ಕನ್ನಡ ಆಡಿಯೋ ಸಮುದಾಯದಲ್ಲಿ ಹೀಗೊಂದು ಆಟವಿದೆ. ಅದು ಕತೆ ಬರೆಯುವ ಆಟ. ಕತೆಯನ್ನು ಸಾಲಿನಿಂದ ಸಾಲಿಗೆ ಮುಂದುವರೆಸುವ ಆಟ. ಒಂದೇ ಕತೆಯನ್ನು ಹೆಣೆಯುವ ಹಲವಾರು ಕತೆಗಾರರು.  ನನಗೆ ತುಂಬಾ ಇಷ್ಟದ ಆಟವಿದು.  ಅದೇ ರೀತಿ ನಾವೂ ಇಲ್ಲೊಂದು ಕತೆ ಬರೆಯೋಣವೇ? ನೀವು ಕಾಮೆಂಟುಗಳ ರೂಪದಲ್ಲಿ ಮುಂದುವರೆಸುವ ಭಾಗವನ್ನು ನಾನು ಕತೆಗೆ ಜೋಡಿಸುತ್ತಾ ಹೋಗುತ್ತೇನೆ.

ಕತೆ ಸುಗಮವಾಗಿ ಸಾಗಲು ಕೆಲವು ನಿಯಮಗಳನ್ನು ತಿಳಿಸುತ್ತೇನೆ. ಆದರೆ ಯಾವುದೂ ಕಡ್ಡಾಯವಲ್ಲ!

* ಕತೆಯ ಗಾತ್ರ – ೪-೫ ಪುಟಗಳು(ಅಗತ್ಯವಿದ್ದರೆ ಇನ್ನೂ ಹೆಚ್ಚಾಗಬಹುದು)

* ಕತೆ ಮುಂದುವರೆಸಿಕೊಂಡು ಹೋಗುವವರು ಕನಿಷ್ಟ ೩-೪ ವಾಕ್ಯ ಬರೆದರೆ ಒಳ್ಳೆಯದು.

* ಕತೆಯ ಪಾತ್ರಗಳು ಗರಿಷ್ಟ ೪ (ಬೇಕಿದ್ದರೆ ಇನ್ನೊಂದು)

* ಕತೆ ಕರ್ನಾಟಕ/ ಭಾರತದಲ್ಲೇ ನಡೆಯಬೇಕು. (ಕತೆಗೆ ಕಾಲಿಲ್ಲದಿದ್ದರೂ)

* ಅಲ್ಲಲ್ಲಿ,  ಸಾಂದರ್ಭಿಕವಾಗಿ ಇಂಗ್ಲಿಷ್ ಓಕೆ. ಮಾರುದ್ದದ ಆಂಗ್ಲ ಸಂಭಾಷಣೆಗಳು  NO NO

ಜ್ಯೋತಿ, ಮಾಲಾ, ಸುಶೃತ, ಭಾಗವತರು, ಶ್ರೀನಿಧಿ, ಕಾಳಣ್ಣ, ಪ್ರದೀಪ್,  ಮನಸ್ವಿನಿ, ಸಿಂಧು, ಪೂರ್ಣಿಮಾ, ಜಾಗೃತಿ, ಶಿವು, ಮೀರಾ, ತವಿಶ್ರೀ, ಸುನಾಥ್, ಶ್ರೀ …ಎಲ್ಲಾ ಬನ್ನಿ. ಅನ್ವೇಶಿ, ಜೋಶಿಯವರೇ, ಕತೆಗೆ ಕಾಮಿಡಿ ಟಚ್ ಕೊಡಲು ನೀವೂ ಬೇಕು. 🙂

ಇಲ್ಲಿ ಹೆಸರಿರುವರು ಮಾತ್ರ ಬರೆಯಬೇಕೆಂದು ಯಾರೂ ಅಪಾ(ರ)ರ್ಥ ಮಾಡಿಕೊಳ್ಳಬೇಡಿ. ಈ ಕಥಾ ಮಂದಿರ ನಿರ್ಮಾಣಕ್ಕೆ ಎಷ್ಟು ಕರಸೇವಕರಿದ್ದರೂ ನಮಗೆ ಬೇಕು.:)

ನೀವು ಕತೆ ಪೋಣಿಸಿದಂತೆ ನಿಮ್ಮ ಹೆಸರು ಇಲ್ಲಿ ಸೇರ್ಪಡೆಯಾಗುತ್ತಾ ಹೋಗುತ್ತದೆ.

ಮೊದಲು ಕೂಸು ಹುಟ್ಟಲಿ, ಆಮೇಲೆ ಕುಲಾವಿ ತರೋಣ. ನಾಮಕರಣವನ್ನೂ ಮಾಡೋಣ..

