“ಧಾರಾವಾಹಿ ನಿರ್ದೇಶಕರು, ಒಬ್ಬ ವ್ಯಕ್ತಿಗೆ ಕನಿಷ್ಠ ಇಬ್ಬರು ಹೆಂಡಿರಿಲ್ಲದ ಕಣ್ಣೀರ-ಧಾರಾವಾಹಿಯನ್ನು ನಿರ್ಮಿಸುವುದು ಅಸಾಧ್ಯವಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಮಾತ್ರವಲ್ಲದೆ, ರಬ್ಬರ್ ಕಂಪನಿಗಳು ತಮ್ಮನ್ನು ಹುಡುಕುತ್ತಿವೆ ಎಂಬ ಸುದ್ದಿ ಸುಳ್ಳು, ನಾವೇ ರಬ್ಬರ್ ಕಂಪನಿಗಳನ್ನು ಹುಡುಕುತ್ತಿದ್ದು, ಅತ್ಯುತ್ತಮ ರಬ್ಬರ್ ಯಾವುದು ಮತ್ತು ಅದನ್ನು ಯಾವ ರೀತಿ ಎಳೆಯಬಹುದು ಎಂಬುದನ್ನು ಸಂಶೋಧಿಸಬೇಕಾಗಿದೆ” – (ಬೊ.ರ. ಬ್ಯುರೋ)
ಎಂದೂ ಅಸತ್ಯವನ್ನೇ ಬೊಗಳುವ ಅಸತ್ಯಾನ್ವೇಷಿಗಳು ಈ ಬಾರಿ ಮಾತ್ರ ಅಪ್ಪಿತಪ್ಪಿ ಪರಮ ಸತ್ಯದ ಸುದ್ದಿಯನ್ನೇ ತಮ್ಮ ಬೊಗಳೆಯಲ್ಲಿ ಪ್ರಕಟಿಸಿದ್ದಕ್ಕಾಗಿ ಮೊದಲಿಗೆ ಅವರನ್ನು ಅಭಿನಂದಿಸುತ್ತಿದ್ದೇನೆ.
ಅನ್ವೇಷಿಗಳ ವರದಿಗೆ ಮತ್ತಷ್ಟು ಪುರಾವೆ ಒದಗಿಸುವುದಾದರೆ – “ಕಾದಂಬರಿ” – ಇಬ್ಬರು ಹೆಂಡತಿಯರು, “ಮಾಂಗಲ್ಯ” – ಒಬ್ಬಳು ಹೆಂಡತಿ , ಇನ್ನೊಬ್ಬಳು ಹೆಂಡತಿಯಲ್ಲದವಳು. “ತಕಧಿಮಿತ” -ಪೋಲಿಸ್ ಅಧಿಕಾರಿ ಸಮರ್ಥನಿಗೆ ಇನ್ನೊಬ್ಬ ಮಹಿಳಾ ಪೋಲಿಸ್ ಅಧಿಕಾರಿಯ ಜೊತೆ ಸಂಬಂಧ, ಸಮರ್ಥನ ತಂದೆಗೂ (ಶ್ರೀನಿವಾಸ್ ಪ್ರಭು) ಚಂದ್ರಮತಿ , ಪ್ರತಿಮಾ ಎಂಬ ಇಬ್ಬರು ಹೆಂಡತಿಯರು. “ರಂಗೋಲಿ” – ಇಬ್ಬರು, “ನಾಕು ತಂತಿ”ಯಲ್ಲಿ ಶ್ರೀನಿವಾಸಪ್ರಭು ಅವರದೂ ಇದೇ ಕಥೆ. ಇಬ್ಬರು ಹೆಂಡತಿಯರಲ್ಲದೆ, ಲೆಕ್ಕವಿಲ್ಲದಷ್ಟು ಅನೈತಿಕ ಸಂಬಂಧಗಳು! ಅವರದು characterless ಮಂತ್ರಿಯ ಪಾತ್ರವಾದ್ದರಿಂದ , ಅದಕ್ಕೊಂದು ಸಮರ್ಥನೆಯಾದರೂ ಇದೆ. ಇದು ನಾನು ಆಗೀಗ ನೋಡಿರುವ ಕೆಲವು ಮಾತ್ರ. ನೋಡಿರದ ಉಳಿದ ಕಣ್ಣೀರು ಧಾರಾವಾಹಿಗಳ ಬಗ್ಗೆ ಗೊತ್ತಿಲ್ಲ.
