ಸಾಹಿತ್ಯ: ಚೆನ್ನವೀರ ಕಣವಿ
ಸಂಗೀತ: ಸಿ. ಅಶ್ವಥ್
ಗಾಯಕಿ: ಬಿ.ಆರ್.ಛಾಯ
ಆಲ್ಬಮ್ : ಭಾವಬಿಂದು

ಹಾಡು ಕೇಳಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
‘ಸೋ ‘ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ;
ಅದಕೆ ಹಿಮ್ಮೇಳವೆನೆ ಸೋಸಿ ಬಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತ್ತಿತ್ತು.

ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ;
ಮೂಡಣದಿ ನೇಸರನ ನಗೆ ಮೊಗದ ಶ್ರೀಕಾಂತಿ
ಬಿಳಿಯ ಮೋಡದ ಹಿಂದೆ ಹೊಳೆಯುತ್ತಿತ್ತು.

ಹುಲ್ಲೆಸಳು, ಹೂಪಕಳೆ, ಮುತ್ತು-ಹನಿಗಳ ಮಿಂಚು
ಸೊಡರಿನಲಿ ಆರತಿಯ ಬೆಳಗುತ್ತಿತ್ತು ;
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ
ಶುಭಮಸ್ತು ಶುಭಮಸ್ತು ಎನ್ನುತ್ತಿತ್ತು.

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತ್ತಿತ್ತು ;
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣಗುಣಿತ ಹಾಕುತ್ತಿತ್ತು.

ಉಷೆಯ ನುಣ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತ್ತಿತ್ತು ;
ಸೃಷ್ಟಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತ್ತಿತ್ತು.

***

17 thoughts on “ಒಂದು ಮುಂಜಾವು – ಚೆನ್ನವೀರ ಕಣವಿ”

 1. ಸುನಾಥರೇ, ಈ ಕವಿತೆಯ ಶೀರ್ಷಿಕೆ, ಕವನ ಸಂಕಲನದ ಹೆಸರು ತಿಳಿಸುವ ಹೊಣೆ ನಿಮ್ಮದು. 🙂

 2. ತ್ರಿವೇಣಿ,

  ಈ ಹಾಡನ್ನು ಹಾಕಿದ್ದಕ್ಕೆ ತುಂಬಾ ಧನ್ಯವಾದಗಳು. ನನಗೆ ತುಂಬಾ ಇಷ್ಟವಾದ ಹಾಡಿದು 🙂

  ’ಸೂಸಿ ಬಹ ಸುಳಿಗಾಳಿ’ ?
  ಸೂಸಿಪಹ ಸುಳಿಗಾಳಿ ..ಅಲ್ವಾ?

  1. ನಮಸ್ಕಾರ ತಿಳಿದಂತೆ ಬಹ ಎಂದರೆ ಬರುವ ಎಂದರ್ಥ

 3. ‘ಸೂಸಿ ಬಹ ಸುಳಿಗಾಳಿ’ … ಅದೇ ಸರಿ. ಸೂಸಿ ಬರುತ್ತಿರುವ ಸುಳಿಗಾಳಿ ಅಂತ. ‘ಸೂಸಿಪಹ…’ ನಮ್ಮ ಕಿವಿಗೆ ಕೇಳುವ ರೀತಿ; ಬಹ/ಪಹ ಹತ್ತಿರದ ಸ್ವರಗಳು ತಾನೇ?

 4. ತ್ರಿವೇಣಿಯವರೆ,
  ಈ ಕವನದಿ ಶೀರ್ಷಿಕೆಃ “ಒಂದು ಮುಂಜಾವು”.
  ಪ್ರಥಮವಾಗಿ “ಆಕಾಶಬುಟ್ಟಿ” ಸಂಕಲನದಲ್ಲಿ ಪ್ರಕಟವಾದ ಈ ಕವನ, ಬಳಿಕ
  “ಹೂವು ಹೊರಳುವವು ಸೂರ್ಯನ ಕಡೆಗೆ” ಕವನಸಂಕಲನದಲ್ಲೂ ಸಹ ಸೇರ್ಪಡೆಯಾಯಿತು. ಈಗ ಕಣವಿಯವರ ಎಲ್ಲ ಕವನಗಳು “ಕಣವಿ ಸಮಗ್ರ ಕಾವ್ಯ”ದಲ್ಲಿ ಲಭ್ಯವಿವೆ. ಬಿಡಿ ಕವನಸಂಕಲನಗಳು ಲಭ್ಯವಿಲ್ಲ. ಕಣವಿಯವರ
  successive ಕವನಗಳು “ಕಣವಿ ಸಮಗ್ರ ಕಾವ್ಯ”ದ ಹೊಸ ಆವೃತ್ತಿಗಳಲ್ಲಿ ಸೇರ್ಪಡೆಯಾಗುತ್ತಲಿವೆ. ಇಲ್ಲಿ ಕೊಡಲಾದ ಕವನಪಠ್ಯದಲ್ಲಿಯ ಕೆಲವೊಂದು
  spelling mistakesಗಳನ್ನು ತಿದ್ದಿ ಆ ಸಾಲುಗಳನ್ನು ಕೊಡುತ್ತಿದ್ದೇನೆಃ
  …..’ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು;
  ಅದಕೆ ಹಿಮ್ಮೇಳವೆನೆ ಸೋಸಿ ಬಹ ಸುಳಿಗಾಳಿ
  ………………………………………………….
  …………………………………..ಮಕರಂದದರಿಶಿಣದಿ
  …………………………………………….
  ಹುಲ್ಲೆಸಳು,ಹೂಪಕಳೆ, ಮುತ್ತು-ಹನಿಗಳ ಮಿಂಚು
  ………………………………………
  ಈ ಕವಿತೆಯ ಪ್ರತಿ stanzaದ ಎರಡನೆಯ ಸಾಲಿಗೆ ಅರ್ಧವಿರಾಮ(;)
  ಕೊಡಲಾಗಿದೆ ಹಾಗೂ ನಾಲ್ಕನೆಯ ಸಾಲಿಗೆ ಪೂರ್ಣವಿರಾಮ ಕೊಡಲಾಗಿದೆ.

