ಜಗಳಕ್ಕೇ ಬಂದಳು. “ನನಗೇನು ಗೊತ್ತು? ಈ ಪ್ರಶ್ನೆ ನನ್ನ ಐಡಿಗೆ ಯಾಕೆ ಕಳಿಸಿದ್ದೀಯಾ? ಪ್ರೊ.ವೆಂಕಟಸುಬ್ಬಯ್ಯನವರಿಗೆ ಕಳಿಸಬೇಕಾಗಿತ್ತು. ನಾನು ಸ್ನಾನವೆಂದರೇನೆಂದೇ ಅರಿಯದ ಮೂಢಳು. ಇನ್ನು ಆತ್ಮ..ಆತ್ಮಿಕ..ಏನಿದು ತಲೆ ಭಾರ?…..”

ಇಷ್ಟೆಲ್ಲಾ ಹಾರಾಡಿದ ಆ ಪುಣ್ಯಾತಗಿತ್ತಿ ಕೊನೆಗೆ ಒಂದು ಪುಕ್ಕಟೆ ಸಲಹೆಯನ್ನೂ ನೀಡಿದ್ದಾಳೆ. ಅದನ್ನು ಹಾಗೇ ತಂದು ಇಲ್ಲಿ ಹಾಕಿದ್ದೇನೆ –

nODu, innoMdu pukkaTTe salahe……….

ninna blognalli haaki biDu………    

neerinoLagE chapaati maaDisuva mahaashayarellaa pannu pannaagi “aatmika snaana” kkU artha maaDisabahudu!

ಹಾಗೇ ಮಾಡಿದ್ದೇನೆ.

      **      **       **        **        **

27 thoughts on “ಆತ್ಮಿಕ ಸ್ನಾನ – ಅಂದರೇನು ?”

  1. ‘ಆತ್ಮಿಕ ಸ್ನಾನ’ ಹಲವು ಬಗೆಯದಿದೆ.

    ಮೊದಲನೆಯದು ಹೀಗಿದೆ.

    ಮೆದುವಾದ ಚಪಾತಿ ಮಾಡುವ ಉದ್ದೇಶದಿಂದ (ದೈಹಿಕ ಸ್ನಾನದ ಉದ್ದೇಶದಿಂದ ಅಲ್ಲ!) ನೀರೊಳಗಿದ್ದು ಹೊರಬರುತ್ತೀರಲ್ಲ? ಆಗ ಆಗಿರುವುದೇ ಆತ್ಮಿಕಸ್ನಾನ!

    ಇನ್ನುಳಿದ ವಿಧಗಳನ್ನು ಒಂದೊಂದಾಗಿ ವಿವರಿಸುತ್ತೇನೆ.

  2. ಈ ಪದವನ್ನು ಯಾವ ಸಂದರ್ಭದಲ್ಲಿ ಓದಿದಿರಿ?

    ನಾನು ಇದನ್ನು ಕೇಳಿದ್ದು ಇದೇ ಮೊದಲು.

    ನನ್ನ ಆತ್ಮಕ್ಕಂತೂ ಇನ್ನು ಸ್ನಾನ ಆಗಿಲ್ಲ 🙂

    ಇಂತಿ
    ಭೂತಾತ್ಮ

  3. ಆತ್ಮಿಕ ಸ್ನಾನ ಅನ್ನುವುದು ಆತ್ಮಕ್ಕೆ ಸ್ನಾನ ಅಂತಲೇ ಇರಬೇಕು. ಇದನ್ನು ನೋಡಿದಾಗ ನನಗೆ ನೆನಪು ಬಂದಿದ್ದು ನಮ್ಮ ದಾಸಶ್ರೇಷ್ಟರಾದ ‘ಪುರಂದರ ದಾಸರು’ ಬರೆದಿರುವ ‘ತನುವ ನೀರೊಳಗದ್ದೀ ಫಲವೇನೂ ತನ್ನ ಮನದಲಿ ದೃಢಭಕ್ತಿ ಇಲ್ಲದ ಮನುಜನು’ ಎಂಬ ದಾಸವಾಣಿ.

