ಕವಿ – ಎಚ್.ಎಸ್.ವೆಂಕಟೇಶ್ ಮೂರ್ತಿ
ಸಂಗೀತ – ಸಿ. ಅಶ್ವಥ್
ಗಾಯಕಿ – ರತ್ನಮಾಲಾ ಪ್ರಕಾಶ್
ಆಲ್ಬಂ – “ತೂಗು ಮಂಚ”
ತೂಗು ಮಂಚದಲ್ಲಿ ಕೂತು
ಮೇಘಶಾಮ ರಾಧೆಗಾತು
ಆಡುತಿಹನು ಏನೋ ಮಾತು
ರಾಧೆ ನಾಚುತಿದ್ದಳು
ಸೆರಗ ಬೆರಳಿನಲ್ಲಿ ಸುತ್ತಿ
ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ
ಕಣ್ಣ ಮುಚ್ಚುತ್ತಿದ್ದಳು
ಮುಖವ ಎದೆಯ ನಡುವೆ ಒತ್ತಿ
ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ
ಕಮ್ಮನುಸಿರ ಬಿಟ್ಟಳು
ಸೆರಗು ಜಾರುತಿರಲು ಕೆಳಗೆ
ಬಾನು ಭೂಮಿ ಮೇಲು ಕೆಳಗೆ
ಅದುರುತಿರುವ ಅಧರಗಳಿಗೆ
ಬೆಳ್ಳಿ ಹಾಲ ಬಟ್ಟಲು
ಚಾಚುತಿರಲು ಅರಳಿದರಳು
ಯಮುನೆಯೆಡೆಗೆ ಚಂದ್ರ ಬರಲು
ಮೇಲೆ ತಾರೆಗಣ್ಣ ಹೊರಳು
ಹಾಯಿ ದೋಣಿ ತೇಲಿತು
ತನಗೆ ತಾನೇ ತೂಗುಮಂಚ
ತಾಗುತ್ತಿತ್ತು ದೂರದಂಚ
ತೆಗೆಯೊ ಗರುಡ ನಿನ್ನ ಚೊಂಚ
ಹಾಲು ಗಡಿಗೆ ಹೇಳಿತು
***
ಇದೆಲ್ಲೋ ದ್ವಾಪರಯುಗದ ರಾಧೆಯ ಬಗೆಗೆ ಬರೆದ ಕವಿತೆ. ಕಲಿಯುಗದ ರಾಧೆ ನಾಚಬಹುದೆ?
ಕವಿ ಎಚ್.ಎಸ್.ವಿ.ಯವರಿಗೆ ದ್ವಾಪರದ ರಾಧೆಯೇ ಗೊತ್ತು; ಕಲಿಯುಗದ ಕಾಲ-ಕನ್ನಿಕೆಯರ ಪರಿಚಯ ಇದ್ದಂತಿಲ್ಲ. ಸಜ್ಜನರಲ್ಲಿ ಸಜ್ಜನ ಆತ.
ಆಹಾ ! ಎಂತಹ ಸ-ರಸಮಯ ಲೋಕವದು ರಾಧಾ-ಮಾಧವರದು..
ಬಹಳ ಚೆನ್ನಾಗಿದೆ..
ವಂದನೆಗಳು ಇಂತಹ ಸುಂದರ ಕವನ ಹಾಕಿದ್ದಕ್ಕೆ
ಎಚ್. ಎಸ್. ವಿ. ಯವರ “ಹವಳ ಕೆಂಪಿನ ಸಂಜೆ” ಹಾಡಿನ ಕುರಿತೂ ಬರೆಯಿರಿ ಮೇಡಮ್..
ರಂಜಿತ್, ‘ಹವಳ ಕೆಂಪಿನ ಸಂಜೆ’ ನನಗೂ ಇಷ್ಟ. “ಹೊತ್ತು ಮುಳುಗುವ ಸಮಯ… ಸೂರ್ಯ ದಹಿಸುವ ಹೃದಯ” … ಹೃದಯವನ್ನು ಮಧುರ ಯಾತನೆಗೊಳಪಡಿಸುವ ಸುಂದರ ಕವಿತೆ.
ತುಳಸಿವನದ ಮುಂದಿನ ಕವಿತೆ ಅದೇ. 🙂
ನನ್ನ ಮಾತನ್ನು ಮನ್ನಿಸಿದ್ದಕ್ಕೆ ಥ್ಯಾಂಕ್ಸ್.. ಸಿ. ಎಸ್. ಈ ಹಾಡನ್ನು ಹಾಡಿದ ಬಗೆಯೂ ಒಂದು ಅದ್ಭುತ.. ಪಲ್ಲವಿ, ಚರಣಗಳನ್ನು ಮಿಕ್ಸ್ ಮಾಡಿದ ಕಂಪೋಸಿಶನ್ ಕೂಡ.
ಹಾಗೇ ಸಾಲುಗಳಲ್ಲಿ “ನಿನ್ನ ಕೊರಳಿನ ಪದಕ, ನನ್ನ ಹೃದಯ!” ಸಾಲನ್ನು ನೋಡಿ, ಎಚ್ಚೆಸ್ವಿಯವರ ಪೂರ್ಣ ಟ್ಯಾಲೆಂಟ್ ಇಲ್ಲೇ ಬಸಿದಿರುವಂತಿದೆ.
ನಿಮ್ಮ ಬರಹಕ್ಕೆ ಕಾಯ್ತಿದೀನಿ.
ರಂಜಿತ್, ನಾನು ಈವರೆಗೂ ಯಾವುದೇ ಕವಿತೆಯ ಬಗೆಗೂ ಬರಹ ಎಂದೇನೂ ಬರೆದಿಲ್ಲ. ನನ್ನ ಮೆಚ್ಚಿನ ಕವಿತೆಗಳನ್ನ ಇಲ್ಲಿ ಪ್ರಕಟಿಸುತ್ತೇನೆ. ಸುನಾಥ್ ಕಾಕಾ, ಜ್ಯೋತಿ ಮತ್ತಿತರ ಸಾಹಿತ್ಯಾಸಕ್ತರು ಕವಿತೆಯ ಕುರಿತು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಈಗ ನೀವೂ ನಮ್ಮೊಡನೆ ಸೇರಿಕೊಳ್ಳಿ.
ಅತ್ಯದ್ಭುತ ರಚನೆ, ಓದುಗನ ಮನಸಿನಲ್ಲಿ ರಾಧೆ ಶ್ಯಾಮರ ರಾಸಲೀಲೆ ಕಣ್ಣಿಗೆ ಕಟ್ಟುವಂತಿದೆ, ಏನು ಪರಿ ಕಲ್ಪನೆ, ಏನು ಪದ ಬಳಕೆ, ಅನಂತ ಧನ್ಯವಾದಗಳು
ಹೌದು, ಕವಿತೆ ಓದಿದಾಗ ಆಗುವ ಸಂತೋಷ ಅಪಾರ. ಅದಕ್ಕೆ ನಿಮ್ಮಂತೆ ಓದಿ ಸವಿಯುವ ಸುಂದರ ಮನಸ್ಸಿರಬೇಕು! 🙂 ತುಳಸಿವನಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು.