ವಿಶ್ವಭಾರತಿಗೆ ಕನ್ನಡದಾರತಿ

ಕವಿ – ಚೆನ್ನವೀರ ಕಣವಿ

ಹಾಡು ಕೇಳಿ

ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ
ಜಯಭಾರತಿ, ಕರುನಾಡ ಸರಸ್ವತಿ
ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ.
ವಿಶ್ವವಿನೂತನ…………………….||೧||

ಗಂಗ, ಕದಂಬಾ, ರಾಷ್ಟ್ರಕೂಟ ಬಲ
ಚಲುಕ್ಯ, ಹೊಯ್ಸಳ,ಬಲ್ಲಾಳ
ಹುಕ್ಕ,ಬುಕ್ಕ,ಪುಲಕೇಶಿ, ವಿಕ್ರಮರ
ಚೆನ್ನಮ್ಮಾಜಿಯ ವೀರಶ್ರೀ.
ವಿಶ್ವವಿನೂತನ…………………….||೨||

ಆಚಾರ್ಯತ್ರಯ ಮತಸಂಸ್ಥಾಪನ
ಬಸವಾಲ್ಲಮ ಅನುಭಾವ ನಿಕೇತನ
ಶರಣ, ದಾಸ, ತೀರ್ಥಂಕರ ನಡೆ-ನುಡಿ ವಿಶ್ವತಮೋಹಾರಿ.
ವಿಶ್ವವಿನೂತನ…………………….||೩||

ಪಂಪ, ರನ್ನ, ನೃಪತುಂಗ, ಹರೀಶ್ವರ
ರಾಘವಾಂಕ, ಸರ್ವಜ್ಞ, ಪುರಂದರ
ಕುವರವ್ಯಾಸ, ರತ್ನಾಕರ, ಜನಪದ ಕಾವ್ಯ ಸಮುದ್ರವಿಹಾರಿ.
ವಿಶ್ವವಿನೂತನ…………………….||೪||

ಸಾಯಣ, ವಿದ್ಯಾರಣ್ಯ, ಭಾಸ್ಕರ
ಮಹಾದೇವಿ, ಮುಕ್ತಾಯಿ ಮಹಂತರ,
ಕಂತಿ-ಹಂಪ, ಸುಮನೋರಮೆ-ಮುದ್ದಣ
ಸರಸ ಹೃದಯ ಸಂಚಾರಿ.
ವಿಶ್ವವಿನೂತನ…………………….||೫||

ತ್ಯಾಗ-ಭೋಗ-ಸಮಯೋಗದ ದೃಷ್ಟಿ
ಬೆಳುವೊಲ, ಮಲೆ, ಕರೆ, ಸುಂದರ ಸೃಷ್ಟಿ
ಜ್ಞಾನದ, ವಿಜ್ಞಾನದ, ಕಲೆಯೈಸಿರಿ,
ಸಾರೋದಯ ಧಾರಾನಗರಿ.
ವಿಶ್ವವಿನೂತನ…………………….||೬||

ಅರಿವೇ ಗುರು, ನುಡಿ ಜ್ಯೋತಿರ್ಲಿಂಗ,
ದಯವೇ ಧರ್ಮದ ಮೂಲ ತರಂಗ
ವಿಶ್ವಭಾರತಿಗೆ ಕನ್ನಡದಾರತಿ,
ಮೊಳಗಲಿ ಮಂಗಲ ಜಯಭೇರಿ.
ವಿಶ್ವವಿನೂತನ…………………….||೭||

***

(ಈ ಕವಿತೆಯ ಸಾಹಿತ್ಯ ನೀಡಿದ ಸುನಾಥ್ ಅವರಿಗೆ ಧನ್ಯವಾದಗಳು)

6 thoughts on “ವಿಶ್ವಭಾರತಿಗೆ ಕನ್ನಡದಾರತಿ”

 1. sunaath says:

  ಕರ್ನಾಟಕ, ಭಾರತ ಹಾಗು ವಿಶ್ವಗಳ ಸರಸ ಸಾಮರಸ್ಯವನ್ನು, ಐಕ್ಯವನ್ನು ಆದರ್ಶಿಸುವ ಈ ಕವಿತೆ ಮನೋಹರವಾಗಿದೆ. ಕವಿತೆಯ ಆಯ್ಕೆಗೆ ಅಭಿನಂದನೆಗಳು

 2. kaaloo says:

  ಪದ್ಯದಲ್ಲಿ ಬಳಸಿರುವ ಅಲ್ಪವಿರಾಮ ಚಿಹ್ನೆ (,) ಬೇಡ – ಅವುಗಳು ಗದ್ಯದಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತವೆ, ಉದಾಹರಣೆಗೆ:
  ಹುಕ್ಕ,ಬುಕ್ಕ,ಪುಲಕೇಶಿ, ವಿಕ್ರಮರ
  ಪಂಪ, ರನ್ನ, ನೃಪತುಂಗ, ಹರೀಶ್ವರ
  ಜ್ಞಾನದ, ವಿಜ್ಞಾನದ, ಕಲೆಯೈಸಿರಿ,…
  ಇತ್ಯಾದಿ.

