ಮಲ್ಲಿಗೆ ಕವಿಯ ಸವಿ ನೆನಪಲ್ಲಿ

ಕವಿ – ಕೆ.ಎಸ್.ನರಸಿಂಹಸ್ವಾಮಿ

ಭಾವಗೀತೆಯ ಕವಿಗೆ ಇದೋ ನಮನ!

ಹಾಡು ಕೇಳಿ 

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?
ನಿನ್ನ ಸೌಜನ್ಯವೇ ದಾರಿ ನೆರಳಾಗಿರಲು
ನಿತ್ಯ ಸುಖಿ ನೀನೆನಲು ಒಪ್ಪೇನೆ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿ ಸೂಸುವ ಅಮೃತ ನೀನೇನೆ
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ

ನಿನ್ನ ಕಿರುನಗೆಯಿಂದ ನಗೆಯಿಂದ ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇತ್ತ ಕಡೆಗೇನೆ

**   **  **   **  **   ** **  

ಹಾಡು ಕೇಳಿ

ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು

ಸಾಗರನ ಹೃದಯದಲಿ
ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳಕುವಲೆ
ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ

ಅಲೆ ಬಂದು ಕರೆಯುವುದು
ನಿನ್ನೊಲುಮೆಯರಮನೆಗೆ
ಒಳಗಡಲ ರತ್ನಪುರಿಗೆ
ಅಲೆಯಿಡುವ ಮುತ್ತಿನೊಲೆ
ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿ ಮಹಿಮೆ

**  **  **  **  ** **

(ಕೆ.ಎಸ್.ನ ಇದ್ದಿದ್ದರೆ, ಇವತ್ತು(Jan 26), ಆವರ ೯೨ನೆಯ ಹುಟ್ಟಿದ ಹಬ್ಬ!)

ಕೆಲವು ಲೇಖನಗಳು –

* ನಿನ್ನ ಪ್ರೀತಿಗೆ ಅದರ ರೀತಿಗೆ – ಮಣಿಕಾಂತ್

* ನಗುವಾಗ ನಕ್ಕು ಅಳುವಾಗ ಅತ್ತು – ಜಾನಕಿ

* ಬತ್ತಿದ ಕೆರೆಯಂಗಳದಲ್ಲಿ – ರವಿ ಬೆಳಗೆರೆ

ದೀಪ ಸಾಲಿನ ನಡುವೆ

9 thoughts on “ಮಲ್ಲಿಗೆ ಕವಿಯ ಸವಿ ನೆನಪಲ್ಲಿ”

 1. Shiv says:

  ಮೈಸೂರು ಮಲ್ಲಿಗೆಯ ಕವಿಯ ಕವನಗಳ ಕಂಪು ಅಂತದ್ದು.

  ಅಷ್ಟು ಸುಲಲಿತವಾಗಿ-ಸರಳವಾಗಿ ನಮ್ಮ ದಿನ ನಿತ್ಯದ ಸಂಸಾರದ ಅನುಭವದಿಂದ-ಕ್ಷಣಗಳಿಂದ ಪೊಣಿಸಿಟ್ಟ ಕವನಗಳು.

  ತ್ರಿವೇಣಿಯವರೇ, ಇದು ಕಷ್ಟದ ಆಯ್ಕೆ ಅಂತಾ ಗೊತ್ತು..ಅದ್ರೂ ಕೇಳ್ತೀನಿ..ನಿಮ್ಮ ನೆಚ್ಚಿನ ಕೆ.ಎಸ್.ನ ಕವನ ಯಾವುದು?

  ಅಂದಾಗೆ ದಾಂಪತ್ಯ ಕವಿಗಳು ತಾವಿರುವ ಲೋಕದಲ್ಲಿ ಸಹ ಮಲ್ಲಿಗೆಯ ಪರಿಮಳ ಬೀರಿರುತ್ತಾರೆ..

 2. sritri says:

  ಶಿವು, ಕಷ್ಟ ಅಂತ ಗೊತ್ತಿದ್ದೂ ನನಗೆ ಕಷ್ಟ ಕೊಡ್ತಾ ಇರೋದು ತುಂಬಾ ಅನ್ಯಾಯ ಅಲ್ವಾ? 🙂 ಇರಲಿ, ನಿಮ್ಮಪ್ರಶ್ನೆ ಕೂಡ ಒಂದು ರೀತಿ ಚೆನ್ನಾಗಿಯೇ ಇದೆ. ನಾನು ಇದೇ ಪ್ರಶ್ನೆಯನ್ನು ತುಳಸಿವನಕ್ಕೆ ಬಂದು ಹೋಗುವ ಎಲ್ಲಾ ಗಣ್ಯ ಅತಿಥಿಗಳಿಗೂ ವರ್ಗಾಯಿಸುತ್ತಿದ್ದೇನೆ.

