ಭರತಖಾನ ಈಗ ಪ್ರವಲ್ಲಿಕಾಳ ಕಡೆಗೆ ತಿರುಗಿದ. ನೋಡಿದಷ್ಟೂ ನೋಡಬೇಕೆನಿಸುವ ಚೆಲುವಿನ ಮುಖ. ಆದರೆ ಈಗ ಅವನಿಗೆ ಸಮಯವಿಲ್ಲ. “ವಲ್ಲೀ, ನಾನು ಬರುವದು ರಾತ್ರಿಯಾಗುತ್ತದೆ. ಬಾತ್ ರೂಮ್ ಉಪಯೋಗಿಸ್ಕೊ. ಕಿಚನ್ ನಲ್ಲಿ ಬೇಕಾದ್ದನ್ನು ಮಾಡಿಕೊಂಡು ತಿನ್ನು. ಆರಾಮಾಗಿ ಟೈಮ್ ಕಳೆ. ಇಂದೇ ನಿನ್ನ ಸುಹಾಗ್ ರಾತ್. …..ತಿಳಿಯಿತೆ? ನಿನಗೆ ಎರಡು options. ಒಂದು ನನ್ನೊಡನೆ ನಿಕಾಹ್ ಮಾಡಿಕೊಂಡು ಸುಖವಾಗಿರು. ಇಲ್ಲಾ……..ಗೊತ್ತಾಯಿತಲ್ಲ?”, ಎಂದು ಅಟ್ಟಹಾಸದಿಂದ ನಕ್ಕ.
“ಇಲ್ನೋಡು, ನಾನು ಹೊರಗಿನಿಂದ lock ಮಾಡಿಕೊಂಡು ಹೋಗುತ್ತಿದ್ದೇನೆ.
ಬೆಂಗಳೂರಿನಲ್ಲಿ ನನ್ನಿಂದ ತಪ್ಪಿಸಿಕೊಂಡು ಹೋದೆಯೆಲ್ಲ, ಅದು ಇಲ್ಲಿ ಸಾಧ್ಯವಿಲ್ಲ.”, ಎಂದು ಮತ್ತೊಮ್ಮೆ ನಕ್ಕ.
“ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ,
ಈಗ ಟಾಟಾ, ರಾತ್ರಿ ಆಟಾ, ಆಡು ಬಾ ನಲ್ಲೆ!”,
ಎಂದು ಹಾಡುತ್ತ, ಕೀಲಿಕೈ ತಿರುಗಿಸುತ್ತ, ಭರತಖಾನ ಬಾಗಿಲೆಳೆದುಕೊಂಡು ಹೊರ ನಡೆದ.
………………………………………………….
ಪ್ರವಲ್ಲಿಕಾ ಹೆದರುಪುಕ್ಕಿ ನಿಜ, ಆದರೆ ತೀಕ್ಷ್ಣ ಬುದ್ಧಿಯವಳು.ಮನದಲ್ಲಿಯೆ ಯೋಜನೆಯೊಂದನ್ನು ರೂಪಿಸಿಕೊಂಡಳು. ಮೊದಲು ಸ್ನಾನ ಮಾಡಿ ಕಿಚನ್ ಹೊಕ್ಕಳು. ಶಾಕಾಹಾರಿಯಾದ ತನಗೆ ತಿನ್ನಲು ಅಲ್ಲಿ ಬ್ರೆಡ್ ಹಾಗು ಬೆಣ್ಣೆ ಬಿಟ್ಟರೆ ಮತ್ತೇನೂ ಇರಲಿಲ್ಲ. ಅದನ್ನೆ ಅಷ್ಟು ತಿಂದು, ಆ ಮನೆಯ ಶೋಧನೆಯನ್ನು ನಡೆಸಿದಳು. ಅವಳ ಆಶ್ಚರ್ಯಕ್ಕೆ ಭರತಖಾನನ ಕಂಪ್ಯೂಟರ್ ರೂಮಿನಲ್ಲಿ ಕನ್ನಡದಲ್ಲಿ ಬರೆದ ಒಂದು ಫೈಲ್ ಸಿಕಿತು. ಅದರಲ್ಲಿ ಉಗ್ರವಾದಿಗಳು ಇಂಡಿಯಾದಲ್ಲಿ ನಡೆಯಿಸಬೇಕಾದ ಕೆಲವು ಯೋಜನೆಗಳ ರೂಪುರೇಷೆಗಳು. ಇವನ್ನು ಭರತಖಾನ ಕನ್ನಡದಲ್ಲೇಕೇ ಬರೆದಿದ್ದಾನೆ? ಸ್ವಲ್ಪ ಯೋಚನೆಯ ನಂತರ ಅವಳಿಗೆ ಉತ್ತರ ಹೊಳೆಯಿತು. ಉಗ್ರವಾದಿಗಳನ್ನು ಬೇಟೆಯಾಡುತ್ತಿರುವ ಅಮೇರಿಕನ್ ಗುಪ್ತಚರ ಇಲಾಖೆಗೆ ಅರೇಬಿಯನ್ ಬರುತ್ತಿರಬಹುದು, ಆದರೆ ಕನ್ನಡ ಬರುವದಿಲ್ಲ!