ಸರಿ, ನಾನೊಂದು ಕತೆ ಪ್ರಾರಂಭಿಸುತ್ತೇನೆ. ಇಲ್ಲಲ್ಲ. ಬೇರೊಂದು ಹೊಸ ಪೋಸ್ಟಿನಲ್ಲಿ. ನೀವೇನಾದರೂ ಹೇಳುವುದಿದ್ದರೆ ಇಲ್ಲಿ ಹೇಳಿ.
 

38 thoughts on “ಕತೆ ಕಟ್ಟೋಣ ಬನ್ನಿ..”

 1. ಸರಿ, ಶುರುಮಾಡು ಕಥೆ ಕಟ್ಟಲು. ನನ್ನಿಂದಾದಷ್ಟು ಅಳಿಲು ಸೇವೆ ಮಾಡ್ತೇನೆ. ಶ್ರೀರಾಮನ ಹಾಗೆ ನಮ್ಮ ಬೆನ್ನ ಮೇಲೆ ಗೆರೆ ಎಳೆಯುತ್ತೀಯಾ ನೋಡು….

 2. ಕಾಮೆಂಟ್‍ ಹಾಕಬಯಸುವವರ ಗಮನಕ್ಕೆ; ಅಲ್ಲಿ (ಕೆಳಗೆ)ರುವ ಪ್ರಶ್ನೆಗೆ ಉತ್ತರಿಸದಿದ್ದರೆ, ನಿಮ್ಮ ಕಾಮೆಂಟ್‍ post ಆಗುವುದಿಲ್ಲ. ಭಾಗವತರೇ, ನಿಮಗೂ ಇದೇ ಉತ್ತರ. ಮತ್ತೊಮ್ಮೆ ಪ್ರಯತ್ನಿಸಿ ತಿಳಿಸಿ.

 3. ಭಾಗವತರೇ, ಚೆನ್ನಾಗಿದೆ. ಕತೆ ಕರ್ನಾಟಕದಲ್ಲೆಲ್ಲಾ ನಡೆದಾಡುತ್ತಿದೆ. 🙂

 4. “ಬಸ್ಸಿಳಿದಾಗಕ್ಷಣ ಉಧ್ಭವಿಸಿದ್ದ ಕಗ್ಗತ್ತಲೆಯಲ್ಲಿ ಮೊದಲು ಕಂಡ ಬೆಳಕೆಂದರೆ ಅದು ಅವಳ ಕಣ್ಣಿನದ್ದು. ‘ಸುನಯನ.. ಹೌದೌದು..!”, ಹರಿವ ಮಳೆನೀರಲೆಗಳ ನಡುವೆ ಹೆಜ್ಜೆಯಿಡುತ್ತಿದ್ದ ಅವಳ ಪಾದ ಈಜುವ ಬಿಳಿಮೀನಿನಂತೆ “….

        ಕ್ಯಾ ಬಾತ್ ಹೈ! (ಪ್ರವೀಣ್ ಗೋಡ್ಕಿಂಡಿ ಹೇಳೋ ಥರ 🙂 )
  ಸುಶೃತ, ಸುನಯನಳ ಹೆಸರಿಗೆ ನ್ಯಾಯ ಒದಗಿಸಿದ್ದೀರಿ.

  ಕತೆಯ ರೈಲು ನಾನಂದುಕೊಂಡಿದ್ದಕ್ಕಿಂತ ವೇಗವಾಗಿ ಹೋಗುತ್ತಿದೆ. ಹೀಗೇ ಸಾಗಲಿ… ನಮ್ಮೆಲ್ಲರ ಕಲ್ಪನೆಯ ಪಲ್ಲಕ್ಕಿಯ ಮೇಲೆ ಕಥೆಯ ಪಯಣ……

 5. ೧೯೫೭ನೆಯ ಇಸ್ವಿಯಲ್ಲಿ ಧಾರವಾಡದಲ್ಲಿರುವ ಮನೊಹರ ಗ್ರಂಥಮಾಲೆಯವರು ಒಂದು ಸಾಹಿತ್ಯ ಪ್ರಯೋಗ ಮಾಡಿದರು. ೧೧ ಜನ ಲೇಖಕರು ಒಟ್ಟಾಗಿ ಒಂದು ಕಾದಂಬರಿ ಬರೆದರು. ಈ ಕಾದಂಬರಿಗೆ ಪೂರ್ವಕಲ್ಪನೆ ಇರಲಿಲ್ಲ. ಒಬ್ಬ ಸಾಹಿತಿ ಒಂದು ಅಧ್ಯಾಯ ಬರೆದು ಎರಡನೆಯ ಲೇಖಕನಿಗೆ ಕೊಡುತ್ತಾನೆ; ಆತ ಮುಂದುವರಿಸಿ ಮೂರನೆಯವನಿಗೆ ಹಸ್ತಾಂತರಿಸುತ್ತಾನೆ. ಈ ರೀತಿಯಾಗಿ ೧೧ ಅಧ್ಯಾಯಗಳಲ್ಲಿ ಪೂರ್ಣಗೊಂಡ ಈ ಕಾದಂಬರಿಯ ಹೆಸರುಃ “ಖೋ”. ಬಹುಶಃ ಕನ್ನಡದಲ್ಲಿ ಇದು ಈ ರೀತಿಯ ಮೊದಲ ಪ್ರಯೋಗವಿರಬೇಕು.

 6. ಸುನಾಥರೇ,

  ಈ ವಿಷಯ ಗೊತ್ತಿರಲಿಲ್ಲ! ಬಹಳ ಅಪರೂಪದ ಮಾಹಿತಿ ಹೊರಗೆಡವಿದ್ದೀರಿ. ಧನ್ಯವಾದಗಳು.

  “ಖೋ” ಕಾದಂಬರಿ ಆಟ ಆಡಿದ ಹನ್ನೊಂದು ಮಂದಿ ಆಟಗಾರರು ಯಾರು? ೧೯೫೭ನೆಯ ವರ್ಷ ಅಂದರೆ ನೆನಪಾಗುವ ಕೆಲವು ಹೆಸರುಗಳು…. ಶಿವರಾಮ ಕಾರಂತ, ಚದುರಂಗ, ಬಸವರಾಜ ಕಟ್ಟೀಮನಿ, ಕೃಷ್ಣಮೂರ್ತಿ ಪುರಾಣಿಕ, ಗೀತಾ ಕುಲಕರ್ಣಿ, ಇನಾಂದಾರ್, ಅನಕೃ, ತರಾಸು…?

 7. ತ್ರಿವೇಣಿಯವರೆ,
  “ಖೋ” ಕಾದಂಬರಿಯ ಹನ್ನೊಂದು ಅಧ್ಯಾಯಗಳನ್ನು ರಚಿಸಿದ ಹನ್ನೊಂದು ಜನ ಲೇಖಕರು ಅನುಕ್ರಮವಾಗಿ ಈ ರೀತಿಯಾಗಿದ್ದಾರೆಃ
  (೧) ಎನ್ಕೆ ಕುಲಕರ್ಣಿ
  (೨) ಶಂಕರ ಮೊಕಾಶಿ ಪುಣೇಕರ
  (೩) ವ್ಹಿ. ಎಂ. ಇನಾಮದಾರ
  (೪) ಕೀರ್ತಿನಾಥ ಕುರ್ತಕೋಟಿ
  (೫) ಎಂ.ಕೆ.ವರಗಿರಿ
  (೬) ದ.ಬಾ.ಕುಲಕರ್ಣಿ
  (೭) ಶಾಂತಿನಾಥ ದೇಸಾಯಿ
  (೮) ಶಂಕರ ಮೊಕಾಶಿ ಪುಣೇಕರ
  (೯) ಏ.ಕೆ.ರಾಮಾನುಜನ್
  (೧೦) ವಿ.ಕೃ.ಗೋಕಾಕ
  (೧೧) ದ.ರಾ.ಬೇಂದ್ರೆ

  ಶಂಕರ ಮೊಕಾಶಿ ಪುಣೇಕರ ಎರಡು ಅಧ್ಯಾಯ ಬರೆದದ್ದರಿಂದ ೧೦ ಜನ ಲೇಖಕರು ೧೧ ಅಧ್ಯಾಯ ಬರೆದಂತಾಯಿತು. ಇದೊಂದು ತಿದ್ದುಪಡಿ.

 8. ಒಬ್ಬರಿಗಿಂತ ಒಬ್ಬರು ಮಹಾನುಭಾವರು! ನನ್ನ ಪಟ್ಟಿಯಲ್ಲಿದ್ದ “ವಿ. ಎಂ. ಇನಾಮದಾರ” ಹೆಸರು ಮಾತ್ರ ಸರಿಯಾಗಿದೆ. ಗೀತಾ ಕುಲಕರ್ಣಿಯವರ ಬದಲು ಅವರ ಪತಿ ದ.ಬಾ.ಕುಲಕರ್ಣಿ ಇದ್ದಾರೆ. 🙂
  ಸುನಾಥರೇ,ನೀವು ನಮ್ಮಪಾಲಿನ ಮಾಹಿತಿ ಭಂಡಾರ!