  “ನಿಮ್ಮ ನೆಚ್ಚಿನ ಕೆ.ಎಸ್.ನ ಕವನ ಯಾವುದು?”

  ನನಗೆ ಇಷ್ಟವಾಗಿರುವ ಕೆ.ಎಸ್.ನ ಕವನಗಳ ದೊಡ್ದ ಪಟ್ಟಿಯೇ ಇದೆ.
  ಅದರಲ್ಲಿ ಒಂದು –

  “ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ
  ಅತ್ತಿತ್ತ ಸುಳಿದವರು ನೀವಲ್ಲವೇ?
  ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
  ಒಪ್ಪಿ ಕೈ ಹಿಡಿದವರು ನೀವಲ್ಲವೇ? “

 3. ಅಂದ ಹಾಗೆ ಶಿವು ಅವರೇ, ‘ದಾಂಪತ್ಯ ಕವಿಗಳು’ ಅಂತ ಬರೆದಿದ್ದೀರಲ್ಲಾ ಹಾಗೆಂದರೆ ಏನು ಅಂತ ಅರ್ಥ ಆಗ್ಲಿಲ್ಲ.

  ವೇಣಿ, ತುಂಬಾ ಒಳ್ಳೇ ಹಾಡುಗಳನ್ನ ಹೆಕ್ಕಿ ತೆಗೆದು ಬರೆದಿದ್ದೀಯ ತುಂಬಾ ಧನ್ಯವಾದಗಳು. ಇವೆರೆಡೂ ಹಾಡು ನನ್ನ ಅತ್ಯಂತ ಮೆಚ್ಚಿನ ಗೀತೆಗಳು. ನನಗೆ ಮೊದಲಿನಿಂದಲೂ ‘ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲೂ’ ಹಾಡು ನನ್ನ ನೆಚ್ಚಿನ ಗಾಯಕ ಪಿಬಿಎಸ್ ಅವರ ಧ್ವನಿಯಲ್ಲಿ ಕೇಳಿ ಕೇಳಿ ಸಿ.ಅಶ್ವಥ್ ಅವರ ಗಾಯನ ಅಷ್ಟು ಹಿಡಿಸಲಿಲ್ಲ. ಆದರೆ ಸಿ.ಅ ಹಾಡಿದ ‘ನಿನ್ನ ಪ್ರೇಮದ ಪರಿಯ’ casette ನಲ್ಲಿ ಇದು ಬಿಡುಗಡೆಯಾದಾಗಲೇ ಕೇಳಿದ್ದೆ ತುಂಬಾ ಇಷ್ಟವಾಗಿತ್ತು, ಆದರೆ ಇದೇ ಹಾಡನ್ನ ಎಸ್ಪಿಬಿ ಅವರು ಹಾಡಿದ್ದು ಕೇಳಿದ ಮೇಲೆ ಇದೂ ಇಷ್ಟವಾಗುತ್ತಿಲ್ಲ. ಎಸ್.ಪಿ.ಬಿ ಹಾಡು ಕೇಳಿದಾಗಲೆಲ್ಲಾ ಹೃದಯ ಕಲಕಿ ಕಣ್ತುಂಬಿ ಬರುತ್ತದೆ.

 4. sritri says:

  ಮೀರಾ, ಪಿಬಿಎಸ್ ಹಾಡಿರುವುದು ಕೇಳಿದ್ದೇನೆ. ಯಾವ ಚಿತ್ರ ಅದು?

  ದಾಂಪತ್ಯ ಕವಿಗಳು = ಮದುವೆಯಾಗಿರುವ ಕವಿಗಳು 🙂

 5. mala says:

  ಕೆ .ಎಸ್. ನ ಕವನ ಗಳಿಗಾಗಿ ಧನ್ಯವಾದಗಳು.

  ಕಾಕತಾಳಿಯವೆಂಬಂತೆ `ನೀವಲ್ಲವೇ?’ ನನ್ನ ಮೆಚ್ಚಿನ ಕವನ.
  ಜಯವಂತೀದೇವಿ ಹಿರೇಬೆಟ್ ಅವರು ಈ ಕವನವನ್ನು ಎಷ್ಟು ಆರ್ದ್ರತೆಯಿಂದ ಹಾಡಿದ್ದರೆಂದರೇ…..ಪ್ರತೀಬಾರಿ ಅವರ ಕಂಠದಲ್ಲಿ `ನೀವಲ್ಲವೇ’ ಕೇಳಿದಾಗಲೂ ನನ್ನ ಕಣ್ಣಂಚು ಒದ್ದೆಯಾಗುತ್ತೆ.

