ಅಂತರ್ಜಾಲದ ವಿವಿಧ ಸಮುದಾಯಗಳಲ್ಲಿ ನಡೆಯುವ ಚರ್ಚೆ, ವಾದಗಳನ್ನು ನೋಡಿದಾಗ ಅನಿಸಿದ್ದು ಹೀಗೆ: ಯಾವುದೇ ವಿಷಯದ ಬಗ್ಗೆ ನಡೆಯುವ ಚರ್ಚೆಗಳಿಂದ ಏನಾದರೂ ಪ್ರಯೋಜನವಾದೀತೆ? ಚರ್ಚೆಯಲ್ಲಿ ಭಾಗವಹಿಸುವವರಿಗೆ, ಭಾಗವಹಿಸದೆ ಸುಮ್ಮನೆ ನೋಡುವ ಮೂಕ ಪ್ರೇಕ್ಷಕರಿಗೆ ಒಂದಿಷ್ಟು ಹೊಸ ವಿಷಯಗಳು ತಿಳಿದು ಬರಬಹುದು, ಕಾಲಕ್ಷೇಪವೂ ಆಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲವಾದರೂ, ಅದಕ್ಕಿಂತ ಹೆಚ್ಚಿನದೇನಾದರೂ ನಿಜವಾಗಿಯೂ ಸಾಧ್ಯವಿದೆಯೇ?

ಕೆಲವು ದಿನಗಳ ಹಿಂದೆ ಇಮೈಲ್ ಮೂಲಕ ಒಂದು ಚರ್ಚೆ ನಡೆಯುತ್ತಿತ್ತು. “ವಿಷಯ: ಅಳಿಯುತ್ತಿರುವ ಕನ್ನಡ ಭಾಷೆಯನ್ನು ನಾಳೆಗೂ ಉಳಿಸುವುದು ಹೇಗೆ?” ಕನ್ನಡವನ್ನು ಉಳಿಸುವುದು ಹೇಗೆಂದು ಇಂಗ್ಲಿಷಿನಲ್ಲಿ ನಡೆಯುತ್ತಿದ್ದ ಈ ಘನಘೋರ ಚರ್ಚೆಯನ್ನು ನಾನೂ ಆಸಕ್ತಿಯಿಂದ ಗಮನಿಸುತ್ತಲೇ ಇದ್ದೆ. ಕನ್ನಡದ ಬಗ್ಗೆ ಪ್ರಾಮಾಣಿಕ ಕಳಕಳಿಯುಳ್ಳವರೇ ಭಾಗವಹಿಸಿದ್ದ ಈ ಚರ್ಚೆಯಿಂದ ಏನಾದರೂ ಉಪಯುಕ್ತವಾದುದೇ ಹೊರಬಂದೀತು ಎನ್ನುವುದು ನನ್ನ ಊಹೆಯಾಗಿತ್ತು. ಹಾಗೇನೂ ಆಗಲಿಲ್ಲ. ಚರ್ಚೆಯ ನಡುವೆ ಯಾರೋ ಒಬ್ಬರು ಸಂಸ್ಕೃತದ ಪ್ರಸ್ತಾಪ ತಂದುಬಿಟ್ಟರು. ಸರಿ, ಚರ್ಚೆಯ ಗಾಡಿ ಕನ್ನಡ ಉಳಿಸುವ ಬದಲು ಸಂಸ್ಕೃತ ಹಳಿಯುವ ಹಳಿಯತ್ತ ವಾಲಿಕೊಂಡುಬಿಟ್ಟಿತು! ಕೂಡಲೇ ಅಲ್ಲಿದ್ದ ಕೆಲವರು ಸಂಸ್ಕೃತದ ರಕ್ಷಕರಾಗಿ ಮಾರ್ಪಟ್ಟರು, ಮತ್ತೆ ಕೆಲವರು ಕನ್ನಡದ ಕಾವಲುಗಾರರಾದರು. ಒಟ್ಟಿನಲ್ಲಿ ಚರ್ಚೆಯ ಮೂಲ ಆಶಯವೇನೆಂಬುದು ಎಲ್ಲರಿಗೂ ಮರೆತುಹೋಯಿತು.

ಇದೊಂದು ಉದಾಹರಣೆ ಮಾತ್ರ. ಯಾವುದೇ ಚರ್ಚೆಯನ್ನು ಗಮನಿಸಿದರೂ, ಚರ್ಚೆಯನ್ನು ತಾವಂದುಕೊಂಡ ದಿಕ್ಕಿನತ್ತಲೇ ಸಾಗಿಸಲು ಕೆಲವರು ಕಾದುಕೊಂಡಿರುತ್ತಾರೆ. ಚರ್ಚೆ ಹಿಂದೂ ಧರ್ಮದ ಬಗೆಗಾದರೆ ಅದು ಕೊನೆಗೆ ದಲಿತ-ಬ್ರಾಹ್ಮಣ ದಾರಿಯಲ್ಲಿ, ಹುಸೇನ್ ಬಗೆಗಿನ ಚರ್ಚೆ ಹಿಂದು-ಮುಸ್ಲಿಂ ಕಲಹಕ್ಕೆ ಹೋಗುತ್ತದೆ. ಬಡತನ, ಟ್ರಾಫಿಕ್, ರಿಯಲ್ ಎಸ್ಟೇಟ್ ಇತ್ಯಾದಿ ಚರ್ಚೆಗಳೆಲ್ಲವೂ ಕೊನೆಗೆ ಅಮೆರಿಕ, ಐಟಿಗೆ ಗ್ರಹಚಾರ ಬಿಡಿಸುವತ್ತ ಸಾಗುತ್ತದೆ. ಇನ್ನೊಂದು ಇನ್ನೇನೋ ಆಗಿ, ಇನ್ನೆಲ್ಲೋ ಹೋಗಿರುತ್ತದೆ.

