ರಾಮಾಯಣ, ಮಹಾಭಾರತ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು ಎನ್ನಲು ನಮ್ಮಲ್ಲಿ ಬಳಕೆಯಲ್ಲಿರುವ ಕೆಲವು ಗಾದೆಗಳೇ ಸಾಕ್ಷಿ. ಅವುಗಳಲ್ಲಿ ನನಗೆ ತಿಳಿದ ಕೆಲವನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ.
* ’ರಾಮ ರಾಜ ಆದರೂ ರಾಗಿ ಬೀಸೋದು ತಪ್ಪೀತೇ?’- ಯಾರೇ ಅಧಿಕಾರಕ್ಕೆ ಬಂದರೂ, ಜನಸಾಮಾನ್ಯರ ಬದುಕಿನ ಮೇಲೆ ಏನೂ ಪರಿಣಾಮವಾಗದು ಎಂಬುದು ಅಂದಿಗೂ-ಇಂದಿಗೂ ನಿಜವೇ.
*’ರಾವಣನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ’ – ಈ ಗಾದೆಯ ಹಿನ್ನಲೆ ಮಾತ್ರ ನನಗೆ ಅರ್ಥವಾಗಿಲ್ಲ. ರಾವಣ ಯಾವಾಗ ಮಜ್ಜಿಗೆ ಕುಡಿದ? 😉
ರಾವಣನ ಹೊಟ್ಟೆ ಅವನ ದೇಹದ ಗಾತ್ರಕ್ಕೆ ತಕ್ಕಂತೆ ದೊಡ್ಡದೇ ಇರಬಹುದು. ಅದರೆ ಬಕಾಸುರ ಹಸಿವಿನಿಂದ ಆರ್ಭಟಿಸಿದ್ದಿದೆಯೇ ಹೊರತು ರಾವಣ ಎಂದೂ ಹಸಿದು ಅಬ್ಬರಿಸಿದ ಪ್ರಸಂಗ ಕೇಳಿಲ್ಲ.
*’ಲಂಕೆಯಲ್ಲಿ ಹುಟ್ಟಿದ್ದೆಲ್ಲಾ ರಾವಣನ ಪಡೆ’ – ದುಷ್ಟ ಸಹವಾಸದಲ್ಲಿರುವವನು ದುಷ್ಟನೇ ಆಗುತ್ತಾನೆ ಎನ್ನುವುದನ್ನು ಸೂಚಿಸುವ ಗಾದೆ.
* ’ರಾತ್ರಿ ಎಲ್ಲಾ ರಾಮಾಯಣ ಕೇಳಿ ಬೆಳಿಗ್ಗೆ ಎದ್ದು ರಾಮ ಸೀತೆಗೆ ಏನಾಗಬೇಕು ಅಂದಹಾಗೆ’- ರಾಮಾಯಣ ಕೇಳಿದವನಿಗೆ ಅದರಲ್ಲಡಗಿದ ಜೀವನ ತತ್ವಗಳು, ಪಾರಮಾರ್ಥಿಕ ರಹಸ್ಯಗಳು ಅರ್ಥವಾಗದಿದ್ದರೂ, ಕೊನೆಪಕ್ಷ ರಾಮ ಮತ್ತು ಸೀತೆ ಗಂಡ-ಹೆಂಡತಿ ಎಂಬ ಸರಳ ವಿಷಯವಾದರೂ ಅವನಿಗೆ ತಿಳಿದಿರಲೇಬೇಕು ಎಂದು ಅಪೇಕ್ಷಿಸುತ್ತಿದೆ ಈ ಗಾದೆ.
* ’ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು’, ’ಕೋತಿ ತಾನು ಕೆಡೋದಲ್ಲದೆ ವನವನ್ನೂ ಕೆಡಿಸಿತು’ – ಲಂಕಾದಹನ ಪ್ರಸಂಗವನ್ನು ನೆನಪಿಸುವ ಗಾದೆ ಇದು. ಹನುಮ ತನ್ನ ಬಾಲಕ್ಕೆ ಬೆಂಕಿ ಹಚ್ಚಿಕೊಂಡಿದ್ದಲ್ಲದೆ ಲಂಕೆಯನ್ನೇ ಸುಟ್ಟು ಹಾಕಿದ್ದನ್ನು ತಿಳಿಸುತ್ತಿದೆ.
