ಇಳಿಸಂಜೆಗೆ ಕರೆಗಂಟೆಯ ಸದ್ದಿಗೆ ಎಚ್ಚರಾಗಿ ಬಾಗಿಲು ತೆರೆದವನಿಗೆ ಕಾಣಿಸಿದ್ದು ಯಾಮಿನಿಯ ತಂದೆ!
ನಿದ್ದೆ ತುಂಬಿದ ತನ್ನ ಕಣ್ಣುಗಳು… ಮುದುರಿದ ತನ್ನ ಬಟ್ಟೆಗಳು… ಕೊಳಕಾದ ತನ್ನ ರೂಮು…ಅವರನ್ನು ಒಳಗೆ ಕರೆಯಲೂ ಸಂಕೋಚವೆನಿಸಿತು ಅವನಿಗೆ…
`ಅಯ್ಯೋ ತಾವು ನನ್ನನ್ನ ಹುಡುಕಿಕೊಂಡು ಇಷ್ಟು ದೂರ ಯಾಕೆ ಬರಕ್ಕೆ ಹೋದ್ರೀ…ಯಾಮಿನೀ ಹತ್ರ ಹೇಳಿ ಕಳಿಸಿದ್ದರೆ ನಾನೇ ಬಂದು ನಿಮ್ಮನ್ನ ನೋಡ್ತಿದ್ದೆ’ಎಂದ
ಅದಕ್ಕವರು `ಇಲ್ಲಪ್ಪಾ…ಕೆಲವು ಕೆಲಸ ಮಾಡುವಾಗ ಯಾವುದು ಸಂಪ್ರದಾಯವೋ ಹಾಗೇ ಮಾಡಬೇಕೂ.. ಈಗ ನಾನೇ ನಿಮ್ಮನೆಗೆ ಬರಬೇಕಿತ್ತು …ಹಾಗೆಲ್ಲಾ
ನಿಮಗೆ ಹೇಳಿಕರೆಸಿ ಹೇಳಲಾಗುವಂಥಾ ಸಮಾಚಾರವಲ್ಲ ಇದೂ…’ ಎನ್ನುತ್ತಾ ಕುರ್ಚಿಯ ಮೇಲಿನ ಧೂಳು ಜಾಡಿಸಿ ಕೂತೇ ಬಿಟ್ಟರು
`ನಿನ್ನನ್ನೊಂದು ಮಾತು ಕೇಳಬಹುದೇ ಸುದೀಪಾ…’ಎಂದು ಅವನ ಭುಜದ ಮೇಲೆ ಕೈ ಇಟ್ಟು ಕೇಳಿದ ಆ ವೃದ್ದರಿಗೆ ಏನೆಂದು ಉತ್ತರಿಸುವುದೋ ಅವನಿಗೆ ತಿಳಿಯಲಿಲ್ಲ
ಕೊನೆಗೆ ಅವನು ಹೇಳಿದ್ದು` ನಾನು ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡು ಬೆಳೆದವನು ನೀವು ನನ್ನ ತಂದೆ ಸಮಾನವೆಂದು ತಿಳಿಯುತ್ತೇನೆ ನೀವೇನು ಹೇಳಬೇಕೆಂದಿದ್ದೀರೋ
ಸಂಕೋಚವಿಲ್ಲದೇ ಹೇಳಿ… ನನ್ನ ಕೈಲಾದ್ದನ್ನು ನಾನು ಖಂಡಿತಾ ನಡೆಸಿ ಕೊಡುತ್ತೇನೆ’ ತನ್ನ ಅಕೌಂಟ್ನಲ್ಲಿ ಎಷ್ಟು ಹಣವಿದೆ ಮನದಲ್ಲೇ ಲೆಕ್ಕ ಹಾಕುತ್ತಾ ನುಡಿದ.
