ಕವನ – ತಿಂಗಳಾಯಿತೇ?
ಕವಿ – ಕೆ.ಎಸ್.ನರಸಿಂಹಸ್ವಾಮಿ
ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈಹಿಡಿದ ಹುಡುಗಿ |
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು ||
ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ
ಕಣ್ಣಿರಲು ತಿಳಿಬಾನ ಕಿರುತಾರೆಯಂತೆ |
ವೇಣಿಯಿರಲು ವಸಂತ ಪುಷ್ಪವನದಂತೆ
ಮನಸು ಬಾರದು ನನಗೆ ಅಡಿಯನಿಡೆ ಮುಂದೆ ||
ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ |
ದಾರಿಯಲಿ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋದುದು ಬಂಡಿ ಎಂದು ಹೇಳಿದನು ||
ಹಿಂದಿರುಗಿ ಬಂದೆನ್ನ ಒಂದೆ ಮಾತಿನಲಿ
ತಿಂಗಳಾಯಿತೇ ಎಂದಳೆನ್ನ ಹೊಸ ಹುಡುಗಿ ||
* * * * * * * * * *
ಅಬ್ಬಾ ಅದೆಂಥಾ ರಸಿಕತೆ,(ಕಣ್ಣಿರಲು ತಿಳಿಬಾನ ಕಿರುತಾರೆಯಂತೆ, ಇದು ನನಗೆ ಬಲು ಮೆಚ್ಚಿಗೆಯಾದ ಸಾಲು) ಹೆಣ್ಣಿನ ಸೌಂದರ್ಯಕೆ ಅದೆಂಥಾ ವರ್ಣನೆ, ಆ ಸೊಬಗನ್ನು ನೋಡಿ ಆನಂದಿಸುವುದಿನ್ನೆಂಥಾ ಕಲೆ. ವಿರಹದಲ್ಲಿ ‘ನಿಮಿಷ ಯುಗದಂತೆ’ ಅನ್ನುವಂತೆ, ಆ ಹೊಸ ಹುಡುಗಿಗೆ ಆತ ಮರಳಿ ಬಂದೊಡನೆ ‘ಆಗಲೇ ತಿಂಗಳಾಯಿತೆ’ ಎಂದು ಕೇಳುವುದು. ಅದರಲ್ಲಿರುವ ಮುಗ್ಧತೆ, ಸರಳತೆ ಬಲು ಚೆನ್ನ. ಕೆ.ಎಸ್.ನ. ಅವರು ಎಲ್ಲಾ ಅನುಭವಗಳ ಸರಮಾಲೆಗಳ ಸರ ಪೋಣಿಸಿ ನಮಗೆ ಅದರ ಅಂದ ಸವಿಯಲು ಬಿಟ್ಟಿದ್ದಾರೆ. ಇಂಥಾದ್ದನ್ನು ಅನುಭವಿಸುವುದೆಂದರೆ ನನಗಂತೂ ಬಲು ಮೆಚ್ಚು.
ಈ ಕವನಕ್ಕಾಗಿ ತುಂಬಾ ಧನ್ಯವಾದಗಳು.
ತಿಂಗಳಾಗದೆಯೇ ಮತ್ತೆ ಬಂದ ಆ ಆಸಾಮಿಗೆ
ಹುಡುಗಿಯ ಮನೆಯವರು
ತಂಗಳನ್ನ ಬಡಿಸಿರಲಿಕ್ಕಿಲ್ಲ ಎಂದು ಭಾವಿಸೋಣ.
“ವಿರಹದಲ್ಲಿ ‘ನಿಮಿಷ ಯುಗದಂತೆ’ ಅನ್ನುವಂತೆ, ಆ ಹೊಸ ಹುಡುಗಿಗೆ ಆತ ಮರಳಿ ಬಂದೊಡನೆ ‘ಆಗಲೇ ತಿಂಗಳಾಯಿತೆ’ ಎಂದು ಕೇಳುವುದು. – “
ಮೀರಾ, “ತಿಂಗಳಾಯಿತೇ?” – ಇದನ್ನು, ಬಸ್ಸು ತಪ್ಪಿಸಿಕೊಂಡು ಮರಳಿದ ಗಂಡನನ್ನು ಛೇಡಿಸಲೆಂದು ಕೇಳಿರುವ ಪ್ರಶ್ನೆಯೆಂದು ಮಾತ್ರ ಅರ್ಥ ಮಾಡಿಕೊಂಡಿದ್ದೆ. ನಿನ್ನ ಪ್ರತಿಕ್ರಿಯೆಯಲ್ಲಿ – ವಿರಹದಲ್ಲಿ ಹುಡುಗಿಗೆ ನಿಜವಾಗಿಯೂ ತಿಂಗಳು ಕಳೆದಂತೆ ಭಾಸವಾಗಿದೆ – ಎಂಬ ಹೊಸ ಅರ್ಥ ಬಂದಿದೆ. 🙂
ಕವನ ಓದಿ,ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು.