* ’ಅಳಿಲು ಭಕ್ತಿ, ಮಳಲು ಸೇವೆ’ – ರಾಮಸೇತು ನಿರ್ಮಾಣದಲ್ಲಿ ಅಳಿಲು ತನ್ನಿಂದಾದಷ್ಟು ಮರಳು ಹೊತ್ತು ತಂದು ಸೇತುವೆ ನಿರ್ಮಾಣದಲ್ಲಿ ಸಹಕರಿಸಿದ ಕಥೆಯ ಆಧಾರ ಹೊಂದಿದೆ. ಸಂಘ-ಸಂಸ್ಥೆ, ಸಾರ್ವಜನಿಕ ಬದುಕಿನಲ್ಲಿ ’ಅಳಿಲು ಸೇವೆ’, ಅಳಿಲು ಕಾಣಿಕೆ’ ನುಡಿಗಟ್ಟುಗಳು ಆಗಾಗ ಬಳಕೆಯಾಗುವುದುಂಟು. ಕೆಲವೊಮ್ಮೆ ತಲೆಚಿಟ್ಟು ಹಿಡಿಯುವಷ್ಟು ಪುನರಾವರ್ತನೆಯಾಗುವುದೂ ಇದೆ.
* ಸೀತೆಯನ್ನು ಹುಡುಕಲು ಕಪಿಗಳಿಗೆ ಗಡುವು ವಿಧಿಸಿ ಸುಗ್ರೀವ ಹೊರಡಿಸಿದ “ಸುಗ್ರೀವಾಜ್ಞೆ” ಎಂಬ ಪದ ಇವತ್ತಿಗೂ ಆಡಳಿತದಲ್ಲಿ ರೂಢಿಯಲ್ಲಿದೆ. ರಾಷ್ಟ್ರಪತಿಗಳಿಗೆ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವಿದೆ.
* ರಾಮನ ವನವಾಸದ ಅವಧಿಯಾದ ‘ಹದಿನಾಲ್ಕು ವರ್ಷ’ವೇ ಇಂದು ಅಪರಾಧಿಗಳಿಗೆ ನ್ಯಾಯಾಲಯ ವಿಧಿಸುವ ಜೀವಾವಧಿ ಶಿಕ್ಷೆಗೆ ಆಧಾರವೆಂದು ಕೇಳಿದ ನೆನಪಿದೆ. ಆಧಾರವಿದೆಯೋ ಇಲ್ಲವೊ ತಿಳಿದಿಲ್ಲ.
ಮಹಾಭಾರತವನ್ನು ಆಧಾರವಾಗಿಟ್ಟುಕೊಂಡ ಗಾದೆಗಳು ಇರಬಹುದಾದರೂ ನನಗೆ ನೆನಪಾಗುತ್ತಿರುವುದು ಇದೊಂದೇ. “ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ” – ಈಚೆಗೆ ನಡೆದ ರಾಜಕೀಯ ಹಸ್ತಾಂತರ ಪ್ರಹಸನದಲ್ಲಿ ಈ ಗಾದೆ ಅಲ್ಲಲ್ಲಿ ಕೇಳಿಬಂದಿತ್ತು.
’ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು’ – ಈ ಗಾದೆ ಮಹಾಭಾರತಕ್ಕೆ ನೇರ ಸಂಬಂಧವಿಲ್ಲದಿದ್ದರೂ ದುರ್ಯೋದನ ಮುಗ್ಗರಿಸಿ ಬಿದ್ದಾಗ ದ್ರೌಪದಿ ಅವನನ್ನು ನೋಡಿ ನಕ್ಕು, ಅವಮಾನಿಸಿದ ಪ್ರಸಂಗವನ್ನು ಇದು ನೆನಪಿಗೆ ತರುವುದಲ್ಲವೇ?
ಈ ರೀತಿಯ ಗಾದೆಗಳು ನಿಮಗೆ ತಿಳಿದಿದ್ದರೆ ಇಲ್ಲಿ ಹಂಚಿಕೊಳ್ಳುವಿರಾ?
ಕೇಂದ್ರ ಸರಕಾರದ ಕಡತದಲ್ಲಿ ಕಂಡ ಹೊಸ ಗಾದೆಃ
“ಜನ್ಮಪ್ರಮಾಣಕ್ಕಾಗಿ ರಾಮನೂ
ಗುಜರಾಯಿಸಬೇಕು ಅರ್ಜಿ;
ದೇವರಾದರೇನು? ಹಿಡಿಯಬೇಕು
ಸರಕಾರದ ಮರ್ಜಿ!”
