ನಿನ್ನೆ ಏನನ್ನೊ ಹುಡುಕುತ್ತಿದ್ದಾಗ ನನಗೊಂದು ರತ್ನವೇ ಸಿಕ್ಕಿತು. “ರಥವೋಗದ ಮುನ್ನ” ದಾಸ ಸಾಹಿತ್ಯದಲ್ಲಿ ಅಪರೂಪವೆನಿಸುವ ಕೃತಿ. ಶ್ರೀದವಿಠಲರಿಂದ ರಚಿತವಾಗಿರುವ ಈ ಕೀರ್ತನೆಯನ್ನು ಹಿಂದೆಯೂ ಕೇಳಿದ್ದೆ. ಆದರೆ ಈ ಬಾರಿ ರಾಗದ ಹಂಗಿಲ್ಲದೆ, ಹಾಗೆಯೇ ಓದಿಕೊಂಡಾಗ ನವಿರಾದ ಭಾವನೆಗಳಿಂದ ತುಂಬಿರುವ ಭಾವಗೀತೆಯನ್ನು ಸ್ಪರ್ಶಿಸಿದಂತಾಯಿತು. ಈ ಕೀರ್ತನೆಯಲ್ಲಿ, ಕೃಷ್ಣನನ್ನು ಕರೆತರಲು ಹೊರಟಿರುವ ಅಕ್ರೂರನ ಮನೋಲಹರಿ ಭಕ್ತಿರಸದೊಂದಿಗೆ ಹದವಾಗಿ ಬೆರೆತು ಹರಿದಿದೆ.

ಹಾಡಿನ ಸಂದರ್ಭ ಹೀಗಿದೆ. ಕಂಸನಿಗೆ ತನ್ನ ತಂಗಿಯಾದ ದೇವಕಿಯ ಮಗುವಾದ ಶ್ರೀಕೃಷ್ಣನಿಂದಲೇ ತನ್ನ ಮೃತ್ಯು ಎಂದು ತಿಳಿದುಹೋಗಿದೆ. ಕಂಸನ ಸೆರೆಯಿಂದ ಪಾರಾಗಿಹೋಗಿರುವ ಕೃಷ್ಣ ಗೋಕುಲದಲ್ಲಿ ಯಶೋದೆಯ ಬಳಿ ಕ್ಷೇಮವಾಗಿ ಬೆಳೆಯುತ್ತಿರುವ ವಿಷಯವೂ ಅವನಿಗೆ ತಿಳಿದಿದೆ. ಕಂಸನನ್ನು ಕರೆಸಿ ಕೊಳ್ಳು(ಲ್ಲು)ವುದು ಅವನ ಉದ್ದೇಶ. ಅದಕ್ಕೆ ಮೊದಲು ಕೃಷ್ಣನಿಗೆ ಅನುಮಾನ ಬಾರದಂತೆ ಗೋಕುಲದಿಂದ ಅವನನ್ನು ತನ್ನಲ್ಲಿಗೆ ಕರೆಸಬೇಕಾಗಿದೆ. ಮಹಾ ಚತುರ ಕೃಷ್ಣ ಅಷ್ಟು ಸುಲಭವಾಗಿ ಬಂದುಬಿಡುತ್ತಾನೆಯೇ? ಆ ಕೆಲಸ ಉಪಾಯವಾಗಿಯೇ ಆಗಬೇಕು. ಈ ಕೆಲಸಕ್ಕೆ ಸೂಕ್ತ ವ್ಯಕ್ತಿಯೆಂದರೆ ಅಕ್ರೂರ. ಕ್ರೂರಿಯಲ್ಲದ “ಅಕ್ರೂರ” ಅಜಾತ ಶತೃ. ಅವನು ಕೃಷ್ಣ ಭಕ್ತನೂ ಹೌದು. ಅವನನ್ನು ಕಳಿಸಿದರೆ, ಭಕ್ತವತ್ಸಲ ಕೃಷ್ಣ ಒಲ್ಲೆನೆನ್ನದೆ ಹೊರಟು ಬರುತ್ತಾನೆಂದು ಬುದ್ಧಿವಂತ ಕಂಸನಿಗೆ ಗೊತ್ತಿದೆ. ಹಾಗಾಗಿ ಅಕ್ರೂರರನ್ನು ಕರೆದು ಕೃಷ್ಣನನ್ನು ಕರೆತರಲು ಆಜ್ಞಾಪಿಸಿದ್ದಾನೆ.

