ಕವಿ – ಬಿ. ಆರ್. ಲಕ್ಷ್ಮಣರಾವ್

BRL-Photo;The hindu

ಹಾಡು ಕೇಳಿ 

ಅಮ್ಮ….
ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ಈ ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ !

ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು
ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ !

*   *    *    *    *    *

18 thoughts on “ಅಮ್ಮ – ಬಿ. ಆರ್. ಲಕ್ಷ್ಮಣರಾವ್”

 1. ತುಂಬಾ ಅರ್ಥವತ್ತಾದ ಕವನ
  ಬಿ.ಆರ್ .ಛಾಯಾ ಈ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ.

  ಎಲ್ಲಾ ಮಕ್ಕಳೂ ತಾವೆಷ್ಟೇ ದೊಡ್ಡವರಾದರೂ ಅಮ್ಮನ ಮಡಿಲ `ಕಂಫರ್ಟ್ ಝೋನ್’ ನಲ್ಲೇ ಇರಬಯಸುವುದು ಸಾಮಾನ್ಯ ಆದರೆ ಕವಿಯ ಯೋಚನೆ ಅಪರೂಪದ ಪ್ರಬುದ್ದತೆ ತೋರಿಸುತ್ತದಲ್ಲವೇ?

  ನನಗೆ ಖಲೀಲ್ ಗಿಬ್ರಾನನ ಮಾತುಗಳು ನೆನಪಿಗೆ ಬರುತ್ತಿದೆ –
  Your children are not your children. They are the sons and daughters of Life’s longing for itself. They came through you but not from you and though they are with you yet they belong not to you.
  Kahlil Gibran

  ನಿಮ್ಮ ಮಕ್ಕಳು ನಿಮ್ಮಿಂದ ಬಂದರೂ ನಿಮ್ಮವರಲ್ಲ.ನಿಮ್ಮೊಂದಿಗಿದ್ದರೂ ನಿಮಗೆ (ಮಾತ್ರವೇ)ಸೇರಿದವರಲ್ಲ.ಅವರು “ಬದುಕಿನ ಬದುಕುವ ಬಯಕೆಯ ಸೃಷ್ಟಿಗಳು”
  ಸುಮಾರು ಇದೇ ಅರ್ಥ ಕೊಡುವ ಗಿಬ್ರಾನನ ಇನ್ನೊಂದು ನುಡಿ ಹೀಗಿದೆ…
  You are the bows from which your children as living arrows are sent forth

 2. ತುಳಸಿಯಮ್ಮ,

  ನಿಮ್ಮತ್ರ ‘ಕನಸ ಮಾರುವ ಚೆಲುವ, ಹಾಡು ನಿಲ್ಲಿಸಬೇಡ’ ಪದ್ಯ ಇತ್ತಾ? ಏಲ್ಲೊ ಕೇಂಡಿದ್ದೆ, ಈಗ ನೆನ್ಪಿಲ್ಲ.

  ಜಗಲಿ ಭಾಗವತ್ರು

 3. ಮಾಲಾ, ನೀವು ತಿಳಿಸಿರುವ ಖಲೀಲ್ ಗಿಬ್ರಾನನ ನುಡಿ ಮುತ್ತು ತುಂಬಾ ಚೆನ್ನಾಗಿದೆ. ” ತಂದೆ,ತಾಯಿ ದೇವರು, ಅವರ ಋಣ ತೀರುವುದು ಸಾಧ್ಯವೇ ಇಲ್ಲ” – ಇಂತಹ ಮಾತುಗಳಿಂದ ಮಕ್ಕಳ ಮನಸ್ಸನ್ನು ಮಣಭಾರ ಮಾಡುವ ರಾಶಿ ಹಿತನುಡಿಗಳ ನಡುವೆ, ಸ್ವಲ್ಪ ಅಪರೂಪವೆನ್ನಿಸುವ ಮಾತು ಇವನದು 🙂

 4. ಜಗಲಿ ಭಾಗವತರೇ, ಕ್ಷಮಿಸಿ. ನೀವು ಕೇಳಿರುವ “ಕನಸ ಮಾರುವ ಚೆಲುವ” (ಸಾಹಿತ್ಯ :ಕೆ.ಸಿ.ಶಿವಪ್ಪ) ಹಾಡನ್ನು ದೂರದರ್ಶನದಲ್ಲಿ ಕಾಸರವಳ್ಳಿ ಸಹೋದರಿಯರು (ರೂಪಾ,ದೀಪಾ) ಹಾಡಿದ್ದನ್ನು ಒಮ್ಮೆ ಕೇಳಿದ್ದೇನೆ. ಅದರ ಸಾಹಿತ್ಯ ನನ್ನಲ್ಲಿಲ್ಲ.

