ಕವನ – ಅವ್ವ
ಕವಿ – ಪಿ. ಲಂಕೇಶ್
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ,
ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು,
ಹೆಂಟೆಗೊಂಡು ಮೊಗೆ ನೀರು ಹಿಗ್ಗಿ ;
ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,
ಹೂವಲ್ಲಿ ಹೂವಾಗಿ, ಕಾಯಲ್ಲಿ ಕಾಯಾಗಿ
ಹಸುರು ಗದ್ದೆಯ ನೋಡಿಕೊಂಡು,
ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.
ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?
ಎಷ್ಟು ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ ;
ಎಷ್ಟು ಸಲ ಹುಡುಕುತ್ತ ಊರೂರು ಅಲೆದಳು
ತಪ್ಪಿಸಿಕೊಂಡ ಮುದಿಯ ಎಮ್ಮೆಗೆ?
ಸತಿಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ ;
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ ;
ದೇವರ ಪೂಜಿಸಲಿಲ್ಲ ; ಹರಿಕತೆ ಕೇಳಲಿಲ್ಲ ;
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.
ಬನದ ಕರಡಿಯ ಹಾಗೆ
ಚಿಕ್ಕಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೈದು, ಗೊಣಗಿ, ಗುದ್ದಾಡಿದಳು ;
ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ ;
ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ ;
ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ ;
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು ;
ಹೆತ್ತದ್ದಕ್ಕೆ, ಸಾಕಿದ್ದಕ್ಕೆ : ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದಕ್ಕೆ.
* * * * * * *
ತುಂಬ ದಿನದಿಂದ ಓದ್ಬೇಕು ಅಂತ ಇದ್ದೆ ಈ ಪದ್ಯಾನ. ತುಂಬ ಕೃತಜ್ಞತೆಗಳು.
ಸುಬ್ಬಾಭಟ್ಟರ ಮಗಳು ಬಂದ್ಲೇನೊ ಅಂತ ಇಲ್ಲಿಗೆ ಬಂದ್ರೆ….ಏನ್ರೀ ಇದು, ಅವ್ವನ್ನ ಕರ್ಸ್ಬಿಟ್ಟಿದೀರಾ? ನನ್ನನ್ನ ಸಿಕ್ಕಿಹಾಕಿಸೋ ಪ್ಲಾನಾ ನಿಮ್ದು? ಇನ್ಮುಂದೆ ಭಾಳಾ ಹುಶಾರಾಗಿರ್ಬೇಕ ನಾವುಃ-)
ಜಗಲಿ ಭಾಗವತರೇ, ಅವ್ವನ ಕೈಲಿ ಸಿಕ್ಕಿ ಹಾಕಿಕೊಳ್ಳುವಂತಹ ಕೆಲಸ ನೀವೇನು ಮಾಡಿದ್ದೀರಿ ಅಂತ ಗೊತ್ತಾಗಲಿಲ್ಲವಲ್ಲಾ? 🙂
ಕವನ ಓದಿದಿರಿ ಅಂತ ತಿಳಿದು ಸಂತೋಷವಾಯಿತು.
ಅಲ್ಲಾ ಕಣೇ, ಒಂಟಿ ಹುಡುಗರು…. ಒಬ್ಬೊಬ್ಬರೇ ಎಲ್ಲೆಲ್ಲೋ ಇರ್ತಾರೆ, ಇದ್ದಕ್ಕಿದ್ದ ಹಾಗೆ ಅವ್ವನ್ನ ಕರೆಸಿದ್ರೆ, ಸಿಕ್ಕಿಕೊಳ್ಳೋದಲ್ದೆ ಇನ್ನೇನಾಗುತ್ತೆ? ಅದನ್ನೂ ಕೇಳ್ಬೇಕಾ? ವಿವರಿಸ್ಬೇಕಾ? ಸಧ್ಯದಲ್ಲೇ ಅವರು ಕೇಳಿದ ಹುಡುಗಿಯ ಚಿತ್ರ ಕೊಡ್ತೀನೀಂತ ಹೇಳಿದ್ರಾಯ್ತಪ್ಪ. ನೊಂದ ಜೀವಕ್ಕೆ ತಂಪಾಗತ್ತೆ…. ಅಷ್ಟು ಮಾಡು ಮೊದ್ಲು.
“ಸಧ್ಯದಲ್ಲೇ ಅವರು ಕೇಳಿದ ಹುಡುಗಿಯ ಚಿತ್ರ ಕೊಡ್ತೀನೀಂತ ಹೇಳಿದ್ರಾಯ್ತಪ್ಪ..”
– ಯಾವುದದು ಭಾಗವತರ ಚಿತ್ತದಲ್ಲಿರುವ ಚಿತ್ರ? ಗೊತ್ತಾಗಲಿಲ್ಲ. ಭಟ್ಟರ ಮಗಳದೇ? 🙂
ಏನು ಭಾಗವತರೇ,
ಎರಡನೇ ಸಾರಿ ಖುರ್ಚಿಯಿಂದ ಬೀಳುತ್ತಿದ್ದೀರಲ್ಲಾ
(ಭಟ್ಟರ ಮಗಳಿಗೋ, ಶೆಟ್ಟರ ಮಗಳಿಗೋ…?)
ಅಲ್ಲಾ.. ದುರ್ಗದಲ್ಲಿ ಒಮ್ಮೆ ಬಿದ್ದಿದ್ದು ಸಾಕಾಗಲಿಲ್ಲವೇ…?
