ಕವಿ : ಚನ್ನವೀರ ಕಣವಿ
ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರ ಬರುವನು ಕೂಸಿನ ಹಾಗೆ
ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು
ಅದಕೆ ಅದರ ಗುಣ ದೋಷಗಳಂಟಿಸಿ
ಬಿಡಿಸಿ ಬಿಟ್ಟ ತೊಡಕು
ಗಿಡದಿಂದುರುವ ಎಲೆಗಳಿಗೂ ಮುದ
ಚಿಗುರುವಾಗಲು ಒಂದೆ ಹದ
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನು ಕಲಾವಿದ?
ಬಿಸಿಲ ಧಗೆಯ ಬಸಿರಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾಘಳಿಗೆ
ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ
****************
(ಬೆಂಗಳೂರು ದೂರದರ್ಶನದಲ್ಲಿ ಬರುತ್ತಿದ್ದ ’ಗೀತ ಚಿತ್ರ’ವನ್ನು ನೋಡಿದವರಾಗಿದ್ದರೆ, ಇಬ್ಬರು ಹುಡುಗಿಯರು ಸೈಕಲ್ ತುಳಿಯುತ್ತಾ ಹಾಡುವ ಈ ಹಾಡು ಖಂಡಿತ ನಿಮಗೆ ನೆನಪಿರುತ್ತದೆ)
ಹೌದು ನಾನು ಕೇಳಿದ್ದೇನೇ, ತು೦ಬಾ ಧನ್ಯವಾದ.