  ಮಾಲಾ ಮೇಡಂ, ಭಾಗವತರಿಗೆ ಬೇಕಾದ ಹಾಡು ನಿಮ್ಮಲ್ಲಿದೆಯೇ?

 5. ಶ್ರೀತ್ರೀ ಅವರೇ,
  ಇಲ್ಲೊಂದು ಪೂರಕ ಮಾಹಿತಿ,
  ಬೋಸ್ಟನ್ ನ ಮೀರಾರಾಜಗೋಪಾಲ್ ದಟ್ಸ್ ಕನ್ನಡದಲ್ಲಿ ಬರೆದಿರುವ
  `ಬದುಕಿನ ಬಯಕೆಯ ಸೃಷ್ಟಿಗೆ’ ಕವಿತೆ ಇದೇ ಆಶಯ ಹೊಂದಿದೆ

  ಕನಸ ಮಾರುವ ಚೆಲುವ ನನಗೂ ಪ್ರಿಯನೇ…
  ಅದರಲ್ಲೂ ಈ ಎರಡು ಸಾಲುಗಳು ನೆನಪಲ್ಲಿವೆ
  ………………………………………
  ……………………………………
  ಬಂಧುಜನ ಪರಿವಾರ ಮಾಸಿ ಹೋಗಿದೆ ಎಲ್ಲಾ…
  ಕಾಣುತಿದೆ ಬರಿ ನಿನ್ನ ಒಲುಮೆ ಅಂದದ ಬೆಳಕು…

  ನನ್ನ ಸಂಗ್ರಹದಲ್ಲಿ ಚೆಲುವ ಇದ್ದಾನಾ ಅಂತ ಹುಡುಕುತ್ತೇನೆ ಇದ್ದರೆ ಖಂಡಿತಾ ನಿಮ್ಮ ವನಕ್ಕೆ ಕಳಿಸುವೆ .

 6. ಇಗೊಳ್ಳಿ ಭಾಗವತರೇ, ನಿಮ್ಮ ಚೆಲುವ….

  ಕನಸ ಮಾರುವಾ ಚೆಲುವ ಹಾಡ ನಿಲ್ಲಿಸ ಬೇಡಾ
  ರಾಗದೆಳೆ ನೂಲುತಿರು ಸಿಹಿಗನಸ ಹಂಚುತಿರು

  ಬಂದ ದಾರಿಯ ಗುರುತು ತೋಳುಮರ ನೆನಪಿಲ್ಲ
  ನಾವಿದ್ದ ನೆಲೆಯೊಂದೆ(ಮಡಿಲೊಂದೆ?)ಇಂದು ಪರಿಚಯ ಎನಗೆ

  ಬಂಧುಜನ ಪರಿವಾರ ಮಾಸಿ ಹೋಗಿದೆ ಎಲ್ಲಾ…
  ಕಾಣುತಿದೆ ಬರಿ ನಿನ್ನ ಒಲುಮೆ ಅಂದದ ಬೆಳಕು…

  ಮುಂಜಾವಿನ ಇಬ್ಬನಿಯ ಏಳು ಬಣ್ಣದ ಮುಂದೆ
  ಕರಗಿ ನೀರಾಗುತಿವೆ ನನ್ನೆಲ್ಲ ದುಗುಡಗಳು

  ಮನದಲ್ಲಿ ಅಲೆಯೆದ್ದು ಬಯಕೆಗಳ ಹೊಸಗಾಳಿ
  ಜಾಜಿ ಮಲ್ಲಿಗೆ ಅರಳು ತೋಟದಲಿ ನಗೆಯ ಹೊನಲು

  ತನ್ನ ಸಂಗ್ರಹದಲ್ಲಿದ್ದ ಚೆಲುವನನ್ನು ಕಳುಹಿಸಿ ಕೊಟ್ಟ ನಿಶು-ಮನೆ ಬ್ಲಾಗಿನ ಮೀರಾ ರಾಜಗೋಪಾಲ್ ಗೆ ಧನ್ಯವಾದಗಳು ಮತ್ತು ಪ್ರಕಟಿಸಿದ ತ್ರಿವೇಣಿ ಅವರಿಗೂ ವಂದನೆಗಳು .