  ಮನೋಹರವಾದ ಕವನವನ್ನು ಕೇಳಿಸಿದ್ದಕ್ಕಾಗಿ ಧನ್ಯವಾದಗಳು.

 5. ಸುನಾಥರೇ, “ಕಣವಿ ಸಮಗ್ರ ಕಾವ್ಯ” ದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಪುಸ್ತಕದ ಹೆಸರು ತಿಳಿದಿದ್ದರೆ ಅಂಗಡಿಗೆ ಹೋದಾಗ ಕೊಳ್ಳುವುದು ಸುಲಭ. ಕಳೆದ ಬಾರಿ ಭಾರತಕ್ಕೆ ಬಂದಿದ್ದಾಗ, ಕೊನೆಘಳಿಗೆಯಲ್ಲಿ “ಅಂಕಿತ” ಪುಸ್ತಕದಂಗಡಿಗೆ ಹೋಗಿದ್ದೆ. ಯಾವ ಪುಸ್ತಕ ಕೇಳಬೇಕೋ ತಿಳಿಯದೆ, ಅಲ್ಲಿ ಕಾಣುವಂತೆ ಇಟ್ಟಿದ್ದ ಪುಸ್ತಕಗಳನ್ನಷ್ಟೆ ಖರೀದಿಸಿ ತಂದೆ. ಇಲ್ಲಿ ಬಂದು ನೋಡಿದರೆ ಅದರಲ್ಲಿ ಬಹುಪಾಲು ರವಿ ಬೆಳಗೆರೆಯವರ ಪುಸ್ತಕಗಳೇ ಬಂದಿದ್ದವು. ಅದರಲ್ಲಿ ಸುಮಾರನ್ನು ಈ ಮೊದಲೇ ಓದಿದ್ದೆ ಬೇರೆ. 🙂

 6. ಕಣವಿ ಸಮಗ್ರ ಕಾವ್ಯದ latest (ಮೂರನೆಯ ಅಥವಾ ತನ್ನಂತರದ) ಆವೃತ್ತಿಯಲ್ಲಿ ಅವರ ಹೊಸ ಕವನಗಳು ಲಭ್ಯವಾಗುವವು.
  ರವಿ ಬೆಳಗೆರೆಯವರ ಪುಸ್ತಕಗಳೆ ಸಿಕ್ಕವೆ?
  Very sorry!

 7. ಯಾಕೆ ಸುನಾಥರೇ ಹೀಗಂತಿದೀರಿ? 🙂

  ಬ್ಲಾಕ್ ಫ್ರೈಡೇ, ಗಾಂಧಿ ಮತ್ತು ಗೋಡ್ಸೆ, ಹಿಮಾಲಯನ್ ಬ್ಲಂಡರ್, ..ಮುಂತಾದವು (ಎಲ್ಲಾ ಅನುವಾದಗಳು) ಪುಸ್ತಕ ಕೆಳಗಿರಿಸದಂತೆ ಓದಿಸಿಕೊಂಡು ಹೋಗುತ್ತವೆ. ರಕ್ತ ಕುದಿಯುವಂತೆ ಮಾಡುವ ಶಕ್ತಿ ರವಿಯವರ ಬರಹಕ್ಕಿದೆ. ಅದರ ಜೊತೆಗೆ ಕಣವಿಯವರ ತಂಪು ಕಾವ್ಯವನ್ನು ಓದುವುದು ಆರೋಗ್ಯಕ್ಕೆ ಒಳ್ಳೆಯದು 🙂

