ಶೋಭಾನವೆನ್ನಿರೆ ಸುರರೊಳು ಶುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪಲ್ಲವಿ||

ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ||೧||

ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಾಲಕ್ಷುಮಿ ಉದಿಸಿದಳು
ಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||೨||

ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು
ಜನ್ಮವೆಂಬುದು ಅವತಾರ ||೩||

ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ
ಅಂಬುಜವೆರಡು ಕರಯುಗದಿ ಧರಿಸಿ
ಪೀತಾಂಬರವನುಟ್ಟು ಮೆರೆದಳೆ ||೪||

ಒಂದು ಕರದಿಂದ ಅಭಯವನೀವಳೆ
ಮತ್ತೊಂದು ಕೈಯಿಂದ ವರಗಳ
ಕುಂದಿಲ್ಲಲದಾನಂದಸಂದೋಹ ಉಣಿಸುವ
ಇಂದಿರೆ ನಮ್ಮ ಸಲಹಲಿ ||೫||

ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲಕೆನಲು
ನಳನಳಿಸುವ ಮುದ್ದುಮುಖದ ಚೆಲುವೆ ಲಕ್ಷುಮಿ
ಸಲಹಲಿ ನಮ್ಮ ವಧೂವರರ ||೬||

ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ
ಚೆನ್ನೆ ಮಹಲಕ್ಷುಮಿ ಧರಿಸಿದಳಾದೇವಿ
ತನ್ನ ಮನೆಯ ವಧೂ-ವರರ ಸಲಹಲಿ ||೭||

ಕುಂಭಕುಂಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ
ದಂಬೆ ವಧೂವರರ ಸಲಹಲಿ ||೮||

ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷುಮಿ
ಕಸ್ತೂರಿ ತಿಲಕ ಧರಿಸಿದಳೆ
ಕಸ್ತೂರಿ ತಿಲಕ ಧರಿಸಿದಳಾ ದೇವಿ
ಸರ್ವತ್ರ ವಧೂವರರ ಸಲಹಲಿ ||೯||

ಅಂಬುಜನಯನಗಳ ಬಿಂಬಾಧರದ ಶಶಿ-
ಬಿಂಬದಂತೆಸೆವ ಮೂಗುತಿಮಣಿಯ ಶಶಿ-
ಬಿಂಬದಂತೆಸೆವಮೂಗುತಿ ಮಣಿ ಮಹಲಕ್ಷುಮಿ
ಉಂಬುದಕೀಯಲಿ ವಧುವರರ್ಗೆ ||೧೦||

ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದೆಳೆ
ನೆತ್ತಿಯ ಮೇಲೆ ಧರಿಸಿದಳಾ ದೆವಿ ತನ್ನ
ಭಕ್ತಿಯ ಜನರ ಸಲಹಲಿ ||೧೧||

ಕುಂದ-ಮಂದರ-ಜಾಜೀ-ಕುಸುಮಗಳ ವೃಂದವ
ಚೆಂದದ ತುರುಬಿಗೆ ತುರುಬಿದಳೆ
ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ-
ಯಿಂದ ವಧೂವರರ ಸಲಹಲಿ ||೧೨||

ಎಂದೆಂದಿಗು ಬಾಡದ ಅರವಿಂದದ ಮಾಲೆಯ
ಇಂದಿರೆ ಪೊಳೆವ ಕೊರಳಲ್ಲಿ
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ-
ಳಿಂದು ವಧೂವರರ ಸಲಹಲಿ ||೧೩||

ದೇವಾಂಗ ಪಟ್ಟೆಯ ಮೆಲು ಹೊದ್ದಿಕೆಯ
ಭಾಮೆ ಮಹಲಕ್ಷುಮಿ ಧರಿಸಿದಳೆ
ಭಾಮೆ ಮಹಲಕ್ಷುಮಿ ಧರಿಸಿದಳಾ ದೆವಿ ತನ್ನ
ಸೇವಕ ಜನರ ಸಲಹಲಿ ||೧೪||

ಈ ಲಕ್ಷುಮಿ ದೇವಿಯ ಕಾಲುಂಗರ ಘಲಕೆನಲು
ಲೋಲಾಕ್ಷಿ ಮೆಲ್ಲನೆ ನಡೆತಂದಳು
ಸಾಲಾಗಿ ಕುಳ್ಳಿರ್ದ ಸುರರಸಭೆಯ ಕಂಡು
ಆಲೋಚಿಸಿದಳು ಮನದಲ್ಲಿ ||೧೫||

ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ
ಮನ್ನದಿ ನಾಚಿ ಮಹಲಕ್ಷುಮಿ
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ
ಉನ್ನತ ದೋಷಗಳನೆಣಿಸಿದಳು ||೧೬||

ಕೆಲವರು ತಲೆಯೂರಿ ತಪಗೈದು ಪುಣ್ಯವ
ಗಳಿಸಿದ್ದರೇನೂ ಫಲವಿಲ್ಲ
ಜ್ವಲಿಸುವ ಕೋಪದಿ ಶಾಪವ ಕೊಡುವರು
ಲಲನೆಯನಿವರು ಒಲಿಸುವರೆ ||೧೭||

ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ
ಕಲ್ಲಿಸಿ ಕೊಡುವ ಗುರುಗಳು
ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು
ಸಲ್ಲದ ಪುರೋಹಿತಕ್ಕೊಳಗಾದರು ||೧೮||

ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ
ಭಾಮಿನಿಯ ಹಿಂದೆ ಹಾರಿದವ
ಕಾಮಾಂಧನಾಗಿ ಮುನಿಯ ಕಾಮಿನಿಗೈದನೊಬ್ಬ
ಕಾಮದಿ ಗುರುತಲ್ಪಗಾಮಿಯೊಬ್ಬ ||೧೯||