ನಾನು ಅಡಿಗೆ ಮನೆಯಲ್ಲಿ ಮೆದು ಚಪಾತಿ ತಯಾರಿಸುವ ಹೊತ್ತಿಗೆ ಸರಿಯಾಗಿ, ಹಾಲ್ನಲ್ಲಿರುವ ಟಿವಿಯಲ್ಲಿ “ಕಾದಂಬರಿ” ಬರುವುದರಿಂದ ಈ ಧಾರಾವಾಹಿಯ ಕೆಲವು ಕಂತುಗಳನ್ನು ನೋಡಿರುವ ಪುಣ್ಯ ನನ್ನದು. ಈ ಧಾರಾವಾಹಿಯ ಬಗ್ಗೆ ಏನೇನೂ ತಿಳಿಯದ ಪಾಮರರಿಗೆ ಸ್ವಲ್ಪವಾದರೂ ಕಥೆ ಹೇಳಿ ಜ್ಞಾನಾರ್ಜನೆ ಮಾಡಿಸಬೇಕೆಂದುಕೊಂಡೆ. ಆದರೆ ಹಲವಾರು ಕವಲುಗಳುಳ್ಳ, ಈ ಮಹಾ (ಮೆಗಾ )ಕಥೆಯನ್ನು ಎಲ್ಲಿಂದ ಪ್ರಾರಂಭಿಸಿ,ಎಲ್ಲಿ ಮುಗಿಸಬೇಕೋ ತಿಳಿಯದೆ ತಬ್ಬಿಬ್ಬಾಗಿ ಸುಮ್ಮನಾಗಿಬಿಟ್ಟೆ.
ಉದಯ ಧಾರಾವಾಹಿಗಳಂತೂ ಅಸಂಬಂದ್ಧ, ಅತಾರ್ಕಿಕ ಘಟನೆಗಳ ಸರಮಾಲೆ. ಅಮೆರಿಕಾಗೆ ಉದಯ ಚಾನಲ್ ಬಂದ ಹೊಸದರಲ್ಲೇ, ಅದನ್ನು ಮನೆಗೆ ಬರಮಾಡಿಕೊಂಡ ಮೊದಲಿಗರಲ್ಲಿ ನಾವೂ ಒಬ್ಬರು. ಆಗಲೇ ಶುರುವಾಗಿ, ಸುಮಾರು ಕಂತುಗಳನ್ನು ಮುಗಿಸಿದ್ದ ಕುಂಕುಮಭಾಗ್ಯ, ಮಾಂಗಲ್ಯ,ನಾಕು ತಂತಿ ಧಾರಾವಾಹಿಗಳು (೩ ವರ್ಷ ಸಮೀಪಿಸುತ್ತಿದೆ) ಇವತ್ತಿಗೂ ಪ್ರಸಾರವಾಗುತ್ತಿವೆಯೆಂದರೆ, ಕಥೆ ಇನ್ನೆಷ್ಟು ಹಿಗ್ಗಾಮುಗ್ಗಾ ಜಗ್ಗಿ ಹೋಗಿರಬಹುದೆಂಬುದನ್ನು ನಿಮ್ಮ ಊಹೆಗೇ ಬಿಡುತ್ತಿದ್ದೇನೆ. ದೂರದರ್ಶನದಲ್ಲಿ ಆಗ -ಧಾರಾವಾಹಿಗಳ ಪ್ರಾರಂಭದ ಕಾಲ – ಬರುತ್ತಿದ್ದ ಧಾರಾವಾಹಿಗಳು ಕೇವಲ ೧೩ ಕಂತುಗಳಲ್ಲಿ ಮುಗಿಯುತ್ತಿದ್ದವೆಂದು ಈಗ ನಂಬುವುದೇ ಕಷ್ಟವಾಗುತ್ತಿದೆ. ಉದಯದಲ್ಲಿ ಇದ್ದುದ್ದರಲ್ಲಿ ಸ್ವಲ್ಪ ಚೆನ್ನಾಗಿವೆ ಎನ್ನುವಂತಿದ್ದ – ಕುಟುಂಬ, ಕನ್ನಡಿಯಿಲ್ಲದ ಮನೆ ಮುಂತಾದ ಧಾರಾವಾಹಿಗಳು ಯಾಕೋ ಪ್ರಾರಂಭದಲ್ಲಿಯೇ ನಿಂತು ಹೋದವು, ಯಾಕೆಂದು ಕಾರಣ ಕೂಡ ತಿಳಿಯಲಿಲ್ಲ.