‘ಛೆ, ಛೆ, ಛೆ….ಮಹಿಳಾ ದಿನದಂದು ಮೂವರು ಮಹಿಳೆಯರು ಸೇರಿ “ಮುಗ್ಧ, ಬಡಪಾಯಿ, ಅಮಾಯಕ” ಯುವಕನೊಬ್ಬನನ್ನು ಈ ರೀತಿಯಾಗಿ ಛೇಡಿಸುವುದು ಸರಿಯೇ? ಃ-))
ಚಿತ್ತದಲ್ಲಿನ ಚಿತ್ರವನ್ನು ಬಣ್ಣಿಸುವ ಪರಿಯೆಂತು? ರೂಕ್ಷ ಶಬ್ದಪಂಜರದಲ್ಲಿ ಬಂಧಿಸಿಡಲಾಗದ ಚಿತ್ರವದು…
ತೊಂಡೆ ತುಟಿ,
ಸಂಪಿಗೆಯ ಮೂಗು,
ದಾಳಿಂಬೆ ಹಲ್ಲು,
ಸೇಬುಗೆನ್ನೆ,
ಮೃಗನಯಿನಿ,
ಬಿಲ್ಲಿನಂಥ ಹುಬ್ಬು,
ಚಂದ್ರವದನೆ,
ಕುಂದಕುಟ್ಮಲರದನೆ,
ಮುಗ್ಧಸ್ಮಿತೆ,
ಚಿತ್ತಚಂಚಲೆ,
ತನ್ವಂಗಿ,
ಸ್ಫುರದ್ರೂಪಿ,
ನಿರಾಭರಣ ಸುಂದರಿ,
ಅನಾಘ್ರಾಣಿತ ಕುಸುಮ…….
ಈಗ ಮಂಡೆ ಒಗ್ಗರಣೆಯಾಯ್ತುಃ-((
ಅಮ್ಮನ ಬಗ್ಗೆ ಬರೆಯಲ್ಪಟ್ಟ ಕನ್ನಡದ ಕವಿತೆಗಳಲ್ಲಿ ನನಗೆ ಅತ್ಯಂತ ಇಷ್ಟವಾದದ್ದು ಲಂಕೇಶರ ಈ ‘ಅವ್ವ’. ಉಳಿದಂತೆ, ಬಿ.ಆರ್.ಎಲ್. ಬರೆದ ‘ಅಮ್ಮಾ ನಿನ್ನ ಎದೆಯಾಳದಲ್ಲಿ’ ಮತ್ತು ಪ್ರತಿಭಾ ನಂದಕುಮಾರ್ ಅಮ್ಮನ ಕುರಿತು ಬರೆದ ಮೂರ್ನಾಲ್ಕು ಕವಿತೆಗಳು ಚೆನ್ನಾಗಿವೆ.
ಆವ್ವನ ಬಗ್ಗೆ ಏನು ಹೇಳೋದು?
ನನ್ನ ಪ್ರಕಾರ ತಾಯಿಯ ಬಗ್ಗೆ ಕನ್ನಡದಲಿ ಬಂದ ಅತ್ಯಂತ ಮನಕ್ಕೆ ತಾಕುವ ಕವನ..ಲಂಕೇಶ್‍ರ ಉತ್ಕೃಷ್ಟ ಕವನ
ಭಾಗವತರೇ, ಅವ್ವನ ಕೈಯಿಂದ ತಪ್ಪಿಸಿಕೊಂಡರೂ ಇಲ್ಲಿರುವ ಅಕ್ಕಂದಿರ ಕಣ್ಣು ತಪ್ಪಿಸುವುದು ಅಷ್ಟು ಸುಲಭವಲ್ಲ, ತಿಳಿದುಕೊಳ್ಳಿ! 🙂
ಸುಶೃತ,ಶಿವು, ನೀವು ತಿಳಿಸಿದಂತೆ ಈ ಕವನ “ಅಮ್ಮನ” ಬಗೆಗಿನ ಉತ್ತಮ ಕವಿತೆಗಳಲ್ಲಿ ಒಂದು. ಸಾಮಾನ್ಯವಾಗಿ ಅಮ್ಮನನ್ನು “ಕ್ಷಮಯಾ ಧರಿತ್ರಿ”ಯಾಗಿ – ಗಂಡ,ಮಕ್ಕಳ ತಪ್ಪುಗಳನ್ನು ಕ್ಷಮಿಸಿ, ನಗುತ್ತಿರುವ ದೈವ ಸ್ವರೂಪಿಯಾಗಿ ಚಿತ್ರಿಸುವುದೇ ಹೆಚ್ಚು.
ಈ ಕವಿತೆಯಲ್ಲಿ ಅಮ್ಮ ಕೂಡ ನಮ್ಮಂತೆಯೇ ನೋವು,ನಲಿವುಗಳಿರುವ ಮಾನವ ಜೀವಿ. ಆದ್ದರಿಂದ ಇದು ಇಷ್ಟವಾಗುತ್ತದೆ. “ಓ,ಮನಸೇ” ಪತ್ರಿಕೆಯ ಹಳೆಯ ಸಂಚಿಕೆಯೊಂದರಲ್ಲಿ ರವಿ ಬೆಳಗೆರೆ ಅಮ್ಮನ ಕುರಿತು ಬರೆದ ಒಂದು ಲೇಖನ ಕೂಡ ನನಗೆ ತುಂಬಾ ಇಷ್ಟವಾಗಿತ್ತು.