ಕವಿ – ಎಂ.ಗೋಪಾಲಕೃಷ್ಣ ಅಡಿಗ
ಹಾಡು ಕೇಳಿ :
ಪಿ.ಕಾಳಿಂಗರಾವ್
ರಾಜೇಶ್ (ಚಿತ್ರ:ಮತದಾನ)
ಬಿ.ಆರ್.ಛಾಯಾ (ಚಿತ್ರ:ಮತದಾನ)
ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ
ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆತೆರೆಗಳೋಣಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳುರುಳುವಾಟವಲ್ಲಿ
ಆಶೆ ಬೂದಿ ತಳದಲ್ಲು ಕೆರಳುತಿವೆ ಕಿಡಿಗಳೆನಿತೋ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರದೆದೆಯಾಳದಲ್ಲೂ ಕಂಡೀತು ಏಕಸೂತ್ರ
ಕಂಡುದುಂಟು ಬೆಸೆಬೆಸೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ
ಎತ್ತರೆತ್ತರೆಕೆ ಏರುವ ಮನಕೂ ಕೆಸರ ಲೇಪ, ಲೇಪ;
ಕೊಳೆಯು ಕೊಳೆಚೆಯಲಿ ಮುಳುಗಿ ಕಂಡನೋ ಬಾನಿನೊಂದು ಪೆಂಪ
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ
ತಮದಗಾಧ ಹೊನಲಲ್ಲು ಹೊಳೆಯುತಿದೆ ಸತ್ವವೊಂದಖಂಡ !
ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ
ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು
ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ
ಬೆಂಗಾಡು ನೋಡು ಇದು ಕಾಂಬ ಬಯಲು ದೊರಕಿಲ್ಲ ಆದಿ ಅಂತ್ಯ
ಅದ ತಿಳಿದೆನೆಂದ ಹಲರುಂಟು ತಣಿದೆನೆಂದವರ ಕಾಣೆನಯ್ಯಾ
ಅರೆಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾವೇಕೋ ಮಲೆತು ಮೆರೆದು
ಕೊನೆಗೆ ಕರಗುವೆವು ಮರಣ ತೀರ ಘನ ತಿಮಿರದಲ್ಲಿ ಬೆರೆದು
** ** ** ** ** ** ** ** ** ** ***
http://www.youtube.com/watch?v=9Z8oV5Ya82U
ಎತ್ತರೆತ್ತರಕೆ ಏರುವ ಮನಕು ಕೆಸರ ಲೇಪ ಲೇಪ,
ಹೊಳೆಯ ಕೊಳಚೆಯಲಿ ಮುಳುಗಿ ಕಂಡೆನೋ, ಬಾನಿನೊಂದು ಪೆಂಪ!
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ,
ಸಮದಗಾಧ ಹೊನಲಲ್ಲು ಹೊಳೆಯುತಿದೆ ಸತ್ವ ಒಂದ ಕಂಡ!
ಈ ಸಾಲುಗಳು ಇವೆ.
ಮತದಾನ ಚಿತ್ರದಲ್ಲಿ, ನಂದಿತ ಕೂಡ ಹಾಡಿದ್ದಾರೆ. ಅವರಿಗೆ ರಾಜ್ಯ ಪ್ರಶಸ್ತಿ ಬಂದ್ದು ಇದೇ ಹಾಡಿಗಾಗಿ.
ಮೊದಲು ಛಾಯ ರವರಿಗೆ ಬಹುಮಾನ ಘೋಷಿಸಿ, ನಂತರ ನಂದಿತಾಗಿತ್ತರು.
ಶಿವಮೊಗ್ಗ ಸುಬ್ಬಣ್ಣೋರು ಕೂಡ ಹಾಡಿದ್ದಾರೆ, ಇವರ, ಧಾಟಿ ಬಲು ಇಷ್ಟವಾಯಿತು ನನಗೆ.
ಇನ್ನು ಕವನದ ಬಗ್ಗೆ. ಅರ್ಥ ಆಗೊಕ್ಕೆ ಅತಿ ಸಮಯ ತೊಗೊತು.
ಜೀವನವನ್ನೆ ಬಿಚ್ಚಿಟ್ಟ ಒಂದು ಅದ್ಭುತ ಕವನ.
ಅಡಿಗರ ಈ ಕವನ ನನ್ನ ಮೇಲೆ ಪ್ರಭಾವ ಬೀರಿದಷ್ಟು, ಇವರ ಬೇರಾವ ಕವನವು ಬೀರಲಿಲ್ಲ.
ಪ್ರತಿ ಬಾರಿ ಓದಿದಾಗಲು, ಕೇಳಿದಾಗಲು, ಹೊಸದೊಂದು ಆಯಾಮ ದೊರೊಕುತ್ತದೆ.
ಈ ಕವನವನ್ನು ಅರಿತೆನೆಂದರು ಅರಿತ ಧೀರನಿಲ್ಲ;
ಹಲವುತನದ ಆಯಾಮವಿದು, ಕಗ್ಗಂಟು ಬಿಚ್ಚಲಿಲ್ಲ!