ಹೀಗೇನೂ ಆಗದೆ ಚರ್ಚೆ ಸರಿಯಾದ ದಾರಿಯಲ್ಲೇ ನಡೆಯಿತು ಅಂದುಕೊಳ್ಳೋಣ. ಆಗಲೂ ಅದರಿಂದೇನು? ಚರ್ಚೆಯಿಂದ ಹೊರಹೊಮ್ಮುವ ಪರಿಹಾರಗಳನ್ನು ಕಾರ್ಯರೂಪಕ್ಕಿಳಿಸುವ ಸಾಮರ್ಥ್ಯ ನಮಗೆಲ್ಲಿದೆ? ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿ, ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಹೊರಡಿಸುವ ಠರಾವುಗಳೇ ಸರಕಾರದ ಕಿವಿ ತಲುಪುವಲ್ಲಿ ವಿಫಲವಾಗುವಾಗ ವೈಯುಕ್ತಿಕ ನೆಲೆಗಳಲ್ಲಿ ನಡೆಯುವ ಚರ್ಚೆಗಳಿಂದ, ಅವುಗಳಿಂದ ದೊರಕುವ ಪರಿಹಾರಗಳಿಂದ ಏನನ್ನು ತಾನೇ ನಿರೀಕ್ಷಿಸಬಹುದು? ಸರಳ ಮದುವೆ v/s ಅದ್ಧೂರಿ ಮದುವೆ ಬಗ್ಗೆ ನಡೆದ ಚರ್ಚೆಯಿಂದ ಪ್ರೇರಣೆ ಪಡೆದು ತಮ್ಮ ಬದುಕಿನಲ್ಲಿ ಅದನ್ನು ಅನುಷ್ಟಾನಕ್ಕೆ ತಂದವರು ಬೆರಳೆಣೆಕೆಯಷ್ಟಾದರೂ ಸಿಕ್ಕರೆ ಅಂತಹ ಚರ್ಚೆ ನಿಜಕ್ಕೂ ಉಪಯುಕ್ತವೆನ್ನಬಹುದು.

ಹಿಂದೆ, ವೇದಾಂತ ವಿಚಾರಗಳಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಸೋತವರು ಗೆದ್ದವರ ವಿಚಾರಧಾರೆಯನ್ನು ಸ್ವೀಕರಿಸುವ ಪದ್ಧತಿ ಇತ್ತು. ಎಸ್. ಎಲ್. ಭೈರಪ್ಪನವರು “ಸಾರ್ಥ” ಕಾದಂಬರಿಯಲ್ಲಿ ಶಂಕರಾಚಾರ್ಯರು ಮತ್ತು ಮಂಡನ ಮಿಶ್ರರ ನಡುವೆ ನಡೆಯುವ ವಾಗ್ವಾದವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ.

ಆದರೆ ಇಂದಿನ ಬಹುಪಾಲು ಚರ್ಚೆಗಳಲ್ಲಿ ವಿತಂಡವಾದವೇ ಹೆಚ್ಚಾಗಿರುತ್ತದೆ. ಎದುರಾಳಿ ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅದೇನೇ ಸಾಕ್ಷ್ಯಾಧಾರಗಳನ್ನು ತಂದು ಸುರಿದರೂ ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಮನೋಭಾವ ಕಡಿಮೆಯೇ. ಕೆಲವು ಬಾರಿ ಚರ್ಚೆಯ ಕಾವು ವೇದಿಕೆಯ ಹೊರಗೂ ವ್ಯಾಪಿಸಿ, ವಾದ ತೀರಾ ವೈಯುಕ್ತಿಕ ಮಟ್ಟಕ್ಕಿಳಿದು ಪರಸ್ಪರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.

ಚರ್ಚೆಗಳೆಂದರೆ ನನಗೆ ಅಷ್ಟಕ್ಕಷ್ಟೆ. ಚರ್ಚೆ = ಜಗಳ ಎಂಬ ಭಾವನೆ ಬಂದು ಭಯವಾಗುವುದೂ ಇದೆ. ಹಾಗಾಗಿ ಯಾರಾದರೂ ನನ್ನನ್ನು ಸಿನಿಕಳೆಂದರೂ ಸರಿಯೆ, ಪುಕ್ಕಲಿ ಎಂದರೂ ಸರಿಯೇ, ನಾನಂತು ಚರ್ಚೆಗಳಿಂದ ದೂರವೇ ಇರಲು ಬಯಸುತ್ತೇನೆ. ನಿಮಗೆ ಚರ್ಚೆಗಳಿಂದ ನಿಜವಾಗಿ ಉಪಯೋಗವಿದೆ ಅನ್ನಿಸಿದರೆ ಆ ಬಗ್ಗೆಯೇ ಚರ್ಚಿಸಿ. ಆದರೆ ನನ್ನನ್ನು ಮಾತ್ರ ಚರ್ಚೆಗೆಳೆಯಬೇಡಿ. ಚರ್ಚೆಗೆ ನಾನಂತೂ ಸಿದ್ಧಳಿಲ್ಲ!

