ಕವನ – ಬಾಳಗೀತ
ಕವಿ – ವಿ.ಕೃ.ಗೋಕಾಕ (ವಿನಾಯಕ)
ಡಾ. ರಾಜ್ಕುಮಾರ್ ದನಿಯಲ್ಲಿ ಹಾಡು ಕೇಳಿ
ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು :
ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು.
ಹೋದಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು !
ಹಾದಿಯಲ್ಲಿ ತೀರದಂಥ ದುಃಖವಿಹುದಪಾರವು !
ಸಾಧಿಸುತ್ತ ಜಯಿಸುವುದೇ ಬಾಳುವುದರ ಸಾರವು !
ಇಲ್ಲಿ ಕೊನರದಂಥ ನೋವು, ಫಲಿಸದಂಥ ಯಾತನೆ :
ಇಲ್ಲಿ ನಿತ್ಯ ಕೊಳೆಯುತಿಹುದು ನನ್ನ ಜೀವ ಚೇತನೆ !
ಇನ್ನು ಮೊಳಗಿಸಿದರೆ ಮೊಳಗಿಸುವೆನು ಅದರ ಮಾತನೆ !
ನವಗ್ರಹಗಳ ನಾಡದಾಟಿ ಮಿಗಿಲಗಡಿಯ ಮೀರಿಯೂ
ದಿಕ್ಕುತಪ್ಪುತಲೆವ ತಾರೆಗಳಿಗೆ ದಾರಿ ತೋರಿಯೂ
ಕತ್ತಲಿದ್ದ ತಾಣದಲ್ಲಿ ಎದೆಯ ಬೆಳಕ ಬೀರಿಯೂ !
ಗಾನದುನ್ಮಾದವೇರಿ ನಡೆದ ರಾಜಭೃಂಗವು,
ದೇವ ಕನ್ನಿಕೆಯರು ನುಡಿಸುವಂಥ ಮೃದುಮೃದಂಗವು,-
ಇದಕು ಹಿರಿದು ಎದೆಯಲಿರುವ ಭಾವನಾ ತರಂಗವು !
ಕೋಟಿ ವರುಷದಾಚೆ ಜನಿಸಿದಂಥ ಜೀವದಾಸೆಯು
ತೀರಬಹುದು, ಹಿಂಗಬಹುದು ಅಂದಿನಾ ಪಿಪಾಸೆಯು !
ಇಂದೆ ರುಚಿರವಾಗಬಹುದು ನನ್ನ ದೈವರೇಷೆಯು !
* * * * * * * * * *
ಇಲ್ಲೇ ಇರು..ಅಲ್ಲಿ ಹೋಗಿ..
ಈ ‘ಅಲ್ಲಿ’ ಅನ್ನೋದು ಯಾವುದು?
ನವಗ್ರಹಗಳ ನಾಡದಾಟಿ ಮುಗಿಲಗಡಿಯ ಆಚೆಯಲ್ಲಿ ಇರುವ ಲೋಕವೇ?
ನಾನು ಇದೇ ಮೊದಲು ಗೋಕಾಕ್ರ ಕವನವನ್ನು ಓದುತ್ತಿರುವುದು.
ಬದಲಾವಣೆಯನ್ನರಸುವಂತಹ ಎಲ್ಲರಿಗೂ ಅನ್ವಯಿಸುತ್ತದೆ.
ಇಂತಿ
ಭೂತ
ಶಿವು,
ನಾನು ಅರ್ಥಮಾಡಿಕೊಂಡಿರುವಂತೆ, – “ಅಲ್ಲಿ”, ಎಂದರೆ ಸ್ಪೇಸ್ ಷಟಲ್ ಹತ್ತಿ ನವಗ್ರಹಗಳ ನಾಡದಾಟಿ ಮುಗಿಲಗಡಿಗೇ ಹೋಗುವುದು ಎಂದಲ್ಲ. ನಿತ್ಯ ಬದುಕಿನ ನೂರೆಂಟು ಜಂಜಡಗಳ ನಡುವೆ ಮುಳುಗಿದ್ದರೂ ( ಇಲ್ಲಿ ಕೊನರದಂಥ ನೋವು, ಫಲಿಸದಂಥ ಯಾತನೆ , ನಿತ್ಯ ಕೊಳೆಯುತಿಹುದು ನನ್ನ ಜೀವ ಚೇತನೆ ! ) ವ್ಯಕ್ತಿಯೊಬ್ಬ ಮಾನಸಿಕವಾಗಿ, ಅತಿ ಎತ್ತರದ ಬೌದ್ಧಿಕ, ಆಧ್ಯಾತ್ಮಿಕ ಸ್ತರಗಳಲ್ಲಿ ವಿಹರಿಸಬಲ್ಲ. ಸಾಧನೆಯ ಕಷ್ಟಕರವಾದ ಹಾದಿಯಲ್ಲಿ ನಡೆಯುವ ಸಂಕಲ್ಪವಿರಬೇಕು. ನಮ್ಮ ಬಾಳನ್ನು ಸಾಮಾನ್ಯದಿಂದ ಅಸಾಮಾನ್ಯಕ್ಕೆ ಕರೆದೊಯ್ಯಬೇಕೆಂಬುದು ಕವಿತೆಯ ಆಶಯ.