 9. ಸುನಾಥರೇ,
  ಖೋ ಕಾದಂಬರಿಯ ಬಗ್ಗೆ ಮಾಹಿತಿಗೆ ಧನ್ಯವಾದಗಳು !
  ಅದ್ಬುತ ಪ್ರಯೋಗವದು

 10. ತ್ರಿವೇಣಿಯವರೆ,
  ಶ್ರೀಮತಿ ಗೀತಾ ಕುಲಕರ್ಣಿಯವರ ಪತಿ ಶ್ರೀ ಶೇಷಗಿರಿ ಕುಲಕರ್ಣಿ ಎಂದು ನಮ್ರ ತಿದ್ದುಪಡಿ ಮಾಡಲು ಬಯಸುತ್ತೇನೆ. ಶ್ರೀ ಶೇಷಗಿರಿ ಕುಲಕರ್ಣಿಯವರು ರವೀಂದ್ರನಾಥ ಠಾಕೂರರ ಶಾಂತಿನಿಕೇತನದಲ್ಲಿ ಅಧ್ಯಯನ ಮಾಡಿದವರು; ರಾಷ್ಟ್ರೀಯ ಮನೋಭಾವದವರು. ಇವರದು ಅಂತರ್ಜಾತೀಯ ಮದುವೆ. ಶ್ರೀ ಶಿವರಾಮ ಕಾರಂತರ ಹೆಂಡತಿ ಲೀಲಾರವರ ತಂಗಿ ಗೀತಾರವರು ಬಂಟ ಕುಲದವರು (ಐಶ್ವರ್ಯಾ ರೈ ಹಾಗೆ!). ಗೀತಾ ಕುಲಕರ್ಣಿಯವರ ಮಗಳು ಶ್ರೀಮತಿ ರಂಜನಾ ನಾಯಕ ಸಹ ಕವಯಿತ್ರಿಯಾಗಿದ್ದಾರೆ. ಸದ್ಯ ನಿವೃತ್ತರಾದ ತಮ್ಮ ಪತಿ ಶ್ರೀ ಅರವಿಂದ ನಾಯಕರ ಜೊತೆಗೆ ಬೆಳಗಾವಿಯಲ್ಲಿ ವಾಸಿಸುತ್ತಿದ್ದಾರೆ.

  ಶಿವ,
  communicationಗಾಗಿ ಧನ್ಯವಾದಗಳು. ಇದು ಗೆಳೆತನವನ್ನು ಬೆಳೆಸುತ್ತದೆ.

 11. ಓಹ್! ಹೌದೇ! ನಾನು ತಪ್ಪು ತಿಳಿದಿದ್ದೆ.

  ದ.ಬಾ.ಕುಲಕರ್ಣಿಯವರ ಬಗ್ಗೆಯೂ ಸ್ವಲ್ಪ ತಿಳಿಸಿ.

 12. ದ.ಬಾ.ಕುಲಕರ್ಣಿಯವರು ಸುಮಾರಾಗಿ ೧೯೧೩ (ಅಥವಾ ೧೯೧೬?)ರಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನಕೊಪ್ಪ ಗ್ರಾಮದಲ್ಲಿ ಜನಿಸಿದರು. ಉಪಜೀವನಕ್ಕಾಗಿ ಇವರ ತಂದೆ ಧಾರವಾಡದ ಹತ್ತಿರದಲ್ಲಿದ್ದ ಶಿರಕೋಳಕ್ಕೆ ಕುಲಕರ್ಣಿಕಿ ಮಾಡಲು ಬಂದರು.
  ದಬಾಕು ಅವರು ಅವರ ಸೋದರಮಾವ ಗೋವಿಂದರಾವ ಚುಳಕಿಯವರು ಬೆಳಗಾವಿಯಲ್ಲಿ ತೆರೆದಿದ್ದ ಕನ್ನಡ ಪುಸ್ತಕಾಲಯದಲ್ಲಿ ಕೆಲಕಾಲ ದುಡಿದರು. ಆನಂತರ ಧಾರವಾಡದಲ್ಲಿ ಮನೋಹರ ಸಾಹಿತ್ಯ ಭಂಡಾರ ಹಾಗು ಲಲಿತ ಸಾಹಿತ್ಯ ಮಾಲೆಗಳನ್ನು ಪ್ರಾರಂಭಿಸಿದರು. ಕೊಡಗಿನ ಗೌರಮ್ಮ ಎಂದು ಪ್ರಸಿದ್ಧರಾದ ಮಿಸೆಸ್ ಬಿ.ಟಿ.ಜಿ. ಕೃಷ್ಣರವರ “ಚಿಗುರು” ಎನ್ನುವ ಕಥಾಸಂಕಲನವು ಈ ಮಾಲೆಯ ಮೊದಲ ಪ್ರಕಟಣೆ. ಗೌರಮ್ಮನವರ ದುರಂತ ಮರಣದ ನಂತರ ಅವರ ಕೊನೆಯ ಸಂಕಲನ “ಕಂಬನಿ” ಸಹ ಮಾಲೆಯಿಂದಲೇ ಪ್ರ್ರಕಟವಾಯಿತು.
  ದಬಾಕು ಅವರು ಸ್ವತಹ ಉತ್ತಮ ಲೇಖಕರು.ಅವರ ರಚನೆಗಳು ಇಂತಿವೆಃ
  ೧. ಹಕ್ಕಿನೋಟ, ೨. ನಾ ಕಂಡ ಗೌರಮ್ಮ, ೩. ಸಾವಧಾನ, ೪. ಕಪ್ಪು ಹುಡುಗಿ
  ೫. ನಾಳಿನ ಮನಸು, ೬. ಹಾಸು ಹೊಕ್ಕು. ಮೊದಲಿನ ಎರಡು ರಚನೆಗಳು ವ್ಯಕ್ತಿಚಿತ್ರಗಳು; ಕೊನೆಯ ಮೂರು ಕಥಾಸಂಕಲನಗಳು. ಮೂರನೆಯದು ಪ್ರಬಂಧ ಸಂಕಲನ.