ಪ್ರವಲ್ಲಿಕಾ ಕಂಪ್ಯೂಟರ್ ಓಪನ್ ಮಾಡಿದಳು; ಇಂಟರನೆಟ್ ಚಾಲೂ ಮಾಡಿದಳು. ಆ ಫೈಲ್ ನ್ನು ಸ್ಕ್ಯಾನ್ ಮಾಡಿ ಧಾರಿಣಿಯ ಏ-ಮೇಲಿಗೆ ಕಳುಹಿಸಿದಳು. ಅದರ ಜೊತೆಗೆ ಒಂದು ಸಂದೇಶಃ “ನಾನು ಸುರಕ್ಷಿತವಾಗಿದ್ದೇನೆ. ಹೆದರಬೇಡಿ.”
…………………………………………………….
ಭರತಖಾನ ರಾತ್ರಿ ಮರಳಿದಾಗ ಅವನಿಗೆ ಆಶ್ಚರ್ಯ ಕಾದಿತ್ತು. ಅವನ ಮಂಚದ ಮೇಲೆ ಬುರ್ಖಾ ಧರಿಸಿದ ಪ್ರವಲ್ಲಿಕಾ!
“ವಲ್ಲೀ!”, ಭರತಖಾನ ಸಂತೋಷದಿಂದ ಉಸುರಿದ.
“ನಾನು ನಿಮ್ಮವಳು; ಆದರೆ ದಯವಿಟ್ಟು ನನ್ನನ್ನು ಧರ್ಮಾಂತರಿಸಬೇಡಿ”, ಪ್ರವಲ್ಲಿಕಾ ಖಾನನಿಗೆ ವಿನಂತಿಸಿದಳು.
“ಅದು ಮುಂದಿನ ಮಾತು. ಈಗಂತೂ,
‘ಅನಿಸುತಿದೆ ಯಾಕೋ ಇಂದು, ನೀನೇ ನನ್ನವಳೆಂದು!”,
ಎನ್ನುತ್ತ ಭರತಖಾನ ಪ್ರವಲ್ಲಿಕಾಳನ್ನು ಎಳೆದುಕೊಂಡ.
ಪರಮಾನ್ನ ನಾಯಿಯ ಪಾಲಾಯಿತೇ??
***
ಹೊರಕೋಣೆಯ ಸೋಫಾದ ಮೇಲೆ ಪಿಳಿ ಪಿಳಿ ಕಣ್ಣು ಬಿಡುತ್ತಾ ಛಾವಣಿ ನೋಡುತ್ತಿದ್ದ ಪ್ರವಲ್ಲಿಕಾ ತಾನು ಮಾಡಿದ್ದೆಷ್ಟು ಸರಿ ಎಂದು ಚಿಂತಿಸತೊಡಗಿದಳು. ಧಾರಿಣಿಗೆ ಸಂದೇಶ ಕಳಿಸುವಾಗ ಆನ್’ಲೈನ್ ಸಿಕ್ಕಿದ್ದ ತನ್ನ ಗೆಳತಿ ಕಾಂತಿಯೊಂದಿಗೆ ಸೇರಿ ಷಡ್ಯಂತ್ರ ರಚಿಸಿದ್ದಳು. ಖಾನ್ ರಾತ್ರಿ ಮನೆ ಸೇರಿದಾಗ ನಶೆ ಏರಿಸಿಕೊಂಡೇ ಬಂದಿದ್ದ. ಏನೋ ಸಾಧಿಸಿದ ಖುಷಿಯಲ್ಲಿದ್ದ. ಅವನ ತಾಳಕ್ಕೆ ಹೆಜ್ಜೆ ಹಾಕುತ್ತಾ ಅವನನ್ನು ಮತ್ತಷ್ಟು ಮತ್ತನನ್ನಾಗಿಸಿದ್ದಳು. ಅವನ ಹಾಲಿಗೆ ಮನೆಯಲ್ಲಿದ್ದ ಸ್ಕಾಚ್ ಸೇರಿಸಿ ಕುಡಿಸಿದ್ದಳು. ಆತ, ಓಲಾಡುತ್ತಾ ದೀಪವಾರಿಸಿ ಇವಳನ್ನು ಸೆಳೆದುಕೊಂಡು ಮಲಗಿದಾಗ ಅತೀವ ಭಯ ಪಟ್ಟಿದ್ದಳು. ತನ್ನ ಪ್ರಾಣ ಇಲ್ಲೇ ಹೊರಟು ಹೋಗಲಿ, ಪುಂಡನ ಕೈಗೆ ಸಿಕ್ಕಿದೆನಲ್ಲಾ ಎಂದು ಪರಿತಪಿಸಿದ್ದಳು. ಮತ್ತೆ ಮತ್ತೆ ದೇವರನ್ನು ಬೇಡಿಕೊಂಡಿದ್ದಳು.