`ಮುದ್ದಿನ ಗಿಣಿ ಸೃಷ್ಟಿಗಾಗಿ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲಾ’ ಅಂದಿತು ಮನಸ್ಸು.ಸ್ವಾಭಿಮಾನಿ ಯಾಮಿನೀ ನನ್ನಿಂದ ಹಣ ತೆಗೆದು ಕೊಳ್ಳಲು ಒಪ್ಪುತ್ತಾಳೇಯೇ?ಅವನ ಮನ ಪ್ರಶ್ಣಿಸಿತು.
ಸುದೀಪನ ಮನ ಈ ಎಲ್ಲಾ ತರ್ಕ ಮಾಡುತ್ತಿರುವಾಗ ಯಾಮಿನಿಯ ತಂದೆ ಕೇಳಿದ ಮಾತು ಅವನನ್ನು ಅಚ್ಚರಿಯ ಸಾಗರದಲ್ಲಿ ತೇಲಿಸಿ ಮುಳುಗಿಸಿತು!ಮುಳುಗಿಸಿ ತೇಲಿಸಿತು!
`ನನ್ನ ಮಗಳು ಯಾಮಿನಿಗೆ ಬಾಳು ಕೊಡುತ್ತೀಯಾ ಸುದೀಪಾ..’ ಕನಸೇ… ಇಲ್ಲಾ ಇದು ನನಸು!
`ನೀನು ನನಗಿಂತಾ ವಯಸ್ಸಿನಲ್ಲಿ ಚಿಕ್ಕವನು ಆದರೂ ಬೇಡುತ್ತಿದ್ದೇನೆ …ಅವಳು ಮಹಾ ಸ್ವಾಭಿಮಾನಿ ನಿನ್ನನ್ನು ಎಂದಿಗೂ ತಾನೇ ಬಾಯಿ ಬಿಟ್ಟು ಕೇಳಲಾರಳು
ಯಾಮಿನೀ ನಿನ್ನನ್ನು ಪ್ರಾಣಪದಕದಂತೆ ಪ್ರೀತಿಸುತ್ತಾಳೆ ಸುದೀಪ…ಇದು ಬಲವಂತವಲ್ಲ ನಿನ್ನಂಥ ಯೋಗ್ಯ,ಗುಣಿಯೊಬ್ಬನ ಕೈಗೆ ನನ್ನ ಮಗಳನ್ನು ಒಪ್ಪಿಸ ಬೇಕೆಂಬ
ತಂದೆಯೊಬ್ಬನ ಸಹಜ ಬಯಕೆ…’
ಸುದೀಪನಿಗೆ ಮನಸ್ಸೆಲ್ಲಾ ಅಯೋಮಯ… ಸುಮ್ಮನೇ ಕೂತುಬಿಟ್ಟ!
ಮೌನವಾದ ಸುದೀಪನನ್ನು ನೋಡಿ ಬೇರೆಯದೇ ಅರ್ಥ ಮಾಡಿಕೊಂಡ ಯಾಮಿನಿಯ ತಂದೆ ಹೀಗೆಂದರು` ತಿಳಿಯಿತು… ಸೃಷ್ಟಿಯ ಬಗ್ಗೆ ಅಲ್ಲವೇ ನಿನ್ನ ಪ್ರಶ್ನೆ..?
ಯಾಮಿನಿಗೆ ಭಾಷೆ ಕೊಟ್ಟಿರುವುದರಿಂದ ಸೃಷ್ಟಿಯ ಹಿನ್ನಲೆಯ ಬಗ್ಗೆ ಜಾಸ್ತಿ ವಿವರ ಹೇಳಲಾರೆ ಆದರೆ ಇಷ್ಟು ಮಾತ್ರ ನಿಜ… ಸೃಷ್ಟಿ ಬೇರೊಂದು ಅಂಗಳದ ಹೂವು…
ನಮ್ಮ ಮನೆ ಅಂಗಳದಲ್ಲಿ ನಲಿದು ಬೆಳೆಯುತ್ತಿದೆ ಯಾಮಿನಿಯ ಆಕಾಶದಂತೆ ವಿಶಾಲವಾದ ಮನದ ಕುರುಹೋ ಎಂಬಂತೆ ನಕ್ಷತ್ರವಾಗಿ ಮಿನುಗುತ್ತಿದೆ…’
ಇದು ಇನ್ನೊಂದು ಆನಂದದ ಅಭಿಷೇಕ!ಸುದೀಪ ವಿಸ್ಮಿತನಾಗಿ ಹೋದ!