  ಆ ಕಾಲದಲ್ಲಿ ಅಲ್ಲಿದ್ದ ನವೋದಯ ಸಾಹಿತಿಗಳೆಲ್ಲ(ಸಾಲಿ ರಾಮಚಂದ್ರರಾಯರು, ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂ.ಬಾ.ಜೋಶಿ, ಶ್ರೀರಂಗ, ದಬಾಕು ಇತ್ಯಾದಿ) ಬಡತನವನ್ನೆ ಹಾಸಿ ಹೊದ್ದುಕೊಂಡವರು. ಒಮ್ಮೆ ಶ್ರೀರಂಗರು ದಬಾಕುರವರ ಬಳಿಗೆ ಬಂದು ಎರಡು ರೂಪಾಯಿ ಕೊಡಲು ಸಾಧ್ಯವೇ ಎಂದು ಕೇಳಿದರು. ದಬಾಕುರವರ ಜೇಬೂ ಸಹ ಬರಿದೇ. “ರೊಕ್ಕ ಯಾಕ ಬೇಕಾಗಿತ್ತು, ಚಹಾ ಕುಡೀಲಿಕ್ಕೇನು?” ಎಂದು ದಬಾಕು ಕೇಳಿದರು. “ಇಲ್ಲಪ್ಪ, ನನ್ನ ಹೇಣ್ತಿ ಮೈಯಾಗ ಅರಾಮ ಇಲ್ಲ;
  ಡಾಕ್ಟರರು ಔಷಧಿ ಬರದು ಕೊಟ್ಟಾರ, ತರಲಿಕ್ಕೆ ಬೇಕಾಗಿತ್ತು”, ಇದು ಶ್ರೀರಂಗರ ಉತ್ತರ. ದಬಾಕು ಶ್ರೀರಂಗರನ್ನು ತನ್ನ ಗುರುತಿನ ‘ಬಾಳಿಗಾ ಫಾರ್ಮಸಿ’ಗೆ ಕರೆದುಕೊಂಡು ಹೋಗಿ ಔಷಧಿಯನ್ನು ಉದ್ದರಿ ಕೊಡಿಸಿದರು.
  ದಬಾಕು ೧೯೬೩ರಲ್ಲಿ ತಮ್ಮ ಎಳೆಯ ವಯಸ್ಸಿನಲ್ಲಿಯೇ ತೀರಿಕೊಂಡರು.
  ದಬಾಕು ಅವರದು ಸುಂದರವಾದ ವ್ಯಕ್ತಿತ್ವ. ಎತ್ತರದ ನಿಲುವು, ದುಂಡು ಮುಖ ಹಾಗು ಕೆಂಪನೆಯ ಬಣ್ಣ ಅವರದು. ಅವರ ಜೀವನವನ್ನು ಅವರದೇ ಆದ ಈ ತುಣುಕು ಪದ್ಯದಲ್ಲಿ ಸಂಗ್ರಹಿಸಿ ಹೇಳಬಹುದುಃ
  “ಸೋಮವಾರ ಚಿಂತಿ,
  ಮಂಗಳವಾರ ಸಂತಿ,
  ಬುಧವಾರ ನಿಶ್ಚಿಂತಿ.”

 13. ಈಗ್ಗೆ ಹದಿನೈದು ವರ್ಷಗಳ ಹಿಂದೆ ತೆಲುಗಿನಲ್ಲಿ ನಡೆದ ಇಂಥಾ ಪ್ರಯೋಗದ ಕನ್ನಡ ಅನುವಾದವನ್ನು ಓದಿದ್ದೆ. ಯಂಡಮೂರಿ ವೀರೇಂದ್ರನಾಥ್, ಮಲ್ಲಾದಿ ವೆಂಕಟ ಕೃಷ್ಣಮೂರ್ತಿ ಮುಂತಾದವರು ಸೇರಿ ಬರೆದಿದ್ದ ಕಾದಂಬರಿ ಅದು. ಹೆಸರು ನೆನಪಾಗುತ್ತಾ ಇಲ್ಲ ಕನ್ನ್ಡಡದಲ್ಲಿ ಇಂಥದ್ದನ್ನು ಕಂಡಿರಲಿಲ್ಲ
  ಹೊಸ ಪ್ರಯೋಗಮಾಡುತ್ತಿರುವುದಕ್ಕೆ ನಮ್ಮೆಲ್ಲರಿಗೂ `ತೋಚಿದ್ದನ್ನು ಗೀಚಲು’ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ತ್ರಿವೇಣಿಯವರಿಗೆ ತುಂಬಾ ಧನ್ಯ ವಾದಗಳು
  ಕಥೆ ಎಂಬ ಈ ಕೂಸು ಚೆನ್ನಾಗಿ ಬೆಳೆಯಲಿ ಎಂಬ ಹಾರೈಕೆ