ಈಟಿವಿಯ ಕೆಲವು ಕಾರ್ಯಕ್ರಮಗಳು ಉತ್ತಮವಾಗಿರುತ್ತವೆಂದು ಕೇಳಿ ಬಲ್ಲೆ. ಈಟಿವಿ ಅಮೆರಿಕಾದಲ್ಲಿ ಸದ್ಯದಲ್ಲೇ ಲಭ್ಯವಾಗಲಿದೆ ಎಂದು ಹೇಳುತ್ತಲ್ಲೇ ಬಂದಿದ್ದಾರಾದರೂ, ಇನ್ನೂ ಬಂದಿಲ್ಲ. ಕಾರಣವೇನೋ ಯಾರಿಗೂ ಗೊತ್ತಿಲ್ಲ. ಈಟಿವಿ ಇಲ್ಲಿಗೆ ಬಂದಿದ್ದೇ ಆದಲ್ಲಿ ಬಹಳಷ್ಟು ಮನೆಗಳಿಂದ ಉದಯ ಎತ್ತಂಗಡಿಯಾಗುವುದು ನಿಸ್ಸಂದೇಹ! ಈ ಕಾರಣದಿಂದಲೇ ಉದಯದವರು ಈಟಿವಿಗೆ ಅಡ್ಡಗಾಲು ಹಾಕುತ್ತಿರಬಹುದೇ ಎಂದು ನನಗೊಂದು ನಿರಾಧಾರ, ನಿಷ್ಕಾರಣ ಸಂದೇಹವೂ ಉಂಟು.
ನೀವೂ ಯಾವುದೇ ಭಾಷೆಯ ಟಿವಿ ಧಾರಾವಾಹಿ ನೋಡುತ್ತೀರಾದರೆ,ನಿಮಗೆ ಇಷ್ಟವಾದ ದೃಶ್ಯಗಳನ್ನು ಕಣ್ಮುಂದೆ ಕಟ್ಟುವಂತೆ (ಬಣ್ಣ ಬಣ್ಣವಾಗಿ) ಚಿತ್ರಿಸಿ. 🙂
ಅಲ್ಲಾರೀ, ನನ್ನ ಮೆಚ್ಚಿನ “ವಾತ್ಸಲ್ಯ”, “ಪುಣ್ಯಕೋಟಿ” ಬಿಟ್ಟರಲ್ಲ ? ನಾನೂ ಕೆಲವು ವಾರಗಳಿಂದ “ಸಿಲ್ಲಿ ಲಲ್ಲಿ” ನಮ್ಮಾಕೆಗೆ ಗೊತ್ತಾಗದಂತೆ ನೋಡುತ್ತಾ ಇದ್ದೀನಿ. ತೀರಾ Vitamin-C (Creativity) ನ್ಯೂನತೆಯಿಂದಾಗುವ ಖಾಯಿಲೆಗಳಾವುವು ಎಂದು ತಿಳಿಯಬೇಕಾದರೆ ಈ ಧಾರಾ(ಕಾರ)ವಾಹಿಗಳನ್ನು ಒಮ್ಮೆ ನೋಡಿದರೆ ಸಾಕು. ಬರೀ ಜ್ಞಾನೋದಯವಲ್ಲದೆ ಅಪರೋಕ್ಷ ಜ್ಞಾನ ಪ್ರಾಪ್ತವಾಗುತ್ತದೆ. ತನ್ನ ಅಣ್ಣನ ಟೆಂಡರ್ forgery ಇಂದ ಶುರುವಾದ “ಕನ್ನಡಿ ಇಲ್ಲದ ಮನೆ” ಈಗೆಲ್ಲೋ ಕಳೆದು ಹೋಗಿದೆ, “ಪುಣ್ಯಕೋಟಿ” ಯಲ್ಲಂತೂ ತಂಗಿಯ-ಗಂಡನ-ಮೊದಲ ಹೆಂಡತಿಯ- ಮಗಳಲ್ಲಿ ತನ್ನ ತಾಯಿಯನ್ನೇ ನೋಡಿದ ಲಕ್ವಾ ಪಾರ್ಟಿ, ದಿನಕ್ಕೊಂದು ನಗೆ ಟಾಪಿಕ್ ಕೊಡಲು ಪ್ರಯತ್ನಿಸಿ ಬೋರಲು ಬೀಳುವ ಸಿಲ್ಲಿ ಲಲ್ಲಿ, Star-One, Zee ಗಳಲ್ಲಿ ಬರುವ ಮುಕ್ಕಾಲು ಧಾರಾವಾಹಿಗಳು ಒಕ್ಕೊರಲಿನಿಂದ ಸಾರುವುದೇನಪ್ಪ ಅಂದರೆ ನಮ್ಮ directರುಗಳ Creative deficiencies.
