ಕಾಂತಿ ಕೋಪದಿಂದ ಧುಮುಗುಟ್ಟುತ್ತಾ ರೂಮಿಗೆ ಬಂದಾಗ ಪ್ರವಲ್ಲಿಕಾ ಅಕ್ಕ ಧಾರಿಣಿಗೆ ತಾನು ಭರತಖಾನನ ಬಂಧನದಿಂದ ತಪ್ಪಿಸಿಕೊಂಡು ಬಂದ ಕಥೆಯನ್ನು ಬಣ್ಣಬಣ್ಣವಾಗಿ ಹೇಳಿ ಮುಗಿಸುತ್ತಿದ್ದಳು.
ಧಾರಿಣಿ ಇವರುಗಳ ರೂಮಿನಲ್ಲೇ `ಗೆಸ್ಟ್’ಎಂದು ಇರುವುದಾದ್ದರಿಂದ ಧಾರಿಣಿಗೂ ಕಾಂತಿಗೂ ಕೆಲವೇ ಸಮಯದಲ್ಲಿ ಚೆನ್ನಾದ ಸ್ನೇಹ ಬೆಳೆದಿತ್ತು…ಕಾಂತಿ ಪ್ರವಲ್ಲಿಕಾ ತರ `ಪುಕ್ಕಲು ಪಾರ್ಟಿ’ಅಲ್ಲ ಧಾರಿಣಿಯಷ್ಟಲ್ಲದಿದ್ದರೂ ತಕ್ಕಷ್ಟು ಧೈರ್ಯವಂತೆ ಜೊತೆಗೆ ಅನ್ಯಾಯ ಕಂಡರೆ ಸಿಡಿದು ಬೀಳುವ ಸ್ವಭಾವದವಳು ಸ್ವಲ್ಪ ಮಾತಾಳಿ ಕೂಡಾ…ಈ ಎಲ್ಲಾ ಗುಣಗಳು ಧಾರಿಣಿಯಲ್ಲೂ ಇದ್ದುದರಿಂದ ಅವಳಿಗೆ ಕಾಂತಿಯೊಂದಿಗೆ ಸ್ನೇಹ ಸಲಿಗೆ ಚಿಗುರಿತ್ತು. ಈ ಸಲಿಗೆಯಿಂದಲೇ ಧಾರಿಣಿ ನಗುತ್ತಾ `ಏನು ಅಮ್ಮಾವ್ರೂ…ಗರಂ ಗರಂ ಆಗಿದೀರಾ…ಇವತ್ತೂ? ಎಂದಳು.
ಅದಕ್ಕುತ್ತರವಾಗಿ ದೊಪ್ಪೆಂದು ಮಂಚದ ಮೇಲೆ ಕೂರುತ್ತಾ ಕಾಂತಿ ಕೋಪದ ದನಿಯಲ್ಲಿ ಹೇಳಿದಳು`ನೀವಿಬ್ರೂ ಯಾವ್ದೋ ಕಾಲದ ಆ ರೌಡಿ ಕಥೆನೇ ಮೆಲಕು ಹಾಕ್ತಾ ಕೂತಿರಿ. ಈ ವಲ್ಲೀನೋ ಇವಳ ಪುಕ್ಕಲುತನನೋ ದೇವರಿಗೇ ಪ್ರೀತಿ ಬಾರೇ… ಮತ್ತೆ ಪೋಲೀಸ್ ಸ್ಟೇಷನ್ ಗೆ ಹೋಗಿ ಆ ಕೇಡಿಗಳು ನಿನ್ ಹಿಡ್ಕೊಂಡು ಹೋಗಿದ್ರೂ ಅಂತ ಅವ್ನ ಬಗ್ಗೆ ಡೀಟೇಲ್ಸ್ ಕೊಟ್ಟು ಬರಣಾ ಅಂದ್ರೆ ಅಯ್ಯಯ್ಯೋ ಒಂದ್ ಸಲ ಪೋಲೀಸ್ ಹತ್ರ ಹೋಗಿದ್ದಕ್ಕೇ ಹೀಗೆಲ್ಲಾ ಆಯ್ತಪ್ಪಾ ಮತ್ತೆ ಆ ಸಾವಾಸಾನೇ ಬೇಡಾ ಅಂದ್ಬುಟ್ಳು ಪೋಲೀಸೇ ಹಾಸ್ಟೆಲ್ ಗೆ ಹುಡ್ಕಿಕೊಂಡು ಬಂದಾಗ ಅವಳಿಲ್ಲಾ ಅಂತ ಹೇಳಿಸ್ ಬಿಟ್ಳು… ಈಗ ನೋಡಿದ್ರೆ… ಕಂಡ್ ಕಂಡೋರ್ ಹತ್ರ ಹಳೇ ಕಥೆ ಕೊಚ್ಕೋತಿದಾಳೇ…ಅಮ್ಮ ಮಹಾರಾಣೀ… ಪ್ರವಲ್ಲಿಕಾ ದೇವೀ… ಹಳೆ ಕತೆ ಕೊಚ್ಕೊಳೋದು ಬಿಟ್ಟು ಗಂಟು ಮೂಟೆ ಕಟ್ಟಿ ತಯಾರಾಗೂ… ಬೆಂಗಳೂರಿಂದ ಆಚೆ ಯಾವುದೋ ತಿಪ್ಪೇಗುಂಡೀಲಿ ನಿನ್ ಹೊಸ ಅರಮನೆ ತಯಾರಾಗಿದೆ. ಅಲ್ಲಿಗೆ ದಯಮಾಡಿಸಿ ನಿನ್ನ ಪಾದಧೂಳಿಯಿಂದ ಪುನೀತ ಮಾಡು…’ಎಂದು