 14. ಸುನಾಥರೇ, ವಿವರವಾದ ಮಾಹಿತಿಗೆ ಧನ್ಯವಾದಗಳು.

  “ಇಲ್ಲಪ್ಪ, ನನ್ನ ಹೇಣ್ತಿ ಮೈಯಾಗ ಅರಾಮ ಇಲ್ಲ; ಡಾಕ್ಟರರು ಔಷಧಿ ಬರದು ಕೊಟ್ಟಾರ, ತರಲಿಕ್ಕೆ ಬೇಕಾಗಿತ್ತು” – ಓದಿ ಸಂಕಟವಾಯಿತು. ಸರಸ್ವತಿ ಪುತ್ರರಿಗೇಕೋ ಲಕ್ಷ್ಮೀ ಅವಕೃಪೆ ತಪ್ಪಿದ್ದಲ್ಲ!

 15. ಮಾಲಾ, ಕಥಾ ಮಂದಿರಕ್ಕೆ (under construction) ಸ್ವಾಗತ.

  ನಾನು ಸುದೀಪನಿಗೆ ರಜ ಕೊಟ್ಟು ಕಳಿಸಿದ್ದರೆ, ನೀವು ಮತ್ತೆ ಬೆಂಗಳೂರಿಗೆ (ಧೂಳು ಕುಡಿಯಲು) ತಂದು ಬಿಟ್ಟೀದೀರಲ್ಲಾ ? ಅವನೇನು ದ್ರೋಹ ಮಾಡಿದ್ದ ನಿಮಗೆ? 🙂

 16. ಮಂಗಳೂರು ಆಕಾಶವಾಣಿಯಲ್ಲಿ ಇದೇ ರೀತಿಯ ಪ್ರಯೋಗ ನಡೆಸಿದ್ದರಂತೆ, ಕಥಾಸಮಯ ಅಥವಾ ಕಥಾಕಾಲ ಅಂತ ಹೆಸರಿತ್ತು… ಹಾಗೆನೇ ತುಷಾರದಲ್ಲೂ ಇದೇ ರೀತಿಯ ಪ್ರಯೋಗ ಬಹುಶ: ೯೦ರ ದಶಕದಲ್ಲಿ ನೋಡಿದ ನೆನಪು…

 17. ಶ್ರೀ ತ್ರೀ,
  ಸುದೀಪನ ಬಾಸು ಗರಂ ಆಗಿದ್ದರು ಎಷ್ಟು ದಿನಾ ಅಂತ ರಜದಲ್ಲಿ ಇರೋಕಾಗುತ್ತೆ? ಸುದೀಪನ ಕೆಲಸ ಹೋಗಬಾರದಲ್ಲಾ ಎಂಬ ಕಾಳಜಿಯಿಂದ ಅವನನ್ನು ಬೆಂಗಳೂರಿಗೆ ಹೊತ್ತು ಹಾಕ ಬೇಕಾಯ್ತು!
  ಧೂಳು ಕುಡಿಯುವುದು ಅವನ ಹಣೆಬರಹ ನಾನೂ ,ನೀವೂ, ಉಳಿದವರೂ ಏನ್ ಮಾಡೋಕಾಗುತ್ತೆ?

  ಎರಡನೇ ಭಾಗಕ್ಕೆ `ಯಾಮಿನೀ ಯಾಮಿನೀ…ಯಾರು ಹೇಳು ನೀ..’ ಅಂತ ಶೀರ್ಷಿಕೆ ಕೊಟ್ಟಿದ್ದಕ್ಕೆ ಧನ್ಯ ವಾದಗಳು
  ಅಂದ ಹಾಗೆ ನನ್ನ ಇವತ್ತಿನ ಕಮೆಂಟಿನ ಕೊನೆ ವಾಕ್ಯ ಕಟ್ ಮಾಡಿದ್ದು ಯಾಕೆ? ಅಂತ ಕೇಳಬಹುದೇ…