**********************************************************************************************

ಮೂರು ಬಗೆಯ ವಾದಗಳು (ಶತಾವಧಾನಿ ಗಣೇಶ್ ಅವರ ಲೇಖನದಿಂದ)

೧. ವಾದ – ಕೇವಲ ಸತ್ಯ ಪ್ರೀತಿಯಿಂದ, ಅತ್ಯಂತ ಬೌದ್ಧಿಕ ಪ್ರಾಮಾಣಿಕತೆ, ಅಧ್ಯಯನಗಳ ನೆಲೆಯಲ್ಲಿ ಅರಿವನ್ನು ಪರಸ್ಪರ ಹೆಚ್ಚಿಸಿಕೊಳ್ಳಲು ನಡೆಸುವ ಚರ್ಚೆ.

೨. ಜಲ್ಪ – ವ್ಯಾಸಂಗದ ಬಲವಿದ್ದರೂ ಕೇವಲ ತಾನೇ ಗೆಲ್ಲಬೇಕೆಂದು ನಡೆಸುವ ವಾಗ್ಯುದ್ಧ.

೩. ವಿತಂಡ – ವ್ಯಾಸಂಗ ಹಾಗೂ ಸತ್ಯ ಸಂವೇದನೆಗಳಿಲ್ಲದೆ ಕೇವಲ ಪರಪಕ್ಷ ದೂಷಣೆಯಲ್ಲಿ ಪರ್ಯಾವಸಾನವಾಗುವ ಕೋಲಾಹಲ.

*******************************************

ನೀವು ಚರ್ಚಾಪ್ರಿಯರಾಗಿದ್ದು ಅಲ್ಲಲ್ಲಿ ನಡೆಯುವ ವಾದ-ವಿವಾದಗಳಲ್ಲಿ ಪಳಗಿದವರಾದರೆ, ನಿಮ್ಮ ವಾದ ಈ ಮೂರರಲ್ಲಿ ಯಾವ ಬಗೆಯದು ?

20 thoughts on “ಚರ್ಚೆಗಳಿಂದೇನಾದೀತು?”

 1. ಚರ್ಚೆ ನನಗೆ ಪ್ರಿಯವೇ ಆದರೂ ವಾದ ಮಾತ್ರ ನನ್ನ ಹಳಿ.

  ಜಲ್ಪ ಮತ್ತು ವಿತಂಡ- ಇವುಗಳ ಬಗ್ಗೆ ಮಾಹಿತಿ ಕೊಟ್ಟಿದ್ದು ಒಳ್ಳೇದಾಯ್ತು. ನಮ್ಮೊಡನೆ ಚರ್ಚೆ ಮಾಡುತ್ತಿರುವವರು ಯಾವ ದಾರಿಯಲ್ಲಿದ್ದಾರೆಂದು ಗುರುತಾದರೆ, ನಮ್ಮ ಗಾಡಿಯನ್ನು ಕ್ಷೇಮವಾಗಿ ಬೇರೆ ಕಡೆಗೆ, ದೂರ ಒಯ್ಯಲು ಅನುಕೂಲ.

 2. ‘ಚರ್ಚೆ ಸಿದ್ಧಳಿಲ್ಲ..’ ಎನ್ನುತ್ತಲೇ ಕಣಕ್ಕೆ ನಮ್ಮನೆಲ್ಲ ನಯವಾಗಿ ಆಹ್ವಾನಿಸಿರುವ ‘ಚರ್ಚಾವನ’ ದ ಹಿರಿಯಕ್ಕನಿಗೆ ನಮಸ್ಕಾರ!

  ವಿವಿಧ ಅಭಿಪ್ರಾಯಗಳ ಸ೦ವಹನ, ಮಿಲನ, ಮರಣ ಎಲ್ಲದಕ್ಕೂ ಚರ್ಚೆಯೇ ಸಾಧನವಲ್ಲವೇ?

  ನಿಮ್ಮೊಳಗೊಮ್ಮೆ ಚರ್ಚಿಸಿ. ಹೊರಬಿದ್ದ ಉತ್ತರವನ್ನು ಮತ್ತೆ ವಾದಕ್ಕಿಡಿ. ಸಮಾಧಾನವಾಗಿ ಚರ್ಚಿಸೋಣ!

