ಕವಿ : ಚೆನ್ನವೀರ ಕಣವಿ
ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ
ಪಾರಿಜಾತವು ಹೂವು ಸುರಿಸಿದಂತೆ,
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ ;
ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲಿ ತುಳುಕುವಂತೆ,
ಸುಳಿಗಾಳಿಯೊಂದಿನಿತು ಸೂಸಿ ಬಂದರೂ ಸಾಕು;
ಮರವನಪ್ಪಿದ ಬಳ್ಳಿ ಬಳುಕುವಂತೆ ;
ನಾವು ಆಡುವ ಮಾತು ಹೀಗಿರಲಿ ಗೆಳೆಯ,
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ,
ಮೌನ ಮೊಗ್ಗೆಯನೊಡಿದು ಮಾತರಳಿ ಬರಲಿ
ಮೂರು ಘಳಿಗೆಯ ಬಾಳು ಮಗಮಗಿಸುತಿರಲಿ.
***
ಪದ್ಯ ಬಹಳ ಚೆನ್ನಾಗಿದೆ. ಎರಡನೆಯ ನುಡಿ ಅದರಲ್ಲೂ ಬಹಳ ಸೊಗಸಾಗಿದೆ.
ಧನ್ಯವಾದಗಳು.
ತ್ರಿವೇಣಿ,
ಈ ಹಾಡನ್ನು ತುಂಬಾ ಸಮಯದಿಂದ ಹುಡುಕ್ತಿದ್ದೆ. ಇವತ್ತು ಇಲ್ಲಿ ನೋಡಿ ತುಂಬಾ ಖುಷಿಯಾಯ್ತು. ಪಾರಿಜಾತದ ಬಗ್ಗೆ ನಾನು ಬರೆದಿದ್ದ ಪೋಸ್ಟ್ ಇಲ್ಲಿದೆ,
http://sillylittlethings.blogspot.com/2006/05/flower-of-gods-garden.html
ಈ ಕವಿತೆಯ ಶೀರ್ಷಿಕೆ ಸರಿಯಾಗಿಯೇ ಇದೆಃ “ಮಾತು”.
ಈ ಕವಿತೆ ಸಹ “ಹೂವು ಹೊರಳುವವು ಸೂರ್ಯನ ಕಡೆಗೆ” ಸಂಕಲನದಲ್ಲಿ ಮರಳಿ ಸೇರ್ಪಡೆಯಾಗಿದೆ. ಕವಿತೆಯ ಎರಡನೆಯ, ಆರನೆಯ, ಒಂಬತ್ತನೆಯ ಹಾಗು ಹತ್ತನೆಯ ಸಾಲುಗಳಿಗೆ ಅಲ್ಪವಿರಾಮಗಳನ್ನು; ನಾಲ್ಕನೆಯ, ಏಳನೆಯ ಹಾಗು ಎಂಟನೆಯ ಸಾಲುಗಳಿಗೆ ಅರ್ಧವಿರಾಮವನ್ನು; ಕೊನೆಯ ಸಾಲಿಗೆ ಪೂರ್ಣವಿರಾಮವನ್ನು ಕೊಡಲಾಗಿದೆ.
“ಮಗಮಗಿಸುತಿರಲಿ” ಎಂದು ತಿದ್ದಬೇಕು. ಕವಿ ತಮ್ಮ ಹೆಸರನ್ನು “ಚೆನ್ನವೀರ” ಎಂದು ಬರೆದುಕೊಳ್ಳುತ್ತಾರೆ,”ಚನ್ನವೀರ” ಎಂದಲ್ಲ. ಇದನ್ನು ಗಮನಿಸಬೇಕು.
ಸುಂದರವಾದ ಕವನವನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಕಣವಿಯವರ ಕವನಗಳನ್ನು ಓದುವಾಗ ಮನಸ್ಸು ತಂಪಾಗುತ್ತದೆ. ವಂದನೆಗಳು,
-ಸುನಾಥ
ಲೇಖನ ಚಿಹ್ನೆಗಳ ಬಳಕೆಯಲ್ಲಿ ಸಾರಸ್ವತಲೋಕವೂ ದಾರಿತಪ್ಪುತ್ತಿದೆ. ನೀವೆಷ್ಟು ಖಚಿತವಾಗಿ ಅವುಗಳನ್ನು ಸೂಚಿಸಿದ್ದೀರಿ. ಭಲೇ.
