ಕವಿ : ಮಂಜೇಶ್ವರ ಗೋವಿಂದ ಪೈ (೧೮೮೩-೧೯೬೩)
ಪ್ರಥಮ ಪ್ರಭಾತದಿಂದೆನಿತೊ ವರಮಿರದೆ
ನೀನೊಡೆಯ ನಮ್ಮ ಭಾರತವ ಕಾದಿರುವೆ !
ಬಳಿಕೆಮ್ಮನೇಂ ಪರಾಧೀನತೆಗೆ ತೊರೆದೆ ?
ಮರಳಿ ಹಿಂದುಗಳ ಭಾಗ್ಯವನೆಂದು ತೆರೆವೆ ?
ವರುಷ ಹಲನೂರಾಯ್ತು, ನಮಗಿಲ್ಲ ನೋಡ
ಸ್ವಾತಂತ್ರ್ಯ ! ನಮ್ಮ ದುರ್ದಶೆಯನೆಂದರಿವೆ ?
ಮನುಜರಲ್ಲವೆ? ನಮಗೆ ಮನುಜತನ ಬೇಡಾ?
ಅಕಟ ಹಿಂದುಗಳ ಭಾಗ್ಯವನೆಂದು ತೆರೆವೆ ?
ಅಳಿಸೆ ನೀ ಹಿಂದುತೆಯನಳಸೆಮ್ಮ ತೊಡೆಯ-
ದೊಡನೇಕೆ ನೀನೆ, ಇಂತನ್ಯರಿಂದರೆವೆ ?
ಉಳಿಸೆ ಬೆಳೆಸಮ್ಮ ಮೇಣೆಳಸೆ ನೀನೊಡೆಯಾ,
ಪೇಳ ಹಿಂದುಗಳ ಭಾಗ್ಯವನೆಂದು ತೆರೆವೆ ?
ಕೇಳು, ಕೇಳದಿರೊಡೆಯ, ನಾ ಕೇಳುತಿರುವೆ-
ಹಿಂದುಗಳ ಭಾಗ್ಯವಿನ್ನೆಂದು ನೀ ತೆರೆವೆ ?