`ಹೇಳು ದೇವರ ರೂಪದಂತಿರುವ ಕಂದಮ್ಮ ಸೃಷ್ಟಿಯ ಅಪ್ಪನಾಗುತ್ತೀಯಾ?ಆ ಮಗುವಿಗೊಂದು ಅಪ್ಪನ ಹೆಸರು ಕೊಡುತ್ತೀಯಾ?
ಅವರು ಅವನ ಕೈ ಹಿಡಿದು ಕೇಳಿದಾಗ ಸುದೀಪ ಹಣೆಯಲ್ಲಿ ನೆರಿಗೆ ,ತುಟಿಯಲ್ಲಿ ಮಂದ ಸ್ಮಿತ,ಮನದ ತುಂಬಾ ಆನಂದದ ಅಲೆಗಳ ನಡುವೆ ಕೊಚ್ಚಿ ಹೋಗುತ್ತಿದ್ದ
`ನೀನು ಯೋಚನೆ ಮಾಡಿ ಹೇಳಪ್ಪಾ…ನೀನು ಒಪ್ಪದೇ ಹೋದರೂ ನೀನು ಎಂದೆಂದಿಗೂ ನನ್ನ ಸ್ನೇಹಿತನೇ… ಸೃಷ್ಟಿಯ ಮುದ್ದಿನ ಮಾಮಾನೇ.. ಇಷ್ಟು ನೆನಪಿರಲಿ’ಎನ್ನುತ್ತಾ
ಯಾಮಿನಿಯ ತಂದೆ ನಿರ್ಗಮಿಸಿದ್ದೂ ಅವನಿಗೆ ತಿಳಿಯಲಿಲ್ಲ
*****************
ಕಣ್ಣ ಮುಂದೆ ನಾರ್ಣಪ್ಪನವರ ಚಿತ್ರ ತೇಲಿ ಬಂತು. ತಂದೆ ಇಲ್ಲದೇ ಬೆಳೆದ ತನ್ನನ್ನು ತಂದೆಯಂತೆ ನೋಡಿಕೊಂಡ ದೊಡ್ಡ ಮನಸ್ಸಿನ ವ್ಯಕ್ತಿ…
ತನ್ನ ಹದಿಹರೆಯದಲ್ಲಿ ಇವರಂತೆ ತಾನಾಗುವುದು,ಇಷ್ಟು ವಿಶಾಲ ಮನಸ್ಸು ಹೊಂದುವುದು ತನ್ನ ಬಾಳಿನ ಗುರಿಗಳಲ್ಲೊಂದು ಎಂದು ತಾನು ಯೋಚಿಸುತ್ತಿದ್ದದು ನೆನಪಿಗೆ ಬಂತು
ತನಗೆ ನಾರ್ಣಪ್ಪನವರು ತೋರಿಸಿದ ಮಮತೆ ತಾನು ಏಕೆ ಮುದ್ದು ಸೃಷ್ಟಿಗೆ ತೋರ ಬಾರದೂ…?
ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ!ಮಮತೆ ,ವಾತ್ಸಲ್ಯ ಕುಡಿಯೊಡೆದು ಬೆಳೆಯ ಬೇಕಾದ್ದೇ ಹಾಗಲ್ಲವೇ? ಯಾವುದೇ ಬಂಧನವಿಲ್ಲದೇ..?
ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ…
ಹರಿಯ ಕರುಣದೊಳಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೋ…
ಬೀದಿಯಲ್ಲಿ ಯಾರೋ ಹಾಡಿಕೊಂಡು ಹೋಗುತ್ತಿದ್ದರು…
***
ಸಂಜೆ ಆಫೀಸಿನಿಂದ ಮನೆಗೆ ಹೋಗಲು ಸುದೀಪ ಎದ್ದಾಗ ಪ್ಯೂನ್ ರಂಗ ಹಲ್ಲು ಕಿರಿಯುತ್ತಾ ದರ್ಶನ ನೀಡಿದ
`ಆರಾಮಾ ಸಾ..’ಅಂತಾ ಕೈ ಮುಂದೆ ಚಾಚಿ `ನೀವೇನೂ ನಮ್ಮುನ್ನ ಇತ್ತೀಚಿಗೆ ನೋಡ್ ಕೊಳದೇ ಇಲ್ಲಾ…’ಅಂತ ತನ್ನ ಎಂದಿನ ಪಲ್ಲವಿ ಹಾಡಿದ
ರಂಗನ ಪ್ರಕಾರ `ನೋಡ್ ಕೊಳದೂ’ ಅಂದ್ರೆ ಅವನ ಕಾಫಿಗೆ ,ಬೀಡಿಗೆ ದುಡ್ಡು ಕೊಡೋದು ಎಂಬುದು ಸುದೀಪನಿಗೆ ಸರ್ವವಿದಿತವಾಗಿದ್ದರಿಂದ ರಂಗನ ಕೈಗೆ ಇಪ್ಪತ್ತು ತುರುಕಿ
ಅವನು ಕೊಟ್ಟ ಕಾಗದದ ಕಡೆಗೆ ಆತುರದಿಂದ ಗಮನ ಹರಿಸಿದ
ಅಮ್ಮನ ಕಾಗದ…ಊರಿಂದ ಬಂದಿದೆ…
ಅವನ ಮನ ಅಮ್ಮನ ನೆನಪಿಂದ ತುಂಬಿಹೋಯಿತು!
ಆ ಕ್ಷಣ ಅವನಿಗೆ ಅಮ್ಮನನ್ನು ನೋಡ ಬೇಕೆನಿಸಿ ಬಿಟ್ಟಿತು!
ಏನ್ ಸಾ ಕಾಗಜ ಕೈಲಿ ಹಿಡ್ಕೊಂಡು ಸುಮ್ನೆ ನಿಂತ್ ಬಿಟ್ರಲ್ಲಾ… ಏನ್ ಬರ್ದವ್ರೆ ಅಂತ ವಸಿ ಒಡುದ್ ನೋಡೀ..’ ರಂಗ ಎಚ್ಚರಿಸಿದಾಗಲೇ ಇಹಕ್ಕೆ ಮರಳಿದ್ದು ಸುದೀಪ
ಅಮ್ಮ ಕಾಗದ ಬರೆಯುವುದೇ ಅಪರೂಪ ಈಗಂತೂ ಎಲ್ಲ ಮಾತೂ ಪೋನ್ ನಲ್ಲೇ ಆಗಿ ಬಿಡುತ್ತೆ ಅಂತ ಅಂದುಕೊಳ್ಳುತ್ತಾ ಕಾಗದ ಓದಿದ ಕಾಗದದಲ್ಲಿ ವಿಶೇಷವೇನೂ ಇಲ್ಲ
ಏನೋ ಅಮ್ಮನಿಗೆ ಕಾಗದ ಬರೆಯುವ ಮೂಡು ಬಂದಿರಬೇಕು ಬರೆದಿದ್ದಾರೆ ಎಂದುಕೊಳ್ಲುತ್ತಾ ಕೊನೆಯ ಸಾಲುಗಳನ್ನು ಓದತೊಡಗಿದ
ಅಮ್ಮ ಬರೆದಿದ್ದರು
`ಇಷ್ಟು ದಿನದಿಂದ ನೀನು ಬೆಂಗಳೂರಿಗೆ ಬಂದು ನಿನ್ ಜೊತೆಲಿ ಸ್ವಲ್ಪ ದಿನ ಇರು ಅಂತ ಹೇಳುತ್ತಿದ್ದೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಅಂತ ಕಾಣುತ್ತೆ ಹನ್ನೆರಡನೇ ತಾರೀಕು ಸಂಜೆ
ನಾವಿಬ್ಬರೂ ಬೆಂಗಳೂರು ತಲುಪುತ್ತಿದ್ದೇವೆ ಸಂಜೆ ಬೇಗ ಮನೆಗೆ ಬರುವುದು…’
`ನಾವಿಬ್ಬರೂ’ ಅಂದ್ರೆ ಯಾರು?