ಚೆನ್ನವೀರ ಕಣವಿ ಎಂಬ ಸರಿ ರೂಪವನ್ನು ಗಮನಕ್ಕೆ ತಂದಿದ್ದೀರಿ. ಅದನ್ನು ಹೇಳುವಾಗ ಕವಿ ಚೆನ್ನವೀರ ಎಂದೇ ಬರೆದುಕೊಳ್ಳುತ್ತಿದ್ದರು ಎಂಬುದನ್ನು ತಿಳಿಸಿದ್ದೀರಿ. ಅದುವೇ ಒಪ್ಪಿತ ಮಾರ್ಗ. ಕೋ. ಚೆನ್ನಬಸಪ್ಪ ಸರಿ. ಗೊ.ರು. ಚನ್ನಬಸಪ್ಪ ಸರಿ. ಚೆನ್ನವೀರ ಕಣವಿ ಸರಿ. ಚೆಂಬೆಳಕು ಸರಿ.
ಧಾತು ಚನ್ ಅಲ್ಲ. ಅದು ಚೆನ್. ಅದರಿಂದ ಚೆಂದ. ಆದರೆ ಆಡುನುಡಿಯಲ್ಲಿ ಚಂದವೂ ಬಳಕೆಗೆ ಬಂದಿದೆ. ಹಾಗಾಗಿ ಸಾಮಾನ್ಯರಲ್ಲಿ ಗೊಂದಲ. ಆದರೆ ಬರೆಹಗಾರರಿಗೆ ಖಚಿತತೆ ಇರಬೇಕು. ನಿಮ್ಮ ಸೂಕ್ಷ್ಮಗ್ರಹಿಕೆಗೆ ಶಿರಬಾಗುವೆ.
– ಕೆ. ರಾಜಕುಮಾರ್
“ಕಣವಿಯವರ ಕವನಗಳನ್ನು ಓದುವಾಗ ಮನಸ್ಸು ತಂಪಾಗುತ್ತದೆ.”
– ನಿಜ. ಕೆ . ಎಸ್ ನರಸಿಂಹಸ್ವಾಮಿಯವರಂತೆ ಕಣವಿಯವರು ಸಹ ಆಪ್ತ ಭಾವ ಮೂಡಿಸುವ ಕವಿ.
ಸುನಾಥರೆ, ನನ್ನ ನೆನಪಿನ ಆಧಾರದಿಂದ ಈ ಕವಿತೆಯನ್ನು ಬರೆದಿದ್ದೆ. ತಪ್ಪುಗಳನ್ನು ನೀವು ತಿದ್ದಿಕೊಡುತ್ತೀರೆಂಬ ನಂಬಿಕೆಯಿಂದ.:) ಹಾಗೆಯೇ ಕಣವಿಯವರ ಹೆಸರಿನ ಬಗ್ಗೆಯೂ ಗೊಂದಲವಿತ್ತು. ನಿಮ್ಮನ್ನೇ ಕೇಳಬೇಕೆಂದಿದ್ದೆ. ಧನ್ಯವಾದಗಳು.
.
ಪಾರಿಜಾತ!! ಪಾರಿಜಾತದ ಕವಿತೆ ಕರೆಯಿತೇ ತುಳಸೀವನಕ್ಕೆ ನಿಮ್ಮನು? 🙂
“ಪದ್ಯ ಬಹಳ ಚೆನ್ನಾಗಿದೆ. ಎರಡನೆಯ ನುಡಿ ಅದರಲ್ಲೂ ಬಹಳ ಸೊಗಸಾಗಿದೆ.”
– ನನಗೂ ಎರಡನೆಯ ನುಡಿಯ ಮೊದಲೆರಡು ಸಾಲುಗಳು ತುಂಬಾ ಪ್ರಿಯ. “ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲಿ ತುಳುಕುವಂತೆ” – ಈ ಸಾಲುಗಳು ಬರೆಯಲು ಕವಿಗೆ ಸಹಜ ಪ್ರತಿಭೆಯ ಜೊತೆಗೆ ನವಿರಾದ ಭಾವನೆಗಳನ್ನು ಹೊಮ್ಮಿಸುವ ಸುಕೋಮಲ ಹೃದಯವೂ ಇರಲೇಬೇಕು!
ಶ್ರಿಲತಾ, ಈಚೆಗೆ ಕಾಣಲಿಲ್ಲ ನೀವು. ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು. ಪಾರಿಜಾತದ ಬಗ್ಗೆ ಏನು ಬರೆದಿದ್ದೀರಿ ಎಂದು ತಿಳಿಯುವ ಕುತೂಹಲ. ಈಗಲೇ ಓದುತ್ತೇನೆ.
ಮೊನ್ನೆ ಮಧ್ಯಾಹ್ನದಿಂದ ತುಳಸೀವನ ಡಲ್ಲಾಗಿದೆಯಲ್ಲಾ? ಎಂದಿನ ಲಹರಿ ಕಳಕೊಂಡ ಹಾಗಿದೆ. ಏನಾಯ್ತು?