ಅಕ್ರೂರನಿಗೆ ಕಂಸ ಒಪ್ಪಿಸಿದ ಕೆಲಸ ಆನಂದವನ್ನೇ ತಂದಿದೆ. ಎಲ್ಲರನ್ನೂ ಬಿಟ್ಟು ಕೃಷ್ಣನನ್ನು ಕರೆತರಲು ಕಂಸ ತನ್ನನ್ನೇ ಆರಿಸಿದ್ದು ಅವನ ಹಿಗ್ಗಿಗೆ ಕಾರಣ. ” ಅತಿಕೌತುಕವದಾಯ್ತು ಖಳರಾಯನೊಲಿದು ಯದುಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ” – ಇಡೀ ಲೋಕವೇ ದುಷ್ಟನೆಂದು ತೀರ್ಮಾನಿಸಿದ ಕಂಸ ತನ್ನ ವಿಷಯದಲ್ಲಿ ಔದಾರ್ಯತೆ ಮೆರೆದಿರುವುದು ಅಕ್ರೂರನಿಗೆ ಬೆರಗುಂಟುಮಾಡಿದೆ. ಕೃಷ್ಣನನ್ನು ಕರೆತರಲು ಇಷ್ಟೊಂದು ಸಂಭ್ರಮಿಸುತ್ತಿರುವ ಅಕ್ರೂರನಿಗೆ, ಕೃಷ್ಣನನ್ನು ಕೊಲ್ಲಿಸಲೆಂದೇ ಕರೆಸುತ್ತಿರುವ ಕಂಸನ ಕೆಟ್ಟ ಯೋಚನೆ ತಿಳಿದಿರಲಾರದೇನೋ ಎಂಬ ಅನುಮಾನವೂ ಮೂಡುತ್ತದೆ. ಹೀಗೂ ಇರಬಹುದೇನೋ. ಆಗಲೇ ತನ್ನ ಬಾಲಲೀಲೆಗಳಿಂದ ಅಸಾಮಾನ್ಯನೆನಿಸಿದ್ದ ಕೃಷ್ಣನನ್ನು ಕೊಲ್ಲುವುದು ಕಂಸನಿಂದ ಖಂಡಿತ ಸಾಧ್ಯವಿಲ್ಲ ಎಂಬ ನಿರಾಳ ಭಾವನೆಯೂ ಅವನಲ್ಲಿದ್ದೀತು.

ಸೋದರಮಾವ ಕಂಸನ ಊರಾದ ಮಥುರೆಯಲ್ಲಿ ನಡೆಯುವ ಸಂಭ್ರಮದ ಬಿಲ್ಲುಹಬ್ಬಕ್ಕೆ ಕೃಷ್ಣನನ್ನು ಆಹ್ವಾನಿಸಲು ಅಕ್ರೂರ ಹೊರಟಿದ್ದಾನೆ. ಮನಸ್ಸಿನಲ್ಲಿ ಗೋಕುಲದ ಗೊಲ್ಲನನ್ನು ಒಪ್ಪಿಸಿ ಕರೆತರುವೆನೆಂಬ ತುಂಬು ವಿಶ್ವಾಸ ನೆಲೆಸಿದೆ. ರಥವಿನ್ನೂ ಗೋಕುಲವನ್ನು ಮುಟ್ಟಿಯೇ ಇಲ್ಲ, ಆಗಲೇ ಅಕ್ರೂರನ ಮನೋರಥ ಗೋಕುಲವನ್ನು ತಲುಪಿಬಿಟ್ಟಿದೆ. “ರಥ ಹೋಗದ ಮುನ್ನ ಗೋಕುಲಕೆ ಮನ್ಮನೋರಥ ಹೋಗಿರುವುದೇನೆಂಬೆ!” ಎಂದು ಅಕ್ರೂರ ಅಚ್ಚರಿ ಪಡುತ್ತಿದ್ದಾನೆ.