ಮಹಾಭಾರತದ ಕಥೆಗೆ ಹೊಂದಿಕೊಂಡ ಗಾದೆ ಸದ್ಯಕ್ಕೆ ನನಗೂ ನೆನಪಾಗುತ್ತಿಲ್ಲ. ಆದರೆ…
“ಅವನೊಬ್ಬ ಶಕುನಿ” ಅನ್ನುವ ಪ್ರಯೋಗ ಮನೆಯೊಡಕರ, ಕುತಂತ್ರಿಗಳ ಬಗ್ಗೆ;
“ಇವರಿಗೆಲ್ಲ ಕುಂತಿ ಹಿರಿಯಕ್ಕ” ಅನ್ನುವ ಪ್ರಯೋಗ ಸ್ವಲ್ಪ ‘ಬಿಂದಾಸ್’ ಹುಡುಗಿಯರ ಬಗ್ಗೆ ಕೇಳಿದ್ದೇನೆ.
“ಪಾಂಡವರಿಗೆ ಪಾಡು ತಪ್ಪಿದ್ದಲ್ಲ” ಅಂತ ಗಾದೆ ಇದೆಯಾ? ಎಲ್ಲೋ ಓದಿದ ಹಾಗಿದೆ.
ಚೆನ್ನಾಗಿವೆ
sritriಅವರೆ…
“ರಾಮನ ದುಃಖ ರಾಮಂಗೆ, ಸೀತೆ ದುಃಖ ಸೀತೆಗೆ” ಅಂತ ಗಾದೆ ಇದ್ಯಾ? ನಂಗೂ ಗೊತ್ತಿಲ್ಲಾ…ಅದಿಕ್ಕೆ ನಿಮ್ಮನ್ನ ಕೇಳ್ದೆ.
’ರಾಮ ರಾಜ ಆದರೂ ರಾಗಿ ಬೀಸೋದು ತಪ್ಪೀತೇ?’ ಈ ಗಾದೆಯ ಮಾತನ್ನು “ಯಾರು ಎಷ್ಟೇ ದೊಡ್ಡ ಪದವಿಯನ್ನೇರಿದರೂ ವಿಧಿಯಾಟದಿಂದ ಕೆಳಗಿಳಿದು ಕಷ್ಟ-ಕಾರ್ಪಣ್ಯಗಳನ್ನು ಆನುಭವಿಸಲೇ ಬೇಕು..ವಿಧಿಗೆ ಎಲ್ಲರೂ ಒಂದೇ”-ಹೀಗೂ ಅರ್ಥೈಸಬಹುದಲ್ಲವೆ?
ಯಾವುದೋ ಒಂದು ಕೆಲಸವನ್ನು ಮಾಡಿ ಮುಗಿಸುವಷ್ಟರಲ್ಲಿ ಸಾಕು ಸಾಕಾದರೆ ‘ಏಳೂ ಹನ್ನೊಂದಾಯಿತು’ ಎನ್ನುತ್ತಾರೆ. ಏಕೆಂದರೆ ಮಹಾಭಾರತ ಯುದ್ಧ 18 (7+11) ದಿನ ನಡೆದ ಸಂಕೇತವಾಗಿ.
‘ಪಂಥ (ಪಣ, ಜೂಜು) ಕಟ್ಟಿ ಪಾಂಡವರು ಕೆಟ್ಟರು’ ಎಂಬ ಗಾದೆ ಇದೆ. ಜೂಜಾಡುವುದು ಯಾರಿಗೂ ಒಳ್ಳೆಯದಲ್ಲ ಎಂದು ಹೇಳುವಾಗ ಇದನ್ನು ಹೇಳುತ್ತಾರೆ.
‘ಅಂತೂ ಇಂತೂ ಕುಂತೀ ಮಕ್ಕಳಿಗೆ ವನವಾಸ’ ಎಂದೂ ಕೂಡ ಹೇಳುವುದನ್ನು ಕೇಳಿದ್ದೇನೆ.
ಸದ್ಯಕ್ಕೆ ನೆನಪಾದವು
ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ.
ಊರು ಸುಟ್ಟರೂ ಹನುಮಂತರಾಯ ಹೊರಗೆ .
ಉತ್ತರನ ಪೌರುಷ ಒಲೆ ಮುಂದೆ.
“ಜನ್ಮಪ್ರಮಾಣಕ್ಕಾಗಿ ರಾಮನೂ
ಗುಜರಾಯಿಸಬೇಕು ಅರ್ಜಿ;
ದೇವರಾದರೇನು? ಹಿಡಿಯಬೇಕು
ಸರಕಾರದ ಮರ್ಜಿ!”