`ಕನ್ನಿಕಾಗೆ ಇಲ್ಲಿನ ಗ್ರಾಮೀಣ ಬ್ಯಾಂಕ್ ನಲ್ಲಿ ಕೆಲಸವಾಗಿದೆ ಟ್ರೈನಿಂಗ್ ಗೆ ಅಂತ ಎರಡು ತಿಂಗಳು ಬೆಂಗಳೂರಿಗೆ ಹಾಕಿದ್ದಾರೆ ಬೆಂಗಳೂರಲ್ಲಿ ಮನೆಯೇ ಇರಬೇಕಾದ್ರೆ
ಅವಳು ಹಾಸ್ಟೇಲ್ನಲ್ಲಿ ಇರುವುದು ಯಾಕೆ ಅಂತ ನಾನೇ ನಾರ್ಣಪ್ಪನವರನ್ನು ಬಲವಂತವಾಗಿ ಒಪ್ಪಿಸಿದೆ.ಆರು ತಿಂಗಳ ಪ್ರೊಬೆಷನ್ ಮುಗಿದ ಮೇಲೆ ಬೆಂಗಳೂರಿಗೇ
ಬೇಕಾದ್ರೆ ಹಾಕಿ ಕೊಡ್ತಾರಂತೆ.. ಮದ್ವೆ ಆದಮೇಲೂ ಏನೂ ತೊಂದರೆ ಇಲ್ಲಾ…’ ಅಮ್ಮ ಬರೆದಿದ್ದರು
ಸುದೀಪನಿಗೆ ಸರ್ಪ್ರೈಸ್ ಮಾಡೋಣಾ ಅತ್ತೆ’ ಅಂತ ಕನ್ನಿಕಾ ಈ ವಿಶ್ಯ ಪೋನ್ ನಲ್ಲಿ ಹೇಳಲು ಬಿಡಲಿಲ್ಲ
ನಂಗೆ ತಡೀಲಿಲ್ಲ ಬರೆದು ಬಿಟ್ಟಿದ್ದೇನೆ ಕನ್ನಿಕಾಗೆ ನಾನು ನಿನಗೆ ಮೊದಲೇ ತಿಳಿಸಿದ್ದೆ ಅಂತ ಗೊತ್ತಾಗೋದು ಬೇಡಾ ಸಣ್ಣಹುಡುಗಿ ಪಾಪ ಬೇಜಾರು ಮಾಡಿ ಕೊಳ್ಳುತ್ತೆ…’
ಸುದೀಪನ ಎದೆ ದಸಕ್ ಅಂತು!
ಅಮ್ಮನನ್ನು ಕಂಡರೆ ಸುದೀಪನಿಗೆ ಪ್ರಾಣ… ಕನ್ನಿಕ ಎಂಬ ಚಿನಕುರುಳಿ ಮಾತಿನ ಪಟಾಕಿ ಕಂಡರೂ ಅವನಿಗೆ ಇಷ್ಟವೇ…
ಆದರೆ……..