 18. ನಾನು ಉತ್ತರಕನ್ನಡದ ಹುಡುಗಿ ಜೊತೆ ಇನ್ನೂ ಮಾತಾಡೋಣ ಅಂತ ಇದ್ರೆ, ಈ ಮಾಲಾ, ಜ್ಯೋತಿ, ಶ್ರೀ ಎಲ್ಲ ಸೇರಿ ಅದನ್ನ ಹಳಿ ತಪ್ಪಿಸಿಬಿಟ್ರುಃ-(( ವಿಘ್ನಸಂತೋಷಿಗಳುಃ-)) ಎಲ್ಲಾರ್ನೂ ಒಂದು ಕೈ ನೋಡ್ಕೋತೀನಿಃ-))

 19. ಮಾಲಾ, ಕಥೆಯನ್ನು ಬಹಳ ಚೆನ್ನಾಗಿ ಬೆಳೆಸಿಕೊಂಡು ಹೋಗಿದ್ದೀರಿ.  ಜೇಸುದಾಸನ ಸುನಯ್ ನಾ.. ನಾನು ಸುನಯನಾ ಹೆಸರಿಡುವಾಗ, ನನ್ನ ನೆನಪಿನಲ್ಲಿದ್ದಿದ್ದು ಅದೇ ಹಾಡು. 🙂

  ಶ್ರೀ, ’ಯಾವುದೋ ಸ್ಟೇಶನ್ ನಮ್ದು ಅನ್ಕೊಂಡು ಇಳಿದು ಬಿಟ್ಟಿರ್ತೀವಲ್ಲ, ನಮ್ದಲ್ಲ ಅಂತ ಗೊತ್ತಾದ್ಮೇಲೆ ಏನ್ಮಾಡೋದು?’
  ‘ಇನ್ನೊಂದು ಗಾಡಿ ಬಂದೇ ಬರತ್ತೆ, ಹತ್ಕೊಂಡು ಹೋಗೋದು’ – ಯಾಮಿನಿಯ ದೂರವಾಣಿ ಸಂಭಾಷಣೆ ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಚೆನ್ನಾಗಿ ಕಥೆ ಹೇಳ್ತೀರಿ. ಆ ಮಗು ಯಾರದು? ಕುತೂಹಲವಾಗುತ್ತಿದೆ?

  ಭಾಗವತರು ನಿದ್ದೆ ಕಣ್ಣಲ್ಲಿ ಕಥೆಯ ಗಾಡಿಯನ್ನು ಎಲ್ಲಿಗೋ ತೆಗೆದುಕೊಂಡು ಹೋದಂತಿದೆಯಲ್ಲಾ!

 20. ಏನೋ sritriಯವ್ರೆ… ಗಾಡಿ ನನ್ ಕೈಗೆ ಸಿಗ್ತಲ್ಲಾ? ಮಿಸ್ಸಿಂಗ್ ಲಿಂಕ್ಸ್ ಎಲ್ಲಾ ಆದಷ್ಟು ಸೇರಿಸಿ, ಒಂದು ಹೊಸ ದಾರಿಗೆ ತಗೊಂಡು ಹೋಗಿ ನಿಲ್ಲಿಸಿದ್ದನೆ… ಇನ್ನು ಮುಂದಿನ ಡ್ರೈವರ್ ಎಲ್ಲಿಗೆ ಥಗೊಂಡು ಹೋಗ್ತಾರೋ ಕಾದು ನೋಡ್ಬೇಕು… ನಿಮ್ಮಷ್ಟೆ ಕುತೂಹಲ ನಂಗೂ ಇದೆ…
  ನನ್ ಖೊಕ್ ಕೊಟ್ಟಿದ್ದೀನಿ, ಆ ಭಾಗವತರು ಬರೆದಿದ್ದು ಸದ್ಯಕ್ಕೆ ಸೈಡ್ನಲ್ಲಿ ಇಟ್ಬಿಡಿ (ಇದನ್ನ ಭಾಗವತರು ಓದದೆ ಇರ್ಲಿ ಅಂತ ಪ್ರಾರ್ಥನೆ)

 21. ನಾನು ಬರ್ದಿದ್ದನ್ನ ಸೈಡ್ನಲ್ಲಿ ಇಡಿ. ನಾನು ಬರ್ದು ಮುಗಿಸೋದ್ರೊಳ್ಗಡೆ ಶ್ರೀ ಕಥೆನ ರೈಲ್ವೇ ಸ್ಟೇಷನ್ನಿಗೆ ತಗೊಂಡೊಗ್ಬಿಟ್ರುಃ((

  ಶ್ರೀ, ಅಂಗೆ ಸ್ವಲೂಪ ಪಕ್ಕಕ್ಕ ಬತ್ತೀರಾ? ಏನೋ ಇಚಾರಿಸ್ಕಾಬೊಕಾಗಿತ್ತುಃ-)

 22. ಸ್ರಿತ್ರಿಯವ್ರೇ.. ಗಾಡಿ ಯಾಕೇ ಮುಂದೇ ಹೋಗ್ತಿಲ್ಲ? ದಾರಿ ಸಿಗ್ತಿಲ್ವಾ ಯಾರ್ಗುನು?