( ಈ ಅನುಭವ, ಪ್ರಿಯರನ್ನು ಕಾಣಲೆಂದು ಪ್ರಯಾಣ ಹೊರಟ ಯಾರಿಗೇ ಆಗಬಹುದಾದರೂ, ಪರದೇಶದಿಂದ ಸ್ವದೇಶಕ್ಕೆ ಪಯಣಿಸುವ ಅನಿವಾಸಿಗಳನ್ನು ಹೆಚ್ಚು ತಟ್ಟೀತು. ಮಣಭಾರದ ಲಗೇಜುಗಳನ್ನು ಹೊತ್ತು, ಚೆಕ್-ಇನ್ ಮುಗಿಸಿ, ವಿಮಾನದೊಳಗೆ ನಮ್ಮ ಸೀಟು ಹುಡುಕಿ ಕೂತಿದ್ದೇ ತಡ, ಮನಸ್ಸು ಆಗಲೇ ಭಾರತ ತಲುಪಿ, ಹುಟ್ಟೂರು-ಕೇರಿಗಳಲ್ಲಿ ಅಲೆಮಾರಿಯಂತೆ ಅಲೆದಾಡುತ್ತಿರುತ್ತದೆ!)

ಮಥುರೆಗೂ, ಗೋಕುಲಕ್ಕೂ ನಡುವಿನ ಅಂತರ ಎಷ್ಟಿದೆಯೋ ತಿಳಿಯದು.(ತಿಳಿಯುವ ಕುತೂಹಲವಿದೆ, ಬಲ್ಲವರಿದ್ದರೆ ತಿಳಿಸಿ) ಈ ಸ್ಥಳಗಳ ನಡುವಿನ ದೂರ ಕಡಿಮೆಯೇ ಇರಬಹುದಾದರೂ ಆಗಿನ ಬೆಟ್ಟ-ಗುಡ್ಡ, ಕಾಡು-ಕಣಿವೆಗಳ ಹಾದಿಯನ್ನು ಕ್ರಮಿಸಲು ದಿನಗಳೇ ಹಿಡಿಯುತ್ತಿದ್ದಿರಬಹುದು. ಈ ಅವಧಿಯಲ್ಲಿ ಅಕ್ರೂರನಿಗೆ ಪ್ರಯಾಣದ ಆಯಾಸ ಬಾಧಿಸಿದಂತೆ ಕಾಣದು. ನಗೆಮೊಗದ ಗೋಪಾಲ ಅಕ್ರೂರನ ಚಿತ್ತಭಿತ್ತಿಯ ಮೇಲೆ ಸುಳಿದು ಅವನ ಉಲ್ಲಾಸವನ್ನು ಹೆಚ್ಚಿಸುತ್ತಿದ್ದಾನೆ. ಅವನ ಪ್ರಫುಲ್ಲಿತ ಮನಸ್ಸಿಗೆ ತಕ್ಕಂತೆ ಅವನಿಗೆ ಎಲ್ಲೆಡೆ ಶುಭಶಕುನಗಳೇ ಕಾಣುತ್ತಿವೆ. ಇಂದಿನ ಸೂರ್ಯೋದಯ ತನ್ನ ಪಾಲಿಗೆ ಕೃಷ್ಣ ದರ್ಶನದ ಶುಭೋದಯವನ್ನು ಸಾರುತ್ತಿದೆಯೆಂಬ ಧನ್ಯತೆಯ ಭಾವ ಅವನಲ್ಲಿದೆ. ಅಕ್ರೂರ ಕನಸು ಕಾಣಲು ಪ್ರಾರಂಭಿಸಿದ್ದಾನೆ. ಅದು ಹಿತವಾದ ಹಗಲು ಕನಸು. ಚೆನ್ನ ಚೆಲುವ ಕೃಷ್ಣನಿರುವ ನಂದಗೋಕುಲದಲ್ಲಿ ಅಕ್ರೂರನ ಮನಸ್ಸು ವಿಹರಿಸುತ್ತಿದೆ.