  ಬಾಗಿಲಿಗೆ ಬಂದವರೂ
  ಬೇಗಬಾ ಎಂದವರು
  ಬಂದುದೇಕೆಂದವರೂ
  ನೀವಲ್ಲವೇ?

  ನೋಡುಬಾ ಎಂದವರೂ
  ಬೇಡ ಹೋಗೆಂದವರೂ
  ಎಂದಿಗೂ ಬಿಡದವರು
  ನೀವಲ್ಲವೇ?

  ಸಾಲುಗಳನ್ನು ವಿವರಿಸಲು ಆಗದು. ಆದರೆ ಅದರ ಹಿಂದಿನ ಒಂದು ಮನತುಂಬುವ ಭಾವ ಹೃದಯಕ್ಕೆ ಮಾತ್ರ ಅರ್ಥವಾಗುವಂಥದ್ದು.

  ಬಳೆಗಾರ ಸೆಟ್ಟಿಯನು ಗದ್ದರಿಸಿಕೊಂಡು ಬೆತ್ತದೊಂದಿಗೆ ಮಹಡಿಯಿಂದಿಳಿದ, ಎತ್ತರದ ಮನೆಯ, ಮನಸ್ಸಿನ ರಾಯರಂಥ ಗಂಡ ನಮ್ಮ ತಲೆಮಾರಿನ ಯಾವ ಹುಡುಗಿಯ ಕನಸಾಗಿರಲಿಲ್ಲ ಹೇಳಿ…

  ಅಂಥದೊಂದು ಕನಸು ಕಟ್ಟಿ ಕೊಟ್ಟ ಕ.ಎನ್ .ನ ರನ್ನು ಹೇಗೆ ತಾನೇ ಮರೆಯಲು ಸಾದ್ಯ?

 6. mala says:

  .ಕೆ.ಎಸ್. ನ ನೆನಪಲ್ಲಿ ಕಾಗುಣಿತದ ತಪ್ಪುಗಮನಕ್ಕೆ ಬಾರದೇ ಹೋಯಿತು
  “ಜಯವಂತೀದೇವಿ ಹಿರೇಬೆಟ್ ಅವರು ಈ ಕವನವನ್ನು ಎಷ್ಟು ಆರ್ದತೆಯಿಂದ ಹಾಡಿದ್ದರೆಂದರೇ…..ಪ್ರತೀಬಾರಿ ಅವರ ಕಂಠದಲ್ಲಿ `ನೀವಲ್ಲವೇ’ ಕೇಳಿದಾಗಲೂ ನನ್ನ ಕಣ್ಣಂಚು ಒದ್ದೆಯಾಗುತ್ತೆ ”
  ಆರ್ದ್ರತೆ ಆಗಬೇಕಿತ್ತು…..

  ಅಂದ ಹಾಗೆ ಜಯವಂತೀದೇವಿಯವರು ಹಾಡಿರುವ ಹಾಡನ್ನು ಕೆಲವು ವರ್ಷಗಳಿಂದ ಹುಡುಕುತ್ತಿದ್ದೇನೆ.  ನಿಮ್ಮಲ್ಲೇನಾದರೂ ಇದೆಯೇ ಸಾದ್ಯವಾದರೆ ಕೇಳಿಸುವಿರಾ?
  ಅಥ್ವಾ ಅದು ಯಾವ ಕಂಪನಿಯ ಕ್ಯಾಸೆಟ್ ಅಂತ ಯಾರಿಗಾದರೂ ಮಾಹಿತಿ ಇದ್ದರೆ ದಯವಿಟ್ಟು ಹೇಳಿ.

 7. sritri says:

  “ಬಳೆಗಾರ ಸೆಟ್ಟಿಯನು ಗದ್ದರಿಸಿಕೊಂಡು ಬೆತ್ತದೊಂದಿಗೆ ಮಹಡಿಯಿಂದಿಳಿದ, ಎತ್ತರದ ಮನೆಯ, ಮನಸ್ಸಿನ ರಾಯರಂಥ ಗಂಡ ನಮ್ಮ ತಲೆಮಾರಿನ ಯಾವ ಹುಡುಗಿಯ ಕನಸಾಗಿರಲಿಲ್ಲ ಹೇಳಿ…”

  – ಮಾಲಾ, ಗುಟ್ಟು ರಟ್ಟು ಮಾಡಿಬಿಟ್ಟಿದ್ದೀರಿ 🙂

  ಜಯವಂತಿದೇವಿಯವರ ಹಾಡು ಸಿಗುವುದು ಕಷ್ಟ. (ಆಕಾಶವಾಣಿಯ ಸಂಗ್ರಹದಲ್ಲಿರಬಹುದು ) ಅದೇ ಹಾಡು ಶಾಮಲ ಭಾವೆಯವರ  ಧ್ವನಿಯಲ್ಲಿದೆ. ನನಗೆ ಅಷ್ಟು  ಹಿಡಿಸಲಿಲ್ಲ, ಜಯವಂತಿಯವರನ್ನು ಮೆಚ್ಚಿರುವ ನಿಮಗೂ ಇಷ್ಟವಾಗಲಾರದು. ಕೇಳುತ್ತೀರಾದರೆ ಇಲ್ಲಿದೆ