ದಿಂಬಿಗೆ ತಲೆಯಿರಿಸಿದ ಖಾನ್ ನಿಮಿಷದೊಳಗೆ ನಿದ್ದೆಗೆ ಜಾರಿದ್ದ. ಅವನ ಪರ್ಸಿನ ಜೊತೆಗೆ ಮನೆಯ ಕೀ ಮತ್ತು ಒಂದಿಷ್ಟು ಹಣ ಕೈಗೆ ಸಿಕ್ಕಿತ್ತು. ಕೋಣೆಯನ್ನು ಜಾಲಾಡಿದರೂ ತನ್ನ ಪಾಸ್’ಪೋರ್ಟ್ ಸಿಗಲಿಲ್ಲ. ಈಗೇನು ಮಾಡುವುದೋ ತೋಚದೆ ಮನೆಯಿಂದ ಹೊರಗೆ ಹೋಗುವ ನಿರ್ಧಾರ ಮಾಡಿದಳು. ಮನೆಯ ಕೀ ಜೊತೆಗೆ ಕಾರಿನ ಕೀ ಕೂಡಾ ಇತ್ತು. ತನಗೆ ಡ್ರೈವಿಂಗ್ ಬರುತ್ತೆ, ಆದರೆ, ಪರದೇಶದಲ್ಲಿ, ಪರವಾನಗಿ ಇಲ್ಲದೆ…? ಚಿಂತಿಸುತ್ತಾ ಮನೆಯ ಮುಂದೆ ನಿಂತಿದ್ದ ಕಾರಿನ ಬಾಗಿಲು ತೆರೆದಳು. ಒಳಗೆ ಕೂತು ಒಮ್ಮೆ ಸುತ್ತ ನಿರುಕಿಸಿದಳು, ಸೊಗಸಾದ ಬೆಂಝ್ ಕಾರು. ಗ್ಲೋವ್ ಕಂಪಾರ್ಟ್’ಮೆಂಟಿನಲ್ಲಿ ಇಣುಕಿದಳು. ಒಂದು ಹೊರೆ ಕಾಗದ ಪತ್ರಗಳು… ಅಯಾಚಿತವಾಗಿ ಹೊರಗೆಳೆದಳು, ತನಗೇನಾದರೂ ಪುರಾವೆ ದೊರಕಬಹುದು ಎಂಬ ಆಸೆ, ಯಾವುದೇ ಸುಳಿವು ಸಿಗಬಹುದೆಂಬ ನಿರೀಕ್ಷೆ, ಅವಳಲ್ಲಿತ್ತು. ಎರಡು ನಿಮಿಷಗಳಲ್ಲಿ ಕಿರುನಗೆ ತೇಲಿಸಿಕೊಳ್ಳುತ್ತಾ ಕಾರನ್ನು ಚಲಾಯಿಸಿದಳು. ಅರ್ಧ ಘಂಟೆಯ ಬಳಿಕ ಭಾರತೀಯ ದೂತಾವಾಸದ ಅತಿಥಿಗೃಹದಿಂದ ಮುಂಬಯಿಗೆ, ಕಾಂತಿಯ ಅಪ್ಪನಿಗೆ ಫೋನ್ ಮಾಡಿ, ಕೇಶವನ ಮನೆಯವರಿಗೆ ತನ್ನ ಕ್ಷೇಮದ ಸುದ್ದಿ ತಿಳಿಸಲು ಹೇಳಿದಳು. ಪ್ರವಲ್ಲಿಕಾ ಕಾಂತಿಯ ಅಪ್ಪನಿಗೆ ತಿಳಿಸಿದ ಇನ್ನೂ ಒಂದು ವಿಷಯದಿಂದ ಮರುದಿನ ಬೆಂಗಳೂರಿನ ಆರಕ್ಷಕ ಠಾಣೆಯಲ್ಲಿ ಗಡಿಬಿಡಿ, ಗೊಂದಲ ಉಂಟಾಗುವ ಬಗ್ಗೆ ಯಾರಿಗೂ ಯಾವ ಸುಳಿವೂ ಇರಲಿಲ್ಲ.