 3. ತ್ರಿವೇಣಿಯವರೆ,
  ೧) ಶಂಕರಾಚಾರ್ಯರು ಮಂಡನಮಿಶ್ರರೊಡನೆ ವಾದಿಸಿ ಸೋಲಿಸಿದರು. ಶಂಕರಾಚಾರ್ಯರು ಜ್ಞಾನವಾದಿಗಳು, ಮಂಡನಮಿಶ್ರರು ಕರ್ಮವಾದಿಗಳು.
  ೨)ಕುಮಾರಿಲ ಭಟ್ಟರು ಬೌದ್ಧ ಧರ್ಮೀಯರೊಡನೆ ವಾದಿಸುವ ಉದ್ದೇಶದಿಂದಲೇ, ಬೌದ್ಧ ಶಾಸ್ತ್ರಗಳನ್ನು ಪ್ರಚ್ಛನ್ನ ಗುರುತಿನೊಂದಿಗೆ, ಬೌದ್ಧ ವಿದ್ಯಾಲಯದಲ್ಲಿ ಕಲಿತವರು. ಗುರುದ್ರೋಹ ಮಾಡಿದೆನೆಂದು ಭಾವಿಸಿ, ಕೊನೆಗೆ ಅಗ್ನಿಯಲ್ಲಿ ದೇಹ ಅರ್ಪಿಸಿದರು.
  ೩) ಶತಾವಧಾನಿ ಗಣೇಶರು ವಾದಭೇದಗಳನ್ನು ಸೊಗಸಾಗಿ ಪರಿಚಯಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅದನ್ನು ನಮಗೆ ತೋರಿಸಿದ ನಿಮಗೂ ಧನ್ಯವಾದಗಳು.
  ೪) ವಾದದಲ್ಲಿ ಸೇರಿಕೊಂಡು ಭಯಂಕರವಾಗಿ ವಾದಿಸಿ, ಕೊನೆಗೆ ಸೋತುಹೋಗುವ ಮತ್ತೊಂದು ವರ್ಗಕ್ಕೆ ನಾನು ಸೇರಿದ್ದೇನೆ. ಹೀಗಾಗಿ ನನ್ನೊಡನೆ ವಾದಿಸಲು ಯಾರೂ ಭಯಪಡಬೇಕಿಲ್ಲ.
  ೫) ಇಂತಹ ಚರ್ಚಾಕೂಟಗಳಿಂದ ತಕ್ಷಣದ, ಪ್ರತ್ಯಕ್ಷ ಫಲ ಸಿಗದಿದ್ದರೂ ಸಹ, ಅಪ್ರತ್ಯಕ್ಷ ಫಲ ಇದ್ದೇ ಇರುತ್ತದೆ. (ತಲೆನೋವಲ್ಲ!).
  ವಾದೇ ವಾದೇ ಜಾಯತೇ ತತ್ವಜಿಜ್ಞಾಸಾ.

 4. ಪಯಣಿಗ, ಜ್ಯೋತಿ ಧನ್ಯವಾದಗಳು.

  ಸುನಾಥರೇ, ಭೈರಪ್ಪನವರ ಕಾದಂಬರಿಯಲ್ಲಿ – ವಾದದಲ್ಲಿ ಸೋತು, ತಮ್ಮಶಪಥದಂತೆ ಆತ್ಮಾಹುತಿ ಮಾಡಿಕೊಳ್ಳುವವರು ಕುಮಾರಿಲಭಟ್ಟರೇ ಎಂದಾಯಿತು. ಗೊಂದಲ ಪರಿಹರಿಸಿದ್ದಕ್ಕೆ ಧನ್ಯವಾದಗಳು.

 5. ನಮಸ್ಕಾರ ತ್ರಿವೇಣಿ ಅವರಿಗೆ,
  ಇಂಟರ್ನೆಟ್ಟಿನ ಇತ್ತೀಚಿನ ಚರ್ಚೆಗಳ ಗತಿಯನ್ನ ಸರಿಯಾಗಿ ಹಿಡಿದ್ದೀರ! ತಕ್ಷಣದ ಉತ್ತರ/ಪ್ರತಿ ಉತ್ತರಗಳ ಚರ್ಚೆಗಳು ಹಾದಿ ತಪ್ಪುವ ಸಂಭವವೇ ಹೆಚ್ಚು ಅನಿಸುತ್ತದೆ. ಬಹುತೇಕ ನಾನು ಇಂತಹ ಚರ್ಚೆಗಳ ಹೊರಗೇ ನಿಂತು ಹೊಸತೇನಾದರೂ ಇದ್ದರೆ ಅರಿತುಕೊಳ್ಳುವವನು 🙂

  btw, ಕುಮಾರಿಲಭಟ್ಟರು ತುಶಾನಿಲ ಪ್ರವೇಶ ಮಾಡಿದ್ದು ವಾದದಲ್ಲಿ ಸೋತದ್ದಕ್ಕಲ್ಲ. ಸುಳ್ಳು ಹೇಳಿ ಬೌದ್ಧ ಧರ್ಮ ಕಲಿಯಲಿಕ್ಕೆ ಹೋದದ್ದು ಗುರುದ್ರೋಹ ಅನಿಸಿದ್ದಕ್ಕೆ. ವಾದದಲ್ಲಿ ಸೋತು ಶಂಕರರ ಅನುಯಾಯಿಯಾದವರು ಮಂಡನಮಿಶ್ರರು.

