ಉದಯ ಟಿವಿ ವೀಕ್ಷಕರಿಗೆ ಎರಡು ಸಂತೋಷದ ಸುದ್ದಿಗಳಿವೆ.ಉದಯ ಟಿವಿಯಲ್ಲಿ ಕೊನೆಗೂ “ಸಂವೇದನೆ” ಎಂಬ ಒಂದು ಉತ್ತಮ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಹಿಂದೆ ಶೈಲಜಾ ಸಂತೋಷ್ ನಡೆಸಿಕೊಡುತ್ತಿದ್ದ “ಪರಿಚಯ” ಕಾರ್ಯಕ್ರಮದ ಮಾದರಿಯದು. ಈ ಬಾರಿ ಇದನ್ನು ಈಶ್ವರ ದೈತೋಟ ನಡೆಸಿಕೊಡುತ್ತಿದ್ದಾರೆ. ಶೈಲಜಾ ಸಂತೋಷ್ ಸಾವಿರಕ್ಕೂ ಹೆಚ್ಚು ಕಂತುಗಳಲ್ಲಿ ಬಹಳಷ್ಟು ಪ್ರಮುಖರನ್ನು ಮಾತಾಡಿಸಿರುವುದರಿಂದ ದೈತೋಟರ ಕೆಲಸ ಕಷ್ಟವಿದೆ. ಈವರೆಗೆ ಬಂದ ಅತಿಥಿಗಳಲ್ಲಿ ಅಂತಹ ಆಸಕ್ತಿ ಮೂಡಿಸುವವರಾರು (ನನಗೆ) ಇರಲಿಲ್ಲ. ಎಷ್ಟು ದಿನ ಮುಂದುವರೆಯುತ್ತದೋ ನೋಡಬೇಕು. ಮುನ್ನೋಟದಲ್ಲಿ ಎಸ್. ಎಲ್. ಭೈರಪ್ಪನವರು ಕಾಣಿಸಿಕೊಳ್ಳುವುದರಿಂದ ಆ ದಿನಕ್ಕಾಗಿ ನಿರೀಕ್ಷಿಸುತ್ತಿದ್ದೇನೆ.
ಇನ್ನೊಂದು: ನಾಗಾಭರಣ ನಿರ್ದೇಶನದ “ಅಪ್ಪ” ಧಾರಾವಾಹಿ ಅರ್ಧದಲ್ಲೇ ಎತ್ತಂಗಡಿಯಾಗಿರುವುದು! ಈ ಧಾರಾವಾಹಿ ನೋಡಿದಾಗಲೆಲ್ಲಾ “ಒಳ್ಳೆಯವರ ಮಾನ ಹಳ್ಳಿಯಲ್ಲಿ ಹೋಯಿತು” ಎಂಬ ಗಾದೆಮಾತಿನಂತೆ, ನಾಗಾಭರಣರು ಹಿರಿತೆರೆಯಲ್ಲಿ ಪಡೆದುಕೊಂಡ ಹೆಸರನ್ನು ಕಿರುತೆರೆಯಲ್ಲಿ ಅನ್ಯಾಯವಾಗಿ ಕಳೆದುಕೊಳ್ಳುತ್ತಿದ್ದಾರಲ್ಲ ಎಂದು ಮಮ್ಮಲ ಮರುಗುತ್ತಿದ್ದೆ. ಈ ಹಿಂದೆ ಪ್ರಸಾರವಾಗುತ್ತಿದ್ದ “ಮಹಾಮಾಯೆ” ಎಂಬ ಮಾಟ-ಮಂತ್ರದ ಧಾರಾವಾಹಿ ಕೂಡ ಹಾಗೆಯೇ ಇತ್ತು.
ಕೆಲವು ದಿನಗಳ ಹಿಂದೆ ಅಂತರಂಗದಲ್ಲಿ – “ಸಣ್ಣಪುಟ್ಟ ನಿರ್ದೇಶಕರಿರಲಿ, ನಾಗಾಭರಣರಂತಹ ಉತ್ತಮ ನಿರ್ದೇಶಕರಿಗೇನಾಗಿದೆ? ಏಕ್ತಾ ಕಪೂರ್…ಇತ್ಯಾದಿಗಳೇ ವಾಸಿ, ಅವರು ಕೊನೆ ಪಕ್ಷ ಕಥೆಯನ್ನು ಬಬಲ್ ಗಮ್ಮಿನಂತೆ ಎಳೆದರೆ ಇವರಿಗೆ ಆ ಕಷ್ಟವೂ ಬೇಕಿಲ್ಲ. ನಾಗಾಭರಣರ “ಅಪ್ಪ” ಧಾರಾವಾಹಿಯಲ್ಲಿ ಎಪಿಸೋಡ್ ಪೂರ್ತಿ ಹಿಂದಿನ ಕಥೆಯನ್ನೇ ತೋರಿಸುತ್ತಾರೆ. (ಫ್ಲಾಷ್ ಬ್ಯಾಕ್ ತರ- ಒಂದೋ ಎರಡು ದೃಶ್ಯ ತೋರಿಸುವ ಬದಲು) ಧಾರಾವಾಹಿ ಸಾವಿರ ಕಂತಿಗೆ ಎಳೆಯಲು ಈ ಹೊಸ ತಂತ್ರ ಅನುಸರಿಸುತ್ತಿರಬಹುದು!” – ಎಂದು ನಾನು ಅಲವತ್ತುಕೊಂಡಿದ್ದು ಉದಯ ಟಿವಿ ನಿರ್ದೇಶರಿಗೇನಾದರೂ ಕೇಳಿಸಿತಾ? 🙂
ಏನೋ, ಉದಯ ಟಿವಿಯಲ್ಲಿ ಹೇಳೋರ್ ಕೇಳೋರ್ ಯಾರೋ ಇದಾರೆ ಅಂತ ಆಯಿತು!