 7. ಮೀರಾ,ಮಾಲಾ ನಿಮ್ಮಿಬ್ಬರಿಗೂ ನನ್ನ ಧನ್ಯವಾದಗಳು. 🙂

  ಜಗಲಿ ಭಾಗವತರೇ, ನಿಮ್ಮ ಅದೃಷ್ಟ ಖುಲಾಯಿಸಿದೆ , ಹಾಡು ತೆಗೆದುಕೊಳ್ಳಿ 🙂

 8. ವಾಹ್ ವಾಹ್…ತುಂಬ ಖುಶಿಯಾಯ್ತು. ಈ ಪದ್ಯಕ್ಕೆ ಸುಮಾರು ಕಡೆ ಹುಡ್ಕಿದ್ದೆ. …ಹಾಂಗೆ, ನಿಮ್ಮ ಹುಂಡಿ (ಸಂಗ್ರಹ) ಯಲ್ಲಿ ಒಬ್ಳು ಚೆಲುವೆ ಇದ್ರೆ ತಿಳ್ಸಿ ಕಾಂಬೊಃ-) (Just kidding).

  ಅಂದಹಾಗೆ, ಲಂಕೇಶರ ‘ಅವ್ವ’ ಕವಿತೆ ‘ಆಧುನಿಕ ಮಾತೃಸಂಹಿತೆ’ಯ ಉತ್ಕೃಷ್ಟ ಕವಿತೆ ಅಂತ ಓಂದು ಕಡೆ ಓದಿದ್ದೆ.

 9. >ಇಂಧನ ತೀರಲು
  ಬಂದೇ ಬರುವೆನು
  ಮತ್ತೆ ನಿನ್ನ ತೊಡೆಗೆ

  ಈ ಸುಂದರ ಮಾತೃಕವಿತೆ ಬರೆದವರು…ಜಾಲಿ ಬಾರಿನ ಪೋಲಿ ಗೆಳಯರ ಬಗ್ಗೆ ಬರೆದಿದ್ದ ಇದೇ ಲಕ್ಷ್ಮಣರಾಯರು !

 10. ಅಂದಹಾಗೆ, ಲಂಕೇಶರ ‘ಅವ್ವ’ ಕವಿತೆ ‘ಆಧುನಿಕ ಮಾತೃಸಂಹಿತೆ’ಯ ಉತ್ಕೃಷ್ಟ ಕವಿತೆ ಅಂತ ಓಂದು ಕಡೆ ಓದಿದ್ದೆ.
   …ಹಾಂಗೆ, ನಿಮ್ಮ ಹುಂಡಿ (ಸಂಗ್ರಹ) ಯಲ್ಲಿ ಒಬ್ಳು ಚೆಲುವೆ ಇದ್ರೆ ತಿಳ್ಸಿ ಕಾಂಬೊಃ-)


  – ನಿಮ್ಮ ವಿಳಾಸ ಜಗಲಿಯಿಂದ ಬದಲಾದ ಮೇಲೆ ಪ್ರಯತ್ನಿಸಿ. 🙂

  (Just kidding).

  ಮತ್ತೆ ಮತ್ತೆ ಹೀಗನ್ನುವ ಶ್ರಮ ತೆಗೆದುಕೊಳ್ಳಬೇಡಿ 🙂

 11. ಈ ಸುಂದರ ಮಾತೃಕವಿತೆ ಬರೆದವರು…ಜಾಲಿ ಬಾರಿನ ಪೋಲಿ ಗೆಳಯರ ಬಗ್ಗೆ ಬರೆದಿದ್ದ ಇದೇ ಲಕ್ಷ್ಮಣರಾಯರು !

  – ಬಿ.ಆರ್.ಎಲ್ ‘ಜಾಲಿ ಬಾರಿ’ನಂತಹ ತುಂಟ ಕವಿತೆಗಳಿಂದಲೇ ಪ್ರಸಿದ್ಧರು 🙂

 12. ಲಕ್ಷ್ಮಣರಾಯರಿಗೆ, ಖಲೀಲ್ ಗಿಬ್ರಾನ್ ಗೆ, ಮೀರಾ, ಮಾಲಾ ಹಾಗು ತ್ರಿವೇಣಿಯವರಿಗೆ ಸುಂದರವಾದ ಸಾಹಿತ್ಯ ನೀಡುತ್ತಿದ್ದದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.
  ಲಂಕೇಶರ “ಅವ್ವ” ಕನ್ನಡ ಸಾಹಿತ್ಯದ ಒಂದು ಅತ್ಯಂತ ಶ್ರೇಷ್ಠ ಕವಿತೆ ಎನ್ನುವದು
  ಉತ್ಪ್ರೇಕ್ಷೆಯಲ್ಲ.

