ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲಿರಯ್ಯಾ ||

ರಾಯೆಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿಗತವಾದ ಅತಿಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧||

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳಪೋಗದಂತೆ ಕವಾಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತ ತಾನೊಬ್ಬ ಬಲ್ಲ ||೨||

ಧರೆಯೊಳೀನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲಾ ಪೊಗಳುತಿಹವು
ಸಿರಿಯರಸ ಶ್ರೀ ಪುರಂದರ ವಿಠಲನ ನಾಮವನು
ವರಕಾಶಿಯೊಳಗಿಪ್ಪ ಶಿವನೊಬ್ಬ ಬಲ್ಲ||೩||

***