  4. ಜೋಶಿಯವರೇ, ಈ ಚಳಿಯಲ್ಲಿ ನೀರೊಳಗಿದ್ದು ಹೊರಬರುವ ಕಲ್ಪನೆಯೇ ಮೈನಡುಕ ಬರಿಸುತ್ತಿದೆ. ಮರಳು ಸ್ನಾನದ ರೀತಿ (ಮರುಭೂಮಿಯಲ್ಲಿ ಸಿಕ್ಕಿಬಿದ್ದವರು ಹೀಗೇ ಮಾಡ್ತಾರಂತೆ) ನೀರಿಲ್ಲದೆ ಮಾಡುವ ಸ್ನಾನ ಯಾವುದೂ ಇಲ್ಲವೇ?

  5. ಭೂತ, ನಿನ್ನ ಆತ್ಮಕ್ಕೆ ಸ್ನಾನವಾದ ದಿನ ನಿನ್ನ ಭೂತ ಜನ್ಮ ವಿಮೋಚನೆಯಾಯಿತೆಂದು ಅರ್ಥ. ಭೂತ ಜನ್ಮ ಬೇಗನೆ ಕಳೆದುಕೊಳ್ಳಬೇಕೆಂದಿದ್ದರೆ ಮಾತ್ರ ಸ್ನಾನ ಮಾಡು 🙂

    ಆ ಲೇಖನವನ್ನು ಹುಡುಕಿ link ಕೊಡುತ್ತೇನೆ.

  6. ಮೀರಾ, ನಿನ್ನ ವಿವರಣೆ ಒಪ್ಪಬಹುದೇನೋ.

    ಆತ್ಮಿಕ ಸ್ನಾನ = ಆತ್ಮಕ್ಕೆ ಸ್ನಾನ. – ಆತ್ಮಕ್ಕೆ ಸ್ನಾನ ಎಂದೇ ಹೇಳಿರಬಹುದಿತ್ತು.

  7. ಬಸವಣ್ಣನವರು ಹೇಳಿದ
    “ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ
    ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
    ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ” ಎಂಬ ಅಂತರಂಗ ಶುದ್ಧಿಯೇ ‘ಆತ್ಮಿಕ ಸ್ನಾನ’.

  8. ನೀರಿಲ್ಲದೆ ಮಾಡುವ ಸ್ನಾನ ಯಾವುದೂ ಇಲ್ಲವೇ?
    ಓಹೋ…ಯಾಕಿಲ್ಲ? ಖಂಡಿತಾ ಇದೆ!ಮತ್ತು ಸದರಿ ವಿಧಾನಕ್ಕೆ
    `ಮಂತ್ರದ ಸ್ನಾನ’ ಅನ್ನುತ್ತಾರೆ!

  9. ಅಯ್ಯೊ , ಅದು ಕನಕದಾಸರದು ….
    ಅದು ಇಲ್ಲಿದೇ ….

    ನೀರಿಲ್ಲದ ಸ್ನಾನ ….

    ಸ್ನಾನವ ಮಾಡಿರೊ ಜ್ನಾನ ತೀರ್ಥದಲ್ಲಿ
    ಮಾನವರೆಲ್ಲ ಮೌನದೊಳಗೆ ನಿಂದು ಪ

    ತನ್ನ ತಾನರಿತುಕೊಂಬುದೆ ಒಂದು ಸ್ನಾನ
    ಅನ್ಯಾಯ ಮಾಡದಿರುವುದೊಂದು ಸ್ನಾನ
    ಅನ್ನದಾನವ ಮಾಡುವುದೊಂದು ಸ್ನಾನ – ಹರಿ
    ನಿನ್ನ ಧ್ಯಾನವೆ ನಿತ್ಯ ಗಂಗಾ ಸ್ನಾನ ೧