 23. ಶ್ರೀ, ದಾರಿ ಗೊತ್ತಾಗಿದೆ. ಭಾಗವತರು ನೀಲಿಕೇರಿ ಚೆಲುವೆ ಜೊತೆಗೆ ಮಾತಾಡಬೇಕು ಅಂದ್ರಲ್ಲ, ಅದಕ್ಕೆ ಅವರೇ ಮುಂದುವರೆಸುತ್ತಾರಾ ಅಂತ ಕಾಯುತ್ತಿದ್ದೇನೆ. ಭಾಗವತರೇ ಎಲ್ಲಿ ಹೋದ್ರಿ ಮರ್ರೆ? 🙂

 24. ಭಾಗವತರು ನಾನು ಬರ್ದಿದ್ದು ಓದದೇ ಅದ್ನ ಬರೆದ್ರಂತೆ.. ಪೋಸ್ಟ್ ಮಾಡಿದ್ಮೇಲೆ ನೋಡಿದ್ರೆ ನಾನು ಬರೆದಿದ್ದು ಇತ್ತಂತೆ… ಅದ್ಕೇನೇ, ಅದ್ನ ಸದ್ಯಕ್ಕೆ ಎತ್ತಿ ಪಕ್ಕಕ್ಕಿಟ್ಟು ಗಾಡಿ ಮುಂದೇ ತಗೊಂಡ್ಹೋಗೋದೇ ಸರಿ ಅನ್ಸತ್ತೆ… ಇಲ್ವಾದ್ರೆ ಅಲ್ಲೆ ನಿಂತು ಬಿಡತ್ತೆ ಗಾಡಿ.

 25. ಹೌದಾ? ಹಾಗಿದ್ರೆ ಮುಂದುವರೆಸಲು ಸುಲಭ. ಆದರೆ ಭಾಗವತರರು ಬಂದು ಹೇಳಬೇಕು ಈ ಮಾತು.   🙂

 26. ಭಾಗವತರು ಆ ಹುಡುಗೀನ ಬಿಡೋ ಥರ ಕಾಣ್ತಿಲ್ಲ.. 🙂

 27. ಭಾಗವತರೇ, ನೀವು ಕಥೆಯ ಗಾಡಿಗೆ ಬ್ರೇಕ್ ಹಾಕಿಬಿಟ್ಟಿದೀರಲ್ಲ… ಮುಂದುವರೆಸಲು ಸಹಾಯ ಮಾಡಿ ಪ್ಲೀಸ್…

 28. “ಕೊಂಡಿ ಜೋಡಿಸಿದ್ದು ಸರಿಹೋಯಿತೇ? ”

  ಪೂರ್ಣಿಮಾ, ಸರಿ ಇದೆ. ಭಾಗವತರು ತಪ್ಪಿಸಿದ ದಾರಿ ಮತ್ತೆ ಸಿಕ್ಕಿದೆ 🙂

 29. ಮಾಲಾ, ಪೂರ್ಣೀಮಾ, ಕತೆಯನ್ನು ಸರಿಯಾಗಿ ಕೊಂಡೊಯ್ಯುತ್ತಿದ್ದೀರಿ. ಭಾಗವತರ ಮೇಲೆ ಒಂದು ಕಣ್ಣಿಡಬೇಕು 🙂

  ಮಾಲಾ, ಯೇಸುದಾಸನ ಸುನಯನಾ..ಮತ್ತೆ ಮತ್ತೆ ಕೇಳುವ ಆಸೆ ಹುಟ್ಟಿಸುತ್ತಿದ್ದೀರಿ 🙂

 30. ಮೇ ೭ನೆಯ ತಾರೀಕು ನೀವು ಕೂಗಿದ್ದು ನನಗಿವತ್ತು ಕೇಳಿಸ್ತು.
  ನಾನೂ ಆಟಕ್ಕೆ ಬರುವೆ. ಸೇರಿಸಿಕೊಳ್ಳಿ ಪ್ಲೀಸ್ )

 31. ತವಿಶ್ರೀಯವರೇ, ಈಗಾದರೂ ಬಂದಿರಲ್ಲ. ಒಳ್ಳೆಯದಾಯಿತು. ಈಗಾಗಲೇ ಎರಡು ಕಥೆ ಬರೆದು ಸುಸ್ತಾಗಿದ್ದೀವಿ. ಸ್ವಲ್ಪ ಸುಧಾರಿಸಿಕೊಂಡು ಇನ್ನೊಂದು ಕಥೆ ಬರೆಯೋಣವಂತೆ. ಇಲ್ಲೇ ಇರಿ, ಮತ್ತೆಲ್ಲೂ ಹೋಗಬೇಡಿ. 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.