ಸಾಹಿತ್ಯ – ಚೆನ್ನವೀರ ಕಣವಿ
ಸಂಗೀತ – ಸಿ.ಅಶ್ವಥ್
ಗಾಯಕ – ಜಿ.ವಿ.ಆತ್ರಿ


ಹಾಡು ಕೇಳಿ

ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ
ಏಳು ಮಂಗಳದಾಯಿ, ಉಷೆಯ ಗೆಳತಿ!
ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ,
ಏಳು ಬಣ್ಣದ ಬಿಲ್ಲೇ, ಮಾಟಗಾತಿ!

ಏಳೆನ್ನ ಕಲ್ಯಾಣಿ, ಏಳು ಭಾವದ ರಾಣಿ
ನೋಡು ಮೂಡಲದಲ್ಲಿ ರಾಗ ಮಿಲನ
ಮರ ತುದಿಯ ತೋರಣದಿ ಹೊಂಬಿಸಿಲ ಬಾವುಟವು
ಗಾಳಿ ಹೊಟ್ಟೆಯಲದರ ಚಲನ ವಲನ

ಮಂಜಿನರಳೆಯ ಹಿಂಜಿ ತೋರುತಿಹ ನೇಸರನು
ಹಿಮಮಣಿಯ ದರ್ಪಣದಿ ತನ್ನ ಕಂಡು
ಮಿರುಗಿ ಹೊಗರೇರಿಹನು, ಏಳೆನ್ನ ಹೊಂಗೆಳತಿ
ಮೊಗದ ಜವನಿಕೆ ತೆರೆದು ನಗೆಯ ನೀಡು

ಲಲಿತ ಶೃಂಗಾರ ರಸಪೂರ್ಣೇ ಚಂದಿರ ವರ್ಣೆ
ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
ಒಂದು ಚಣ ಜಗವನ್ನೇ ಮರೆತುಬಿಡುವೆ

15 thoughts on “ಉಷೆಯ ಗೆಳತಿ – ಚೆನ್ನವೀರ ಕಣವಿ”

 1. “ಏಳು ಅಂದರೆ ಏಳು ಗಂಟೆಯಾಯಿತು,ಈಗಲಾದರೂ ಏಳು” ಎಂದು ತಮ್ಮ ಮಡದಿಯಲ್ಲಿ ಗೋಗರೆಯುವ ಕಣವಿಯವರಿಗೆ ನನ್ನ ಸಹಾನುಭೂತಿಗಳು.

 2. ಸುನಾಥರೇ, ಗೋಗರೆಯುವುದಲ್ಲ. ಹೆಂಡತಿಯನ್ನು ಇಷ್ಟು ಪ್ರೀತಿಯಿಂದ ಸುಪ್ರಭಾತ ಹಾಡಿ ಎಬ್ಬಿಸುವುದನ್ನು ಕಣವಿಯವರಿಂದಲೇ ಕಲಿಯಬೇಕು. 🙂

  ಈ ಕವನದ ಹೆಸರೇನೋ ತಿಳಿದಿಲ್ಲ. ಗೊತ್ತಿದ್ದರೆ ತಿಳಿಸಿ. “ಶುಭೋದಯ”, “ಸುಪ್ರಭಾತ” ..ಎಂದಿರಬಹುದೇ?

 3. Hi, one of my friends gave me the link for this site.I am so happy to see the Kannada words here!:)

  I did try to type in Kannada,found that it’s a little tricky! Tried to type Gelati in kannada and it kept coming as Geelati!:D
  I am a finicky about spellings,so I typed in English,hope that’s okay!:)) Well…I will be back to read all these!:))

 4. ಇದು ಕಣವಿಯವರ ವಿವಾಹಪೂರ್ವ ಹಾಡು ಇರಬಹುದೇ? ಯಾಕೆಂದರೆ ಅವರು ಹೇಳಿದ್ದು ಏಳೆನ್ನ ಮನದನ್ನೆ, ಏಳು ಮುದ್ದಿನ “ಕನ್ನೆ” ಎಂದಲ್ಲವೇ?

  ಈ ಬಗ್ಗೆ ತನಿಖೆ ಕೈಬಿಡಲಾಗಿದೆ.

 5. ಆಶಾ, ತುಳಸಿವನಕ್ಕೆ ನಿಮಗೆ ಸ್ವಾಗತ. ನಿಮ್ಮ ಬ್ಲಾಗಿನಲ್ಲಿರುವ ಅಡುಗೆ ರೆಸಿಪಿ ನೋಡಿ ಬಾಯಲ್ಲಿ ನೀರೂರುತ್ತಿದೆ. ಅದರಲ್ಲೂ ಪುಟ್ಟ ಪುಟ್ಟ ಕೋಡುಬಳೆಗಳು !

  ಇಲ್ಲಿರುವ ಕೀಬೋರ್ಡ ಹೊಸದರಲ್ಲಿ ಸ್ವಲ್ಪ ಕಷ್ಟ. ನನಗೆ ಈಗ ಅಭ್ಯಾಸವಾಯಿತು. ನೀವು “ಗೇಳತಿ” ಎಂದು ಬರೆಯಲು ಪ್ರಯತ್ನಿಸಿ, ಅದು “ಗೆಳತಿ” ಆಗುತ್ತದೆ . ಅದೇ ತರ ‘ಒ’ ಮತ್ತು ‘ಓ’ ಗೆ ಕೂಡ ತಿರುಮಂತ್ರ ಹಾಕಬೇಕು. 🙂

 6. ಅನ್ವೇಷಿಗಳೇ ,ನಿಮ್ಮ ಹೇಳಿಕೆ ವಿರೋಧಾಭಾಸದಿಂದ ಕೂಡಿದೆ. ಇದು ವಿವಾಹಪೂರ್ವ ಹಾಡಾದರೆ, ಅವರು ಯಾವಾಗ ಎದ್ದರೆ ಇವರಿಗೇನಂತೆ?
  ಏನೇ ಆಗಲಿ, ನಿಮ್ಮ ಅಳಿದುಳಿದ ಕೈಕಾಲುಗಳನ್ನು ರಕ್ಷಿಸಲು ನಾನೂ ಕೂಡ ತನಿಖೆ ಮುಂದುವರೆಸಲು ಪ್ರೋತ್ಸಾಹಿಸುತ್ತಿಲ್ಲ !

 7. ತುಂಬಾ ಚೆನ್ನಾಗಿದೆ ಹಾಡು. ಎಲ್ಲಿಂದ ತರ್ತೀರೋ ಇಂತಾ ಒಳ್ಳೇ ಪದ್ಯಗಳನ್ನು!!

  ಹೆಂಡತಿಯನ್ನು ಗಂಡ ಎಬ್ಬಿಸುವ ಕಲ್ಪನೆ.. feels very good 🙂

 8. when did this song come out?

  this tune is from an old hindi bhajan “sooraj ki garmi se” -Music Jayadev

 9. ಸಮನ್ವಿತಾ , ನಿಮ್ಮ observationಗೊಂದು ಟೋಪಿ! 🙂

  ಏಳೆನ್ನ ಮನದನ್ನೆ ಹಾಡಿರುವ ಅಲ್ಬಂ “ಭಾವ ಬಿಂದು” ಯಾವಾಗ ಬಂದಿತೋ ತಿಳಿದಿಲ್ಲ. ಆದರೆ “ಪರಿಣಯ್” (೧೯೭೪) ಚಿತ್ರದ ಸೂರಜ್ ಕಿ…ಗಿಂತ ಮೊದಲಂತೂ ಬಂದಿರಲಾರದು.

  ನಾನು ಎರಡೂ ಹಾಡುಗಳನ್ನು ಕೇಳಿದಾಗ, ಪ್ರಾರಂಭದಲ್ಲಿ ಮಾತ್ರ ಹೋಲಿಕೆ ಕಾಣಿಸಿತು. ಮುಂದೆ ಎರಡೂ ಪ್ರತ್ಯೇಕವಾಗಿವೆ ಅನಿಸಿತು. ಎರಡೂ ಹಾಡುಗಳು ಒಂದೇ ರಾಗವನ್ನು ಆಧರಿಸಿರಬಹುದೇನೋ. ನನಗೆ ಸಂಗೀತ ತಿಳಿಯದು. ಅಶ್ವಥ್ ಸಂದರ್ಶನಗಳಲ್ಲಿ ತಮ್ಮ ಮೇಲೆ ಹಿಂದಿ ಸಂಗೀತ ಪ್ರಭಾವ ಬೀರಿರುವುದನ್ನು ಹೇಳಿಕೊಂಡಿದ್ದಾರೆ. ಹಾಗಾಗಿ ಅದೇ ಹಾಡಿನ ರಾಗವನ್ನು ಬಳಸಿರುವ ಸಾಧ್ಯತೆಯೂ ಇರಬಹುದು. ಒಟ್ಟಿನಲ್ಲಿ ಇದು ನನಗೆ ತಿಳಿಯದ ವಿಚಾರ.