 6. ತುಳಸಿಯಮ್ಮ..(ಹೀಗೆ ಕರೆದರೆ ನಿಮಗೆ ಸಂತೋಷವೆಂದು ತಿಳಿದುದರಿಂದ ಕರೆದಿರುವೆ)

  ಚರ್ಚೆಗೆ ಇಳಿಯದೇ ನಿಮ್ಮ ವಾದವನ್ನು ಒಪ್ಪಿಕೊಳ್ಳುವೆ. ನಿಜ.. ಚರ್ಚೆಗಳಿಂದ ಒಳ್ಳೆಯ ಫಲಿತಾಂಶಗಳು ಸಿಗುವುದು ತುಂಬಾ ಕಷ್ಟ. ಚರ್ಚೆಗಳಿಗಿಂತ ಚಿಂತನೆಗಳಿದ್ದರೆ ತುಂಬಾ ಉತ್ತಮ. ಅಂದಹಾಗೆ ನಾನು ಮೊದಲಿನ ಸಾಲಿಗೆ ಸೇರುವವಳು..(ಶತಾವಧಾನಿಗಳ ಮೂರು ಬಗೆಯವಾದಗಳಲ್ಲಿ). ಹಾಗಾಗಿ ಚರ್ಚೆಗೆ ಬಂದರೂ ಹೆದರಬೇಕಾಗಿಲ್ಲ 😉

 7. ತೇಜಸ್ವಿನಿ, ತುಂಬಾ ಸಂತೋಷವಾಯಿತು. 🙂

  ಪುಸ್ತಕ ಬಿಡುಗಡೆ ಹೇಗಾಯಿತು? ಹೇಳಲೇಇಲ್ಲ? ಫೋಟೊ, ವರದಿ ಹಾಕದಿದ್ದರೆ ನಿಮ್ಮ ಬ್ಲಾಗಿಗೆ ಲಗ್ಗೆ ಹಾಕಲಿದ್ದೇವೆ.

 8. ತ್ರಿವೇಣಿಯವರೆ,

  ನಿಮ್ಮ ನಿಲುವನ್ನು, ಅರ್ಥಾತ್ ಚರ್ಚೆಗಳಲ್ಲಿ ಹುರುಳಿಲ್ಲ ಎಂಬ ಅಭಿಪ್ರಾಯವನ್ನು, ಬೆಂಬಲಿಸುತ್ತಾ, ನಾನಿಲ್ಲಿ ಸರ್ವಜ್ಞನ ವಚನವೊಂದನ್ನು ಹೇಳಬಯಸುತ್ತೇನೆ . . .

  “ಬಲ್ಲೆನೆಂಬುವ ಮಾತು ಎಲ್ಲವೂ ಹುಸಿ ಕಾಣೊ
  ಬಲ್ಲರೆ ಬಲ್ಲೆನೆನಬೇಡ
  ಸುಮ್ಮನಿರಬಲ್ಲವನೆ ಬಲ್ಲ — ಸರ್ವಜ್ಞ”

 9. ಪ್ರದೀಪ್, ಚರ್ಚೆಯಲ್ಲಿ ಹುರುಳಿಲ್ಲವೆಂಬ ನನ್ನ ಅಭಿಪ್ರಾಯವನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳು. “ಸುಮ್ಮನಿರಬಲ್ಲವನೆ ಬಲ್ಲ” ಎಂದಿರುವ ಸರ್ವಜ್ಞನೇ ಇನ್ನೊಂದು ಕಡೆ “ಸುಮ್ಮನಿರಬಲ್ಲವರು ಇಲ್ಲವೇ ಇಲ್ಲ” ಎಂದೂ ಹೇಳಿಬಿಟ್ಟಿದ್ದಾನೆ.

 10. ಅಂತರ್ಜಾಲ ಚರ್ಚೆಗಳಿಂದ ಪ್ರಯೋಜನವಿಲ್ಲ ಎನ್ನುವದು ಸಿನಿಕತನ. ಮುಕ್ತ ಮನಸ್ಸಿನ ವ್ಯಕ್ತಿಗಳು, ಚರ್ಚೆ ಎಲ್ಲಿಯೇ ನಡೆಯಲಿ( ಅಂತರ್ಜಾಲ ಅಥವಾ ಮನೆ ಅಂಗಳ) ಬದಲಾಗಲು ತಯಾರಿರುತ್ತಾರೆ. Afterall consistancy is the virtue of an ass. ನಾನು ಬದಲಾಗೋದಿಲ್ಲೆ ಎಂದು ಮನಸ್ಸು ಗಟ್ಟಿ ಮಾಡಿಕೊಂಡ ವ್ಯಕ್ತಿ ಯಾವ ಜಾಲದಲ್ಲಿಯೂ ಬದಲಾಗೋದಿಲ್ಲ

 11. ಪ್ರಿಯ ಸುನಾಥರೆ,

  “ಚರ್ಚೆಗಳೆಂದರೆ ಅಷ್ಟಕಷ್ಟೆ” ಎಂದಾಕ್ಷಣ ಒಬ್ಬ ವ್ಯಕ್ತಿ ಬದಲಾಗುವುದಕ್ಕೆ ತಯಾರಿಲ್ಲ ಎಂಬ ನಿರ್ಧಾರಕ್ಕೆ ಹೇಗೆ ಬಂದಿರಿ? ಬಹುಷಃ ಇಂತಹ ಹತ್ತು ಹಲವಾರು ಚರ್ಚೆಗಳನ್ನು — ನೇರ ಅವುಗಳಲ್ಲಿ ಭಾಗವಹಿಸಿಯಾಗಲಿ ಅಥವಾ ಅವುಗಳಿಂದ ಹೊರ ನಿಂತು ಅವುಗಳನ್ನು ಅಭ್ಯಸಿಸಿಯಾಗಲಿ — ಕಂಡೇ ಆ ವ್ಯಕ್ತಿಯು ಈ ನಿಲುವಿಗೆ ಬಂದಿರಲೂ ಬಹುದು. ಮೇಲಾಗಿ, ಈ ನಿರ್ಧಾರವನ್ನು ತಾಳುವಾಗ ಆತನ/ಆತಳ ಮನಸ್ಸಿನಲ್ಲಿ ಇಂತಹ ನೂರು ಚರ್ಚೆಗಳು ನಡೆದಿರಲಿಕ್ಕೂ ಸಾಕು!