***
ಇರುವೆ ಕಷ್ಟ ಪಟ್ಟು ಕಟ್ಟಿದ ಹುತ್ತದಲ್ಲಿ ಹಾವು ವಾಸ ಮಾಡುತ್ತೆ.ಆಕಾಶ ತನ್ನೆಲ್ಲಾ ಬುದ್ದಿಶಕ್ತಿ ಉಪಯೋಗಿಸಿ ಅಸಲಿಯಂತೆಯೇ ಇರುವ ನಕಲಿ ವಿವರಗಳನ್ನೊಳಗೊಂಡ ಪೇಟೆಂಟ್ ಡಾಕ್ಯುಮೆಂಟ್ ತಯಾರು ಮಾಡಿದ್ದ. ಟಿಮ್ ನನ್ನು ಸದ್ಯಕ್ಕೆ ಏಮಾರಿಸಿ ಬಾ ಎಂದು ಪ್ರವಲ್ಲಿಕಾ ಅಶೋಕಾ ಗೆ ಹೊರಡುವಾಗ ನೀಡಿದ್ದ. ಇದರಿಂದ ಲಾಭವಾಗಿದ್ದು ಮಾತ್ರ ಭರತ ಖಾನನಿಗೆ! ಪ್ರವಲ್ಲಿಕಾ ಎಂಬ ಬಿಳಿಯ ಪಾರಿವಾಳ ತಪ್ಪಿಸಿಕೊಂಡು ಹೋಯಿತೆಂಬುದೇನೋ ನಿಜ . ಆದರೆ ಒಂದು ಬಿಲಿಯನ್ ಡಾಲರ್ ಲಾಭ ಮಾಡಿ ಕೊಟ್ಟು ಹೋಯಿತಲ್ಲ ಎಂದು ಸಂತೋಷದಿಂದ ಬೀಗಿದ ಭರತ ಖಾನ್. ಅದು ನಡೆದದ್ದು ಹೀಗೆ…ಟಿಮ್ ತನ್ನ ಬಾಸ್ ಜೋಯಿಯನ್ನು ಸಂಪರ್ಕಿಸಿ ಖಾನನ ಬೇಡಿಕೆ ಯನ್ನು ತಿಳೀಸಿದ ಆದರೆ ಇಂಥಾ ಬಿಲಿಯನ್ ಡಾಲರ್ ವಿಶಯದಲ್ಲಿ ಜೋಯಿ ಏಕಾಏಕಿ ನಿರ್ಧಾರ ಕೈಗೊಳ್ಳುವಂತಿರಲಿಲ್ಲ…ಸಹಜವಾಗಿಯೇ ಒಂದಿಷ್ಟು ವಿಳಂಬವಾಯಿತು …ಸಹನೆ ಕಳೆದುಕೊಂಡ ಖಾನ ಆ ದೈತ್ಯ ಕಂಪನಿಯ ಎದುರಾಳಿ ಮೂರನೆಯ ಕಂಪನಿ ವೀಎಕ್ಸ್ ಗೆ ಒಂದು ಬಿಲಿಯನ್ ಡಾಲರ್ ಗೆ ಆಕಾಶ ಬರೆದ ಪೇಟೆಂಟ್ ಅನ್ನು ಮಾರಿಬಿಟ್ಟ. ಆಕಾಶನದು ಅಗಾಧ ಬುದ್ದಿ, ಆದರೆ ಏನು ಪ್ರಯೋಜನ…? ದುಡ್ದು ಮಾಡಿದವ ಖಾನ್. ವೀಎಕ್ಸ್ ನ ಪ್ರಮುಖರಿಗೆ ಖಾನ ಮಾಡಿದ ಮೋಸ ಇವತ್ತಲ್ಲ ನಾಳೆ ತಿಳಿದೇ ತಿಳಿಯುತ್ತದೆ ಮತ್ತು ಮಿಡ್ಲ್ ಈಸ್ಟ್ ನ ಲ್ಲಿ ವೀಎಕ್ಸ್ ನ ಬೇರುಗಳು ಆಳವಾಗಿವೆ. ನಂತರ ಖಾನ ನ ಗತಿ ಏನಾಗಬಹುದು..?