  ’ಚಲುಕ್ಯ’ ರನ್ನು ’ಚಾಲುಕ್ಯ’ರನ್ನಾಗಿ ಮಾಡಿ.

  “ಪಂಪ, ರನ್ನ, ನೃಪತುಂಗ, ಹರೀಶ್ವರ” ದಲ್ಲಿ ಹರೀಶ್ವರ ಎಂದರೆ ಯಾರು?

  “ಕುವರವ್ಯಾಸ” – ಕುಮಾರವ್ಯಾಸನಾಗಬಹುದೇನೋ?

 3. sritri says:

  “ಪದ್ಯದಲ್ಲಿ ಬಳಸಿರುವ ಅಲ್ಪವಿರಾಮ ಚಿಹ್ನೆ (,) ಬೇಡ – ಅವುಗಳು ಗದ್ಯದಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತವೆ”

  -ಕಾಳಣ್ಣಾ, ಕಣವಿಯವರೇ ಅದನ್ನು ಬೇಕೆಂದು ಹಾಕಿರುವಾಗ ನಾನು ಅದನ್ನು ತೆಗೆಯುವುದಾದರೂ ಹೇಗೆ?

  “ಪಂಪ, ರನ್ನ, ನೃಪತುಂಗ, ಹರೀಶ್ವರ” ದಲ್ಲಿ ಹರೀಶ್ವರ ಎಂದರೆ ಯಾರು?

  “ಹರಿಹರ” ಎಂಬಲ್ಲಿ ಹರ ಎಂಬುವ ಬದಲು ಈಶ್ವರ ಎಂದಿರಬಹುದು. ಹರ ಮತ್ತು ಈಶ್ವರ ಇಬ್ಬರೂ ಒಬ್ಬನೇ ಅಲ್ಲವೇ?

  “ಕುವರವ್ಯಾಸ” – ಕುಮಾರವ್ಯಾಸನಾಗಬಹುದೇನೋ?”

  – ಕುವರ = ಕುಮಾರ

  “’ಚಲುಕ್ಯ’ ರನ್ನು ’ಚಾಲುಕ್ಯ’ರನ್ನಾಗಿ ಮಾಡಿ.”

  – ಯಾವುದಕ್ಕೂ ಸುನಾಥರು ಬಂದು ನೋಡಿಬಿಡಲಿ ಒಮ್ಮೆ. 🙂

 4. sunaath says:

  ಹಾಡುಗಾರರು ಕವನದ ಪದಗಳನ್ನು ಹಾಗು ಧಾಟಿಯನ್ನು ಬದಲಾಯಿಸಿಕೊಂಡು ಹಾಡುವದು ಸಾಮಾನ್ಯ. ಆದರೆ ಕವನವನ್ನು ಬರಹದಲ್ಲಿ reproduce ಮಾಡುವಾಗ, ನಮಗೆ ಅಂತಹ ಸ್ವಾತಂತ್ರ್ಯವಿರುವದಿಲ್ಲ. ಒಂದು ಸಣ್ಣ ಅಲ್ಪವಿರಾಮ ಅಥವಾ hyphen ಅನ್ನು ನಾವು ಬಿಟ್ಟರೂ ಅದು ಕವಿದ್ರೋಹವಾಗುವದು. In fact ಈ ಕವಿತೆಯ ಸಾಹಿತ್ಯ ಕಳಿಸುವಾಗ, ೨ನೆಯ stanzaದ ಕೊನೆಯ ಸಾಲಿನ ಕೊನೆಗೆ (ಚೆನ್ನಮ್ಮಾಜಿಯ ವೀರಶ್ರೀ) ಪೂರ್ಣವಿರಾಮ ಬರಬೇಕು. ಅದನ್ನು ಬಿಟ್ಟದ್ದಕ್ಕಾಗಿ ನನಗೆ ಶಾಂತಿ ಇಲ್ಲ. ಅದನ್ನು ಸರಿಪಡಿಸಲು(ಪೂರ್ಣವಿರಾಮ ಸೇರಿಸಲು) ತ್ರಿವೇಣಿಯವರಿಗೆ ವಿನಂತಿಸುತ್ತೇನೆ. kalooರವರು ಹೇಳುವಂತೆ ಚಾಲುಕ್ಯ ಪದ ಸರಿ; ಆದರೆ ಚಲುಕ್ಯ ಪದವೂ ಸಹ ಉಪಯೋಗದಲ್ಲಿದೆ ಹಾಗು rhythmಗೆ ಸರಿಹೋಗುತ್ತದೆ. ಹರೀಶ್ವರ, ಕುವರವ್ಯಾಸ ಇವು ಹರಿಹರ ಹಾಗು ಕುಮಾರವ್ಯಾಸರ ಬದಲು ಕವಿ ತನಗಿರುವ poetic licenseದಿಂದ ಬಳಸುವ ಬದಲು ಪದಗಳು. ಕಾಳಣ್ಣಾ, ನನ್ನ ಮಾತು ನಿಮಗ ಒಪ್ಪಿಗೆಯೆ?