ಸುನಾಥರೇ,
ಕೇಂದ್ರ ಸರಕಾರದ ಕಡತಗಳಲ್ಲಿ ನೀವು ಹೇಳಿರುವ ಈ ಹೊಸ ಗಾದೆ ದಾಖಲಾಗಿರುವುದೇನೋ ನಿಜ. ಆದರೆ ಅರ್ಜಿ ಹಾಕಿ, ಮರ್ಜಿ ಹಿಡಿಯಬೇಕಾದ ಅಗತ್ಯ ರಾಮನಿಗೆ ಖಂಡಿತ ಇಲ್ಲ. ಅಂತಹ ಸಂಯಮ,ಸೌಜನ್ಯಗಳ ಆದರ್ಶಮಯ ವ್ಯಕ್ತಿತ್ವವಿದ್ದ ರಾಮ ನಮ್ಮವನೆಂಬ ಹೆಮ್ಮೆ ನಮಗಿಲ್ಲವಾಗುವುದೇ ಹೊರತು, ಓಟುಬ್ಯಾಂಕ್ ರಾಜಕೀಯ ಮಾಡುವ ಈ ರಾಜಕಾರಣಿಗಳ ಹಂಗು ರಾಮನಿಗೇಕೇ?
ಜ್ಯೋತಿ, ” ಕುಂತಿ ಹಿರಿಯಕ್ಕ” ಅನ್ನುವ ಮಾತು ಕೇಳಿರಲಿಲ್ಲ. ಮದುವೆಗೆ ಮುನ್ನ ಮಗು ಪಡೆದಳೆಂಬ ಕಾರಣಕ್ಕಲ್ಲದಿದ್ದರೂ, ಕುಂತಿಯದು ಹಿರಿಯಕ್ಕನ ವ್ಯಕ್ತಿತ್ವವೇ!
’ರಾಮ ರಾಜ ಆದರೂ ರಾಗಿ ಬೀಸೋದು ತಪ್ಪೀತೇ?’
ತೇಜಸ್ವಿನಿ, ಸಾಮಾನ್ಯವಾಗಿ ಈ ಗಾದೆಯನ್ನು ಆರೀತಿ ಅರ್ಥೈಸುವುದಿಲ್ಲ. ಈಗಿನ ರಾಜಕಾರಣಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುವುದಾದರೆ, ರಾಗಿ ಬೀಸೋದು, ರಾಗಿ ಮುದ್ದೆ ತಿನ್ನುವುದೂ (ಜೈಲಿನಲ್ಲಿ) ತಪ್ಪಲ್ಲ. 🙂
ಸೀಮಾ, ‘ಏಳೂ ಹನ್ನೊಂದಾಯಿತು’ ಕೇಳಿದ್ದೆ. ಇದಕ್ಕೂ 18 ದಿನ ನಡೆದ ಕುರುಕ್ಷೇತ್ರ ಯುದ್ಧಕ್ಕೂ ಸಂಬಂಧವಿರಬಹುದೆಂಬ ಬಗ್ಗೆ ಯೋಚಿಸಿರಲೇ ಇಲ್ಲ. ಹೊಸದೊಂದು ವಿಚಾರದ ಮೇಲೆ ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದ.
ವಿಕಾಸ್, ಹೌದಲ್ಲಾ! ಮಹಾಭಾರತದ ವೀರಯೋಧ ಉತ್ತರನನ್ನೇ ಮರೆತುಬಿಟ್ಟಿದ್ದೆ. 🙂
ಉತ್ತರನ ಪೌರುಷ ಒಲೆ ಮುಂದೆ .. ಈ ಗಾದೆಯನ್ನು ಮುಂದುವರೆಸಿ “ನೆಂಟನ ಪೌರುಷ ಎಲೆ ಮುಂದೆ” ಎಂದು ಹೇಳುವುದಿದೆ.
“ಊರು ಸುಟ್ಟರೂ ಹನುಮಂತರಾಯ ಹೊರಗೆ” – ಈ ಗಾದೆ ನನಗೆ ಹೊಸದು. ಬಹಳ ಅರ್ಥಪೂರ್ಣವಾಗಿದೆ.
“ರಾಮನ ದುಃಖ ರಾಮಂಗೆ, ಸೀತೆ ದುಃಖ ಸೀತೆಗೆ” ಅಂತ ಗಾದೆ ಇದ್ಯಾ? –
ಶಾಂತಲಾ,
ಇಲ್ಲ ಅನ್ನೋದಕ್ಕಿಂದ ಗೊತ್ತಿಲ್ಲ ಅನ್ನುತ್ತೀನಿ 🙂
“ಗಂಡಸಿಗೇಕೆ ಗೌರಿ ದುಃಖ” ಗೊತ್ತು. ಸೀತೆ ದುಃಖ, ರಾಮನ ದುಃಖ? ಉಹುಂ … ಕೇಳಿಲ್ಲ.
