ಈ ಎರಡು ದಿನಗಳಲ್ಲಿ, ಪತ್ರಿಕೆ, ಟಿವಿ, ಶುಭಾಶಯ ಪತ್ರಗಳಲ್ಲಿ ಬಹಳ ಹೆಚ್ಚು ಸಲ ಕೇಳಿ ಬಂದಿರುವ ಪದಗಳೆಂದರೆ, ಸಿಹಿ-ಕಹಿ,ನೋವು-ನಲಿವು, ಬೇವು-ಬೆಲ್ಲ. ನಿಮ್ಮೆಲ್ಲರ ಮನೆಗಳಲ್ಲಿ ಯುಗಾದಿ ಹಬ್ಬ ಚೆನ್ನಾಗಿ ಆಚರಿಸಿದಿರಾ? ಸಿಹಿ ಅಡುಗೆ ಏನು ಮಾಡಿದ್ದಿರಿ? ನಮ್ಮನೆಯಲ್ಲಿ ಹೋಳಿಗೆ ಮಾಡಿದ್ದೆ. ಮಾಡಬೇಕೆನ್ನುವ ಯೋಚನೆ ಏನೂ ಇರಲಿಲ್ಲ. ಉದಯ ಟಿವಿಯಲ್ಲಿ ತಾರಾ ದಂಪತಿ ಶ್ರೀರಕ್ಷಾ ಮತ್ತು ಶಿವಕುಮಾರ್ ಬಂದಿದ್ದರು. ಶ್ರೀರಕ್ಷಾ ಹೋಳಿಗೆ ಮಾಡಿದರೆ, ಶಿವಕುಮಾರ್ ಪಲಾವ್ ಮಾಡಿದರು. ಶ್ರೀರಕ್ಷಾ ಹೋಳಿಗೆಯನ್ನು ಅತಿ ಸುಲಭವಾಗಿ ಮಾಡಿದ್ದನ್ನು ನೋಡಿ ನನಗೂ ಹೋಳಿಗೆ ಮಾಡಬೇಕೆನ್ನಿಸಿ ಮಾಡಿದ್ದು ಅಷ್ಟೆ. ನೋಡೋಕೆ ಅಷ್ಟೇನೂ ಚೆನ್ನಾಗಿರಲಿಲ್ಲ, ಆದರೆ ಸಿಹಿ ತಾನೇ? ತಿನ್ನಲು ಚೆನ್ನಾಗಿಯೇ ಇತ್ತು.:)ಭಾರತ ಕ್ರಿಕೆಟಿನಲ್ಲಿ ಗೆದ್ದ ಸಂತೋಷ ನಾವು ತಿಂದ ಹೋಳಿಗೆಯನ್ನು ಮತ್ತಷ್ಟು ಸವಿಯಾಗಿಸಿತು!:)
ಜ್ಯೋತಿ, ಹೋಳಿಗೆಗಳು ನಿನಗೆ ಕಳಿಸುವಷ್ಟು ಉತ್ತಮವಾಗಿ ಏನೂ ಇರಲಿಲ್ಲ. 🙂
ಭೂತಗಳು ಹೋಳಿಗೆ ಮಾಡಲ್ಲ ಎಂದು ತಿಳಿಯಿತು. ಆದರೆ ಭೂತವನ್ನು ಮನೆಗೆ ಬಾ ಎಂದು ಆಹ್ವಾನಿಸಲು ಸಾಧ್ಯವೇ? ಬೀದಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಬಂದು ಹೋಗು ಎಂದಂತೆ! 🙂
ಸಿಹಿಯಾದ ಊಟ, ಸೊಗಸಾದ ನೋಟದೊಂದಿಗೆ ಆರಂಭವಾಗಿರುವ ಸರ್ವಜಿತ್ ಸಂವತ್ಸರ ಮತ್ತಷ್ಟು ಸಿಹಿ ಸುದ್ದಿಗಳನ್ನು ವರ್ಷದುದ್ದಕ್ಕೂ ನೀಡಲಿ ಎಂದು ಹಾರೈಸುತ್ತೇನೆ. ಕಳೆದ ಸಂವತ್ಸರದ ಹೆಸರು “ವ್ಯಯ” ಎಂದಿದ್ದರೂ ಅದೂ ಕೂಡ ನಮಗೆ ಅನೇಕ ವೈಯುಕ್ತಿಕ ಲಾಭಗಳನ್ನುತಂದು ನೀಡಿದ ವರ್ಷವೇ! ನಿಮ್ಮ ಯುಗಾದಿ ಆಚರಣೆ ಹೇಗಿತ್ತು ಎಂದು ನೀವೂ ಒಂದೆರಡು ಸಾಲು ಬರೆದು ತಿಳಿಸಿ. ವರ್ಷತೊಡಕಿನಂದು ಬರೆದ ಸಾಲುಗಳು ಅಕ್ಷಯವಾಗಿ, ವರ್ಷ ಪೂರ್ತಿ ಏನಾದರೂ ಬರೆಯುತ್ತಲೇ ಇರುತ್ತೀರಿ (ಕಥೆ,ಲೇಖನ,ಕವನ) ಎಂಬ ಆಮಿಷವನ್ನೂ(ಲಂಚ) ನಿಮಗೆ ಒಡ್ಡುತ್ತಿದ್ದೇನೆ. 🙂
“ವರ್ಷತೊಡಕಿನಂದು ಬರೆದ ಸಾಲುಗಳು …” ಇದು “ವರ್ಷತೊಡಗು..” ಎಂದಾಗಬೇಕೇ? “ತೊಡಕು” ಅಂದರೆ ತೊಂದರೆ, ಕಷ್ಟ ಎಂದರ್ಥ. ಹಾಗಾಗಿ ವರ್ಷದ ಮೊದಲ ದಿನ “ವರ್ಷತೊಡಕು” ಹೇಗಾದೀತು? ಸ್ವಲ್ಪ ವಿವರಣೆ ಬೇಕು. ನಮ್ಮ ಕಡೆ ಈ ಪದ ಪ್ರಯೋಗ ಇಲ್ಲ.