ಇಂತಿ
ಭೂತ
ಮತ್ತೊಂದು ಒಳ್ಳೆಯ ಕವನ, ಧನ್ಯವಾದಗಳು. ಅಡಿಗರ ನವ್ಯಕವನಗಳಷ್ಟು ಗಟ್ಟಿ ಕಡಲೆ ಅಲ್ಲವಾದರೂ ಗಟ್ಟಿ ತಿರುಳಿನ ಕವನವಿದು. ಬಾಳಿನ ಬಗ್ಗೆ ಜೀವನದ ಬಗ್ಗೆ ತುಂಬಾ ಆಳದ ಒಳನೋಟವಿದೆ. ನೋವು, ಆತಂಕಗಳ ಜೊತೆಗೆ ಭರವಸೆ, ವಿಶ್ವಾಸಗಳೂ ಇವೆ. “ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ..|
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ..||” ಈ ಎರಡೇ ಸಾಲುಗಳು ಸಾಕು…. ನಮ್ಮನ್ನೊಮ್ಮೆ ನಾವೇ ವಿಶ್ಲೇಷಿಸಿಕೊಳ್ಳಲು.
ಅಡಿಗರ ಈ ಕವನಕ್ಕಾಗಿ ಧನ್ಯವಾದಗಳು ಹಾಡಿಗಾಗಿಯೂ ಸಹ ನಾನು ಕಾಳಿಂಗ ರಾಯರ ಕಂಠದಲ್ಲಿ .ಕೇಳಿದ್ದೆ.ಈಗ ಛಾಯಾ ದನಿಯಲ್ಲೂ ಕೇಳಿದೆ
ಮೊಗೆದಷ್ಟೂ ಅರ್ಥ ಕೊಡುವ ಕವನ….
ಚಿತ್ರದುರ್ಗದಲ್ಲಿ ಕೆಲವು ದಿನಗಳ ಹಿಂದೆ (sep 22,)
`ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ….’ ಚರಣವನ್ನು
ಹಾಕಿದ್ದೆ ಕೂಡ…
ನನ್ನ ಅತ್ಯಂತ ಇಷ್ಟದ ಕವಿತೆಗಳಲ್ಲೊಂದು ಇದು. ಮತದಾನದಲ್ಲಿ ಇದು ಹಾಡಾಗಿರುವುದು ಮಾತ್ರ ಗೊತ್ತೇ ಇರಲಿಲ್ಲ. ಇವತ್ತು ನೋಡಿ, ಕೇಳಿ ತುಂಬಾ ಖುಷಿಯಾಯ್ತು.
ಭೂತ, ಹೌದು. ಈ ಹಾಡಿನಲ್ಲಿರುವ ಚರಣಗಳನ್ನು ಮಾತ್ರ ಇಲ್ಲಿ ಬರೆದಿದ್ದೇನೆ. ಬಿಟ್ಟು ಹೋಗಿರುವ ಸಾಲುಗಳು ಮತ್ತು ಕವನದ ಶೀರ್ಷಿಕೆಯನ್ನು ಮೂಲ ಕವಿತೆ ನೋಡಿ ಸರಿಪಡಿಸುತ್ತೇನೆ.
ಆಮೇಲೆ, “ಮತದಾನ” – ಚಿತ್ರದಲ್ಲಿ ಇದೇ ಹಾಡನ್ನು ನಂದಿತ ಹಾಡಿರುವ ಬಗ್ಗೆ ಸರಿಯಾಗಿ ಗೊತ್ತಿದೆಯೇ? ನನಗೆ ನೆನಪಾಗುತ್ತಿಲ್ಲ. ಈ ಹಾಡನ್ನು ರಾಜೇಶ್,ಛಾಯಾ solo ಅಲ್ಲದೆ duet ಆಗಿಯೂ ಹಾಡಿದ್ದಾರೆ. ಅದೇ ಹಾಡನ್ನು ನಂದಿತಾ ಕೂಡ ಹಾಡಿದ್ದರೆ ಒಂದೇ ಹಾಡನ್ನು ಚಿತ್ರದಲ್ಲಿ ಎಷ್ಟು ಸಲ ಬಳಸಿದ್ದಾರೆ TNS? 🙂
ಈ ಚಿತ್ರದ ಸಂಗೀತ ನಿರ್ದೇಶಕರು – ವಿ.ಮನೋಹರ್ ಮತ್ತು ಸಿ.ಅಶ್ವಥ್
ಜ್ಯೋತಿ,ಮಾಲಾ, ನಿಮ್ಮಿಬ್ಬರ ಧನ್ಯವಾದಗಳನ್ನು ಅಡಿಗರಿಗೆ ಅರ್ಪಿಸಲಾಗಿದೆ. 🙂 ಈ ಕವನದ ಪ್ರತಿಯೊಂದೂ ಸಾಲು quotation ಆಗಿ ಬರೆಯುವಷ್ಟು ಸುಂದರವಾಗಿದೆ!