ನಿಜ ಈಗಿನ ರಾಜಕಾರಣಿಗಳಿಗೇ ಹೊಲಿಸಿದರೆ ಸರಿ. ಆದರೆ ನನ್ನ ಹಿರಿಯರು ಅರ್ಥೈಸಿದ್ದು ನಾ ಹೆಳಿದರೀತಿಯಲ್ಲೆ ಆಗಿತ್ತು. ಕಾಲದ ಜೊತೆ ಗಾದೆಯ ಪಯಣ ಎನ್ನೋಣವೇ?
ಏಳೂ ಹನ್ನೊಂದು ಅಂದ್ರೆ ವ್ಯರ್ಥ ಅನ್ನೋ ಇನ್ನೊಂದರ್ಥ – ಮಹಾಭಾರತ ಯುದ್ಧದಲ್ಲಿ ಪಾಂಡವರ ಕಡೆ ಏಳು ಅಕ್ಷೋಹಿಣಿ ಸೈನ್ಯ, ಕೌರವರ ಕಡೆ ಹನ್ನೊಂದು ಅಕ್ಷೋಹಿಣಿ ಸೈನ್ಯ ನಷ್ಟವಾದದ್ದು.
ಇನ್ನೊಂದು ಗಾದೆ : “ಪಂಚ ಪಾಂಡವರು ಅಂದ್ರೆ ನಂಗೊತ್ತಿಲ್ವೆ ಮಂಚದ ಕಾಲು ಮೂರು” ಅಂತ ಹೇಳುತ್ತ ಎರಡು ಬೆರಳು ತೋರಿಸುವುದು. ಅತೀ ಮುಗ್ಧತೆ(!)ಯನ್ನೋ, ಅಥವ ಪೆದ್ದುತನವ(!)ನ್ನೋ ತೋರಿಸುವ ಗಾದೆ ಇದು.
-ನೀಲಾಂಜನ
ತೇಜಸ್ವಿನಿ, ನೀವಂದಂತೆ ಗಾದೆಗಳದು ಕಾಲದ ಜೊತೆ, ಕಾಲಕಾಲಕ್ಕೆ ಹೊಸ ಅರ್ಥಗಳನ್ನೂ ಮೂಡಿಸುತ್ತಾ ಸಾಗಿಬಂದಿರುವ ಸುಂದರ ಪಯಣವೇ.
ನೀಲಾಂಜನ,(ನಿಮ್ಮ ಬ್ಲಾಗಿಗೆ ಚಂದದ ಹೆಸರನ್ನೇ ಆರಿಸಿದ್ದೀರಿ) ತುಳಸಿವನಕ್ಕೆ ಸ್ವಾಗತ. ಏಳು ಹನ್ನೊಂದರ ಇನ್ನೊಂದು ಅರ್ಥ ಸೂಚಿಸಿದ್ದಕ್ಕೆ ಧನ್ಯವಾದಗಳು. “ಪಂಚ ಪಾಂಡವರು ಅಂದ್ರೆ ನಂಗೊತ್ತಿಲ್ವೆ ಮಂಚದ ಕಾಲು ಮೂರು” – ಈ ಗಾದೆ – “ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು? ಮೂರು ಮತ್ತೊಂದು” ಗಾದೆಯನ್ನೇ ಹೋಲುತ್ತಿದೆ ಅಲ್ಲವೇ?
ಅಂದಹಾಗೆ, ದೇವರ ಮುಂದೆ ಉರಿಸುವ ದೀಪದ ಸೊಡರಿಗೆ “ನೀಲಾಂಜನ” ಹೆಸರೇಕಿರಬಹುದು? ನೀಲ.. ಅಂಜನ.. ಏನಾದರೂ ಅರ್ಥ?