    ಪರಸತಿಯ ಭ್ರಮಿಸದಿದ್ದರೆ ಒಂದು ಸ್ನಾನ
    ಪರನಿಂದೆಯ ಮಾಡದಿದ್ದರೊಂದು ಸ್ನಾನ
    ಪರೋಪಕಾರ ಮಾಡುವುದೊಂದು ಸ್ನಾನ
    ಪರತತ್ತ್ವವನರಿತುಕೊಂಬುದೆ ಒಂದು ಸ್ನಾನ ೨

    ಸಾಧು ಸಜ್ಜನರ ಸಂಗವೆ ಒಂದು ಸ್ನಾನ
    ಭೇದಾಭೇದವಳಿದಡೆ ಒಂದು ಸ್ನಾನ
    ಆದಿಮೂರುತಿ ಕಾಗಿನೆಲೆಯಾದಿಕೇಶವನ
    ಪಾದ ಧ್ಯಾನವೆ ನಿತ್ಯ ಗಂಗಾ ಸ್ನಾನ

  10. ಜೋಶಿಯವರೇ, ಅಂತರಂಗ ಶುದ್ಧಿಯೇ ‘ಆತ್ಮಿಕ ಸ್ನಾನ’ ಎಂಬ ಮಾತು ಒಟ್ಟು ಅರ್ಥದಲ್ಲಿ ಸರಿ ಎನ್ನಿಸಿದರೂ, ಆತ್ಮಿಕ ಪದಕ್ಕೆ ಸರಿಯಾದ ಅರ್ಥ – ಪದಾರ್ಥ – ಅನ್ನಿಸಲಿಲ್ಲ.

    ಆತ್ಮ ಮತ್ತು ಅಂತರಂಗ ಒಂದೇನಾ? ಅಂತರಂಗ ಸಾಕ್ಷಿ ಮತ್ತು ಆತ್ಮ ಸಾಕ್ಷಿ ಮುಂತಾದ ಪದಗಳನ್ನು ಸಮಾನ ಅರ್ಥಗಳಲ್ಲಿ ಬಳಸುತ್ತೇವೆ. ಆದರೆ ಆತ್ಮ ಅಮರ ಎನ್ನುತ್ತೇವೆ. ಅಂತರಂಗ ಅಮರವಲ್ಲ!

    ವ್ಯಕ್ತಿಯೊಬ್ಬ ಅಳಿದ ಮೇಲೂ ಅವನ ಅಂತರಂಗ ಇಲ್ಲೇ ಉಳಿವುದಾದಲ್ಲಿ ಬಹುಶ: ಭೂತಗಳಿಗೆ ಖುಷಿಯಾಗಬಹುದು. 🙂

  11. ಮಾಲಾ,ಮಂತ್ರದಿಂದ ಮಾವಿನಕಾಯಿ ಉದುರದು ಎಂದು ಹೇಳುವುದು ಕೇಳಿದ್ದೆ. ಮಂತ್ರದಿಂದ ಸ್ನಾನವಾಗುವ ಬಗ್ಗೆ ತಿಳಿಸಿ ಪುಣ್ಯ ಕಟ್ಟಿಕೊಂಡಿದ್ದೀರಿ 🙂

  12. ಶ್ರೀಕಾಂತ ಮಿಶ್ರಿಕೋಟಿಯವರಿಗೆ ತುಳಸಿವನಕ್ಕೆ ಸ್ವಾಗತ! 🙂

    ಕನಕದಾಸರು (ನೀರು)ಸ್ನಾನ ವಿರೋಧಿಗಳ ಪರವೆಂದು ತಿಳಿಸಿದ್ದಕ್ಕೆ ವಂದನೆಗಳು. ಆದರೆ ಅವರು ಹೇಳಿರುವ ಸ್ನಾನ ಕೂಡ ಸುಲಭಸಾಧ್ಯವೇನಲ್ಲ. “ಉದಯಕಾಲದೊಳೆದ್ದು ಗಡಗಡ ನಡುಗುತ ನದಿಯಲಿ ಮಿಂದೆವೆಂದು ಹೇಳುತಲಿ..” (ಉದರ ವೈರಾಗ್ಯವಿದು) ಎಂದು ಹಾಡಿದ ಪುರಂದರದಾಸರ ಬೆಂಬಲವೂ ತಣ್ಣೀರು ಸ್ನಾನ ವಿರೋಧಿಗಳಿಗಿದೆ ಎಂದು ಭಾವಿಸೋಣವೇ?