ಜೋಶಿಯವರೇ, ತಿಂಗಳಾಗದೆಯೇ ಮತ್ತೆ ಬಂದ ಆ ಆಸಾಮಿಗೆ ಹುಡುಗಿಯ ಮನೆಯವರು ತಂಗಳನ್ನ ಬಡಿಸಿರದಿದ್ದರೂ , ಅಳಿಯನಿಗೆ ಏನೋ ಅಸಮಾಧಾನವಾಗುವಂತೆಯಂತೂ ನಡೆದುಕೊಂಡಿರಬಹುದು. 🙂
ಯಾಕೆಂದರೆ ಕೆ.ಎಸ್.ನ. ಅವರ ಇನ್ನೊಂದು ಕವಿತೆಯಲ್ಲಿ ಕೋಪಿಸಿಕೊಂಡ ಅಳಿಯನಿಗೆ ಬಳೆಗಾರ ಸಮಾಧಾನ ಹೇಳುವ ಪ್ರಸಂಗವಿದೆ –
“ಮುನಿಸು ಮಾವನ ಮೇಲೆ ಮಗಳೇನು ಮಾಡಿದಳು
ನಿಮಗೇತಕೀ ಕಲ್ಲು ಮನಸು?
ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು”
ಈ ಪದ್ಯವನ್ನ ತುಳಸಿವನದಲ್ಲಿ ಹಾಕ್ಲಿಕ್ಕೆ ನಿಮ್ಮನ್ನ ಕೇಳ್ಬೇಕು ಅಂತ ಶಿವು ಮತ್ತೆ ನಾನು ಯೋಜನೆ ಹೂಡ್ತಾ ಇದ್ರೆ, ನೀವೆ ಹಾಕ್ಬಿಟ್ಟಿದ್ದೀರಾ. ಪಾಂಡವ್ರಿಗೆ ಕೃಷ್ಣನಿದ್ದ ಹಾಗೆ ನಮಗೆ ನೀವು. ಉಪಮೆ ಹೇಗಿದೆ?ಃ-))
ಅಂದು – ಉಪಮಾ ಕಾಳಿದಾಸಸ್ಯ,
ಇಂದು – upma MTR’ಸ್ಯಃ-))
ಕೆ.ಎಸ್.ನ. ಕನ್ನಡದ ಆಸ್ತಿ. ಅವರ ಕವಿತೆಗಳು ಗೇಯಪ್ರಧಾನವೂ ಹೌದು. ಭಾವಪ್ರಧಾನವೂ ಹೌದು. ಅವರ ಬಹಳಷ್ಟು ಕವಿತೆಗಳು, ಜಾನಪದ ಕವಿತೆಗಳ ತರಹ ಒಬ್ಬರಿಂದೊಬ್ಬರಿಗೆ ತಲುಪಿವೆ. ಎಲ್ಲರಿಗೂ ಅರ್ಥವಾಗಬಲ್ಲ, ಸರಳ ಸಾಲುಗಳಲ್ಲೇ ಎಂಥ ನವಿರು ಕವಿತೆಗಳನ್ನು ಹೊಸೆದರವರು. ‘ಸುಮ್ಮನೆ ದಾಂಪತ್ಯಗೀತೆಗಳನ್ನ ಬರೆದರು. ಗಂಭೀರ ಸಾಹಿತ್ಯ ರಚಿಸಲೇ ಇಲ್ಲ ಎನ್ನುವ ಅಪವಾದವನ್ನು ಎಲ್ಲೋ ಕೇಳಿದ್ದೇನೆ. ಆದರೆ ‘ಲೇಖನಿಯ ಮಸಿಯಿಂದ ರಕ್ತ ಚೆಲ್ಲುವ’ ಕವನಗಳಿಗಿಂತ, ಸರಳ ಸಾಲುಗಳ ಇಂಥ ನವಿರು ಕವಿತೆಗಳೆ ಇವತ್ತಿನ ಅಗತ್ಯ. ನಾಗಾಲೋಟದ ಆಧುನಿಕತೆಯನ್ನು ಬೆನ್ನಟ್ಟಿರುವ ನಾವು ಕ್ಷಣಗಳನ್ನು ಅನುಭವಿಸದೆ,ಹುಚ್ಚು ಸ್ಪರ್ಧೆಯ ಧಾವಂತದಲ್ಲಿ ಕಳೆಯುತ್ತಿರುವ ಈ ಸಂದರ್ಭದಲ್ಲಿ, ಇಂಥ ಕವಿತೆಗಳು ತೀರ ಪ್ರಸ್ತುತ.