ಶಾರದಮ್ಮ, ಶಾಸ್ತ್ರಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಮಕ್ಕಳಾದ ಪ್ರವಲ್ಲಿಕಾ, ಧಾರಿಣಿಯರಿಬ್ಬರೂ ಕಣ್ಮರೆಯಾಗಿಹೋಗಿದ್ದು ಅವರನ್ನು ದಿಗ್ಭಾಂತರನ್ನಾಗಿಸಿತ್ತು. ಆಕಾಶ ಮತ್ತು ಅಮೆರಿಕಾದಿಂದ ಬಂದಿದ್ದ ರಾಜೀವ ಅವರನ್ನು ಸಂತೈಸುವಲ್ಲಿ ವಿಫಲರಾಗಿದ್ದರು. ಧಾರಿಣಿ, ಪ್ರವಲ್ಲಿಕಾರ ಬಗ್ಗೆ ಅವರಿಗೂ ಸರಿಯಾದ ಮಾಹಿತಿ ತಿಳಿದಿರಲಿಲ್ಲ. ಪ್ರವಲ್ಲಿಕಾಳಿಂದ ’ತಾನು ಕ್ಷೇಮವಾಗಿದ್ದೇನೆ’ ಎಂಬ ಸಂದೇಶ ಬಂದಿದ್ದರೂ ಅವಳು ದುಬೈಗೆ ಹೋಗಿದ್ದೇಕೆ? ಅವಳನ್ನು ಅಲ್ಲಿಗೆ ಕರೆದೊಯ್ದವರಾರು ಎಂಬ ಶಾರದಮ್ಮನ ಪ್ರಶ್ನೆಗೆ ಯಾರೂ ಉತ್ತರಿಸುವಂತಿರಲಿಲ್ಲ. ಯಾವ ಗಳಿಗೆಯಲ್ಲಿ ಯಾರಿಂದಲಾದರೂ, ಏನಾದರೂ ವಿಷಯ ತಿಳಿದೀತೇ ಎಂದು ಎಲ್ಲರೂ ಕಾದು ಕುಳಿತಿದ್ದರು.
ಒಟ್ಟಿನಲ್ಲಿ ಶಾಸ್ತ್ರಿಗಳು ಭವಿಷ್ಯ ನೋಡಿ ಹೇಳಿದ್ದ ಗಂಡಾಂತರ ಕಾಲ ಇದೇ ಇರಬಹುದೆಂಬುದನ್ನು ಮಾತ್ರ ಎಲ್ಲರೂ ನಂಬಿದಂತಿತ್ತು. ’ದೇವರು ದಿಂಡರು ಯಾವುದೂ ಇಲ್ಲ, ಜ್ಯೋತಿಷ್ಯ, ಗ್ರಹಚಾರ ಎಲ್ಲಾ ಶುದ್ಧ ಸುಳ್ಳು, ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ….’ ಎಂದು ಅತಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆಕಾಶನಿಗೂ ತಮ್ಮೆಲ್ಲರನ್ನೂ ಮೀರಿದ ಶಕ್ತಿಯೊಂದು ಎಲ್ಲೋ ದೂರದಲ್ಲಿದ್ದುಕೊಂಡು ನಮ್ಮನ್ನೆಲ್ಲಾ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರಬಹುದೇ ಅನಿಸುವ ಮಟ್ಟಿಗೆ, ಇದ್ದಕ್ಕಿದ್ದಂತೆ ಎದುರಾದ ಪರಿಸ್ಥಿತಿ ಎಲ್ಲರನ್ನೂ ಕಂಗಾಲು ಮಾಡಿಹಾಕಿತ್ತು.