  ಮುಕ್ತ ಮನಸ್ಸಿನ ವ್ಯಕ್ತಿಯೊಬ್ಬ ಚರ್ಚೆಗಳ ಸೀಮೆಯನ್ನರಿತು ಅವುಗಳ ಕುರಿತಾಗಿ ಈ ರೀತಿಯ ಅಭಿಪ್ರಾಯ ತಳೆದಿರಲೂ ಬಹುದು . . . ಅವನೇನೂ ಚರ್ಚೆ ಮಾಡುವರನ್ನು ಚರ್ಚೆ ಮಾಡದ ಹಾಗೆ ತಡೆಯುತ್ತಿಲ್ಲವಲ್ಲ. ಹಾಗಾಗಿ, ಅಂತಹವರ ಸಿನಿಕತನ ಅವರಿಗಿರಲಿ, ಚರ್ಚಾಪ್ರಿಯರ ಚರ್ಚೆ ಅವರಿಗಿರಲಿ.

 12. ಪ್ರಿಯ ಪ್ರದೀಪ,
  ಒಂದು ಗುಂಜಿ ಬಂಗಾರವನ್ನು ತೆಗೆಯಲು, ಒಂದು ಟನ್ ಅದಿರನ್ನು ಸೋಸಬೇಕಾಗುತ್ತದೆ. ಅದರಂತೆ, ತಾಳ್ಮೆಯಿಂದ ಚರ್ಚೆಯಲ್ಲಿ ಭಾಗವಹಿಸಿದರೆ, ಕೊನೆಗೂ ಶುದ್ಧ ಬಂಗಾರ ಸಿಗುವದರಲ್ಲಿ ಸಂಶಯವಿಲ್ಲ. ಚರ್ಚೆಗಳಿಂದ ಪ್ರಯೋಜನವಿಲ್ಲ ಅನ್ನುವ ಪೂರ್ವಾಗ್ರಹ ಧೋರಣೆಯಿಂದ ನಡೆದರೆ, ಬಂಗಾರವನ್ನು ನೀವೇ ಕಳೆದುಕೊಳ್ಳುತ್ತೀರಿ. ಸ್ವತಹ ಭಗವಂತನೇ ಹೇಳಿದ್ದಾನೆಃ “ಸಂಶಯಾತ್ಮಾ ವಿನಶ್ಯತಿ” ಎಂದು. ಆದುದರಿಂದ ನಿಮ್ಮ ಎಲ್ಲಾ
  ಸಂಶಯಗಳನ್ನು ಬದಿಗಿಟ್ಟು, “ಕರಿಷ್ಯೇ ವಚನಂ ತವ” ಎಂದು, ಚರ್ಚೆಯಲ್ಲಿ ಭಾಗವಹಿಸಿರಿ.

 13. ಪ್ರಿಯ ಸುನಾಥ್,

  ಚರ್ಚೆಗಳ ಮಿತಿಯನ್ನರಿತವನಿಗೆ ಅದರ ಬಗ್ಗೆ ಸಂಶಯವೂ ಇಲ್ಲ, ಪೂರ್ವಾಗ್ರಹವೂ ಇಲ್ಲ. ಅದಾಗಲೇ ಸೋಸಿ ತೆಗೆದ ಬಂಗಾರ ಅವನ ಕಣ್ಣಿನ ಮುಂದಿರುವಂತೆ, ಅಂಗೈ ಮೇಲಿನ ನೆಲ್ಲಿಕಾಯಿಯಂತೆ, ಅವನು ಚರ್ಚೆಗಳ ಮಿತಿಯನ್ನರಿತವನು. ವಿಷಯವನ್ನರಿತ ವ್ಯಕ್ತಿಗೆ, ಅದರ ಸುತ್ತ-ಮುತ್ತ ಚರ್ಚಾಪಟುಗಳು ವಾಗ್ಯುದ್ಧ ನಡೆಸಿದರೆ, ಅದು (ವಾಗ್ಯುದ್ಧವು) ಅವನಿಗೆ ಕೇವಲ ಗದ್ದಲವಾಗಿ ಕಂಡು ಬಂದರೆ ಅದರಲ್ಲಿ ಆಶ್ಚರ್ಯವೇನು?

  ಚರ್ಚೆಗಳಿಂದ ಹೊರಗುಳಿದ ಮಾತ್ರಕ್ಕೆ ಅವನು ಜಡನೇ? ಚರ್ಚೆಗಳ ಬಗ್ಗೆ ಈ ರೀತಿಯ ಅಭಿಪ್ರಾಯ ಆತ ತಾಳುವುದು ಅವನ ಪೂರ್ವಾಗ್ರಹವಾದರೆ, ಅವನು ಸಿನಿಕನು, ಮುಚ್ಚಿದ ಮನಸ್ಸುಳ್ಳವನು, ಎಂಬ ಧೋರಣೆಯನ್ನು ತಳೆಯುವುದೂ ಪೂರ್ವಾಗ್ರಹವಾಗುವುದಿಲ್ಲವೆ?