ಈ ಕವಿತೆಯ ಬಗ್ಗೆ ತಿಳಿದವರು ಮತ್ತಷ್ಟು ತಿಳಿಸಿಕೊಟ್ಟರೆ ನನಗೂ ತಿಳಿಯುವ ಅಪೇಕ್ಷೆ ಇದೆ.
ಈ ಬಗ್ಗೆ ಬರೆಯುವಾಗ ನನಗೆ ಕುವೆಂಪುರವರ ಒಂದು ಕವನ ನೆನಪಾಗುತ್ತಿದೆ. ಅದರಲ್ಲಿ ಕವಿ, ನವಗ್ರಹಗಳ ನಾಡಿಗೆ ಅಕ್ಷರಶಃ ವಿಮಾನದಲ್ಲಿಯೇ ಕುಳಿತು ಹಾರಿದ್ದಾರೆ. ಆದರೆ ಅದು ಗಾನ ವಿಮಾನ! “ದೂರಕೆ ದೂರಕೆ ಬಹು ಬಹು ದೂರಕೆ ಹಾರುವೆ ಗಾನ ವಿಮಾನದಲಿ …ಮುಗಿಲಿನ ದೂರಕೆ ..ಗಗನದ ದೂರಕೆ.. ಶಶಿ,ರವಿ,ತಾರೆಗಳಾಚೆಯ ತೀರಕೆ…..”
‘ಇಲ್ಲೇ’ ಇರು ಅಂತ್ ಹೇಳಿ ಎಲ್ಲಾ ಎನ್ನಾರ್ಐ ಗಳಿಗೆ ಉಸಿರುಕಟ್ಟಿಸೋ ಹಾಗ್ ಮಾಡೀರಲ್ಲ, ನಿಮ್ ಧೈರ್ಯಾನ್ ಮೆಚ್ಚಬೇಕಾದ್ದೇ!
ಕವನ ಸೊಗಸಾಗಿದೆ, ಗೋಕಾಕರಿಗೊಂದು ಮತ್ತೆ ನಿಮಗೊಂದು ದೊಡ್ಡ ನಮಸ್ಕಾರ್ರೀ.
ಹಂಗೆ ಕವನದ ಅರ್ಥ ಗೊತ್ತಿದ್ದರೆ ಹೇಳಿ ಹೋಗು ಕಾಳಣ್ಣಾ.. ಏನು ಬಾಳ ಅಪರೂಪ? 🙂
ಪ್ರಶ್ನೆ. “ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು” – ಈ ವಾಕ್ಯವನ್ನು ಸಂದರ್ಭ ಸಹಿತ ವಿವರಿಸಿ.
ಉತ್ತರ: ದೃಶ್ಯ ಹೀಗಿದೆ. ಬಸ್ಸ್ಟಾಂಡ್. ಹೆಂಡತಿ ಬಸ್ಸೊಳಗೆ ಕುಳಿತಿದ್ದಾಳೆ. ಬಸ್ ಹೊರಡಲು ಇನ್ನೂ ವೇಳೆಯಿದೆ. ಒಳಗೆ ಕುಳಿತರೆ ವಿಪರೀತ ಸೆಕೆ ಎಂದು ಗಂಡ ಬಸ್ನ ಹೊರಗೆ ನಿಂತಿದ್ದಾನೆ. ಹೆಂಡತಿ, “ರೀ ಅಲ್ಲಿ ಅಂಗಡಿ ಇದೆ ನೋಡಿ, ಮಲ್ಲಿಗೆ ತರ್ತೀರಾ?” ಎಂದು ಕೇಳುತ್ತಾಳೆ. “ಇವಳಿಗೆ ಈಹೊತ್ತಲ್ಲೂ ಮಲ್ಲಿಗೆಯಂತೆ ಮಲ್ಲಿಗೆ! ಮಾಡ್ತೀನ್ ತಡಿ…” ಎಂದು ಮನಸ್ಸಲ್ಲೇ ಹುಸಿಮುನಿಸು ತೋರಿದ ಗಂಡ “ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು…” ಎಂದು ಹೊರಡುತ್ತಾನೆ. ಅವನು ಏದುಸಿರು ಬಿಡುತ್ತ ಓಡೋಡಿ ಹಿಂದಿರುಗೋದಕ್ಕೂ ಕಂಡಕ್ಟರ್ ‘ರೈಟ್… ರೈಟ್…’ ಹೇಳೋದಕ್ಕೂ ಸರಿಯಾಗುತ್ತದೆ. ಹೇಗೋ ಕಷ್ಟಪಟ್ಟು ಬಸ್ ಹತ್ತಿ ಹೆಂಡತಿಯ ಬಳಿಸಾರಿದ ಗಂಡ ಆಕೆಯ ಕೈಗಿತ್ತದ್ದು ಏನು? ಯಾರೂ ಕೊಳ್ಳುವವರಿಲ್ಲದೆ ಮುಖಪುಟವೆಲ್ಲ ಬಿಸಿಲಲ್ಲಿ ಮಾಸಿ ಹೋಗಿದ್ದ ‘ಮಲ್ಲಿಗೆ’ ಕನ್ನಡ ಮಾಸಿಕ! ಅಂದರೆ ಗಂಡ ಎಂಥ ಅರಸಿಕ ಎಂದುಕೊಂಡಿರಾ? ಇಲ್ಲ, ಅವನು ಬೇರಾವುದೋ ಥಳಥಳ ಹೊಳೆಯುವ ಮ್ಯಗಜೀನ್ ತಂದುಕೊಂಡಿದ್ದ, ತನಗಾಗಿ.