    ಸ್ನಾನವ ಮಾಡಿರೊ..ಹಾಡಿನ ಪೂರ್ಣ ಸಾಹಿತ್ಯ ನೀಡಿದ್ದಕ್ಕೆ ಧನ್ಯವಾದಗಳು. 

    ನಿಮ್ಮ ಹೆಸರಿಗಂಟಿರುವ “ಮಿಶ್ರಿಕೋಟಿ” ನಿಮ್ಮ ಊರಿನ ಹೆಸರೇ? ಎಲ್ಲಿದೆ?

    ಅದು ಮೇಲುಕೋಟೆಯಂತೆ – “ಮಿಶ್ರಿಕೋಟೆ” ಅಥವಾ ಮುಕ್ಕೋಟಿ,ಪಂಚ ಕೋಟಿಯಂತೆ -“ಮಿಶ್ರಕೋಟಿ” – ಎರಡೂ ಅಲ್ಲವಾದ್ದರಿಂದ ನನ್ನ ಗಮನ ಸೆಳೆಯಿತು.

  13. ಅಂತರಂಗ ಶುದ್ಧಿ, ಅಂತರಾಳ ಶುದ್ಧಿ, ಇವೆರಡೂ ಮನಸ್ಸಿಗೇ ಅವಲಂಬಿಸುತ್ತದೆ ಅಂತ ನನ್ನ ಅನಿಸಿಕೆ, ಮನಸ್ಸಿನ ಕೊಳೆ ನಿವಾರಣೆಗಾಗಿಯೇ ಈ ಮಹನೀಯರು ಎಷ್ಟೋ ದಾರಿಯನ್ನ ತೋರಿದ್ದಾರೆ, ಅದೇ ಅಸಾಧ್ಯವಾಗಿರುವಾಗ ಇನ್ನು ಜೀವನದಲ್ಲಿ ಜ್ಞಾನ, ಭಕ್ತಿ ಮತ್ತು ವೈರಾಗ್ಯ ಎಂಬ ಮೂರು ಸಾಧನಗಳಿಂದ ಮಾತ್ರ ಆತ್ಮ ಶುದ್ಧಿ ಸಾಧ್ಯ ಅಂತ ಓದಿದ್ದೇನೆ ಇದಂತೂ ಇದ್ದಿದ್ದೂ ಅಸಾಧ್ಯ.

  14. ಮಾಲಾ,ಮಂತ್ರದಿಂದ ಮಾವಿನಕಾಯಿ ಉದುರದು ಎಂದು ಹೇಳುವುದು ಕೇಳಿದ್ದೆ. ಮಂತ್ರದಿಂದ ಸ್ನಾನವಾಗುವ ಬಗ್ಗೆ ತಿಳಿಸಿ ಪುಣ್ಯ ಕಟ್ಟಿಕೊಂಡಿದ್ದೀರಿ –

    ಶ್ರೀತ್ರೀ ಅವರೇ, ನಾನಿನ್ನೂ ವಿಧಾನವನ್ನು ತಿಳಿಸಿಲ್ಲ್ಲಾ! ಅಡ್ವಾನ್ಸ್ ಆಗಿ ಪುಣ್ಯ ಸ್ಯಾಂಕ್ಷನ್ ಮಾಡಿದ್ದಕ್ಕೆ ಥ್ಯಾಂಕ್ಸ್.