ಇಂದು Naseeruddin Shah ಕೂಡ BBC ಯಲ್ಲಿ ಹೊಯ್ಕೊಂಡಿದ್ದಾನೆ ಈ ಕೊರತೆಯ ಬಗ್ಗೆ , “ರಂಗ್ ದೇ ಬಸಂತಿಗೆ” BAFT ಅವಾರ್ಡ್ ಸಿಗದಕ್ಕೆ 😀
ಬಲ್ಲವರೇ ಬಲ್ಲರು ಧಾರಾವಾಹಿಗಳ ಹಿಂಸೆ !
ಆ ಧಾರಾವಾಹಿಗಳ ನಿರ್ದೆಶಕರು ಕಳೆದ ಜನ್ಮದಲಿ ಚ್ಯುಯಿಂಗ್-ಗಮ್ ಆಗಿದ್ದರಾ ಹೇಗೆ?
ಭಾರತಕ್ಕೆ ಹೋದಾಗ ನೋಡಿದ್ದೇ ಅದು ಯಾವಾಗಲೋ ಒಮ್ಮೆ ನೋಡಿದ್ದೇ..ಯಪ್ಪಾ..ಏನೋ ಭಯಂಕರ ಧಾರಾವಾಹಿ ಅಂತೀರಾ..ಅದೇನೋ ನಾಗಮಣಿ ಇರುತ್ತಂತೆ..ಆಮೇಲೆ ಯಾವುದೋ ಪಿಶಾಚಿ-ಮಾಯಾವಿ–ನೋಡ್ತಾ ಇದ್ದಾಗೆ ನನ್ನ ತಲೆ ಒಗ್ಗರಣೆ 😀
ಶ್ರೀನಿ ಅವರೇ,
ಸಿಲ್ಲಿ-ಲಿಲ್ಲಿ ಶುರುವಾಗಿ ಒಂದು ೪ ವರ್ಷ ಆಗಿರಬಹುದು ಅಲ್ವಾ?
ಯಾಕ್ರೀ ರಿಮೋಟ್ ಒತ್ತಿ ತಲೆ ಹಾಳು ಮಾಡ್ಕೋತೀರಾ !
ತಪ್ಪಾಯಿತು ತ್ರಿವೇಣಿಯಮ್ನೋರೆ…
ಧಾರಾವಾಹಿ ನೋಡಿ ಎಚ್ಚರತಪ್ಪಿ ಬಿದ್ದಿರೋ ನಮ್ಮ ಬ್ಯುರೋದ ಸಮಸ್ತರನ್ನು ಬಡಿದೆಬ್ಬಿಸಿದ್ದಕ್ಕೆ ಧನ್ಯವಾದ.
ಅಪ್ಪಿ ತಪ್ಪಿಯೂ ಇನ್ನು ಮುಂದೆ ಇಂಥ “ಪರಮಾಸತ್ಯ”ದ, ಮನೆಕೆಡಿಸುವ ಮತ್ತು ಮನಕೆಡಿಸುವ ನೈಜ ಸಂಗತಿಗಳನ್ನು ಪ್ರಕಟಿಸುವುದೇ ಇಲ್ಲ ಅಂತ ಅಸತ್ಯವಾಗಿಯೂ ಮಾತು ಕೊಡುತ್ತಿದ್ದೇವೆ.
