ರಚನೆ – ಪುರಂದರದಾಸರು
ಗಾಯಕಿಯರು – Bombay sisters
ಬಂದದ್ದೆಲ್ಲಾ ಬರಲಿ ಗೋವಿಂದನ ದಯ ನಮಗಿರಲಿ ||ಪ||
ಮಂದರಧರ ಗೋವಿಂದ ಮುಕುಂದನ ಸಂದರುಶನ ಒಂದಿದ್ದರೆ ಸಾಲದೇ ||ಅನು||
ಆರು ಅರಿಯದಿರಲೆನ್ನ – ಮುರಾರಿಯು ವರದ ಪ್ರಸನ್ನ
ತೋರುವ ದುರಿತದ ಬೆನ್ನ – ಭವಹಾರಿ ಕೃಪಾಂಬುಧಿ ಚೆನ್ನ ||
ಶ್ರೀರಮಣನ ಶ್ರೀ ಚರಣ ಸೇವಕರಿಗೆ
ಘೋರ ಯಮನು ಶರಣಾಗತನಲ್ಲವೇ || ೧ ||
ಅರಗಿನ ಮನೆಯೊಳಗಂದು ಪಾಂಡುವರನು ಕೊಲಬೇಕೆಂದು
ದುರುಳ ಕುರುಪ ಕಪಟದಲಿ ಹಾಕಿರುತಿರೆ ಆ ಕ್ಷಣದಲಿ ||
ಹರಿಕೃಪೆಯವರಲ್ಲಿದ್ದ ಕಾರಣ
ದುರಿತವೆಲ್ಲ ಬಯಲಾದುದಲ್ಲವೇ || ೨ ||
ಸಿಂಗನ ಹೆಗಲೇರಿದಗೆ – ಕರಿಭಂಗವೇಕೆ ಮತ್ತವಗೆ |
ರಂಗನ ದಯವುಳ್ಳವಗೆ – ಭವಭಂಗಗಳೇತಕವಗೆ ||
ಮಂಗಳ ಮಹಿಮ ಪುರಂದರವಿಠಲನ
ಹಿಂಗದ ದಯೆವೊಂದಿದ್ದರೆ ಸಾಲದೇ ||೩||