ಕೂಗಿದಳು. ಪ್ರವಲ್ಲಿಕಾ ಅಳು ಮೂತಿ ಮಾಡಿ ಕೂತಾಗ ಧಾರಿಣಿ ಇನ್ನು ಕೆಲಸ ಕೆಟ್ಟೀತೆಂದು ಕಾಂತಿಯನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾ` ಯಾಕೆ ಕಾಂತಿ ಏನಾಯ್ತು ನಿಂಗೆ… ಏನ್ ಸಮಾಚಾರ ಹೇಳು…’ಎಂದಳು ಕಾಂತಿ ಬುಸುಗುಟ್ಟುತ್ತಾ ತಾನು ಈಗ ತಾನೇ ಹಾಸ್ಟೆಲ್ ನೋಟೀಸ್ ಬೋರ್ಡ್ ನಲ್ಲಿ ನೋಡಿದ ಸಂಗತಿ ಹೇಳಿದಾಗ ಪ್ರವಲ್ಲಿಕಾ ಅಳಲು ಶುರು ಮಾಡಿಬಿಟ್ಟರೆ ಧಾರಿಣಿ ಚಿಂತಿತಳಾದಳು.
ಅಂದು ಕೆ.ಡಿ ಶಿವಣ್ಣನ ಕೈವಾಡದಿಂದಾಗಿ ಹಾಸ್ಟೆಲ್ ನಲ್ಲಿ ಒಂದು ಸರ್ಕಾರಿ ಆದೇಶವನ್ನು ಪ್ರಕಟಿಸಲಾಗಿತ್ತು ಹಾಸ್ಟೆಲ್ ಕಟ್ಟಡ ಸುಮಾರು ನಲವತ್ತು ವರ್ಷದಷ್ಟು ಹಳೆಯದಾದ್ದರಿಂದ ಸರ್ಕಾರ ಅದನ್ನು ಕೆಡವಿ ಹೊಸ ಕಟ್ಟಡ ಕಟ್ಟಿಸಲು ತೀರ್ಮಾನಿಸಿದೆಯೆಂದೂ ಆದ ಕಾರಣ ಹಾಸ್ಟೆಲ್ ನಿವಾಸಿಗಳೆಲ್ಲಾ ತಮ್ಮ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಬೆಂಗಳೂರಿನ ಹೊರವಲಯದಲ್ಲಿರುವ ತಾತ್ಕಾಲಿಕ ಕಟ್ಟಡವೊಂದಕ್ಕೆ ಹೊರಡಲು ಒಂದು ವಾರದೊಳಗಾಗಿ ತಯಾರಾಗಬೇಕೆಂದು ಆಜ್ಞಾಪಿಸಲಾಗಿದೆ ಎಂದೂ ನೋಟೀಸಿನಲ್ಲಿ ತಿಳಿಸಲಾಗಿತ್ತು. ತನ್ನ ಸೂಚನೆ ಪ್ರಕಾರ ಹಾಸ್ಟೆಲ್ ನಲ್ಲಿ ನೋಟೀಸು ಜಾರಿಯಾಗಿದ್ದು ತಿಳಿದು ಕೆ.ಡಿ ಶಿವಣ್ಣನಿಗೆ ತೃಪ್ತಿ ಯಾಯಿತು. ಹಾಸ್ಟೆಲ್ ಹುಡುಗಿಯರಿಗಾಗಿ ಅವನು ಸೂಚಿಸಿದ್ದ ಬೆಂಗಳೂರು ಹೊರವಲಯದ ಕಟ್ಟಡ ಒಂದು ಸರ್ಕಾರಿ ಗೋಡೋನ್.ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ್ದು. ಇನ್ನು ಸರಳಾದೇವಿಯನ್ನೂ,ಕೊಳಚೆ ನಿರ್ಮೂಲನಾ ಇಲಾಖೆಯ ಅಧೀಕ್ಷಕರನ್ನೂ ಸುಮ್ಮನಾಗಿಸುವ ಕೆಲಸ ಉಳಿಯಿತು ಅಂದುಕೊಂಡ.ಅಧೀಕ್ಷಕರ ಕಥೆ ಪರವಾಗಿಲ್ಲ ಆವಮ್ಮನದೇ ಪ್ರಾಬ್ಲಮ್ಮು ಸೀಎಮ್ಮಿಗೆ ಕ್ಲೋಸು ಬೇರೆ ಅವ್ಳು ಹುಸಾರಾಗಿ ಮುಂದೆ ಹೆಜ್ಜೆ ಇಡಬೇಕು. ಇನ್ಯಾರ ಕಡೆಯಿಂದನೂ ತೊಂದ್ರೆ ಇಲ್ಲ’ಅಂತ ತನಗೆ ತಾನೇ ಹೇಳಿಕೊಂಡ ಕೆ.ಡಿ ಶಿವಣ್ಣ. ಅದೇ ಅವನು ಮಾಡಿದ ತಪ್ಪು.
ಏಕೆಂದರೆ ಅದೇ ಸಮಯಕ್ಕೆ ಪ್ರವಲ್ಲಿಕಾಳ ರೂಮಿನಲ್ಲಿ ಕೋಪತಪ್ತ ಹುಡುಗಿಯರ ಗುಂಪು ಮುಂದೇನು ಮಾಡಬೇಕೆಂದು ಕಾಂತಿ ಮತ್ತು ಧಾರಿಣಿಯ ನೇತೃತ್ವದಲ್ಲಿ ಚರ್ಚಿಸುತ್ತಿತ್ತು. ಧಾರಿಣಿ ತಾನು ಹಾಸ್ಟೆಲ್ ನ ಗೆಸ್ಟ್ ಮಾತ್ರವಾಗಿರುವುದರಿಂದ ಮತ್ತು ಕೇವಲ ಮಾರ್ಗದರ್ಶನ ಮಾಡುತ್ತೀನೆಂದೂ ಪ್ರತಿಭಟನೆಯ ಮುಂದಾಳತ್ವ ಯಾವುದಾದರೂ ಹುಡುಗಿ ವಹಿಸಿಕೊಳ್ಳಬೇಕೆಂದೂ ಹೇಳಿದಾಗ ಕಾಂತಿ ಮುಂದಾಗಿ ತಾನೇ ನಾಳೆ ತಾವು ಮಾಡಬೇಕೆಂದಿರುವ ಪ್ರತಿಭಟನಾ ಮೋರ್ಚಾದ ಮುಂದಾಳುವಾದಳು. ಧಾರಿಣಿ ವಿದ್ಯಾರ್ಥಿನಿ ಅಲ್ಲ ಕೇವಲ ಗೆಸ್ಟ್ ಸೋ ಹಾಗೆಲ್ಲ ಪ್ರೊಟೆಸ್ಟ್ ಮಾಡುವಂತಿಲ್ಲ ಜೊತೆಗೆ ಅವಳು ಯಾರಿಗೂ ಹೇಳದೇ ಇರುವ ಒಂದು ರಹಸ್ಯ ಅವಳನ್ನು ಈ ಮೋರ್ಚಾದಿಂದ ವಿಮುಖಳಾಗಿಸಿತ್ತು. ಅದು ಅವಳು ಗುಟ್ಟಾಗಿ ತನ್ನ ಪೇಟೇಂಟ್ ಫೈಲ್ ಮಾಡಲು ಡಾಕ್ಯುಮೆಂಟ್ ಅನ್ನು ತಯಾರು ಮಾಡಿ ಬೆಂಗಳೂರಿನಿಂದಲೇ ಅಮೇರಿಕಾದ ಪೇಟೆಂಟ್ ಕಛೇರಿಯಲ್ಲಿ ಸಬ್ಮಿಟ್ ಮಾಡುವ ಅವಳ ಪ್ಲ್ಯಾನ್.
ಪ್ರವಲ್ಲಿಕಾ ಎಂಬ ಬಿಳಿ ಪಾರಿವಾಳ ತನ್ನ ಬಲೆಯಿಂದ ತಪ್ಪಿಸಿಕೊಡು ಹೋಯಿತೆಂದು ತಿಳಿದಾಗ ಭರತಖಾನನ ಕೋಪ ಮೇರೆ ಮೀರಿತ್ತು.ಒಂದಿಬ್ಬರು ಸಹಚರರಿಗೆ ತನ್ನ ಕೋಪದ ರುಚಿ ತೋರಿಸಿದ್ದ ಈ ಬಾರಿ ಪ್ರವಲ್ಲಿಕಾಳನ್ನು ಹಿಡಿತಂದು ಎಲ್ಲಿಯಾದರೂ ಸಾಗಿಸಿಬಿಡಬೇಕೆಂದು ಯೋಚಿಸಿದ ಅದರಂತೆ ಪ್ರವಲ್ಲಿಕಾ ಹಾಸ್ಟೆಲ್ ಮುಂದೆಯೇ ಒಂದೆರಡು ದಿನ ವಾಚ್ ಮಾಡಬೇಕೆಂದು ನಂಬಿಕೆಯ ನಾಲ್ವರು ಧಡಿಯರಿಗೆ ಸೂಚನೆಕೊಟ್ಟು ಹೊರನಡೆದ ಭರತ ಖಾನ.
ಧಾರಿಣಿಯ ಸೂಚನೆ ಪ್ರಕಾರ ಮರುದಿನ ಹುಡುಗಿಯರು ಕಾಂತಿಯ ನೇತೃತ್ವದಲ್ಲಿ ಘೋಷಣೆ ಕೂಗುತ್ತಾ ವಿದಾನ ಸೌಧದವರೆಗೂ ಮೋರ್ಚಾ ಹೋಗಿ ಮಹಿಳಾ ಕಲ್ಯಾಣ ಮಂತ್ರಿ ಸರಳಾದೇವಿಗೆ ತಮ್ಮ ಮನವಿ ಪತ್ರ ಅರ್ಪಿಸಿದರು.ವಿದ್ಯಾರ್ಥಿನಿಯರ ಪರೀಕ್ಷೆಗಳು ಹತ್ತಿರದಲ್ಲೇ ಇರುವುದರಿಂದ ತಮ್ಮ ಅಭ್ಯಾಸದ ಮೇಲೆ ಈ ವರ್ಗಾವಣೆ ಕೆಟ್ಟ ಪರಿಣಾಮ ಬೀರುವುದೆಂದೂ ಮತ್ತು ಕಟ್ಟಡ ಬಹಳ ಗಟ್ಟು ಮುಟ್ಟಾಗಿರುವುದರಿಂದ ಸರ್ಕಾರ ಈ ನಿರ್ಧಾರ ಕೈ ಬಿಡ ಬೇಕೆಂದೂ ಅದರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಕಾಂತಿ ಮಂತ್ರಿಗಳ ಚೇಂಬರ್ ಒಳಗೆ ತನ್ನೊಂದಿಗೆ ಬಲವಂತವಾಗಿ ಪ್ರವಲ್ಲಿಕಾಳನ್ನು ಎಳೆದುಕೊಂಡು ಹೋದಳು ಮರುದಿನದ ಎಲ್ಲಾ ಪ್ರಮುಖ ವಾರ್ತಾ ಪತ್ರಿಕೆಗಳಲ್ಲಿ ಸರಳಾ ದೇವಿಯವರಿಗೆ ಮನವಿಪತ್ರ ಅರ್ಪಿಸುತ್ತಿರುವ ಕಾಂತಿಯ ಪಕ್ಕದಲ್ಲಿ ಪ್ರವಲ್ಲಿಕಾ ಇರುವ ಚಿತ್ರಗಳು ಅಚ್ಚಾಗಿದ್ದವು.
ನಮಗೆ ಎಷ್ಟು ಪ್ರಚಾರ ಸಿಕ್ಕಿದರೆ ಅಷ್ಟು ಒಳ್ಳೆಯದು ಎಂದು ಮರುದಿನದ ಪತ್ರಿಕೆ ನೋಡಿ ತೃಪ್ತಿಯಿಂದ ನುಡಿದಳು ಧಾರಿಣಿ ಪಾಪ… ಅವಳಿಗೆ ಈ ಪ್ರಚಾರದಿಂದಾಗುವ ಅಪಾಯದ ಅರಿವಿಲ್ಲ!
***
‘ಯಾವಳವಳು ಕಾಂತೀ…ಹಿಡ್ಕೊಂಡ್ ಬರ್ರಲಾ ನಾಕು ಒದ್ರೆ ನೆಟ್ ಗಾಗ್ ತಾಳೇ’ .ಕೆ.ಡಿ
ಶಿವಣ್ಣ ಅಬ್ಬರಿಸಿದ.ಲೋಕಲ್ ಟಿ.ವಿ ಚಾನಲ್ ಒಂದು ಹಾಸ್ಟೆಲ್ ಗೆ ಹೋಗಿ ಹುಡುಗಿಯರ ಸಂದರ್ಶನ ಬೇರೆ ಮಾಡಿತ್ತು.ಬಾಯಿ ಬಡುಕಿ ಕಾಂತಿ ಟಿ.ವಿಯಲ್ಲಿ ಹಾವ ಭಾವಗಳೊಂದಿಗೆ ಮಾತಾಡಿದ್ದು,ಸರಳಾದೇವಿ ಮುಖ್ಯ ಮಂತ್ರಿಗಳು ಇದರ ಬಗ್ಗೆ ವಿಚಾರಿಸುರೆಂದು ಹೇಳಿದ್ದು ಕೇಳಿ ರಾಜಯ್ಯ ಕಿಡಿ ಕಿಡಿಯಾದ್ದ ನೇರವಾಗಿ ಪೋನ್ ಎತ್ತಿ ಶಿವಣ್ಣನನ್ನು ಜಾಡಿಸಿದ…ರಾಜಯ್ಯನಿಗೆ ಸಿಟ್ಟು ಬಂದರೆ ಅವನೆಷ್ಟು ಕ್ರೂರಿ ಆಗಬಲ್ಲನೆಂದುಕೆ.ಡಿ. ಶಿವಣ್ಣನಿಗೆ ಚೆನ್ನಾಗಿ ಗೊತ್ತು. ಇನ್ನು ಸರಳಾದೇವಿ ಮುಖ್ಯ ಮಂತ್ರಿ ವರೆಗೆ ವಿಶಯ ತೆಗೆದುಕೊಂಡು ಹೋಗಲು ಬಿಟ್ಟರೆ ರಾಜಯ್ಯ ತನ್ನ ಪ್ರಾಣ ಉಳಿಸುವುದಿಲ್ಲವೆಂದೂ ಅವನಿಗೆ ಗೊತ್ತು. ತನ್ನ ಬಂಟರನ್ನು ಕಾಂತಿಯ ಹಾಸ್ಟೇಲ್ ಕಡೆಗೆ ಅವಸರವಾಗಿ ಅಟ್ಟಿದ. ಪ್ರವಲ್ಲಿಕಾಳಿಗಾಗಿ ಹಾಸ್ಟೆಲ್ ಮುಂದೆ ಟಳಾಯಿಸುತ್ತಿದ್ದ ಭರತ ಖಾನನ ಬಂಟರಾದ ಹುಸೇನಿ,ಫರೂಕ್,ಮತ್ತು ಇನಾಯತ್‍ಗೂ ಕೆ.ಡಿ ಶಿವಣ್ಣ ನ ಬಂಟರಾದ ಮಂಜ,ಸೂರಿ ಗೂ ಆಗಲಿರುವ ಸಣ್ಣ ಘರ್ಷಣೆ ಯಾರ್ಯಾರ ಹಣೆ ಬರಹ ಬದಲಿಸಲಿದೆಯೋ ಯಾರಿಗೆ ಗೊತ್ತು???
***
ಮಾರನೇ ದಿನ ಟಿವಿಯಲ್ಲಿ ಬಿಸಿ ಬಿಸಿ ಸುದ್ದಿ. ನಗರಾಭಿವೃದ್ದಿ ಮಂತ್ರಿ ಕೆ.ಡಿ. ಶಿವಣ್ಣ ನ ಮನೆಯಲ್ಲಿ ಬಾಂಬ್ ಸ್ಪೋಟಿಸಿ ಅವರ ಮನೆಯ ಮುಂದಿನ ಗಾರ್ಡ್ ಒಬ್ಬ ಮತ್ತು ಶಿವಣ್ಣನ ಮಗಳ ಪ್ರೀತಿಯ ನಾಯಿ `ಚುಪ್ಪಿ` ಮೃತ ಪಟ್ತಿದ್ದರು ಕೆ.ಡಿ. ಶಿವಣ್ಣ ಟಿವಿಯಲ್ಲಿ ಕಣ್ಣೀರಿಡುತ್ತಾ ತನ್ನ ಮಗಳೊಂದಿಗೆ ಕಾಣಿಸಿಕೊಂಡ ತನ್ನಂಥ ಸಜ್ಜನ ಎಂಥಾ ಪ್ರಾಣಾಪಾಯ ಎದುರಿಸಬೇಕಾಗಿ ಬಂದಿದೆ ಎಂದು ಹಲುಬಿದ ಚುಪ್ಪಿಯ ಫೋಟೊಗಳು ಎಲ್ಲಾ ಪತ್ರಿಕೆಯ ಮೊದಲ ಪುಟದಲ್ಲಿ ಬಂದವು ಸತ್ತ ಗಾರ್ಡ್ ಬಗ್ಗೆ ಮೂಲೆಯಲ್ಲಿ ಸಣ್ಣದಾಗಿ ವರದಿ ಮಾಡಲಾಗಿತ್ತು.
ಬಾಂಬ್ ಸ್ಪೋಟದ ಕಾರಣ ಶಿವಣ್ಣನಿಗೆ ಗೊತ್ತಿಲ್ಲದೇ ಏನಿಲ್ಲ.ಅದಾಗಿದ್ದು ಹೀಗೆ. ಮಂಜ ಮತ್ತು ಸೂರಿ ಪ್ರವಲ್ಲಿಕಾಳ ಹಾಸ್ಟೆಲ್ ಮುಂದೆ ಕಾಂತಿಯನ್ನು ಎಳೆದೊಯ್ಯ ಬೇಕೆಂದು ಹೊಂಚು ಹಾಕುತ್ತಿದ್ದರು.ಮೆಲ್ಲಗೆ ಹಾಸ್ಟೆಲ್ ಕಾಂಪೋಂಡ್ ಧುಮುಕಿ ಕಾಂತಿಯ ರೂಮ್ ನಲ್ಲಿ ಕಿಟಕೆ ಮೂಲಕ ಇಣುಕಿ ಸಹ ನೋಡಿದರು ಆದರೆ ರೂಮಿನಲ್ಲಿ ಪ್ರವಲ್ಲಿಕಾ ಸಹ ಇದ್ದಳು. ಧಾರಿಣಿ ಪಕ್ಕದ ರೂಮಿನಲ್ಲಿ ಹುಡುಗಿಯರೊಂದಿಗೆ ಮಾತಾಡುತ್ತಾ ಕೂತಿದ್ದರಿಂದ ಅವಳು ಮಂಜ ಮತ್ತು ಸೂರಿಯ ದೃಷ್ಟಿಯಿಂದ ಬಚಾವಾಗಿದ್ದಳು ತಾವು ಕಾಂತಿಯನ್ನು ಎಳೆದೊಯ್ಯುವುದಕ್ಕೆ ಪ್ರವಲ್ಲಿಕಾ ಸಾಕ್ಷಿಯಾಗಿ ಇರುವ ಅಪಾಯ
ಮನಗಂಡು ಸಲ್ಪ ಹೊತ್ತು ಕಾಯೋಣವೆಂದುಕೊಂಡು ಹೊರಬಂದುಬಿಟ್ಟರು. ಹಾಸ್ಟೆಲ್ ಎದುರಿನ ಛೋಟಾಚಾಯ್ ಅಂಗಡಿಯಲ್ಲಿ ಒಂದು ಗ್ಲಾಸ್ ಟೀ ಕುಡಿಯೋಣವೆಂದು ಅಲ್ಲಿಗೆ ಬಂದರು
ಕಾಂತಿ `ಪ್ರವಲ್ಲಿಕಾ…’ ಎಂದು ಕೂಗುವುದನ್ನು ಕೇಳಿಸಿಕೊಂಡಿದ್ದ ಮಂಜನಿಗೆ ಆ ಹೆಸರು ಬಲು ಇಷ್ಟವಾಗಿಬಿಟ್ಟಿತ್ತು ತನ್ನ ತಂಗಿ ಕಳೆದ ತಿಂಗಳು ಹೆತ್ತ ಹೆಣ್ಣು ಮಗುವಿಗೆ ಈ ಹೆಸರು ಒಪ್ಪುತ್ತದೆನ್ನಿಸಿತು ಆದರೆ ಆ ಹೆಸರು ಹೇಳಲು ಅವನ ನಾಲಿಗೆ ತಿರುಗುತ್ತಿಲ್ಲ!ಟೀ ಅಂಗಡಿಯಲ್ಲಿ ಕುಳಿತು ಎರಡು ಸ್ಟ್ರಾಂಗ್ ಟೀ ಆರ್ಡರ್ ಮಾಡಿಬೀಡಿ ಹಚ್ಚಿಕೊಂಡು`ಏನ್ಲಾ ಸೂರಿ…ಆ ಹೆಸ್ರು…’ ಅಂತ ಕೇಳಿ ಪ್ರವಲ್ಲಿಕಾ ಹೆಸರನ್ನು ಬಾಯಿ ಪಾಠ ಮಾಡಿಕೊಳ್ಳಲಾರಂಭಿಸಿದ.ಇದ್ದಕ್ಕಿದ್ದಂತೆ ಸೂರಿಗೆ ತಾವು ಪ್ರವಲ್ಲಿಕಾಳನ್ನೂ ಏಕೆ ಒಯ್ಯಬಾರದೆಂಬ ಯೋಚನೆ ಬಂದು ಬಿಟ್ಟಿತು`ಎಂಗೂ ಹುಡ್ಗಿ ಚೆಂದಾಗವ್ಳೆ…’ಎಂದು ಜೊಲ್ಲು ಸುರಿಸುತ್ತಾ ಮಂಜನಿಗೆ ತನ್ನ ಆಲೋಚನೆ ಹೇಳಿದ ಬಡಪಟ್ಟಿಗೆ ಮಂಜ ಒಪ್ಪಲ್ಲಿಲ್ಲ ಧಣಿಗಳ ತಾವ ಕೇಳಣ ಅಂದ ಇಬ್ಬರಿಗೂ ಜಗಳ ಸುರುವಾಯಿತು ಕೆ.ಡಿ. ಶಿವಣ್ಣನಿಗೆ ಮೊಬೈಲ್ ನಲ್ಲಿ ಕೇಳಿದ್ದೂ, ಅವನು ಪ್ರವಲ್ಲಿಕಾ ಳನ್ನೂ ಏಳೆತರಲು ಗ್ರೀನ್ ಸಿಗ್ನಲ್ ಕೊಟ್ಟಿದ್ದೂ ಆಯಿತು. ಅದೇ ಟೀ ಅಂಗಡಿಯಲ್ಲಿ ಕೂತು ಪ್ರವಲ್ಲಿಕಾಳಿಗಾಗಿ ಹಾಸ್ಟೆಲ್ ಮುಂದೆ ಕಾಯುತ್ತಿದ್ದ ಭರತ ಖಾನನ ಬಂಟರಾದ ಹುಸೇನಿ,ಫರೂಕ್,ಮತ್ತು ಇನಾಯತ್ ಗೂ ಇವರಿಬ್ಬರ ಮಾತುಗಳು ಅಯಾಚಿತವಾಗಿ ಕೇಳಿಬಂದವು! ಹುಸೇನಿ ಸ್ವಲ್ಪ ಮುಂಗೋಪಿ ನಮ್ಮ ಖಾನನ `ಹಕ್ಕಿ’ಯನ್ನು ಪಟಾಯಸಲು ಬಂದವರಿಗೆ ಬುದ್ದಿಕಲಿಸ ಬೇಕೆಂದು ಮಂಜನಿಗೂ ಸೂರಿಗೂ ಸರಿಯಾಗಿ ನಾಲ್ಕು ತದುಕಿದ. ಅಷ್ಟಕ್ಕೇ ಬಿಡದೆ ಭರತ ಖಾನನಿಗೆ ಪೋನ್ ಮಾಡಿ ಎಲ್ಲಾ ವಿಶಯ ತಿಳಿಸಿ ಬಿಟ್ಟ.
ಭರತ ಖಾನ ತಾವು ಕಾರ್ ಬಾಂಬ್ ಇಟ್ಟಿದ್ದನ್ನು ಪ್ರವಲ್ಲಿಕಾ ನೋಡಿದಳು ಎಂಬ ಕಾರಣಕ್ಕಾಗೇ ಈ ಮೊದಲು ಅವಳನ್ನು ಕಿಡ್ನ್ಯಾಪ್ ಮಾಡಿಸಿದ್ದ ಆದರೆ ಪ್ರವಲ್ಲಿಕಾಳ ಪುಕ್ಕಲುತನದಿಂದಾಗಿ ಅವಳು ತಾನಾಗೇ ಮುಂದಾಗಿ ಸಾಕ್ಷಿ ಕೊಡುವ ಸಂಭವ ಕಡಿಮೆ ಎಂದು ಈಗ ತಿಳಿದಿತ್ತು ಆದರೆ ಭರತ ಖಾನನಿಗೂ ಪ್ರವಲ್ಲಿಕಾಳ ಸೌಂದರ್ಯ ಹುಚ್ಚು ಹಿಡಿಸಿತ್ತು ಜೊತೆಗೆ ತನ್ನ ಮೇಲೆ ಪೋಲೀಸ್ ಕಂಫ್ಲೇಂಟ್ ಕೊಟ್ಟವಳ ಮೇಲೆ ಸೇಡು ತೀರಿಕೊಳ್ಳಬೇಕೆಂಬ ಬಯಕೆ ಪ್ರವಲ್ಲಿಕಾಳನ್ನು ಕಳೆದು ಕೊಳ್ಳಲು ಭರತ ಖಾನ ತಯಾರಿಲ್ಲ . ಪ್ರವಲ್ಲಿಕಾಳ ಬ್ರೈನ್ ವಾಷ್ ಮಾಡಿ ಅವಳನ್ನು ತಮ್ಮ ಗುಂಪಿನಲ್ಲಿ ಶಾಮೀಲು ಮಾಡಿಕೊಂಡು ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಾಸ್ಟೆಲ್ನಲ್ಲಿ ಸ್ಥಾಪಿಸಿಬಿಟ್ಟರೆ ಯಾರಿಗೂ ಅನುಮಾನ ಬರದಂತೆ ಅವಳು ತನ್ನ ಹಾಸ್ಟೆಲ್ನಿಂದಲೇ ಭರತಖಾನನಿಗಾಗಿ ಮತ್ತು ಅವನ ಗುಂಪಿಗಾಗಿ ಆಪರೇಟ್ ಮಾಡಬಹುದೆಂದು ಅವನ ಧೀರ್ಘಾವಧಿ ಯೋಜನೆ ಹಾಗಾಗಿ ಕೆಡಿ ಶಿವಣ್ಣ ಹಾಸ್ಟೆಲ್ ಅನ್ನು ಎತ್ತಂಗಡಿ ಮಾಡಲು ನೋಟೀಸ್ ಹಾಕಿಸಿದ್ದಾನೆ ಅಂತ ಹುಸೇನಿ ಹೇಳಿದಾಗ ಅವನಿಗೆ ಭಯಂಕರ ಸಿಟ್ಟು ರೇಗಿತು ಕೆ.ಡಿ ಶಿವಣ್ಣನಿಗೆ. ಪೋನ್ ಮಾಡಿ ಹಾಸ್ಟೆಲ್ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲವೆಂದು ಎಚ್ಚರಿಸಿದ ಇವನ್ಯಾರೋ ಲೋಕಲ್ ಗೂಂಡಾ… ನಾನಾದ್ರೋ ರಾಜ್ಯದ ಮಂತ್ರಿ ಎಂದು ಅಸಡ್ಡೆಯಿಂದ `ಏನ್ ಮಾಡ್ಕೋತೀಯೋ ಹೋಗ್..’ಎಂದು ಪೋನ್ ಕುಕ್ಕಿ ಬಿಟ್ಟ . ಶಿವಣ್ಣ ಇದರಿಂದ ರೋಷಗೊಂಡ ಭರತಖಾನ್ `ನಿಂಗೆ ಮಾಡ್ತೀನಿ ತಡಿ ಎಂದು ಈ ಬಾಂಬ್ ಸ್ಪೋಟದ ಮೂಲಕ ಕೆ.ಡಿ ಶಿವಣ್ಣನಿಗೆ ಎಚ್ಚರಿಕೆ ಕೊಟ್ಟಿದ್ದ.