ನೀಲಿ ಎನ್ನುವುದು ಗೂಢವಾದದ್ದು , ಅಲೌಕಿಕವಾದದ್ದು ಎಂಬ ಅರ್ಥವನ್ನು ಹೊಂದಿದೆ. ನೀಲಿ ಪುಸ್ತಕಗಳು ನಮ್ಮ ಹಸ್ತಪ್ರತಿಗಳಲ್ಲಿ ಕಂಡು ಬರುತ್ತವೆ. ಕಾಗದದ ಬಣ್ಣ ತುಸು ನೀಲಿಯಾಗಿರುತ್ತಿದ್ದು ಇತರ ಬರಹಗಳಿಂದ ಅದನ್ನು ಪ್ರತ್ಯೇಕಿಸುತ್ತವೆ. ಇವುಗಳನ್ನು ಲೌಕಿಕರು ಓದುತ್ತಿರಲಿಲ್ಲ ಇವುಗಳಲ್ಲಿ ಬರೆದ ವಿಚಾರಗಳು ಅಲೌಕಿಕವೂ , ಗೂಢವೂ ಆಗಿರುತ್ತಿದ್ದವು. ಹಾಗೆಯೇ ನಮ್ಮ ಮಂಟೇಸ್ವಾಮಿ ಯ ಗುಡ್ಡರನ್ನು ನೀಲಗಾರರು ಎನ್ನುತ್ತಾರೆ. ಮಂಟೆ ಸ್ವಾಮಿ ಅಂತಹ ಒಬ್ಬ ಗೂಢ ಅಲೌಕಿಕ ಶಕ್ತಿಯುಳ್ಳವನಾಗಿದ್ದ. ಅವನನ್ನು ‘ಘನನೀಲಿ’ ಎಂದೇ ಕರೆಯುತ್ತಾರೆ. ನೀಲಾಂಜನ ಎನ್ನುವಾಗ ಈ ಅಲೌಕಿಕ ದೃಷ್ಟಿ ಎಂಬ ಅರ್ಥ ಸರಿಹೊಂದುತ್ತದೆ.
ಡಾ. ಎನ್. ಆರ್. ಲಲಿತಾಂಬ
ಶ್ರೀತ್ರಿ ಅವರೇ,
ಚೆನ್ನಾಗಿದೆ ಲೇಖನ. ಗಾದೆ ಸಂಪತ್ತು ಸಹ.
ನನಗೆ ತಿಳಿದಂತೆ ಕುತಂತ್ರಿಗಳನ್ನು ಶಕುನಿಯೆಂದು ಜರಿದಂತೆ ಚಾಡಿ ಹೇಳುವವರಿಗೆ, ಆ ಮೂಲಕ ಜಗಳ ತಂದಿಡುವವರಿಗೆ
“ನೀನು ಮನೆಗೆ ಮಂತ್ರಿ” (ಮಂಥರೆ = ಮಂಥ್ರಿ) ಎಂದು ಕುಟುಕುತ್ತಾರೆ.
ನಾವಡ
ತ್ರಿವೇಣಿಯವರೆ,
ಅಂಜನ ಎಂದರೆ ಕಣ್ಣಿಗೆ ಹಚ್ಚಿಕೊಳ್ಳುವ ಲೇಪನ. ಉದಾಃ ಗುಪ್ತನಿಧಿಯನ್ನು ಹುಡುಕಲು ಕಣ್ಣಿಗೆ ಅಂಜನ ಹಚ್ಚಿಕೊಳ್ಳುತ್ತಾರೆ. ದೀಪದ ಕುಡಿಯ ಕಾಡಿಗೆಗೂ ಅಂಜನ ಎಂದು ಹೇಳುತ್ತಾರೆ. ದೀಪದ ಕುಡಿ ನೀಲಿಯಾಗಿರುತ್ತದೆ. ಹೀಗಾಗಿ ದೀಪದ ಕುಡಿಯ ಮೇಲ್ಭಾಗ ನೀಲಾಂಜನ. ಶನಿಗ್ರಹದ ಬಣ್ಣ ಹೀಗಿರುವದರಿಂದಲೇ ಶನಿಗೆ “ನೀಲಾಂಜನ ಸಮಾಭಾಸಂ” ಎಂದು ಕರೆಯುತ್ತಾರೇ.
ನಾವಡರೆ, ತುಳಸಿವನಕ್ಕೆ ಸ್ವಾಗತ. ಜಗಳ ತಂದಿಡುವವರನ್ನೇ ಮನೆಗೆ “ಮಂತ್ರಿ”ಯಾಗಿಸಿದರೆ,(ಮಂಥರೆ=ಮಂಥ್ರಿ=ಮಂತ್ರಿ) ಆ ಮನೆಯ ಪಾಡು ಹೇಗಿದ್ದೀತು ಎಂದು ಯೋಚಿಸಿದರೆ ಭಯವಾಗುತ್ತಿದೆ. 🙂
ಸುನಾಥರೇ, ನೀಲಾಂಜನ “ಪದಾರ್ಥ” ತಿಳಿಸಿದ್ದಕ್ಕೆ ಧನ್ಯವಾದಗಳು. ಆಗಾಗ ಕೆಲವು ಪದಗಳು ನನ್ನ ತಲೆ ಕೊರೆಯುವುದುಂಟು. ಈಗ ನಿಮಗೆ ಇನ್ನೊಂದು ಹೊಸ ತೊಂದರೆ ಪ್ರಾರಂಭವಾಯಿತು.