 8. Shiv says:

  ತ್ರಿವೇಣಿಯವರೇ,
  ಯಾವುದೂರೀ ಅದು ತೇರು 🙂

  ಮೀರಾ ಅವರೇ,
  ನನಗೆ ತಿಳಿದ ಮಟ್ಟಿಗೆ ಕೆ.ಎಸ್.ನ ಹೆಚ್ಚಿಗೆ ಬರೆದಿದ್ದು ದಾಂಪತ್ಯ ಜೀವನದ ಬಗ್ಗೆ. ಅದರಲ್ಲಿನ ಪ್ರೇಮ, ಸಿಟ್ಟು, ಸೆಳೆತ, ಮೋಹ, ಅಕ್ಕರೆ..ಹೀಗೆ ಅದರ ಪ್ರತಿ ಒಂದು ಮಗ್ಗುಲುಗಳನ್ನು ಅವರ ಕವನಗಳು ಸೆರೆಹಿಡಿದವು.ಅದಕ್ಕೆ ‘ದಾಂಪತ್ಯ ಕವಿ’..

 9. sritri says:

  “ತ್ರಿವೇಣಿಯವರೇ,
  ಯಾವುದೂರೀ ಅದು ತೇರು ?” –

  ಶಿವು, ಈಗಾಗಲೇ ನಿಮ್ಮ ಒಂದು ಕಷ್ಟದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ಈಗ ನೋಡಿದರೆ, ಇಲ್ಲಿ ಇನ್ನೊಂದು ಪ್ರಶ್ನೆ ಕೇಳಿದ್ದೀರಿ 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮರೆತೇನೆಂದರ ಮರೆಯಲಿ ಹ್ಯಾಂಗ? ಮಾವೋ-ತ್ಸೆ-ತುಂಗಮರೆತೇನೆಂದರ ಮರೆಯಲಿ ಹ್ಯಾಂಗ? ಮಾವೋ-ತ್ಸೆ-ತುಂಗ

ಸಾಹಿತ್ಯ, ಸಂಗೀತ : ಡಾ. ಚಂದ್ರಶೇಖರ ಕಂಬಾರ ಕಂಬಾರರ ದನಿಯಲ್ಲಿ ಹಾಡು ಕೇಳಿ ಮರೆತೇನೆಂದರ ಮರೆಯಲಿ ಹ್ಯಾಂಗ ಮಾವೋ-ತ್ಸೆ-ತುಂಗ ಮರೆತೇನೆಂದಾರ ಮರೆಯಲಿ ಹ್ಯಾಂಗ…. ಹಾ ಪಂಚಭೂತದಾಗ ವಂಚನೆ ಕಂಡಿ ಕಣ್ಣಿನಂಚಿನಾಗ ಹೊಸ ಜಗ ಕಂಡಿ ಸೊನ್ನಿಗೆ ಆಕಾರ ಬರೆದೇನೆಂದಿ ಬಯಲಿಗೆ ಗೋಡೆ

ಯಾವ ಜನ್ಮದ ಮೈತ್ರಿ – Yava Janmada maitri – kuvempuಯಾವ ಜನ್ಮದ ಮೈತ್ರಿ – Yava Janmada maitri – kuvempu

ರಚನೆ – ಕುವೆಂಪುಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದುನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ ! ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ,ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,ಅದರಂತರಾಳದಲಿ ಗುಪ್ತಗಾಮಿನಿಯಾಗಿ; ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ

ಕನಸಿನೊಳಗೊಂದು ಕಣಸು – ಅಂಬಿಕಾತನಯದತ್ತಕನಸಿನೊಳಗೊಂದು ಕಣಸು – ಅಂಬಿಕಾತನಯದತ್ತ

ಕವನ -ಕನಸಿನೊಳಗೊಂದು ಕಣಸುಕವಿ – ದ.ರಾ.ಬೇಂದ್ರೆ(ಅಂಬಿಕಾತನಯದತ್ತ)          ತಾಯಿ ಮಕ್ಕಳ ಸಂವಾದ(ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ) “ಯಾರು ನಿಂದವರಲ್ಲಿ ತಾಯೆ” ಎಂದೆ  “ಯಾರು ಕೇಳುವರೆನಗೆ, ಯಾಕೆ ತಂದೆ ?” “ಬೇಸರದ ದನಿಯೇಕೆ ಹೆಸರ ಹೇಳಲ್ಲ”  “ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ”