ಕವನ – ಕಾಸರಗೋಡು-೭೭
ಕವಿ – ವೇಣುಗೋಪಾಲ ಕಾಸರಗೋಡು
ಕಂಡ ಕಂಡ ದೈವ ದೇವರುಗಳಿಗೆ
ಅನ್ಯಥಾ ಶರಣಂ ನಾಸ್ತಿ ಪ್ರಭೋ ನೀವೆ ಗತಿ
ಎಂದು ಉದ್ದಂಡ ಬಿದ್ದೆವು
ಚೆಂಡೆ ಕಾಸರಕನ ಗೋಳಿ ಅಶ್ವಥ್ಥ
ಬಣ್ಣ ತೊಗಲುಗಳ ಗಣಿಸದೇ ಸುತ್ತು
ಬಂದೆವು ಹರಕೆ ಹೊತ್ತೆವು ಆಯಾ ಕ್ಷೇತ್ರಕ್ಕೆ
ಆಯಕಟ್ಟಿನ ನೈವೇದ್ಯ ನೀಡಿದೆವು ದಿವ್ಯ ಅಶರೀರ
ವಾಣಿಗಳ ನಂಬಿದೆವು ತಾಯ ಮಡಿಲಲ್ಲಿ
ಮಲಗುವ ಕನಸ ಕನವರಿಸಿದೆವು
ಪೂತನಿ ಹಾಲು ಕುಡಿದು ಕಹಿಯೆಂದು ಉಗುಳಿದೆವು
ಕೃಷ್ಣನಾಗಲೇ ಇಲ್ಲ ಕೇವಲ ಶಬರಿ ಬೊಗರಿಯ ಧ್ಯಾನ
ಗಿರಿಗಹ್ವರಗಳಲ್ಲಿ ಗೆರಿಲ್ಲಾ ಗೂಬೆ ಧ್ವನಿ
ಪ್ರತಿಧ್ವನಿಸುವುದೆ ಇಲ್ಲ ಈ ಅಹಲ್ಯ ಶಿಲೆ
ಮಿಸುಕಾಡುವುದೆ ಇಲ್ಲ ರಾಮಪಾದ ಸೋಕುವುದಿಲ್ಲ
ಬೀದಿಗೆ ಬಿದ್ದ ಚಿಗುರು ಕಂದನ ಕೂಗು
ಹೆತ್ತ ಕರುಳಿನ ಕಿವಿಗೆ ತಲುಪುವುದೆ ಇಲ್ಲ
ಚೊಚ್ಚಲ ಮರಿಯ ಮದ್ದಂತೆ ಬೆಕ್ಕಿನ ಪ್ರಸವದ ವೇದನೆಗೆ
ಮನುಷ್ಯನ ಕೊಲೆಗೆ ಗಲ್ಲು ವಿಧಿಸುವ ನಿಮಗೆ
ನಮ್ಮದೊಂದೇ ಪ್ರಶ್ನೆ ಉತ್ತರಿಸಿ
ಭಾಷೆ ಸಂಸ್ಕೃತಿ ಕೊಂದು ಕೈತೊಳೆವ ಕಟುಕರಿಗೆ
ಯಾವ ರೌರವ ಶಿಕ್ಷೆ ನಿಮ್ಮ ಸಂಹಿತೆಯಲ್ಲಿ?
* * * * * * *