 13. ತುಳಸಿಯಮ್ಮ ,

  ಕವನ ಓದಿ ಕಣ್ಣಂಚು ಒದ್ದೆಯಾಯಿತು(ಪರ ಊರಲ್ಲಿರುವ ನನ್ನ ತಾಯಿ ನೆನೆದು). ಸ್ವತಃ ಒಂದು ಮಗುವಿನ ತಾಯಿಯಾದ ಮೇಲೂ ನನಗೆ ನನ್ನಮ್ಮನ ಮಡಿಲ ನೆನೆದರೆ ಹಾರಿಹೋಗುವಾಸೆ! ಎಷ್ಟೋ ಸಲ ಎಣಿಸಿದ್ದಿದೆ.. ಆ ಮಡಿಲ ಬೆಚ್ಚಗೆಯಲ್ಲೇ ಕಣ್ಮುಚ್ಚಿ ಒಡಲೊಳಗೆ ಸೇರಿ ಲೀನವಾಗ ಬೇಕು.. ಮುಕ್ತಳಾಗಬೇಕೆಂದು. ಆದರೀಗ ಹಾಗೆ ಎಣಿಸುವಾಗಲೆಲ್ಲಾ.. ಈಗ ತಾನೆ ಕಣ್ಬಿಟ್ಟಿರುವ ನನ್ನ ಕುಡಿಯ ನೆನಪಾಗುತ್ತದೆ…

 14. ಖಲೀಲ್ ಗಿಬ್ರಾನರ ಪೂರ್ಣ ಕವಿತೆ ಇಲ್ಲಿದೆ.
  ಮಾತೆಯರ ದಿನದ ನೆಪವಾಗಿ ಇದನ್ನು ಮೈಲ್ ಮಾಡಿದ ಅಲಮೇಲು ಅವರಿಗೆ ನನ್ನ ವಂದನೆಗಳು, ನಿಮ್ಮೆಲ್ಲರ ಪರವಾಗಿ.

  “Your children are not your children.
  They are the sons and daughters of Life’s longing for itself.
  They come through you but not from you,
  And though they are with you, yet they belong not to you.

  You may give them your love but not your thoughts.
  For they have their own thoughts.
  You may house their bodies but not their souls,
  For their souls dwell in the house of tomorrow, which you cannot visit, not even in your dreams.

  You may strive to be like them, but seek not to make them like you.
  For life goes not backward nor tarries with yesterday.
  You are the bows from which your children as living arrows are sent forth.
  The archer sees the mark upon the path of the infinite, and He bends you with His might that His arrows may go swift and far.

  Let your bending in the archer’s hand be for gladness;
  For even as he loves the arrow that flies, so He loves also the bow that is stable.”

  Khalil Gibran

 15. ತೇಜಸ್ವಿನಿ, ಬ್ಲಾಗ್ ಲೋಕಕ್ಕೆ ತಾತ್ಕಾಲಿಕ ವಿರಾಮ ಘೋಷಿಸಿಹೋಗಿದ್ದ ನೀವು ಮರಳಿದ್ದು ಸಂತೋಷ ತಂದಿತು. ಅಮ್ಮನ ನೆನಪಾದಾಗೆಲ್ಲ ಊರಿಗೆ ಹಾರಿಹೋದರೆ ಆಯಿತು. ನೀವು ಅನುಭವಿಸಿದ ಅಮ್ಮನ ಮಡಿಲ ಸುಖ ಪುಟ್ಟಿಗೂ ತುಂಬಿ ಕೊಡದಿದ್ದರೆ, ನಿಮ್ಮದು ಸ್ವಾರ್ಥವಾಗುತ್ತದೆ. 🙂

 16. ಕಲೀಲ ಗಿಬ್ರಾನ ಸಾಲುಗಳಿದ್ದರೆ ಕಳಿಸಿ…
  ದನ್ಯವಾದಗಳು

 17. ಸುಬ್ರಹ್ಮಣ್ಯ ಅವರಿಗೆ ನಮಸ್ಕಾರ. ನೀವು ಕೇಳುತ್ತಿರುವುದು ಖಲೀನ್ ಗಿಬ್ರಾನನ ಸಾಲುಗಳ ಕನ್ನಡ ಅನುವಾದವನ್ನೇ? ಹಾಗಿದ್ದರೆ ಅದು ನನ್ನಲ್ಲಿಲ್ಲ .

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.