ತನ್ನ ಕಲ್ಪನೆಯಲ್ಲಿ ಅಕ್ರೂರ ಗೋಕುಲ ತಲುಪಿದ್ದಾನೆ. ಗೋಕುಲದ ಬೀದಿಗಳಲ್ಲಿ ಕಾಣಸಿಗುವ ಪುಟ್ಟ ಪಾದದ ಗುರುತುಗಳನ್ನು ಕಂಡು ಅಕ್ರೂರ ಭಾವಪರವಶನಾಗಿದ್ದಾನೆ. ಅವು ಹರಿಯ ಹೆಜ್ಜೆಗಳೆಂದು ಗುರುತಿಸಿದ್ದಾನೆ. ತೇರಿನಿಂದಿಳಿದು, “ಭೂದೇವಿಗಾಭರಣ” ಎಂದು ಬಣ್ಣಿಸುತ್ತಾ, ಆ ಪಾದಧೂಳಿನಲ್ಲಿ ಹೊರಳಾಡಿ ಪುನೀತನಾಗುತ್ತಾನೆ. ತಾನು ಅಲ್ಲಿಗೆ ತಲುಪಿದಾಗ, ತನ್ನನ್ನು ಕಂಡು ಕೃಷ್ಣನ ಪ್ರತಿಕ್ರಿಯೆ ಏನಿರಬಹುದು ಎಂಬ ಯೋಚನೆಯೂ ಅಕ್ರೂರನಿಗೆ ಬರುತ್ತಿದೆ.

“ಇರುವನೋ ಏಕಾಂತದಲಿ ಬರವ ಕೇಳಿದಿರು ಬರುವನೋ ಬಂದವನ ಕಂಡು?”, “ತರುವನೋ ತನುಪುಳಕವಾನಂದ ಭಾಷ್ಪದಿಂದೆರೆವನೋ ಬಿಗಿದಪ್ಪಿಕೊಂಡು? ಅಕ್ರೂರನ ಊಹಾಪೋಹಕ್ಕೆ ಮಿತಿಯೇ ಇಲ್ಲ. “ಕರೆವನೋ ಕಿರಿಯಯ್ಯ ಬಾರೆಂದು ಬಣ್ಣಿಸುತ, ಬೆರೆವನೋ ಬೆರೆಸಿ ತಾನುಂಡು” ಚಿಕ್ಕಪ್ಪ.. ಬಂದೆಯಾ?… ಬಾ … ಎಂದು ಕರೆದು ಮಮತೆಯಿಂದ ಆದರಿಸುವನೇ? ಕೃಷ್ಣನಿಗೆ ಅಕ್ರೂರ ಸಂಬಂಧದಲ್ಲಿ ಚಿಕ್ಕಪ್ಪನೇ ಆಗಬೇಕಾ? ಗೊತ್ತಿಲ್ಲ, ಅಥವಾ ಕೃಷ್ಣನಿಗಿಂತ ವಯಸ್ಸಿನಲ್ಲಿ ಹಿರಿಯನಾದ ತನ್ನನ್ನು ಅವನು “ಕಿರಿಯಯ್ಯ” ಎಂದೇ ಪ್ರೀತಿಯಿಂದ ಕರೆಯಲಿ ಎಂದು ಅಕ್ರೂರ ಆಸೆ ಪಡುತ್ತಿದ್ದಾನೋ? ( ಈಗಿನ ಮಕ್ಕಳು ಎಲ್ಲರನ್ನೂ ಅಂಕಲ್, ಮಾಮಾ ಎಂದು ಕರೆಯುವಂತೆ?) 🙂

ಇದೇ ಸಮಯದಲ್ಲಿ ಅಕ್ರೂರನ ಮನಸ್ಸಿನಲ್ಲೂಂದು ಅಳುಕು ತಲೆದೋರಿದೆ. ಕೃಷ್ಣ ಸರ್ವಶಕ್ತ, ಸರ್ವಾಂತರ್ಯಾಮಿ, ಎಲ್ಲಾ ಬಲ್ಲವನು. ಅವನಿಗೆ ಕಂಸನ ಕುಯುಕ್ತಿ ಅರಿವಾಗಿ , ಆ ದುರುದ್ದೇಶ ನೆರವೇರಿಸಲು ಸಹಾಯಕನಾಗಿ ಬಂದಿರುವ ತನ್ನನ್ನು ಹಗೆಯವನ ಕಡೆಯವನೆಂದು ತಿರಸ್ಕರಿಸಿ, ದೂರತಳ್ಳಿದರೆ? ಇಲ್ಲ…. ಇಲ್ಲಾ.. ಅವನ ಮನಸ್ಸು ಕೂಡಲೇ ಆ ಸಾಧ್ಯತೆಯನ್ನು ಖಂಡತುಂಡವಾಗಿ ನಿರಾಕರಿಸುತ್ತಿದೆ. “ಜರಿಯನೋ ಜಗದೀಶ ಹಗೆತನ ನೆನೆಯ-ಬಗೆಯ” ಎಂದು ತನ್ನನ್ನು ತಾನು ಸಮಾಧಾನಿಸಿಕೊಳ್ಳುತ್ತಾನೆ.