    ಸದರಿ ವಿಧಾನ ಹೀಗಿದೆ-
    ಮಲಿನ ವಸ್ತ್ರಗಳನ್ನು ಕಳಚಿ `ಕ್ಲೀನ್ ಕ್ಲೀನ್ ಕ್ಲೀನ್’ ಅಂತ ಹೇಳಿಕೊಳ್ಳುತ್ತಾ ಏಳು ಸಾರಿ ಒದರಿ ಮತ್ತೆ ಧರಿಸುವುದು!
    ಇದೇ `ಮಂತ್ರದ ಸ್ನಾನ’

    ನಾನ್ಯಾವತ್ತೂ ಈ ವಿಧಾನವನ್ನು ಪ್ರಯೋಗ ಮಾಡಿಲ್ಲವಾದ್ದರಿಂದ ಹೆಚ್ಚಿಗೇನೂ ಹೇಳಲಾರೆ `ನಿಮ್ಮ `ವನದ’ ಓದುಗರು ಈ ವಿಧಾನ ಉಪಯೋಗಿಸಿ ತಂತಮ್ಮ ಅನುಭವಗಳನ್ನು ತಿಳಿಸುವರೆಂದು ಆಶಿಸೋಣ…

    ವಿ.ಸೂ-ಮಾಹಿತಿ ಕೃಪೆ- ನಮ್ಮನೆಯವರು!(ವಿವಾಹ ಪೂರ್ವ ಅನುಭವ ಮಾಲೆಯಿಂದ ಹೆಕ್ಕಿದ್ದು)

  15. ಆತ್ಮ, ಅಂತರಂಗ ಎರಡೂ ಬೇರೆ ಬೇರೆ ಅಲ್ಲವೆಂದು ನನ್ನ ಭಾವನೆ. ಆತ್ಮ ಸೂಪರ್-ಕಾನ್ಷಿಯಸ್ ಆದ್ರೆ, ಅಂತರಂಗ ಕಾನ್ಷಿಯಸ್.
    ಅಂತರಂಗ/ವಿವೇಕ/ಜ್ಞಾನದ ಮತ್ತೊಂದು ಎತ್ತರದ ಮೆಟ್ಟಲು ಆತ್ಮ-ಜ್ಞಾನ. ಈ ಎಲ್ಲಾ ಅರ್ಥಗಳಲ್ಲೂ ಆತ್ಮಿಕ ಸ್ನಾನ ಪರಿಶುದ್ಧ ಅಂತರಂಗಕ್ಕಾಗಿ ಇರುವಂಥದ್ದು ಎಂದುಕೊಳ್ಳಬಹುದು. ಬಸವಣ್ಣ, ಕನಕ, ಪುರಂದರರೇ ಮೊದಲಾದ elevated ಆತ್ಮ ಸ್ವರೂಪರು ಹೇಳಿದ್ದನ್ನು ಕೇಳೋದು ಸುಲಭ; ಪಾಲಿಸೋದು…?

    “ಉದಯಕಾಲದೊಳೆದ್ದು ಗಡಗಡ ನಡುಗುತ…” ತಣ್ಣೀರು ಸ್ನಾನ ಮಾಡಿದ್ರೆ ಮಾತ್ರ ಸ್ನಾನ-ಎಂದೇನಿಲ್ಲ, ಬಿಸಿನೀರಲ್ಲೂ ಸ್ನಾನವೇ. ಹೊಳೆಯಲ್ಲಿ ಮುಳುಗಿ ಸ್ನಾನ ಮಾಡುವಾಗ ಮಾತ್ರ ಯೋಚನೆ ಮಾಡಬೇಕು- ಯಾವುದರಲ್ಲಿ ಮುಳುಗುತ್ತಿದ್ದೇವೆಯೆಂದು!! ಎಷ್ಟೋ ಬಾರಿ ನಮ್ಮ ದೇಹವೇ ಹೊಳೆನೀರಿಗಿಂತ ನಿರ್ಮಲವಾಗಿರುವ ಸಾಧ್ಯತೆಗಳಿವೆ (ಮಲೆನಾಡಿನ ಹಳ್ಳಿಗಾಡಿನ ಮೌನದ ಹರಿವುಗಳ ಹೊರತಾಗಿ). ಮನಸ್ಸಿನ-ಅಂತರಂಗದ ಬಗ್ಗೆ ನಾನು ಮಾತಾಡುತ್ತಿಲ್ಲ, ಅದು ಅವರವರಿಗೆ ಬಿಟ್ಟದ್ದು.

  16. ಮಾಲಾ, ಈ ಮಂತ್ರದ ಸ್ನಾನಕ್ಕೆ ಬೇಗ patent ಮಾಡಿಸಿಕೊಳ್ಳಲು ನಿಮ್ಮವರಿಗೆ ತಿಳಿಸಿ. ತಡಮಾಡಿದರೆ ಬೇರೆಯವರ ಪಾಲಾದೀತು!

  17. ಶ್ರೀತ್ರೀ ಅವರೆ,
    ಆತ್ಮಿಕ ಸ್ನಾನ ಅಂದ್ರೆ ಆತ್ಮೀಯರಿಗೆ ಪುಕ್ಕಟೆ ಸ್ನಾನ ಮಾಡಿಸೋದು ಅಂತ.
    ಉದಾಹರಣೆಗೆ, ರಾಜಕಾರಣಿಗಳೆಲ್ಲಾ ಮತದಾರರನ್ನು ಆತ್ಮೀಯರು ಅಂತ ತಿಳಿದುಕೊಳ್ಳುತ್ತಾರೆ (ಚುನಾವಣೆ ಬಂದಾಗ ಮಾತ್ರ). ತಾವು ಮಾಡಿದ ಪಾಪವೆಲ್ಲವನ್ನೂ “ಆತ್ಮೀಯ” ಬಡ ಪ್ರಜೆಗಳ ಮೇಲೆ ಎರಚಿ (ಬೆಲೆ ಏರಿಕೆ ಇತ್ಯಾದಿ ಮೂಲಕ) ಸ್ನಾನ ಮಾಡಿಸುತ್ತಾರೆ. ಇದೇ ಆತ್ಮಿಕ ಸ್ನಾನ.
    ಅಥವಾ ಪ್ರಜೆಗಳನ್ನು “ಮಿಕ” ಎಂದು ಭಾವಿಸಿದರೆ, ಇದನ್ನು ಅತಿ-ಮಿಕ ಸ್ನಾನ ಎಂದೂ ಕರೆಯಬಹುದಾಗಿದೆ. 🙂

  18. ಅನ್ವೇಷಿಗಳೇ,

    ಕೊನೆಗೂ ಈ ಮಿಕವನ್ನು ಕಂಡು ಹಿಡಿಯಲು ನೀವೇ ಬರಬೇಕಾಯಿತು ನೋಡಿ. ಈ ಮಿಕ ಯಾರೂ ಅಂತ ಪತ್ತೆಯಾಗದಿದ್ದರೆ ಅದನ್ನು ಅನಾಮಿಕ ಅಂತ ಕರೆದರಾಯಿತು ಬಿಡಿ 🙂

  19. ನನ್ನ ಹೆಸರಿನಲ್ಲಿರುವ ಮಿಶ್ರಿಕೋಟಿ (ಬಹುಶಃ ಮಿಶ್ರೀಕೋಟಿ ಸರಿ ಇರಬಹುದು- ವೆರಿಫೈ ಮಾಡಲು ಪುರುಸೋತ್ತಾಗಿಲ್ಲ – ಹೀಗೂ ಉಂಟೇ? – ಸ್ವಂತದ ಹೆಸರಿನ ಬಗ್ಗೇ ಇಷ್ಟು ಅಜ್ನಾನ! ) ಹುಬ್ಬಳ್ಳಿ ಹತ್ತಿರದ ಒಂದು ಹಳ್ಳಿ.

    ನನಗೂ ಆ ಊರಿಗೂ ಬಾದರಾಯಣ ಸಂಬಂಧ ! ನನ್ನ ೪೪ ವರ್ಷದಲ್ಲಿ ಎರಡೇ ಬಾರಿ ಹೋಗಿದ್ದೇನೆ!