 8. “ಅದರಲ್ಲಿ ಸುಮಾರನ್ನು ಈ ಮೊದಲೇ ಓದಿದ್ದೆ ಬೇರೆ………” ಇದ್ಯಾರು, ಸುಮಾ ಅನ್ನೋ ಲೇಖಕಿ, ನಂಗೆ ಗೊತ್ತಿಲ್ಲದವ್ರು ಅಂತ ಮೊದಲ್ನೇ ಬಾರಿ ಓದಿದಾಗ ಅನ್ನಿಸ್ತು. ಸ್ವಲ್ಪ ಹೊತ್ತಿನ ನಂತ್ರ ಟ್ಯೂಬ್-ಲೈಟ ಹೊತ್ಕೊಂತುಃ-))

 9. “ಇದ್ಯಾರು, ಸುಮಾ ಅನ್ನೋ ಲೇಖಕಿ, ನಂಗೆ ಗೊತ್ತಿಲ್ಲದವ್ರು ”
  🙂

  ನಿಮಗೆ ಎಲ್ಲಾ ಲೇಖಕಿಯರು ಗೊತ್ತಾ ಹಾಗಾದ್ರೆ?

 10. “ಯಾಕೆ ಹೀಗಂತೀರಿ?”
  ತ್ರಿವೇಣಿಯವರೆ,
  ರವಿ ಬೆಳಗೆರೆ ಒಳ್ಳೆಯ ಲೇಖಕರು. ಅವರ “ಹಾಯ್ ಬೆಂಗಳೂರು” ನಲ್ಲಿ ಬರುವ ಅವರ ಪ್ರಶ್ನೋತ್ತರಗಳು ಬಹಳ ಚೆನ್ನಾಗಿರುತ್ತವೆ. ಅವರು ಅನುವಾದಿಸಿದ ಕೃತಿಗಳೂ ಸಹ ಚೆನ್ನಾಗಿವೆ. ಆದರೆ ಅವರ ಪತ್ರಿಕೆಯ ಮುಕ್ಕಾಲು ಭಾಗ ಅವರ (ಸ್ವಂತ) ವರ್ಣನೆಯಿಂದಲೇ ತುಂಬಿರುತ್ತದೆ. ಹಾಗಾಗಿ ನಾನು ಕಟುವಾದ ಟೀಕೆ ಮಾಡಿದ್ದು. Very sorry for that.

 11. “ನಿಮಗೆ ಎಲ್ಲಾ ಲೇಖಕಿಯರು ಗೊತ್ತಾ ಹಾಗಾದ್ರೆ?”….ಇಲ್ಲ, ಎಲ್ಲರೂ ಗೊತ್ತಿಲ್ಲ. ಆದ್ರೆ ಗೊತ್ತು ಮಾಡಿಕೊಳ್ಳೋಣ ಅಂತಃ-))

 12. ಕವನದಲ್ಲಿರುವ ಅಕ್ಷರಲೋಪಗಳನ್ನು ಸುನಾಥರು ತಿದ್ದಿ ತೋರಿಸಿದ್ದಾರೆ, ಆದರೆ ಕವನದ ಪ್ರತಿಯಲ್ಲಿ ಆ ತಿದ್ದುಪಡಿಗಳು ಇನ್ನೂ ಆಗಿಲ್ಲ… ಸರಿ ಮಾಡುತ್ತೀರ?

 13. “ಆದರೆ ಕವನದ ಪ್ರತಿಯಲ್ಲಿ ಆ ತಿದ್ದುಪಡಿಗಳು ಇನ್ನೂ ಆಗಿಲ್ಲ…” –

  ಆಗಿದೆಯಲ್ಲಾ? ಎಲ್ಲಿ ತಪ್ಪು ಉಳಿದಿದೆ ಗೊತ್ತಾಗಲಿಲ್ಲ.

 14. ಮೈಸೂರು ದಸರ ಕವಿಗೋಷ್ಠಿಯಲ್ಲಿ ಚೆನ್ನವೀರ ಕಣವಿಯವರನ್ನು ಭೇಟಿಯಾಗಿದ್ದೆ. ಅವರು ಈ ಕವಿತೆಯಷ್ಟೇ ಮಧುರವಾದ ವ್ಯಕ್ತಿ.

 15. ದತ್ತಾತ್ರಿಯವರೇ, ನಿಮ್ಮನ್ನು ನಮ್ಮ ಮನೆಯಲ್ಲಿ ನೋಡಿ ತುಂಬಾ ಸಂತೋಷವಾಗುತ್ತಿದೆ. ದರ್ಶನ ಭಾಗ್ಯವಿರಲಿ ಸದಾ! 🙂

 16. ತ್ರಿವೇಣಿಯವರೆ, ಸರಿಪಡಿಸಿದ ಕವನದ ರೂಪ perfect ಆಗಿ, ಮೂಲರೂಪದಂತೆಯೆ ಬಂದಿದೆ. ಅಭಿನಂದನೆಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.