ಕವನ – ನನ್ನ ದೇಹದ ಬೂದಿ
ಕವಿ – ದಿನಕರ ದೇಸಾಯಿ

ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ
 ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ;
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
 ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ
 ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ;
ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು
 ಧನ್ಯವಾಯಿತು ಹುಟ್ಟು ಸಾವಿನಲ್ಲಿ

ನನ್ನ ದೇಹದ ಬೂದಿ-ಕೊಳದಲ್ಲಿ ಬೀರಿ ಬಿಡಿ
 ತಾವರೆಯು ದಿನದಿನವು ಅರಳುವಲ್ಲಿ ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ
 ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ
 ಇಂದಿಗೀ ನರಜನ್ಮ ಸೇವೆಯಿಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ, ದೇವ,
 ನಿಜ ಸೇವೆಗೈಯಲಿಕೆ ಬರಲಿ ಮುಂದು

*  *  *   *   *  *  *  * * * * * * * * * * * *

8 thoughts on “ನನ್ನ ದೇಹದ ಬೂದಿ – ದಿನಕರ ದೇಸಾಯಿ”

 1. ಒಳ್ಳೆಯ ಕವನ!

  ದಿನಕರ ದೇಸಾಯಿಯವರ ಹಾಸ್ಯ ಭರಿತ ಕವನಗಳೂ ಸಾಕಷ್ಟಿವೆ (ಅವರ “ದಿನಕರನ ಚೌಪದಿಗಳು” ಎಂಬ ಕೃತಿ ನೋಡಿ); ಉದಾಹರಣೆಗೆ

  “ಇಂದ್ರದೇವನು ಮೊನ್ನೆ ಮಾಡಿದ ಟೆಲಿಫೋನು
  ಕೇಳಿದನು ದೇಸಾಯಿ ಹೇಗಿದ್ದಿ ನೀನು
  ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು
  ಪ್ರತಿ ಕಳುಹಿಸಿ ನನ್ನ ಲೆಕ್ಖಕ್ಕೆ ಹಚ್ಚು — ದಿನಕರ ದೇಸಾಯಿ”

 2. ಚೆನ್ನಾಗಿದೆ.  ದೇಸಾಯಿಯವರು ಈಗ ಅಲ್ಲೇ ಇರುವುದರಿಂದ ಇಂದ್ರನಿಗೆ ದೂರವಾಣಿ ಬಿಲ್ಲು ಕಡಿಮೆಯಾಗಿರಬಹುದು 🙂

  ಪ್ರದೀಪ್, ನೀವು ತಿಳಿಸಿದಂತಹ ಚುಟುಕಗಳು ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಅವುಗಳು ಪುಸ್ತಕ ರೂಪದಲ್ಲಿರುವುದು(ದಿನಕರನ ಚೌಪದಿಗಳು) ತಿಳಿದಿರಲಿಲ್ಲ. ಮಾಹಿತಿಗೆ ಧನ್ಯವಾದಗಳು.

 3. ಪದ್ಯ ಲೈಕಿತ್ತ್ ದಿನಕರ ದೇಸಾಯಿಯವರ ‘ದೇವಗೆಂದು ಗುಡಿಯನೊಂದ ಕಟ್ಟುತಿರುವೆಯ’ ಪದ್ಯ ನಂಗೆ ಮಸ್ತು ಇಷ್ಟ. ದೇಸಾಯಿಯವರ ಚುಟುಕಗಳು, ಕವನಗಳು ಪುಸ್ತಕ ರೂಪದಲ್ಲಿವೆ ಸುಮಾರು ಒಂದು ಸಾವಿರದಷ್ಟು ಚುಟುಕಗಳಿವೆ.

  ದಿನಕರ ದೇಸಾಯಿವರು ಚುಟುಕುಬ್ರಹ್ಮನಾಗಿಯಷ್ಟೆ ಗೊತ್ತಿತ್ತು ಅವರ ಸಮಾಜವಾದಿ ಹೋರಾಟದ ಆಯಾಮದ ಅರಿವಾಗಿದ್ದು ತೀರ ಇತ್ತೀಚೆಗೆ.

  ಆಂದಹಾಗೆ ತುಳಸಿಯಮ್ಮ, ಒಂದ್ಸರ್ತಿ ನಮ್ಮ ಜಗಲಿಗೂ ಬಂದು ಹೋಪ್ರ್ಯಲೆ. ನಿಮ್ಗೆ surprise ಇತ್ತು ಮರ್ರೆ.

 4. ಜಗಲಿ ಭಾಗವತರೇ, ದಿನಕರ ದೇಸಾಯಿಯವರು  ರಾಜಕೀಯದಲ್ಲಿದ್ದಿದ್ದು (MLA? MLC?) ಗೊತ್ತಿತ್ತು. ಸಾಮಾಜಿಕ ಹೋರಾಟ ಅಂದಿರಲ್ಲ, ಏನದು?

  ಅಂದ ಹಾಗೆ,ನಿಮ್ಮ ಮೈಲ್ ಬಾಕ್ಸಿನಲ್ಲಿ ನನ್ನದೊಂದು ಮೈಲ್ ಇತ್ತ್ ಕಾಣಿ, ಟೈಮ್ ಆದಾಗ 🙂

 5. ದೇಸಾಯಿಯವರು ‘ಉಳುವವನೆ ಹೊಲದೊಡೆಯ’ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಶಾಂತವೇರಿ ಗೋಪಾಲಗೌಡ, ಕಡಿದಾಳ ಶಾಮಣ್ಣ ಅವರ ಸಾಲಿನವರು. ಉತ್ತರಕನ್ನಡದ ಹಲವು ಹಳ್ಳಿಗಳಲ್ಲಿ ‘ಜನತಾ ವಿದ್ಯಾಲಯ’ ಅನ್ನುವ ಹಲವು ಶಾಲೆಗಳನ್ನು ಕಟ್ಟಿಸಿ ಅಕ್ಷರಕ್ರಾಂತಿ ಮಾಡಿದವರು. ಅವರು ಸಂಸದ (M.P.) ರಾಗಿ ಒಮ್ಮೆ ಆಯ್ಕೆಯಾಗಿದ್ರು.

  ನಿನ್ನೆ ಪುರುಸೊತ್ತಿತ್ತು. ನಿಮ್ಮ ಇ-ಪತ್ರಕ್ಕೆ ಉತ್ತರಿಸಿದ್ದೇನೆಃ-)

 6. ಜಗಲಿ ಭಾಗವತರೇ, ದಿನಕರ ದೇಸಾಯಿಯವರ ಬಗ್ಗೆ ತಿಳಿದಿರಲಿಲ್ಲ.. ಮಾಹಿತಿಗೆ ಧನ್ಯವಾದಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.