ಜ್ಯೋತಿ ಹೇಳಿದಂತೆ ಕವನದಲ್ಲಿ ಅಪಾರ ಅರ್ಥ ಅಡಗಿದ್ದರೂ, ಅಡಿಗರ ಇತರ ಕವನಗಳಿಗಿಂತ ಸುಲಭವಾಗಿ (ಸ್ವಲ್ಪವಾದರೂ) ಅರ್ಥವಾಗುತ್ತದೆ. ಭೂತ ಉಲಿದಂತೆ, “ಈ ಕವನವನ್ನು ಅರಿತೆನೆಂದರೂ ಅರಿತ ಧೀರನಿಲ್ಲ!”
ಭೂತ, “ಭೂತ” ಎನ್ನುವ ಅಡಿಗರ ಇನ್ನೊಂದು ಕವನವೂ ಇದೆ. 🙂
ಸುಶೃತ, ಜನ ನೋಡಲು ನಿರಾಕರಿಸಿದ ಉತ್ತಮ ಚಿತ್ರಗಳಲ್ಲೊಂದು – ಮತದಾನ. ಚಿತ್ರ ಯಶಸ್ಸು ಕಾಣದಿದ್ದರೆ ಅದರ ಹಾಡುಗಳೂ ಅದರೊಂದಿಗೇ ಕಣ್ಮರೆಯಾಗುತ್ತವೆ. ಹಾಗಾಗಿ ನಿಮಗೆ ಗೊತ್ತಾಗಿಲ್ಲ.
ಕ್ಷಮೇ! ನಾ ಕನ್ಪೀಸ್ ಆಗಿದ್ದೆ. ಗಂಧದ ಗೊಂಬೆ ಚಿತ್ರಕ್ಕೆ ಹೀಗಾಗಿದ್ದು 🙂
ಇಂತಿ
ಕನ್ಪೀಸ್ಡ್ ಭೂತ
>ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು
ಸ್ಪಲ್ಪ ಅರ್ಥ ಆಗಲಿಲ್ಲ..
ಯಾರಾದರೂ ಬಿಡಿಸಿ ಹೇಳಿದರೆ ಚೆನ್ನಾಗಿ ಇರುತ್ತೆ..
ಅಂದಾಗೆ ಅಡಿಗರು ಇದನ್ನು ಬರೆದ ಸನ್ನಿವೇಶ ಏನಿರಬಹುದು?
“ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು”
ಕೆಲವು ಸಲ ಹೊನ್ನು ಎಂದುಕೊಂಡಿದ್ದು ಮಣ್ಣಾಗುವುದು, ಇನ್ನು ಕೆಲವು ಸಲ ಮಣ್ಣು ಎಂದು ಭಾವಿಸಿದ್ದರಲ್ಲೆಯೇ ಸಾರ ಅಡಗಿರುತ್ತದೆ. ಮಣ್ಣು ಅಂದರೆ ಇದು ಮಣ್ಣೇ ಆಗಬೇಕಾಗಿಲ್ಲ. ಕೈಗೆತ್ತಿಕೊಂಡ ಕೆಲಸ ವಿಫಲ,ನಿಷ್ಪಯೋಜಕವಾಗುವುದು, ನಮ್ಮ ನಿರೀಕ್ಷೆಗಳು ಹುಸಿಯಾಗುವುದು. ನಮ್ಮ ಬದುಕಿನ ಅನಿಶ್ಚತತೆಯನ್ನು ನಿರೂಪಿಸುವಂತಿದೆ.
ಅಡಿಗರು ಬರೆದ ಸನ್ನಿವೇಶ ಗೊತ್ತಿಲ್ಲ. ಆದರೆ ಕವಿತೆ ಜೀವನದ ನಿಗೂಢತೆಯ ಕುರಿತಾಗಿದೆ. ಇದು ಹೀಗೇ ಎಂದು ಸ್ಪಷ್ಟವಾಗಿ ನಿರ್ಧರಿಸುವುದು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. (ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು) ವೇದಾಂತಿಗಳು, ಸಿದ್ಧ ಪುರುಷರು ಬಾಳುವೆಯ ಒಗಟನ್ನು ಬಿಡಿಸಲು ಯತ್ನಿಸಿದ್ದಾರಾದರೂ (ಅದ ತಿಳಿದೆನೆಂದ ಹಲರುಂಟು ) ಅವರಿಗೂ ಅದರಲ್ಲಿ ಪೂರ್ಣ ಯಶಸ್ಸು ಸಿಕ್ಕಿಲ್ಲ (ತಣಿದೆನೆಂದವರ ಕಾಣೆನಯ್ಯಾ)
ಕವಿತೆಗೆ ಇದೊಂದೇ ಅಂತಿಮ ಅರ್ಥವಲ್ಲ. ಅವರವರ ಬದುಕಿನ,ಅನುಭವದ ಆಧಾರದ ಮೇಲೆ ಹೊಸ ಹೊಸ ಆಯಾಮಗಳನ್ನು ,ಅರ್ಥಗಳನ್ನು, ಪಡೆದುಕೊಳ್ಳುತ್ತಾ ಹೋಗುತ್ತದೆ, ಕವನ.