ಆದರೂ… ಮನಸ್ಸು ಕೇಳಬೇಕಲ್ಲ… ಈ ಟೀವಿ ಆ ಟೀವಿ ಎಂದೆಲ್ಲಾ ಹೇಳುತ್ತೀರಿ. ನಾನು ಕಳೆದ ವರ್ಷ ಊರು ಬಿಟ್ಟಾಗ ಕೊನೆಗೊಂಡಿತು ಅಂದುಕೊಂಡ ಧಾರೆಯೊಂದು ಗುಪ್ತಗಾಮಿನಿಯಾಗಿ ಇನ್ನೂ ಪ್ರವಹಿಸುತ್ತಿದೆ ಅಂತ ಕೇಳಿದ್ದೇನೆ(ಯಾಕೆಂದರೆ ನಾವೀಗ ಇರೋ ನಾಡಿನಲ್ಲಿ ಕರುಣಾನಿಧಿಯ ಚಾನೆಲಿದ್ದೇ ಕಾರುಬಾರು).
ಆದರೆ ಈ ಟೀವಿಯ ಕೆಲವು ಧಾರಾವಾಹಿಗಳಲ್ಲಾದರೂ ಕಿವಿಗಡಚಿಕ್ಕುವ ಶಬ್ದವೇ ಇಲ್ಲ ಎಂಬುದೊಂದು “ಲೋಪ”. ದಯವಿಟ್ಟು ಈ ವಿಷಯವನ್ನು ಧಾರಾವಾಹಿ ನಿರ್ದೇಶಕರಿಗೆ ಹೇಳಬೇಡಿ. ಅಲ್ಲೂ ಸದ್ದು ತೂರಿಸಿಬಿಟ್ಟಾರು!!!
“ಯಪ್ಪಾ..ಏನೋ ಭಯಂಕರ ಧಾರಾವಾಹಿ ಅಂತೀರಾ..ಅದೇನೋ ನಾಗಮಣಿ ಇರುತ್ತಂತೆ..ಆಮೇಲೆ ಯಾವುದೋ ಪಿಶಾಚಿ-ಮಾಯಾವಿ–ನೋಡ್ತಾ ಇದ್ದಾಗೆ ನನ್ನ ತಲೆ ಒಗ್ಗರಣೆ “-
ಶಿವು,ನೀವು ಹೇಳುತ್ತಿರುವುದು “ಅಮ್ಮ ನಾಗಮ್ಮ” ಇರಬೇಕು. ನಾನು ಇದನ್ನು ನೋಡುವುದಿಲ್ಲ, ನನ್ನ ತಲೆ ಒಗ್ಗರಣೆಯಾಗುವ ಸಾಧ್ಯತೆಯೂ ಇಲ್ಲ 🙂
ಅನ್ವೇಷಿಗಳೇ, ನಿಮ್ಮ ಇಂದುವಿನ ಊರಿನಲ್ಲಿಯೂ ಈ ಟೀವಿ ಬರುವುದಿಲ್ಲವೆ? ಹೋಗಲಿ ಬಿಡಿ. ಆ ಟೀವಿಯ ದುಃಖವನ್ನು ನಮ್ಮೊಡನೆ ಹಂಚಿಕೊಳ್ಳುತ್ತಿರಿ.
ಧಾ ….
ರಾ …
ವಾ ….
ಮುಂದಿನ ಕಂತು ವೀಕ್ಷಿಸಿಃ-))
ಜಗಲಿ ಭಾಗವತರೇ, ನಿಮ್ಮ ಧಾ..ರಾ.ವಾ..ಹಿಯ ಮುಂದಿನ ಕಂತಿಗಾಗಿ ಕಾದು ಕಾದು, ಕುಳಿತಲ್ಲೇ ಕಣ್ಮುಚ್ಚಿದ ವ್ಯಕ್ತಿಯ ಶವವೊಂದು ಅನ್ವೇಷಿಗಳಿಗೆ ಸಿಕ್ಕಿದೆಯಂತೆ – ಇಲ್ಲಿ ನೋಡಿ.