ಈ ಕವನಗಳ ಸಾಲುಗಳಲ್ಲಿನ ಸರಳತೆ, ಆಪ್ತತೆ, ಲಾಲಿತ್ಯತೆ ಮತ್ತು ಮಧುರತೆ ಬೇರಾವ ಕವನಗಳಲ್ಲೂ ಕಾಣಿಸಲಾರದು. ಬೆರಗು ಹುಟ್ಟಿಸುವ ಸರಳತೆಯೇ ಕೆ.ಎಸ್.ನ. ಕವನಗಳ ವೈಶಿಷ್ಟ್ಯ.
ಒಂದು ಸಂದೇಹ ಬರ್ತಾ ಇದೆ ನಂಗೆ,
ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ‘ಕೈಹಿಡಿದ ಹುಡುಗಿ’ |
..
.
.
ಹಿಂದಿರುಗಿ ಬಂದೆನ್ನ ಒಂದೆ ಮಾತಿನಲಿ
ತಿಂಗಳಾಯಿತೇ ಎಂದಳೆನ್ನ ‘ಹೊಸ ಹುಡುಗಿ’ ||
ಈ ‘ಕೈ ಹಿಡಿದ ಹುಡುಗಿ’ ಮತ್ತು ‘ಹೊಸ ಹುಡುಗಿ’ ಇಬ್ರೂ ಒಂದೇನಾ? ಃ-))
ಶ್ರೀತ್ರೀ ಅವರೆ,
ಬಹುಶಃ ಗಂಡನಿಗೆ ಆಕೆಯೇ ತಂಗಳಾಯಿತೇ? ಎಂದು ಕೇಳಿದ್ದಿರಬಹುದು. ಅಂದರೆ ಹೊಸ ಹುಡುಗಿ ತವರಿಗೆ ಹೋದಾಗ ಕೆಲಸದೊತ್ತಡದಲ್ಲಿರುವ ಗಂಡ ತಂಗಳೂಟವನ್ನೇ (ಫ್ರಿಜ್‌ನಲ್ಲಿ ಇರಿಸಿ, ಇರಿಸಿ!) ಸೇವಿಸುವುದಲ್ಲವೇ? ಅದಕ್ಕಾಗಿ ಹಾಗೆ ಕೇಳಿದ್ದಿರಬಹುದು 🙂
ಆದರೆ, ಕವನದ ಪದವಿನ್ಯಾಸವಂತೂ “ಅತ್ಯುತ್ತಮವಾಗಿದೆ” ಎಂದು ಹೇಳದಿರಲು ಸಾಧ್ಯವೇ ಇಲ್ಲದಂತಿದೆ.
ಶಿವು ಎಲ್ಲಿ? ಪಾತರಗಿತ್ತಿ ಪಕ್ಕದ ಮೇಲೆ ‘ಒಂದು ಸಂಜೆ’ ಅದೇನೋ ಬರೆದಿದ್ರಲ್ಲ…?
ಸರಳ ಕವನವೈ. ವಿರಹವನ್ನು ಅದ್ಭುತವಾಗಿ ಹೇಳಿದ್ದಾರೆ ಕೆ.ಎಸ್.ಎನ್.
ಹಣ್ಣು ಮಾರುವವನು ಹಣ್ಣು ಮಾರೋದ್ ಬಿಟ್ಟು, ಇವರಾಟವನ್ನು ನೋಡಿದ್ದು ಕಾಕತಾಳಿಯವೋ, ವಿಪರ್ಯಾಸವೋ ತಿಳಿಯಲಿಲ್ಲ 🙂
ಇಂತಿ
ಭೂತ
“ಈ ಪದ್ಯವನ್ನ ತುಳಸಿವನದಲ್ಲಿ ಹಾಕ್ಲಿಕ್ಕೆ ನಿಮ್ಮನ್ನ ಕೇಳ್ಬೇಕು ಅಂತ ಶಿವು ಮತ್ತೆ ನಾನು ಯೋಜನೆ ಹೂಡ್ತಾ ಇದ್ರೆ, ನೀವೆ ಹಾಕ್ಬಿಟ್ಟಿದ್ದೀರಾ. “
– ಓಹೋ! ನೀವು ಯೋಜನೆ ಹೂಡಿದ್ದೇನೂ ನಂಗೆ ಗೊತ್ತಿರಲಿಲ್ಲ. ಆದರೆ ಶಿವು ಪೋಸ್ಟ್ ನೋಡಿದ ಮೇಲೆ ನನಗೆ ಈ ಕವನ ನೆನಪಾಯಿತು ಅನ್ನುವುದು ಮಾತ್ರ ನಿಜ 🙂
“ಅಂದು – ಉಪಮಾ ಕಾಳಿದಾಸಸ್ಯ,
ಇಂದು – upma MTR’ಸ್ಯಃ-)) – ಉಪಮೆ ಹೇಗಿದೆ? “
– ಜಗಲಿ ಭಾಗವತರೇ, ನಿಮ್ಮ ಉಪಮೆ ಹಳೆಯದಾಯಿತು. update ಮಾಡಿಕೊಳ್ಳಿ. MTR ನ್ನು ಈಗ ಓರ್‍ಕ್ಲಾ ಕಂಪೆನಿ ೪೪೩ ಕೋಟಿ ರೂಪಾಯಿಗೆ ತೊಗೊಂಡಿದ್ದಾಗಿದೆ .