ಆದರೆ ನಾಳೆ ಸುನಯನಳೊಂದಿಗೆ ತನ್ನ ಭೇಟಿ…ನೆನ್ನೆ ಅನಿರೀಕ್ಷಿತವಾಗಿ ಯಾಮಿನಿಯ ತಂದೆ ತಂದ ಒಸಗೆ..
ಇವುಗಳ ಮಧ್ಯೆ ತಾನು ಸಿಕ್ಕು ದಿಕ್ಕು ತಪ್ಪಿದಂತಾಗಿರುವಾಗ ಕನ್ನಿಕಾ ಮತ್ತು ಅಮ್ಮನ ಬರವು ಯಾಕೋ ಆತಂಕ ತರುತ್ತಿದೆ…
ಉಸಿರು ಬಿಡುತ್ತಾ ತಲೆ ಅಲುಗಿಸಿದ ಸುದೀಪ
`ಯಾಕೆ ಸಾ ಎಲ್ಲಾ ಚೆಂದಾಗವ್ರಂತಾ…’ ರಂಗ ಕೇಳಿದಾಗ ಅವನನ್ನೇ ದುರುಗುಟ್ಟಿಕೊಂಡು ನೋಡಿದ
ರಂಗ ತಲೆ ಕೆರೆದು ಕೊಳ್ಳುತ್ತಾ `ಸಾ… ಅದು ಕಾಜಗ ಬಂದು ಒಂದು ಹತ್ತು ದಿನ ಆಯ್ತು ನಿಮಗೆ ಕೊಡವಾ ಅಂತ ಜೋಬಲ್ಲಿ ಇಟ್ಕೊಂಡು ಮರ್ತುಬಿಟ್ಟೆ
ಇವತ್ತು ಪ್ಯಾಂಟ್ ಜೋಬಲ್ಲಿ ಸಿಕ್ತು ನೋಡಿ… ಬಡಾನೆ ತಂದೆ…’ ಅಂತ ಹಲ್ಲು ಕಿರಿದ!
ಸುದೀಪನ ಎದೆ ಎರಡನೇ ಬಾರಿಗೆ ದಸಕ್ ಅಂತು!
ಇವತ್ತು ಎಷ್ಟು ತಾರೀಕೋ ರಂಗ? ಏನೋ ಅನುಮಾನದಿಂದ ಬಿಸಿಲಿಳಿಯುತ್ತಿದ್ದ ಸಂಜೆ ಐದರ ಮರದ ನೆರಳು ನೋಡುತ್ತಾ ಕೇಳಿದ
ಇವತ್ತು ಅನ್ನೆರಡು ಅಲ್ವರಾ..?ರಂಗ ಕೈ ತುರಿಸುತ್ತಾ ಹೇಳಿದಾಗ…
ಸುದೀಪನ ಎದೆ ಮೂರನೇ ಬಾರಿಗೆ ದಸಕ್ ಅಂತು!
ಈ ಹಾಳು ಮೂತಿಯ ರಂಗನ ಮುಂದೆ ನಿಂತಿದ್ದರೆ ನನ್ನ ಎದೆ ಒಡೆದೇ ಹೋಗುತ್ತೆ ಅಂತ ಗೊಣಗಿ ಕೊಳ್ಳುತ್ತಾ ಮನೆ ಕಡೆಗೆ ಓಡಿದ ಸುದೀಪ
ಈ ಅಧ್ಯಾಯಕ್ಕೆ ಹೆಸರು ಬೇಕಾಗಿತ್ತೆ? ಪ್ರಶ್ನೆಗಳ ಹಣೆಪಟ್ಟಿ ಹೊತ್ತಿದ್ದಕ್ಕೆ–
“ಮನಸು ಗೊಂದಲದ ಗೂಡು” ಅನ್ನೋಣವೆ?