ಜೋಶಿಯವರೇ,
ನೀವು ನನ್ನಲ್ಲಿ ನಾಸ್ಟಾಲ್ಜಿಯಾ ಉಂಟು ಮಾಡಿದಿರಿ. 🙂
ಹೀಗೆ ಬಹಳ ಸಲ, ಬಸ್ ಹೊರಡುವ ಕಡೆಘಳಿಗೆಯಲ್ಲಿ ಮ್ಯಾಗಜಿನ್ಗಾಗಿ ನಾನು ಕಾಡಿದ್ದಿದೆ. ಆದರೆ “ಮಲ್ಲಿಗೆ”ಗಾಗಿ ಅಲ್ಲ, “ಮಯೂರ”, “ತುಷಾರ”ಗಳಿಗಾಗಿ.
“ಇವಳಿಗೆ ಈಹೊತ್ತಲ್ಲೂ ಮಲ್ಲಿಗೆಯಂತೆ ಮಲ್ಲಿಗೆ! ಮಾಡ್ತೀನ್ ತಡಿ…” ಎಂದು ಒಮ್ಮೆಯೂ ಗದರದ ಸಜ್ಜನ – ನನ್ನವರು!
ಕಂಡಕ್ಟರ್ ‘ರೈಟ್… ರೈಟ್…’ ಎಂದಾಗ – “ಸ್ವಲ್ಪ ಇರ್ರಿ. ನಮ್ಮನೆಯವರು ಇನ್ನೂ ಬಂದಿಲ್ಲ” – ಎಂದು ಬಸ್ಸನ್ನು ತಡೆದು ನಿಲ್ಲಿಸಿದ ನೆನಪೂ ಇದೆ. 🙂
ಡಾ.ರಾಜ್ ಕುಮಾರ್ ದನಿಯಲ್ಲಿ ಹಾಡನ್ನು ಕಲ್ಪಿಸಿ ಹಾಡಲು ಆಗಲಿಲ್ಲ ರೀ.ಕವನವನ್ನು ಅರ್ಥೈಸಿ ಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು.ಜೋಷಿಯವರು ವಾಕ್ಯವನ್ನು ವಿವರಿಸಿದ ರೀತಿ ಚೆನ್ನಾಗಿತ್ತು.ಅದಕ್ಕೆ ನಿಮ್ಮ ಉತ್ತರ ಇನ್ನೂ ಸೊಗಸಾಗಿತ್ತು.ಅದು ಅವರ ಸ್ವಂತ ಅನುಭವನಾ ಅಂತ ನನಗೆ ಸಣ್ಣ ಸಂದೇಹ .ಅರಸಿಕ ಅಂತ ಬರೆಯುವ ಬದಲು ಅ ‘ರಸಿಕ’ ಅಂತ ಬರೆದಿದ್ದರೆ ಸರಿಯಾಗುತ್ತಿತ್ತೇನೋ ಆಲ್ವಾ?
“ಡಾ.ರಾಜ್ ಕುಮಾರ್ ದನಿಯಲ್ಲಿ ಹಾಡನ್ನು ಕಲ್ಪಿಸಿ ಹಾಡಲು ಆಗಲಿಲ್ಲ..”
ಶಶಿ,
ನಿಮಗೆ ಅಲ್ಲಿರುವ ಲಿಂಕಿನಲ್ಲಿ ಹಾಡು ಕೇಳಲು ಆಗಲಿಲ್ಲವೇ?
ಜೋಶಿಯವರ ಅನುಭವದ ಬಗ್ಗೆ ಅವರನ್ನೇ ಕೇಳಬೇಕು. 🙂
ತ್ರಿವೇಣಿ ,
ಲಿಂಕಿನಲ್ಲಿ ಹಾಡಲು ಕೇಳಲು ಆಯಿತು.ಆದರೆ ರಾಜ್ ಕುಮಾರ್ ಹೇಗೆ ಹಾಡುತ್ತಾರೆ ಅನ್ನುದು ಕಲ್ಪಿಸಿ ಹಾಡಲು ಆಗಿಲ್ಲ ಅಂದಿದ್ದು..