 14. ಪ್ರಿಯ ಪ್ರದೀಪ,
  ಅದಿರನ್ನು ಅಗಿದು ತೆಗೆಯದೆ, ಬಂಗಾರ ಅಂಗೈ ನೆಲ್ಲಿ ಆಗಲು ಸಾಧ್ಯವೆ? ಚರ್ಚಾಕೂಟವನ್ನು ಗುದ್ದಾಟದಂತೆ ನೋಡಲು ಅಭ್ಯಂತರವಿಲ್ಲ. ಆದರೆ, ಕನ್ನಡದ ಗಾದೆಯೊಂದನ್ನು ಕೇಳಿರುವಿರಾ?ಃಮೊದ್ದು ಇದ್ದವರಿಗೆ ಮುದ್ದು ಕೊಡುವದಕ್ಕಿಂತ, ಬುದ್ಧಿ ಇದ್ದವರೊಡನೆ ಗುದ್ದಾಡುವದು ಲೇಸು” ಎಂದು.
  Of course, ನಿಮ್ಮ ವಿರೋಧಿಗೆ ಬುದ್ಧಿ ಇರಬೇಕೆಂದಿಲ್ಲ. ಆ ಸಂದರ್ಭದಲ್ಲಿ,
  advantage to your opponent!

 15. ಸುನಾಥ್,

  ಅದಕ್ಕೇ ನಾನು ಈ ಮೊದಲು ಹೇಳಿದ್ದು, “ಚರ್ಚೆಗಳೆಂದರೆ ಅಷ್ಟಕಷ್ಟೆ,” ಎಂಬ ನಿಲುವನ್ನು ತಾಳುವ ಮೊದಲು ಆ ವ್ಯಕ್ತಿಯು ಹಲವಾರು ಚರ್ಚೆಗಳನ್ನು, ಪ್ರತ್ಯಕ್ಷ ಅವುಗಳಲ್ಲಿ ಭಾಗವಹಿಸಿಯಾಗಲಿ ಅಥವಾ ಅವುಗಳಿಂದ ಹೊರ ನಿಂತು ನೋಡಿಯಾಗಲಿ, ಅಭ್ಯಸಿಸಿರಬಹುದು ಅಂತ. (ಅದಿರನ್ನು ಅಗೆದು ತೆಗೆಯುವ ಕಾರ್ಯ ಇಲ್ಲಿ ನಡೆದಿದೆ.) ಹೀಗೆ ಚರ್ಚೆಗಳನ್ನು ಪರಕಿಸಿದ ನಂತರವೇ ಸರ್ವಜ್ಞನಂತಹವರು (“ಸುಮ್ಮನಿರಬಲ್ಲವನೆ ಬಲ್ಲ”) ಮತ್ತು ಬಸವಣ್ಣನಂತಹವರು (“ಮಾತು ಬೆಳ್ಳಿ, ಮೌನ ಚಿನ್ನ”) ತಮ್ಮ-ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿರುವರು . . . ತ್ರಿವೇಣಿಯವರು ನಮ್ಮೆಲ್ಲರ ಮುಂದೆ, “ಚರ್ಚೆಗಳಿಂದ ಹೆಚ್ಚಿನದ್ದೇನಾದರೂ ಸಾಧ್ಯವಿದೆಯೆ?” ಎಂಬ ಪ್ರಶ್ನೆಯನ್ನಿರಿಸಿರುವರು.

  ತ್ರಿವೇಣಿಯವರ ಪ್ರಶ್ನೆಯನ್ನು ಉತ್ತರಿಸುವಾಗ ಈ ಹಿನ್ನಲೆಯನ್ನು ಗಮನದಲ್ಲಿರಿಸಿಕೊಳ್ಳುವುದು ಸೂಕ್ತ. “ಚರ್ಚೆಗಳಿಂದ ಪ್ರಯೋಜನವಿಲ್ಲ ಅನ್ನುವುದು ಸಿನಿಕತನ, ಅವುಗಳಿಂದ ದೂರ ಉಳಿಯುವವರು ಮುಚ್ಚಿದ ಮನಸ್ಸುಳ್ಳವರು,” ಎಂಬ ಉತ್ತರ ಇಲ್ಲಿ ಸಮರ್ಪಕವಾಗಲಾರದೇ ಹೋದಿತು!

  ಎಲ್ಲಾ ಬದಲಾವಣೆಗಳಿಗೆ ಜನರ ನಡುವೆ ನಡೆಯುವ ಚರ್ಚೆ ಮೂಲವಲ್ಲ; ಹಾಗಾಗಿ, ಬದಲಾವಣೆಗೆ ಚರ್ಚೆಯು ಅತ್ಯಗತ್ಯ ಎಂಬುದು ಸಮಂಜಸವಲ್ಲ. ಚರ್ಚೆಗೆ ಅದರದ್ದೇ ಆದ ವ್ಯಾಪ್ತಿಯಿದೆ (ಚರ್ಚೆಯಿಂದ — ಅದರಲ್ಲಿ ಭಾಗವಹಿಸುವವರಿಗೆ ಮತ್ತು ಅದರಿಂದ ಹೊರ ನಿಂತು ನೋಡುವವರಿಗೆ — ದೊರಕುವ ಹೊಸ ಸಂಗತಿಗಳ ಅರಿವು, ಹಾಗೂ ಆ ಸಂದರ್ಭದಲ್ಲಿ ನಡೆಯುವ ಕಾಲಕ್ಷೇಪ, ಈ ವ್ಯಾಪ್ತಿಗೆ ಒಳಪಟ್ಟ ವಿಷಯಗಳಲ್ಲಿ ಕೆಲವು). ಆ ವ್ಯಾಪ್ತಿಯ ಹೊರಗೆ ಅದರ ಪ್ರಭಾವವಿಲ್ಲ.

