ಕವಿ – ಅಂಬಿಕಾತನಯದತ್ತ
ಕವನ ಸಂಕಲನ – ಸಖೀಗೀತ

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರು ಸರತಿ ಬಂದು ಹೋದಾಂವಾ ||ಪಲ್ಲ||

ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ
ತುಂಬ ಮೀಸಿ ತೀಡಿಕೋತ ಹುಬ್ಬ ಹಾರಸಾಂವಾ
ಮಾತು ಮಾತಿಗೆ ನಕ್ಕು ನಗಿಸಿ ಆಡಿಸ್ಯಾಡಾಂವಾ
ಏನೊ ಅಂದರ ಏನೊ ಕಟ್ಟಿ ಹಾsಡ ಹಾಡಾಂವಾ
ಇನ್ನೂ ಯಾಕ. . . . .

ತಾಳೀಮಣಿಗೆ ಬ್ಯಾಳೀಮಣಿ ನಿನಗೆ ಬೇಕೇನಂದಾಂವಾ
ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
ಇನ್ನೂ ಯಾಕ. . . . .

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರಿ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ
ಇನ್ನೂ ಯಾಕ. . . . .

ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣೀಯಂತ ರಮಿsಸ ಬಂದಾಂವಾ
ಬೆರಳಿಗುಂಗರಾ ಮೂಗಿನಾಗ ಮೂಗಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀ ಹಾಂಗ ಎದ್ಯಾಗ ನಟ್ಟಾಂವಾ
ಇನ್ನೂ ಯಾಕ. . . . .

ಹುಟ್ಟಾ ಯಾಂವಾ ನಗೀಕ್ಯಾದಿಗಿ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೇ ಪ್ರೀತೀ ವೀಳ್ಳೇ ಮಡಿಚಿಕೊಂಡಾಂವಾ
ಜಲ್ಮಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದೀ ಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ
ಇನ್ನೂ ಯಾಕ. . . . .

ಯಲ್ಲಿ ! ಮಲ್ಲಿ ! ಪಾರಿ ! ತಾರಿ ! ನೋಡೀರೇನ್ರವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಲ್ಹಾನ ನನ್ನಾಂವಾ?
ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀವಾ
ಹಾದೀಬೀದಿ ಹುಡುಕತೈತ್ರೆ ಬಿಟ್ಟ ಎಲ್ಲಾ ಹ್ಯಾಂವಾ
ಇನ್ನೂ ಯಾಕ. . . .

**************

One thought on “ಹುಬ್ಬಳ್ಳಿಯಾಂವಾ – ಅಂಬಿಕಾತನಯದತ್ತ”

 1. ಈ ಕವನ ಬೇಂದ್ರೆಯವರ ಅಪ್ರಕಟಿತ ನಾಟಕದ ಒಂದು ಹಾಡಂತೆ. ತನ್ನ ಪ್ರೀತಿಪಾತ್ರ ‘ಗಿರಾಕಿ’ ದೂರವಾದಾಗ ಅರೆಹುಚ್ಚಿಯಾದ ಜೋಗತಿ ಹಾಡುವ ಹಾಡಿದು. ಕವನ ಹೊರನೋಟಕ್ಕೆ ಎಷ್ಟು ಮನೋರಂಜಕವಾಗಿದೆಯೋ, ಒಳನೋಟದಲ್ಲಿ ಅಷ್ಟೇ ಮನೋವೇಧಕವಾಗಿದೆ.
  “ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ” ಅನ್ನುವ ಸಾಲು, ಆ ಜೋಗತಿಯ Limit of Aspirations ತೋರಿಸುತ್ತದೆ. ಇನ್ನು ಎಷ್ಟೇ ಜನುಮಗಳು ಬರಲಿ, ಈ ನೀಚ, ಪುರುಷಪ್ರಧಾನ ನಿರ್ಮಿಸಿದ ಸಮಾಜದಲ್ಲಿ ಅವನು ಅವಳಿಗೆ ಕೇವಲ ‘ಗೆಣ್ಯಾ’; ಅವಳು ಅವನ ಉಪಪತ್ನಿ, ಅವನ ಹೆಂಡತಿಯಲ್ಲ. ಅಲ್ಲದೇ, ಇವನು ಎಷ್ಟೆ ಪ್ರೀತಿಯವನಾದರೂ ಸಹ ಅವಳಿಗೆಹೊಟ್ಟೆ ಹೊರೆಯುವ ಸಾಧನವೆನ್ನುವದೇ ಪ್ರಧಾನ ವಿಷಯ. ಆದುದರಿಂದಲೇ, ಈ “ಸೆಟ್ಟರ ಹುಡುಗ” ಸೆಟಗೊಂಡು ಹೋದಾಗ ಅವಳಿಗೆ ಹೆಚ್ಚಿನ ದುಕ್ಕವಾಗುವದು.
  ಬೇಂದ್ರೆಯವರ ಕಲ್ಪನಾಶಕ್ತಿ ಎಷ್ಟೇ ಇದ್ದರೂ ಸಹ ವಾಸ್ತವಿಕತೆಯನ್ನು ಅವರು ಅಕ್ಷರಶಹ ಪಾಲಿಸುತ್ತಾರೆ ಎನ್ನುವದಕ್ಕೆ ಈ ಕವನದಲ್ಲಿರುವ ಒಂದು ಸಾಲನ್ನು ಉದಾಹರಿಸಬಹುದುಃ
  “ಕಸಬೇರ ಕಳೆದು,ಬಸವೇರ ಬಿಟ್ಟು ದಾಟಿ ಬಂದಾಂವಾ
  ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ”
  ವೇಷ್ಯೆಯರ ಶ್ರೇಣೀಕರಣದಲ್ಲಿ ಮೊದಲ ಮೆಟ್ಟಿಲಲ್ಲಿ ಕಸಬೆಯರು (ordinary prostitutes), ಎರಡನೆಯ ಮೆಟ್ಟಿಲಲ್ಲಿ ಬಸವಿಯರು ( temple prostitutes), ಅದಕ್ಕೂ ಮೇಲಿನ ಮೆಟ್ಟಿಲಲ್ಲಿ ಎಲ್ಲಮ್ಮನ ಜೋಗತಿಯರು ಬರುತ್ತಾರೆ.
  ಬೇಂದ್ರೆಯವರ ಯಾವುದೇ ಕವನವನ್ನು ಎತ್ತಿಕೊಂಡರೂ ಸಹ ಅಲ್ಲಿ ವಾಸ್ತವಿಕತೆಯ ಉಲ್ಲಂಘನೆಯಾಗದಿರುವದು ಅಥವಾ ನೂರಕ್ಕೆ ನೂರರಷ್ಟು ಬಳಕೆಯಾಗಿರುವದನ್ನು ನಾವು ಗಮನಿಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.