ಕೃಷ್ಣನನ್ನು ಕಂಡು, ಹಾಡಿ, ಕೊಂಡಾಡಿ, ಅವನಲ್ಲಿ ಅಕ್ರೂರ ಬೇಡಲಿರುವುದೇನು ಗೊತ್ತೇ? ದಾಸ್ಯವನ್ನು! “ಏನ ಬೇಡಲಿ ನಿನ್ನ ಬಳಿಗೆ ಬಂದು?” ಎನ್ನುವ ಗೊಂದಲಕ್ಕೆಡೆಯಿಲ್ಲದಂತೆ, – “ಬೇಡುವೆನು ಭುವನೈಕ ದಾತನೆದುರಲಿ ಕರವ ಜೋಡಿಸಿ ದಾಸ್ಯಬೇಕೆಂದು” – ಎಂದು ಆಗಲೇ ಅಕ್ರೂರ ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡಿದ್ದಾನೆ. ದೈವ ಸಹಾಯದಿಂದ ತನ್ನ ಇಂಗಿತ ನೆರವೇರುವುದೆಂಬುದಲ್ಲಿಯೂ ಅಕ್ರೂರನಿಗೆ ಯಾವುದೇ ಸಂದೇಹವಿಲ್ಲ .

ಅಕ್ರೂರನ ಮನೋರಥದಲ್ಲಿ ಕುಳಿತು ನಾವೂ ಒಮ್ಮೆ ನಂದಗೋಕುಲಕ್ಕೆ ಹೋಗಿಬರುವಾ ಬನ್ನಿ…

ಈ ಕೀರ್ತನೆಯ ಎರಡನೆಯ ಚರಣದಲ್ಲಿರುವ “ಗೋಪುರದ ಶಿಲ ತೃಣಾಂಕುರವ ತೋರುವ ಚರಣ” ಸಾಲು ನನಗೆ ಅರ್ಥವಾಗಲಿಲ್ಲ. ತಿಳಿದವರು ವಿವರಿಸಿದಲ್ಲಿ, ಮುಂಗಡ ಧನ್ಯವಾದಗಳು.

ರಾಗ : ಧನಶ್ರೀ
ತಾಳ : ಝಂಪೆ

ರಥವೋಗದ ಮುನ್ನ ಗೋಕುಲಕೆ ಮನ್‍ಮನೋ |
ರಥ ಪೋಗಿರುವುದೇನೆಂಬೆ ||ಪ||

ಅತಿಕೌತುಕವದಾಯ್ತು ಖಳರಾಯನೊಲಿದು ಯದು |
ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ||ಅನು||

ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ |
ಪತಿ ಸೇವೆ ತಾನಾಗಿ ದೊರೆತು |
ಶತಸಹಸ್ರಾನಂತಾನಂತ ಜನುಮಗಳ ಸು|
ಕೃತಕ್ಕೆ ಫಲವಾಯಿತೆಂದರಿದು|
ಗತಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ |
ಪಥದೊಳಗೆ ತಾವೆ ಮುಂದರಿದು ||
ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ|
ಪ್ರತಿಯಿಲ್ಲವೀ ಶುಭೋದಯಕೆ-ಸೂರ್ಯೋದಯಕೆ ||೧||

ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು |
ನಾಪುಳಿನದಲಿ ಮೆರೆವ ಚರಣ |
ಗೋಪಿಯರ ಪೀನ ಕುಚಕುಂಕುಮಾಂಕಿತ ಚರಣ |
ತಾಪತ್ರಯವಳಿವ ಚರಣ |
ಗೋಪುರದ ಶಿಲ ತೃಣಾಂಕುರವ ತೋರುವ ಚರಣ |
ಆಪದ್ಬಾಂಧವ ಚರಣ ||
ನಾ ಪೇಳಲೇನು ಭಕುತರ ವತ್ಸಲನು
ಕರುಣಾಪೂರ್ಣ ಎನಗಭಯ ಕೊಡುವ-ಕರಪಿಡಿವ ||೨||