ಸುನಾಥರೇ,
ನೀಲಾಂಜನ ಪದದ ಬಗ್ಗೆ ಒಳ್ಳೆ ವಿವರ ಕೊಟ್ಟಿರುವಿರಿ.
ನೀಲಾಂಜನ – ಇದು ನೀರಾಜನ ಪದದಿಂದ ಬಂದಿದೆ ಎಂದೂ ಓದಿರುವೆ.
ಅಲ್ಲದೆ, ನೀಲಾಂಜನ ದಲ್ಲಿರುವ ನೀಲ ವರ್ಣವಾಚಕವೇ ಆಗಿರುವ ಅಗತ್ಯವಿಲ್ಲ ಎನಿಸುತ್ತೆ. ಸಣ್ಣಗೆ ಉರಿಯುವ ದೀಪ, ಅಥವ ನೀವು ಹೇಳಿದ ಹಾಗೆ ದೀಪದ ಕುಡಿ ಎನ್ನುವ ಅರ್ಥವನ್ನು ಅದು ಧ್ವನಿಸುತ್ತೆ ಅಂತ ನನ್ನ ಎಣಿಕೆ,
ಶನಿ ನೀಲಾಂಜನ ಸಮಾಭಾಸ ಎನ್ನುವಾಗಲೂ ಈ ಮಾತೇ ಸರಿಯಾಗುತ್ತೆ. ಶನಿ ನೀಲ ಛಾಯೆಯಲ್ಲಿ ಕಾಣನು – ಬದಲಿಗೆ ಅವನ ಬಣ್ಣ ತಿಳಿ ಹಳದಿ-ಬಿಳಿ. ಆದರೆ, ಕಣ್ಣಿಗೆ ಕಾಣುವ ಗ್ರಹಗಳಲ್ಲೆಲ್ಲ ಕಮ್ಮಿ ಪ್ರಕಾಶಮಾನವಾದ ಅವನನ್ನು, ನಿದಾನವಾಗಿ ಉರಿಯುವ ಸಣ್ಣ ದೀಪಕ್ಕೆ ಹೋಲಿಸಿರುವುದು ಯುಕ್ತವೇ ಆಗಿದೆ.
-ನೀಲಾಂಜನ
“ನೀಲಾಂಜನ” ಪದದ ಮೇಲೆ ಮತ್ತಷ್ಟು ಬೆಳಕು ಬೀರಿದ್ದಕ್ಕೆ ನೀಲಾಂಜನರಿಗೆ ಧನ್ಯವಾದಗಳು. 🙂
ನೀಲಾಂಜನರೆ,
ಪದಜಿಜ್ಞಾಸೆಗಾಗಿ ಧನ್ಯವಾದಗಳು. ‘ನೀರಾಜನ’ ಪದಕ್ಕೆ ಆರತಿ ಬೆಳಗುವದು
ಎನ್ನುವ ಅರ್ಥವಿದೆ. ಆದರೆ ‘ನೀಲಾಂಜನ’ ಪದದ ಅರ್ಥ ದೇವರ ಎದುರಿಗೆ
ಹಚ್ಚಿಡುವ ದೀಪ ಎಂದಾಗುತ್ತದೆ. ದೀಪ ಹಚ್ಚಿಡುವ ಉಪಕರಣಕ್ಕೂ ಸಹ
ನೀಲಾಂಜನ ಎಂದೇ ಅನ್ನುತ್ತಾರೆ. ನೀರಾಜನ ಪದಕ್ಕೆ ‘ಆಶ್ವೀನ ಮಾಸದಲ್ಲಿ ಜರುಗಿಸುವ ಒಂದು ಹಬ್ಬ’ ಎನ್ನುವ ಅರ್ಥವೂ ಇದೆ.
“ಕದ್ದು ಹೋಳಿಗೆ ಕೊಟ್ಟರ, ಚೀರಿ ಬೆಲ್ಲ ಇಲ್ಲ ಅಂದ್ರಂನತೆ”
ಇದರ ಅರ್ಥ, ಗುಟ್ಟನ್ನು ರಟ್ಟು ಮಾಡಿದ್ರು ಅಂತ.