ಇದು ಉದಯ ಟಿವಿ ಬಗೆಗಿನ ಲೇಖನದ ಕಾಮೆಂಟ್… ಕೆಳಗೆ ಸಾರಿ ಕೇಳ್ತಾ ಇದ್ದುದರಿಂದಾಗಿ ಇಲ್ಲಿ ಹಾಕಿ ಪ್ರಯತ್ನಿಸುತ್ತಿದ್ದೇನೆ… ಒಳಗೆ ಸೇರಿಕೊಂಡರೆ ಸರಿ… ಇಲ್ಲದಿದ್ರೆ…. 🙂
ಅಬ್ಬಾ…. ಉದಯ ಟಿವಿಯನ್ನು ನೀವು ಇನ್ನೂ ನೋಡ್ತಾ ಇದ್ದೀರಾ…
ನಾನು ಅದನ್ನು ಮರೆತೇ ಬಿಟ್ಟಿದ್ದೀನಿ… ಇರಲಿ ಒಳ್ಳೆ ಕಾರ್ಯಕ್ರಮ ಅಂತ ಹೇಳಿದ್ದೀರಿ… ಅದರ Some ವೇದನೆಯನ್ನು ನೋಡಬಹುದು…
ಅದಿರಲಿ… ಇಲ್ಲಿ ಕಾಮೆಂಟ್ ಮಾಡಲು ಬಂದ್ರೆ, ರಾಮನ ಪತ್ನಿ ಸೀತೆ ಗಂಡ ಯಾರು ಅಂತ ನಿಮ್ಮ ತುಳಸೀವನ ಕೇಳ್ತಾ ಇದೆಯಲ್ಲಾ….
ನಿಮಗೆ ಗೊತ್ತಿಲ್ಲ. ತಿಳಿಹೇಳುವುದು ನನ್ನ ಕರ್ತವ್ಯ ಅಂತ ಉತ್ತರಿಸಿದ್ದೇನೆ…ನಮ್ಮ ಉತ್ತರ ತಪ್ಪು ಎಂದಾದರೆ ದಯವಿಟ್ಟು ಕ್ಷಮಿಸಿ. 🙂
“ಇರಲಿ ಒಳ್ಳೆ ಕಾರ್ಯಕ್ರಮ ಅಂತ ಹೇಳಿದ್ದೀರಿ… ಅದರ Some ವೇದನೆಯನ್ನು ನೋಡಬಹುದು…”
ಅನ್ವೇಷಿಗಳೇ, ಈ ಕಾರ್ಯಕ್ರಮ ಚೆನ್ನಾಗಿದೆ. ನಿಮಗೆ ಇಷ್ಟವಾಗದಿದ್ದರೆ ಅದಕ್ಕೆ ನಾನು ಹೊಣೆಯಲ್ಲ!
“ಇಲ್ಲಿ ಕಾಮೆಂಟ್ ಮಾಡಲು ಬಂದ್ರೆ, ರಾಮನ ಪತ್ನಿ ಸೀತೆ ಗಂಡ ಯಾರು ಅಂತ ನಿಮ್ಮ ತುಳಸೀವನ ಕೇಳ್ತಾ ಇದೆಯಲ್ಲಾ….
ನಿಮಗೆ ಗೊತ್ತಿಲ್ಲ. ತಿಳಿಹೇಳುವುದು ನನ್ನ ಕರ್ತವ್ಯ ಅಂತ ಉತ್ತರಿಸಿದ್ದೇನೆ…ನಮ್ಮ ಉತ್ತರ ತಪ್ಪು ಎಂದಾದರೆ ದಯವಿಟ್ಟು ಕ್ಷಮಿಸಿ. ”
– ಇದೊಂದೇ ಅಲ್ಲ, ಇದೇ ರೀತಿಯ ಇನ್ನೂ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿ ನಿಮ್ಮ ಪಾಂಡಿತ್ಯವನ್ನು ಪರೀಕ್ಷಿಸಲಾಗುತ್ತದೆ. ನನಗೆ ಸರಿ ಉತ್ತರ ತಿಳಿದಿಲ್ಲವಾದ್ದರಿಂದ ನಾನು ಉತ್ತರಿಸುವುದೇ ಇಲ್ಲ.