ನೋಡುವೆನು ನೀರದಶ್ಯಾಮ ಸುಂದರನ ಕೊಂ |
ಡಾಡುವೆನು ಕವಿಗೇಯನೆಂದು |
ಮಾಡುವೆನು ಸಾಷ್ಟಾಂಗ – ದಂಡಪ್ರಣಾಮ ಮಾತಾಡುವೆನು ಮೈಮರೆದು ನಿಂದು |
ಬೇಡುವೆನು ಭುವನೈಕ ದಾತನೆದುರಲಿ ಕರವ ಜೋಡಿಸಿ ದಾಸ್ಯಬೇಕೆಂದು |
ಈಡಿಲ್ಲದಿಂದಿನ ಮನಕೆನ್ನ
ಬಯಕೆ ಕೈ-ಗೂಡುವುದು ನಿಸ್ಸಂದೇಹ-ದೈವ ಸಹಾಯ ||೩||

ಇರುವನೋ ಏಕಾಂತದಲಿ ಬರವ ಕೇಳಿದಿರು |
ಬರುವನೋ ಬಂದವನ ಕಂಡು |
ತರುವನೋ ತನುಪುಳಕವಾನಂದ ಭಾಷ್ಪದಿಂ-| ದೆರೆವನೋ ಬಿಗಿದಪ್ಪಿಕೊಂಡು |
ಕರೆವನೋ ಕಿರಿಯಯ್ಯ ಬಾರೆಂದು ಬಣ್ಣಿಸುತ |
ಬೆರೆವನೋ ಬೆರೆಸಿ ತಾನುಂಡು |
ಒರೆವನೋ ಒಡಲಮರ್ಮವನೆಲ್ಲ ಒರಗಿಸಿ|
ಜರಿಯನೋ ಜಗದೀಶ ಹಗೆತನ ನೆನೆಯ-ಬಗೆಯ ||೪||

ಗೋಧೂಳಿ ಲಗ್ನಕ್ಕೆ ಗೋಕುಲಕೆ ಬಂದು ಬೆರ |
ಗಾದೆ ಹರಿ ಹೆಜ್ಜೆಗಳ ಕಂಡು | ಭೂದೇವಿಗಾಭರಣವೆನುತ
ತೇರಿಳಿದು ಶ್ರೀ ಪಾದರಜದೊಳಗೆ ಹೊರಳಾಡಿ |
ಗೋದೋಹನದೊಳಿದ್ದ ರಾಮಕೃಷ್ಣರ ಕಂಡು |
ನಾ ಧನ್ಯಧನ್ಯನೆಂದಾಡಿ ||
ಶ್ರೀದವಿಠಲಗೆರಗುವನಿತರೊಳು ಬಿಗಿದಪ್ಪಿ |
ಸಾದರಿಸಿದನು ಇದೇ ಸದನದಲಿ-ಸ್ವಪ್ನದಲಿ ||೫||

7 thoughts on “ರಥವೋಗದ ಮುನ್ನ ಗೋಕುಲಕೆ”

  1. ತ್ರಿವೇಣಿಯವರೆ,
    ತುಂಬಾ ಸುಂದರವಾದ ಕೀರ್ತನೆಯನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
    “ಗೋಪುರ ಶಿಲ ತೃಣಾಂಕುರವ ತೋರುವ ಚರಣ” ಎಂದರೆ ನನಗೂ ಅರ್ಥವಾಗಲಿಲ್ಲ. ಆದರೆ, “ಗೋಕುಲ ಶಿಲಾ ತೃಣಾಂಕುರವ ತೋರುವ ಚರಣ” ಎಂದರೆ,”ಗೋಕುಲದ ಶಿಲೆ, ಹುಲ್ಲು (ಮೊದಲಾದ) ಸ್ಥಳಗಳಲ್ಲಿ ಆಟವಾಡಿ, ಅವುಗಳನ್ನು ತನ್ನಲ್ಲಿ ತೋರುತ್ತಿರುವ ಚರಣಗಳು” ಎನ್ನುವ ಅರ್ಥ ಬರಬಹುದೇನೊ?