 5. kaaloo says:

  ಸುನಾಥರೇ,

  ನೀವು ಸಾಹಿತ್ಯವನ್ನು ಮೂಲ ಕೃತಿಯಿಂದ ಆಯ್ದುಕೊಂಡಿರುವುದರಿಂದ ಕವಿ ಬಳಸಿದ ಚಿಹ್ನೆಗಳನ್ನು ಹಾಗೇ ಗೌರವಿಸಬೇಕಾಗುತ್ತದೆ. ಹಾಗೇ ಕಾವ್ಯದಲ್ಲಿ ನಾಮಪದಗಳ ಬದಲಾಯಿಸಿದ ಪ್ರಯೋಗವೂ ಹೊಸದೇನಲ್ಲ. ಕೆಲವೊಮ್ಮೆ ಪ್ರಾಸಕ್ಕೆಂದು ಬದಲಾವಣೆ ಮಾಡಿಕೊಂಡರೆ, ಇನ್ನು ಕೆಲವು ಆಡುನುಡಿ ಹಾಗೂ ಇತರ ಭಾಷಾ ಪ್ರಯೋಗಗಳಲ್ಲಿ ಬದಲಾಗುವುದು ಸಹಜ.

  ನಿಮ್ಮ ಪ್ರಯತ್ನ ಹಾಗೂ ಈ ವಿವರಣೆಗೆ ಧನ್ಯವಾದಗಳು…ಮೂಲ ಸಾಹಿತ್ಯವನ್ನು ಹೀಗೇ ಒದಗಿಸುತ್ತಿರಿ.

 6. sunaath says:

  ತ್ರಿವೇಣಿಯವರೆ,
  ಪೂರ್ಣವಿರಾಮವನ್ನು ಪೂರೈಸಿದ್ದಕ್ಕಾಗಿ ಧನ್ಯವಾದಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಬರದೆ ಹೋದೆ ನೀನು – ನಿಸಾರ್ ಅಹಮದ್ಬರದೆ ಹೋದೆ ನೀನು – ನಿಸಾರ್ ಅಹಮದ್

ಕವಿ – ನಿಸಾರ್ ಅಹಮದ್ ಸಂಗೀತ – ಸಿ.ಅಶ್ವಥ್ ಗಾಯಕರು – ಪುತ್ತೂರು ನರಸಿಂಹ ನಾಯಕ್, ಇಂದು ವಿಶ್ವನಾಥ್ ಹಾಡು ಕೇಳಿ ಈ ದಿನಾಂತ ಸಮಯದಲಿ ಉಪವನ ಏಕಾಂತದಲಿ ಗೋಧೂಳಿ ಹೊನ್ನಿನಲಿ ಬರದೆ ಹೋದೆ ನೀನು ಮರೆತು ಹೋದೆ ನೀನು ನಾ

ಗಗನದಿ ಸಾಗಿವೆ – ಚೆನ್ನವೀರ ಕಣವಿಗಗನದಿ ಸಾಗಿವೆ – ಚೆನ್ನವೀರ ಕಣವಿ

ಕವನ : ಗಗನದಿ ಸಾಗಿವೆ ಕವಿ : ಚೆನ್ನವೀರ ಕಣವಿ ಗಗನದಿ ಸಾಗಿವೆ ಬಾಗಿವೆ ಮೋಡ ಹೋಗಿದೆ ನೀರನು ಸುರಿದು; ಬರುವುವು, ಬಂದೇ ಬರುವುದು ನೋಡ ತುಂಬಿಸಿ, ತುಳುಕಿಸಿ ಹರಿದು. ಇಳೆಗೂ ಬಾನಿಗು ಮಳೆ ಜೋಕಾಲಿ ತೂಗಿದೆ, ತಂಗಿದೆ ಚೆಲುವು; ಹಸುರೇ

ನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿ

ಹಾಡು ಕೇಳಿ ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ ಬರುವ ಕಂಪಿನ ಹೆಸರು ಪ್ರೇಮವೆಂದು ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ ಕಣ್ಣಸನ್ನೆಯ ಹೆಸರು ಪ್ರೇಮವೆಂದು ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ ದೂರದಿಂಪಿನ ಹೆಸರು ಪ್ರೇಮವೆಂದು ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ ಮಂದಹಾಸದ ಹೆಸರು