  ವಿಚಾರ ವಿನಿಮಯಕ್ಕೆ ಧನ್ಯವಾದಗಳು.

 10. “ಹೆಂಡತಿಯನ್ನು ಗಂಡ ಎಬ್ಬಿಸುವ ಕಲ್ಪನೆ.. feels very good “

  – ಶ್ರೀಲತಾ, ತುಂಬಾ ಕನಸು ಕಾಣಬೇಡಿ. ನಿರಾಸೆ ಆದೀತು. 🙂

 11. ತ್ರಿವೇಣಿಯವರೆ,
  ಈ ಕವನದ ಶೀರ್ಷಿಕೆಃ “ಉಷೆಯ ಗೆಳತಿ”; ಕವನ ಸಂಕಲನಃ “ಹೊಂಬೆಳಕು”.
  ಕವನವು ತಮ್ಮ ಮಡದಿಗೇ ಉದ್ದೇಶಿಸಿ ಬರದಿದ್ದು ಎಂದು ಕಣವಿಯವರು ಸ್ಪಷ್ಟಪಡಿಸಿದ್ದಾರೆ. ಅಸತ್ಯ ಅನ್ವೇಷಿಯವರಿಗೆ ತನಿಖೆಗೆ ಆಸ್ಪದವಿಲ್ಲ.

 12. ಸುನಾಥರೇ, ಈ ಕವನದ ಶೀರ್ಷಿಕೆಯ ಬಗ್ಗೆ ಕುತೂಹಲವಿತ್ತು. ತಿಳಿಸಿದ್ದಕ್ಕೆ ಧನ್ಯವಾದಗಳು. ಕಣವಿಯವರು “ಉಷೆ” ಎಂದು ಕರೆಯದೆ “ಉಷೆಯ ಗೆಳತಿ” ಎಂದಿರುವುದು ಅರ್ಥಪೂರ್ಣವಾಗಿದೆ ಅಲ್ಲವೇ?

 13. ತ್ರಿವೇಣಿಯವರೆ, ನೀವು ಹೇಳುವದು ನಿಜ. ಕಣವಿಯವರ ಮನಸ್ಸು ತಮ್ಮ ಕೆಳದಿಯ ಬಗೆಗೆ ಎಷ್ಟು ಎತ್ತರದ ಮಟ್ಟದಲ್ಲಿ ಆಲೋಚಿಸುತ್ತದೆ ಹಾಗು ಕೆಳದಿಯಿಂದ ಎಂತಹ spiritual ಪ್ರೇರಣೆ ಪಡೆಯುತ್ತದೆ, ಅಲ್ಲವೆ?

 14. ಸುನಾಥರೇ, ಕಣವಿಯವರು ತಮ್ಮ ಮಗಳನ್ನು ಕುರಿತು ಬರೆದ “ರಂಜನಾ” ಎಂಬ ಕವಿತೆ ನನಗೆ ಪಠ್ಯವಾಗಿತ್ತು. ಅದರಲ್ಲಿ ರಂಜನಾ ಅಲ್ಲದೆ, ಅವರ ಇತರ ಮಕ್ಕಳ ಹೆಸರು ಬರುತ್ತದೆ.
  “ಆನಂದ ಬಂದರೆ ಇವಳಾಡಿಸುವನು, ಚಂದ್ರ ಬಂದರೆ ಕಾಡಿಸುವನು…”
  “ಮೂರು ಸಲ ಸಂಧಾನ, ನೂರು ಸಲ ಯುದ್ಧ
  ಯಾವ ದೇವರು ಬಂದು ಬಿಡಿಸುವನು?” –

  ಈ ಸಾಲುಗಳು ಮಾತ್ರ ನೆನಪಿವೆ.

 15. ಹೆಂಡತಿಯನ್ನ ಏಬ್ಬಿಸಲಿಕ್ಕೆ ಇಷ್ಟೆಲ್ಲ ಕಷ್ಟಪಡಬೇಕಾ? ನಾವು ‘ಕವಿತೆ ಹೊಸೆಯುವುದು ಹೇಗೆ?’ ಅಂತ ಕಮ್ಮಟವನ್ನು attend ಮಾಡೋದು ವಾಸಿಃ-))

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.