  2. “ಗೋಪುರ” ಎಂದರೆ, “ಗೋವುಗಳ ಪುರ=ಗೋಕುಲ” ಎನ್ನುವ ಅರ್ಥವೂ ಆಗಬಹುದೆ?

  3. ತ್ರಿವೇಣಿಯವರೆ,
    ಈ ಕೀರ್ತನೆಯಲ್ಲಿ ಆದಿಪ್ರಾಸದ ಬಳಕೆ ಇದೆ. ಎರಡನೆಯ ನುಡಿಯಲ್ಲಿ ಆದಿಪ್ರಾಸದಲ್ಲಿ ‘ಪ’ಕಾರದ ಬಳಕೆಯಾಗಿದೆ. ‘ಗೋ-ಕು-ಲ’ ಎಂದರೆ ಪ್ರಾಸಭಂಗವಾಗುತ್ತಿತ್ತು. ಆದುದರಿಂದ ದಾಸರು ‘ಗೋ-ಪು-ರ’ ಎಂದಿದ್ದಾರೆ.
    ‘ಗೋ-ಪುರ=ಗೋ-ಕುಲ’ ಆಗುವದರಿಂದ ಅರ್ಥವ್ಯತ್ಯಾಸ ಆಗುವದಿಲ್ಲ. ಹರಿದಾಸರ innate ಜಾಣ್ಮೆಯನ್ನು ನಾವು ಮೆಚ್ಚಬೇಕು.

  4. ಗೋಕುಲಕ್ಕೂ ಮಥುರೆಗೂ ಹೆಚ್ಚಿನ ದೂರವೇನಿಲ್ಲ. ಸುಮಾರು ಹತ್ತು ಕಿ.ಮೀ. ಅಷ್ಟಿರಬಹುದು – ಯಮುನೆಯ ಒಂದು ಬದಿ ಮಥುರೆ, ಇನ್ನೊಂದು ಕಡೆ ಗೋಕುಲ.

    ಗೂಗಲ್ ಮ್ಯಾಪ್ ನಲ್ಲಿ ಮಥುರಾ ಎಂದು ಟೈಪಿಸಿ:)ದರೆ, ನೀವು ಮಥುರೆ ಬೃಂದಾವನ ಎರಡನ್ನೂ ಒಂದೇ ನಿಮಿಷದಲ್ಲಿ ನೋಡಬಹುದು !

    -ನೀಲಾಂಜನ

  5. ಸುನಾಥರೇ, ಗೋಕುಲ ಮುದ್ರಣ ದೋಷದಿಂದಾಗಿ “ಗೋಪುರ ” ಎಂದು ಅಚ್ಚಾಗಿರಬಹುದೆಂದು ಭಾವಿಸಿದ್ದೆ. ನೀವು ಸರಿಯಾದ ವಿವರಣೆ ನೀಡಿ, ಅನುಮಾನ ಪರಿಹರಿಸಿದಿರಿ. ಧನ್ಯವಾದಗಳು.

  6. ನೀಲಾಂಜನ, ಮಥುರಾ, ಬೃಂದಾವನ, ಗೋವರ್ಧನಗಳನ್ನು ನಾನೂ ನೋಡಿ ಬಂದೆ. ದ್ವಾಪರಯುಗದಲ್ಲಿ ಗೂಗಲ್ ಇದ್ದಿದ್ದಲ್ಲಿ, ಶ್ರೀಕೃಷ್ಣನಿಗೆ ತಾಯಿಗೆ ಬಾಯಲ್ಲಿ ಜಗವನ್ನು ತೋರುವ ಕಷ್ಟವೇ ಇರುತ್ತಿರಲಿಲ್ಲ ನೋಡಿ. 🙂

  7. ತುಂಬಾ ಚೆನ್ನಾಗಿದೆ ಈ ಕೀರ್ತನೆ..

    ನೀವು ಅದನ್ನು ಅರ್ಥೈಸಿದ ರೀತಿ ಇಷ್ಟವಾಯ್ತು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.