“ಇದು “ವರ್ಷತೊಡಗು..” ಎಂದಾಗಬೇಕೇ? “
ಇರಬಹುದೇನೊ. ವರ್ಷ ತೊಡಗು ಇದ್ದಿದ್ದು,ಜನ ಸಾಮಾನ್ಯರ ಬಾಯಲ್ಲಿ ಸವೆದು “ತೊಡಕು” ಆಗಿದ್ದೀತು. ಈ ದಿನವನ್ನು “ಕರಿ ದಿನ” (ಕರಿದ ತಿಂಡಿ ಮಾಡುತ್ತಾರೆ :)) ಎಂದೂ ಕರೆಯಲಾಗುತ್ತದೆ. ಎಚ್.ಎಲ್.ನಾಗೇಗೌಡರ “ದೊಡ್ಡ ಮನೆ” ಕಾದಂಬರಿಯಲ್ಲಿ ಈ ಬಗ್ಗೆ ಓದಿದಂತಿದೆ. ವಿವರಗಳು ನೆನಪಾಗುತ್ತಿಲ್ಲ.
ತ್ರಿವೇಣಿಯವರೇ ,
ನಿಮಗೂ ಕುಟುಂಬದವರಿಗೂ ಯುಗಾದಿ ಶುಭಾಶಯ.
ಶ್ರೀತ್ರೀ ಅವರೆ,
ನಾನು ಯುಗಾದಿಗೆ ಬೇವು ಬೆಲ್ಲ ಖರೀದಿಗೆಂದು ಸಂತೆಗೆ ಹೋದಾಗ ಬೆಲ್ಲ ಎಲ್ಲ ಮುಗಿದಿತ್ತು. ಬರೇ ಬೇವು ಉಳಿದಿತ್ತು. ಹಾಗಾಗಿ ಬೇವಿನ ಚಟ್ನಿ, ಬೇವಿನ ಹೋಳಿಗೆ ಮತ್ತು ಬೇವಿನ ಉಂಡೆ….. ಇತ್ಯಾದಿಗಳನ್ನೆಲ್ಲಾ…
ಮಾಡಬೇಕೆಂದುಕೊಂಡೆವು…. 🙂 ಯೋಚನೆ ಮಾಡುವಷ್ಟರಲ್ಲಿ ಯುಗದ ಆದಿ ಮುಗಿದಿತ್ತು.
ತಡವಾಗಿ ನಿಮಗೆ, ಓದುಗರಿಗೆ ಯುಗಾದಿ ಶುಭಾಶಯಗಳು
ತ್ರಿವೇಣಿಯವರೇ,
ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮತ್ತೆ ನಿಮ್ಮ ಮನೆಯಲ್ಲಿ ಹೋಳಿಗೆಯೇ ! ಈ ಸಲ ನಮ್ಮ ಕಡೆ ಹೋಳಿಗೆ ರವಾನಿಸಬೇಕಾಗಿ ಸವಿನಯ ಪ್ರಾರ್ಥನೆ 🙂
ಅನ್ವೇಷಿಗಳೇ, ಸಂತೆಯಲ್ಲಿದ್ದ ಎಲ್ಲಾ ಬೇವು ನೀವೇ ಖರೀದಿಸಿ, ಬೇವಿನ ಚಟ್ನಿ, ಬೇವಿನ ಹೋಳಿಗೆ ಮತ್ತು ಬೇವಿನ ಉಂಡೆ ಮುಂತಾದ ಹೊಸರುಚಿಗಳನ್ನು ತಯಾರಿಸಿ ತಿಂದಿದ್ದರಿಂದ, ನಮಗೆ ಈ ಸಲ ಅಲ್ಲಿಂದ ಬರಬೇಕಾಗಿದ್ದ ಬೇವು ಬರಲಿಲ್ಲ. ಹಾಗಾಗಿ ನಮಗೆ ಈ ಬಾರಿ ಬೇವು (ಬೆ)ಇಲ್ಲ !
ಶಿವು, ಮುಂದಿನ ಸಲ (ಶುಕ್ರವಾರ) ಭಾರತ ಗೆದ್ದರೆ…, ಅಲ್ಲಿಂದ ಮುಂದೆ ಹೋದರೆ… ಅಲ್ಲೂ ಗೆದ್ದು ವಿಶ್ವಕಪ್ ಗೆದ್ದರೆ …ನಮ್ಮನೆಯಲ್ಲಿ ಹೋಳಿಗೆ ಗ್ಯಾರಂಟಿ. ಆಗ ನಿಮಗೂ ಸಿಕ್ಕರೆ… ಸಿಕ್ಕಬಹುದು 🙂
ಶ್ರೀತ್ರೀ ಉವಾಚ: “ಆಗ ನಿಮಗೂ ಸಿಕ್ಕರೆ… ಸಿಕ್ಕಬಹುದು ”
ನನ್ನ ಮಾತು: “ಆಗ ನಿಮಗೂ ‘ಸಕ್ಕರೆ’… ಸಿಗಬಹುದು”