  20. ತ್ರಿವೇಣಿಯವರೇ,

    ಆತ್ಮಿಕ- ಆತ್ಮಕ್ಕೆ ಸಂಬಂಧಿಸಿದರೆ..
    ತಾತ್ವಿಕ – ತಾತನಿಗೆ ಸಂಬಂಧಿಸಿದ್ದೇ..ಹಾಗೇ ಆಕಸ್ಮಿಕ-ಆಕ್ಕ ಸಿಕ್ಕಾಗ ಆಗೋದಿಕ್ಕೆ ಸಂಬಂಧಿಸಿದ್ದೇ 🙂

  21. ಶ್ರೀಕಾಂತ್ ಅವರೇ, ನೀವು ಎರಡು ಬಾರಿಯಾದರೂ ನಿಮ್ಮೂರನ್ನು ನೋಡಿರುವುದಕ್ಕೆ ಸಂತೋಷ ಪಡಿ. ನನ್ನವರ ಹೆಸರಿನ ಜೊತೆ ಇರುವ “ಕೊಡಿಕಲ್” ಎಂಬ ಊರನ್ನು ನೋಡುವುದಿರಲಿ, ಅದು ಎಲ್ಲಿದೆ ಎಂದೂ ಅವರಿಗೆ ಗೊತ್ತಿಲ್ಲ. ಅದು ಕೂಡ ಹುಬ್ಬಳ್ಳಿ,ಧಾರವಾಡದ ಹತ್ತಿರ ಎಲ್ಲಾದರೂ ಇದ್ದರೆ, ಮುಂದಿನ ಸಲ ನಿಮ್ಮೂರಿಗೆ ಹೋದಾಗ ಆ ಊರಿನ ಬಗೆಗೂ ಮಾಹಿತಿ ತನ್ನಿ.

  22. ಶ್ರೀತ್ರೀ ಅವರೆ,
    ನಿಮ್ಮವರ ಹೆಸರಿನ ಜತೆಗಿರುವ ಕೊಡಿಕಲ್ ಎಂಬ ಊರು ಗೊತ್ತಿಲ್ವೇ? ಅದು ಕೋಡಿಕಲ್ ಆಗಿದ್ದರೆ, ಮಂಗಳೂರು ಸಮೀಪವೇ ಇದೆ. ಮಂಗಳೂರಿನ ಕೊಟ್ಟಾರಚೌಕಿ ಎಂಬ ಉಪಪಟ್ಟಣದ ಬಳಿಯಲ್ಲಿ.

  23. ಈ ಕೋಡಿಕಲ್’ನಲ್ಲಿ ನಮ್ಮಮ್ಮನ ಸೋದರ ಮಾವನ ಮನೆಯಿದೆ.

  24. ಅನ್ವೇಷಿಗಳೇ, ಕೊಡಿಕಲ್ ಮತ್ತು ಕೋಡಿಕಲ್ ಬೇರೆ ಬೇರೆ ಊರುಗಳು. ನಾನು ಹೇಳಿದ ಕೊಡಿಕಲ್ ಉತ್ತರ ಕರ್ನಾಟಕದಲ್ಲಿ ಎಲ್ಲೋ ಇರಬೇಕು.

  25. ನಾನೂ ಸುಮಾರು ಹಳೆಯ ಮ್ಯಾಪುಗಳನ್ನು ಹುಡುಕಿದ್ದು ಉಂಟು. ನಮ್ಮ ಊರು ೧೯೫೬ರ ಮೊದಲು ಕುರುಡೇಕರ್ ಅಂತಲೂ ನಂತರ ಕೊಡಿಕಲ್ ಅಂತಲೂ ಕರೆಯೊಲ್ಪಡುತ್ತಿತ್ತು. ಈ ಹಳ್ಳಿ ಗದಗಿನಿಂದ ೨೦ ಮೈಲಿ ದೂರ ಎಂದು ನನ್ನಪ್ಪ ಹೇಳುತ್ತಿದ್ದ ನೆನಪು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.