 16. ಪ್ರದೀಪ,
  ನಾನು ಎಂಥಾ ‘ಉಗ್ರ-ವಾದಿ’ಯಾಗಿದ್ದರೂ ಸಹ ನಿಮ್ಮ ಜೊತೆ ವಾದ ಮಾಡಲಾರದೆ ಸೋತೆ ಎಂದು ಒಪ್ಪಿಕೊಳ್ಳುತ್ತೇನೆ ಹಾಗು ಇಲ್ಲಿಯವರೆಗೂ ಉತ್ತಮ ಚರ್ಚೆ ನೀಡಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ.

 17. ಸುನಾಥ್,

  ನಿಮ್ಮನ್ನು ಸೋಲಿಸುವ ಅಥವಾ ನಡೆದಂತಹ ವಾದದಲ್ಲಿ ಜಯಿಸುವ ಉದ್ದೇಶ ನನ್ನದಾಗಿರಲಿಲ್ಲ; ಈ ವಿಷಯದಲ್ಲಿ (ಚರ್ಚೆಯ ವಿಷಯದಲ್ಲಿ) ನಾನು ಕಂಡುಕೊಂಡಂತಹ ಕೆಲ ಸಂಗತಿಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳ ಬೇಕಾಗಿತ್ತು . . . ಅಷ್ಟೇ. ಬರಿ ನನ್ನೊಬ್ಬನಿಂದಲೇ ಈ ವಾದವನ್ನು ಮಾಡಲಾಗುತ್ತಿರಲಿಲ್ಲ. ಈ ವಿಚಾರ-ವಿನಿಮಯಕ್ಕೆ ಬೇಕಾದಂತಹ ವೇದಿಕೆಯನ್ನು ಒದಗಿಸಿದ ತ್ರಿವೇಣಿಯವರಿಲ್ಲದೇ, ಮತ್ತು ವಾದದಲ್ಲಿ ಭಾಗವಹಿಸಿದ ನೀವಿಲ್ಲದೇ, ಈ ಚರ್ಚೆ ನಡೆಯುತ್ತಿರಲಿಲ್ಲ. ಆದ್ದರಿಂದ ನಿಮ್ಮೀ ಅಭಿನಂದನೆಗೆ ನೀವೂ ಕೂಡ ಪಾತ್ರರು!

 18. “ಇಲ್ಲಿಯವರೆಗೂ ಉತ್ತಮ ಚರ್ಚೆ ನೀಡಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ.’

  “ನಿಮ್ಮೀ ಅಭಿನಂದನೆಗೆ ನೀವೂ ಕೂಡ ಪಾತ್ರರು!”

  ಜಗಳಕ್ಕಿಳಿಯದೆ, ನಿರುದ್ವೇಗದಿಂದ ಅಭಿಪ್ರಾಯಗಳನ್ನು ಹಂಚಿಕೊಂಡ ಪ್ರದೀಪ, ಸುನಾಥ್, ನಿಮ್ಮಿಬ್ಬರಿಗೂ ಧನ್ಯವಾದಗಳು. 🙂

 19. ಚರ್ಚೆ!? ನನಗಾಗಿ ಬರಲ್ಲ ಬಿಡಿ ಮೇಡಂ. ಏನೋ ಹೇಳೋಕ್ಕೆ ಹೋಗಿ ಇನ್ನೇನೋ ಹೇಳಿ ಅಧ್ವಾನ ಮಾಡಿಬಿಡ್ತೀನಿ.
  ಅದೂ ಅಲ್ಲದೇ ಬಹಳ ಬೇಗ ಎಕ್ಸೈಟ್ ಆಗಿ ಮುಖ ಮುದುರಿಸಿಕೊಂಡು ಬಿಡ್ತೀನಿ. ಹೇಗೂ ಬ್ಯಾಂಕಲ್ಲಿ ತುರಿಸಿಕೊಳ್ಳೋಕ್ಕೂ ಸಮಯ ಇಲ್ಲದಷ್ಟು ಕೆಲಸ. ಏನಾದ್ರೂ ಬಿಡುವು ಅಂತ ಸಿಕ್ಕಿದರೆ, ಸುಮ್ನೆ ಏನೋ ಅದೂ ಇದೂ ಓದಿಕೊಂಡು, ಬರೆದುಕೊಂಡು (ನನ್ನ ಮನಸ್ಸು ನಿರಾಳಮಾಡಿಕೊಳ್ಳಲು), ಕಾಲ ಹರಣ ಮಾಡ್ತೀನಿ ಅಷ್ಟೆ.

 20. ತವಿಶ್ರೀಯವರೇ, ನೀವು ಚರ್ಚೆಯಲ್ಲಿ ಎಕ್ಸೈಟ್ ಆಗೋದಾದರೆ ಚರ್ಚೆಗಳಿಂದ ದೂರವಿರುವುದೇ ಒಳ್ಳೆಯದು ಬಿಡಿ. 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.