“ಈ ‘ಕೈ ಹಿಡಿದ ಹುಡುಗಿ’ ಮತ್ತು ‘ಹೊಸ ಹುಡುಗಿ’ ಇಬ್ರೂ ಒಂದೇನಾ? “
– ನನಗೆ ಗೊತ್ತಿಲ್ಲಪ್ಪ. ಜೋಶಿಯವರನ್ನೋ, ಅನ್ವೇಷಿಗಳನ್ನೋ ಕೇಳಿ ತಿಳಿದುಕೊಳ್ಳಿ 🙂
“ಆದರೆ, ಕವನದ ಪದ ವಿನ್ಯಾಸವಂತೂ “ಅತ್ಯುತ್ತಮವಾಗಿದೆ” ಎಂದು ಹೇಳದಿರಲು ಸಾಧ್ಯವೇ ಇಲ್ಲದಂತಿದೆ.”
– ಅನ್ವೇಷಿಗಳೇ, ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಬದಲು ಕವನ ಚೆನ್ನಾಗಿದೆ ಎಂದು ಹೇಳಿದ್ದರೆ ಆಗ್ತಾ ಇತ್ತಲ್ಲ? 🙂
“ಹಣ್ಣು ಮಾರುವವನು ಹಣ್ಣು ಮಾರೋದ್ ಬಿಟ್ಟು, ಇವರಾಟವನ್ನು ನೋಡಿದ್ದು ಕಾಕತಾಳಿಯವೋ, ವಿಪರ್ಯಾಸವೋ ತಿಳಿಯಲಿಲ್ಲ.”
ಭೂತ ಪ್ರತ್ಯಕ್ಷವಾಗಿದೆ 🙂
ಭೂತ, ಸಣ್ಣಪುಟ್ಟ ಊರುಗಳಲ್ಲಿ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಹಣ್ಣು ಮಾರುವವನು, ಎಳನೀರಿನವನು, ಪೇಪರ್ ಅಂಗಡಿಯವರು…. ಈ ರೀತಿ ಬಸ್ಸುಗಳ ಬಗೆಗೆ ಮಾಹಿತಿ ತಿಳಿಸುವುದು ಸಾಮಾನ್ಯ ಸಂಗತಿಯಾಗಿತ್ತು. ಅವರ ಕೆಲಸ ಬಿಟ್ಟು ಅಲ್ಲ, ಕೆಲಸದ ಜೊತೆಗೆ ಇದೊಂದು ಹೆಚ್ಚುವರಿ ಕೆಲಸ.
“ಶಿವು ಎಲ್ಲಿ? ಪಾತರಗಿತ್ತಿ ಪಕ್ಕದ ಮೇಲೆ ‘ಒಂದು ಸಂಜೆ’ ಅದೇನೋ ಬರೆದಿದ್ರಲ್ಲ…?”
– ಕನಸು, ಕಲ್ಪನೆಗಳ ಲೋಕದಲ್ಲಿ ಎಲ್ಲೋ ಕಳೆದು ಹೋಗಿರಬೇಕು 🙂
ತ್ರಿವೇಣಿಯವರೇ,
ತಿಂಗಳಾಯಿತೇ ಕವನ ಇಲ್ಲಿ ನೋಡಿ ಮತ್ತೆ ಅದೊಂದು ಸಂಜೆಯಲಿ ಕಳೆದುಹೋಗಿಬಿಟ್ಟೆ..
ಕಳೆದವಾರ ಕಚೇರಿಯ ಕೆಲಸದಲ್ಲಿ ಸಿಕ್ಕಾಪಟ್ಟೆ ವ್ಯಸ್ತನಾಗಿದ್ದ ಕಾರಣಕ್ಕೆ ಈ ಕಡೆ ಬರಲಾಗಲಿಲ್ಲ..
ಕವನವನ್ನು ತುಳಸಿವನದಲ್ಲಿ ಹಾಕಿದ್ದಕ್ಕೆ ನನ್ನ ಕಡೆಯಿಂದ ಮತ್ತು ಜಾ.ಭಾಗವತರ ವತಿಯಿಂದ ವಂದನೆಗಳು
I love poems of Kuvempu, da ra bendre h s venkatesh murthy and have so many collections besides SHISHUNALA Sharif”s tatvapada and wish to share.
thanks