***
ಮಧ್ಯಾಹ್ನದ ಹೊತ್ತು ಸಣ್ಣ ನಿದ್ದೆ ತೂಗುತ್ತಿದ್ದ ಶಾರದಮ್ಮನವರಿಗೆ ಪಕ್ಕದ ಮನೆಯ ಹುಡುಗ ಓಡೋಡಿ ಬಂದು ತೇಕುತ್ತಾ ಹೇಳಿದ ಸುದ್ದಿ ದಿಗಿಲು ಹುಟ್ಟಿಸಿತ್ತು. “ದೊಡ್ಡಮ್ಮಾ, ಪೇಟೆಯಲ್ಲಿ ಎಲ್ಲ ಮಾತಾಡ್ತಿದ್ದಾರೆ, ವಲ್ಲೀ ಅಕ್ಕನಿಗೆ ತೊಂದರೆ ಆಗ್ತಿದೆಯಂತೆ. ಅವ್ಳ ಹಾಸ್ಟೆಲ್ ಹೊರಗೆ ರೌಡಿಗಳಿದಾರಂತೆ. ಅವ್ಳು ಯಾರೋ ಮಂತ್ರಿ ಜೊತೆ ಮಾತಾಡಕ್ಕೆ ಅವ್ಳ ಫ್ರೆಂಡ್ ಜೊತೆ ಹೋಗಿದ್ದು ಸರಿಯಲ್ವಂತೆ. `ಇನ್ನು ಅವ್ಳ ಕತೆ ಗೋ…ವಿಂದ’, ಅಂತ ಏನೇನೋ ಮಾತಾಡ್ತಿದಾರೆ ದೊಡ್ಡಮ್ಮ.” ಅಂದ. ಶಾರದಮ್ಮ “ಏನೂಂದ್ರೆ, ಇಲ್ಲಿ ಬನ್ನಿ… ಕೇಳ್ರೀ… ಏನೂಂದ್ರೇ…” ಕೂಗಿಕೊಳ್ಳುತ್ತಾ ಎಚ್ಚರತಪ್ಪಿ ಬಿದ್ದುಬಿಟ್ಟರು.
ಪ್ರಪಂಚದ ವ್ಯವಹಾರಗಳನ್ನೆಲ್ಲ ಬದಿಗಿಟ್ಟು ದೇವಧ್ಯಾನ ಮಾಡಬೇಕೆಂದು ಇಚ್ಛಿಸುತ್ತಾ ಮಾಡು ದಿಟ್ಟಿಸುತ್ತಾ ಮಲಗಿದ್ದ ಶಾಸ್ತ್ರಿಗಳಿಗೆ ಮಡದಿಯ ಕೂಗು ಪಕ್ಕನೆ ದಾಖಲಾಗಲಿಲ್ಲ. ಸುದ್ದಿ ತಂದ ಹುಡುಗನೇ ಒಳಗೆ ಬಂದು ಕೋಣೆಯ ಬಾಗಿಲು ದೂಡಿ ವಿಷಯ ತಿಳಿಸಿದಾಗ ದಡಬಡಿಸಿ ಎದ್ದರು. ಚೊಂಬು ನೀರಿನೊಡನೆಯೇ ಚಾವಡಿಗೆ ನಡೆದು ಶಾರದೆಯ ಕೆನ್ನೆ ತಟ್ಟಿ, ಗಲ್ಲ ಅಲುಗಿಸಿ, ಹಣೆಗೆ, ಕಣ್ಣಿಗೆ ನೀರು ತಟ್ಟಿದರು. “ಲೇ, ಶಾರದಾ, ಏಳೇ, ಏನಾಯ್ತೇ, ಏಳೇ ಮೇಲೆ. ನನ್ನನ್ನು ಬಿಟ್ಟು ನೀನು ಅದ್ಹ್ಯಾಗ್ ಹೋಗ್ತೀಯೇ… ಏಳೇ, ಕಣ್ಬಿಡೇ…!!” ಗದ್ಗದ ಸ್ವರದೊಂದಿಗೂ ಪ್ರೀತಿ ಒಸರುತ್ತಿದ್ದ ಶಾಸ್ತ್ರಿಗಳ ಮುಖವನ್ನೇ ದಿಟ್ಟಿಸುತ್ತಾ ನಿಂತಿದ್ದ ಜ್ಞಾನೋದಯ ಆದವನಂತೆ ಒಮ್ಮೆಲೇ ಓಡಿ ಹೋಗಿ ತನ್ನ ತಾಯಿಯನ್ನು ಕರೆತಂದ. ಇನ್ನೊಂದು ಮಹಿಳೆಯನ್ನು ನೋಡುತ್ತಲೇ ಶಾಸ್ತ್ರಿಗಳು ಪಕ್ಕಕ್ಕೆ ಸರಿದು ತನ್ನವಳನ್ನು ಅವರ ಆರೈಕೆಗೆ ಬಿಟ್ಟುಕೊಟ್ಟರು. ಗಂಡ ಹಣೆಗೆ, ಕಣ್ಣಿಗೆ ತಟ್ಟಿದ್ದ ನೀರಿಗೋ, ಅರಿವಿನ ಪರಿಗೋ, ಶಾರದಮ್ಮ ಮೆಲ್ಲನೆ ಕಣ್ಣುಬಿಟ್ಟರು. “ಏನೂಂದ್ರೇ, ಬೆಂಗಳೂರಿಗೆ ಹೋಗೋಣ, ನಡೀರಿ” ಅಂದರು.