ಅಶ್ವಿನಿಯವರೇ, ಕದ್ದು ಹೋಳಿಗೆ ಕೊಟ್ಟರೆ ಗುಟ್ಟು ರಟ್ಟು ಮಾಡುವ ಗಾದೆ ಇದೇ ಮೊದಲು ಕೇಳಿದ್ದು. ರಾಮಾಯಣ, ಮಹಾಭಾರತದ ಗಾದೆಗಳ ಬಗ್ಗೆಯೂ ಗೊತ್ತಿದ್ದರೆ ಬರೆಯಿರಿ. ತುಳಸಿವನಕ್ಕೆ ಸ್ವಾಗತ. 🙂
ಇದು ಗಾದೆಯೋ, ಅಲ್ಲವೋ ಗೊತ್ತಿಲ್ಲ. ಜಿ.ಎನ್ ಮೋಹನ ಅವರ ‘ನನ್ನೊಳಗಿನ ಹಾಡು, ಕ್ಯೂಬಾ’ ದಲ್ಲಿ ಕಂಡ ಪ್ರಯೋಗ “ಭೂತದ ಬಾಯಲ್ಲಿ ಭಗವದ್ಗೀತೆ ನಿರೀಕ್ಷಿಸಲು ಹೇಗೆ ಸಾಧ್ಯ”.
“ಭೂತದ ಬಾಯಲ್ಲಿ ಭಗವದ್ಗೀತೆಯೇ?” ಅಂತ ಕೇಳಿದ್ದೆ.
ಪೂರ್ಣಿಮಾ, ಜ್ಯೋತಿ ಬರೆದಂತೆ, “ಭೂತದ ಬಾಯಲ್ಲಿ ಭಗವದ್ಗೀತೆಯೇ?” ಎಂದರೆ ಅದು ಗಾದೆಯೆನಿಸುತ್ತದೆ. ಆದರೆ ಈ ಗಾದೆಯನ್ನು ನಾನು ಜನಸಾಮಾನ್ಯರ ಆಡು ಮಾತಿನಲ್ಲಿ ಕೇಳಿರುವುದಕ್ಕಿಂತ, ಪತ್ರಿಕೆಗಳಲ್ಲಿ ಓದಿರುವುದೇ ಹೆಚ್ಚು.
‘ನನ್ನೊಳಗಿನ ಹಾಡು, ಕ್ಯೂಬಾ’ – ಆಗಲೇ ಓದಿ ಮುಗಿಸಿದ್ದೀರೆಂದಾಯಿತು.
ಪದ ಜಿಜ್ಞಾಸೆಗಾಗಿ
‘ಇರುಳು ತಪ್ಪುವುದು ಎಂದರೇನು?
ಒಂದು ಹಳೆಯ ಕಡತದಲ್ಲಿ ಒಬ್ಬನ ಹೆಂಡತಿ ಇರುಳು ತಪ್ಪಿದ್ದಕ್ಕಾಗಿ ಅವನ ಇಡೀ ಕುಟುಂಬ , ಇಡೀ ಸಮುದಾಯದವರು ಮಠ ಒಂದಕ್ಕೆ ತಪ್ಪು ಕಾಣಿಕೆ ಕಟ್ಟಿ ಮುಚ್ಚಳಿಕೆ ಬರೆದುಕೊಟ್ಟ ಪ್ರಸಂಗವಿದೆ. ಇದು ಶಿರಸಿ ಪ್ರಾಂತ್ಯಕ್ಕೆ ಸೇರಿದ್ದು ಈ ಪ್ರದೇಶದಲ್ಲಿ ಇಂತಹ ನುಡಿಗಟ್ಟು ಈಗಲೂ ಬಳಕೆಯಲ್ಲಿದೆಯೇ ದಯವಿಟ್ಟು ಬೆಳಕು ಚೆಲ್ಲವಿರಾ?
ಪದ ಜಿಜ್ಞಾಸೆಗಾಗಿ
‘ಇರುಳು ತಪ್ಪುವುದು ಎಂದರೇನು?
ಒಂದು ಹಳೆಯ ಕಡತದಲ್ಲಿ ಒಬ್ಬನ ಹೆಂಡತಿ ಇರುಳು ತಪ್ಪಿದ್ದಕ್ಕಾಗಿ ಅವನ ಇಡೀ ಕುಟುಂಬ , ಇಡೀ ಸಮುದಾಯದವರು ಮಠ ಒಂದಕ್ಕೆ ತಪ್ಪು ಕಾಣಿಕೆ ಕಟ್ಟಿ ಮುಚ್ಚಳಿಕೆ ಬರೆದುಕೊಟ್ಟ ಪ್ರಸಂಗವಿದೆ. ಇದು ಶಿರಸಿ ಪ್ರಾಂತ್ಯಕ್ಕೆ ಸೇರಿದ್ದು ಈ ಪ್ರದೇಶದಲ್ಲಿ ಇಂತಹ ನುಡಿಗಟ್ಟು ಈಗಲೂ ಬಳಕೆಯಲ್ಲಿದೆಯೇ ದಯವಿಟ್ಟು ಬೆಳಕು ಚೆಲ್ಲವಿರಾ?