ನಶ್ವರೈಶ್ವರ್ಯವ ಬಯಸುವನೊಬ್ಬ ಪರ-
ರಾಶ್ರಯಿಸಿ ಬಾಳುವ ಈಶ್ವರನೊಬ್ಬ
ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ
ಅದೃಶ್ಯಾಂಘ್ರಿಯೊಬ್ಬ ಒಕ್ಕಣನೊಬ್ಬ ||೨೦||

ಮಾವನ ಕೊಂದೊಬ್ಬ ಮರುಳಾಗಿಹನು
ಗಾಢ ಹಾರ್ವನ ಕೊಂದೊಬ್ಬ ಬಳಲಿದ
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ
ಶಿವನಿಂದೊಬ್ಬ ಬಯಲಾದ ||೨೧||

ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ
ಅಮ್ಮಮ್ಮ ತಕ್ಕ ಗುಣವಿಲ್ಲ
ಕ್ಷಮ್ಮೆಯ ಬಿಟ್ಟೊಬ್ಬ ನರಕದಲ್ಲಿ ಜೀವರ
ಮರ್ಮವ ಮೆಟ್ಟಿ ಕೊಲಿಸುವ ||೨೨||

ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ-
ತಾಳಕ್ಕೆ ಇಳಿದ ಗಡ ||೨೩||

ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದಲಿ ತೊಲಗಿಸುವ
ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು ||೨೪||

ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ
ವಿಕೃತಿಗೊಳಾಗಿ ಭವದಲ್ಲಿ
ಸುಖದುಃಖವೆಂಬ ಬೊಮ್ಮಾದಿ ಜೀವರು
ದುಃಖಕ್ಕೆ ದೂರೆನಿಪ ಎನಗೆಣೆಯ ||೨೫||

ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ
ಒಬ್ಬನಾವನಿಗೆ ಶಯನಾಹ
ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ
ಅಬ್ಬರದಲಾವಾಗ ಸುಳಿವರು ||೨೬||

ಒಬ್ಬನಾವನ ನಾಮಕಂಜಿ ಬೆಚ್ಚುವ ಗಾಢ
ಸರ್ವರಿಗಾವ ಅಮೃತವ
ಸರ್ವರಿಗಾವ ಅಮೃತವನುಣಿಸುವ ಅವ-
ನೊಬ್ಬನೆ ನಿರನಿಷ್ಟ ನಿರವದ್ಯ ||೨೭||

ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ
ಒರೆದು ನೋಡಲು ನರಹರಿಗೆ
ನರಕಯಾತನೆ ಸಲ್ಲ ದುರಿತಾತಿದೂರನಿಗೆ
ಮರುಳ ಮನಬಂದಂತೆ ನುಡಿಯದಿರು ||೨೮||

ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||೨೯||

ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು
ತೀವಿದ್ದ ಹರಿಗೆ ದುರಿತವ
ಭಾವಜ್ನರೆಂಬರೆ ಆಲದೆಲೆಯ ಮೆಲೆ
ಶಿವನ ಲಿಂಗವ ನಿಲಿಸುವರೆ ||೩೦||

ಹಸಿ-ತೃಷೆ-ಜರೆ-ಮರಣ-ರೋಗ-ರುಜೆಗಳೆಂಬ
ಅಸುರ-ಪಿಶಾಚಿಗಳೆಂಬ ಭಯವೆಂಬ
ವ್ಯಸನ ಬರಬಾರದು ಎಂಬ ನಾರಾಯಣಗೆ
ಪಶು ಮೊದಲಾಗಿ ನೆನೆಯದು ||೩೧||

ತಾ ದುಃಖಿಯಾದರೆ ಸುರರಾರ್ತಿಯ ಕಳೆದು
ಮೋದವೀವುದಕ್ಕೆ ಧರೆಗಾಗಿ
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ
ಭಾಧಿಪ ಕೆಸರ ಬಿಡಿಸುವನೆ ||೩೨||

ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ
ಜನ್ಮಲಯವಿದವನಿಗೆ
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ
ಅಮ್ಮ ಇವಗೆ ಹಸಿ-ತೃಷೆಯುಂಟೆ ||೩೩||

ಆಗ ಭಕ್ಷ್ಯಭೋಜ್ಯವಿತ್ತು ಪೂಜಿಸುವ
ಯೋಗಿಗೆ ಉಂಟೆ ಧನಧಾನ್ಯ
ಆಗ ದೊರಕೊಂಬುದೆ ಪಾಕ ಮಾಡುವ ವಹ್ನಿ
ಮತ್ತಾಗಲೆಲ್ಲಿಹುದು ವಿಚಾರಿಸಿರೊ ||೩೪||

ರೋಗವನೀವ ವಾತ ಪಿತ್ತ ಶ್ಲೇಷ್ಮ
ಆಗ ಕೂಡುವುದೆ ರಮೆಯೊಡನೆ
ಭೋಗಿಸುವವಗೆ ದುರಿತವ ನೆನೆವರೆ
ಈ ಗುಣನಿಧಿಗೆ ಎಣೆಯುಂಟೆ ||೩೫||

ರಮ್ಮೆದೇವಿಯರನಪ್ಪಿಕೊಂಡಿಪ್ಪುದು
ರಮ್ಮೆಯರಸಗೆ ರತಿ ಕಾಣಿರೊ
ಅಮ್ಮೋಘವೀರ್ಯವು ಚಲಿಸಿದರೆ ಪ್ರಳಯದಲಿ
ಕುಮ್ಮಾರರ್ ಯಾಕೆ ಜನಿಸರು ||೩೬||

ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ
ಬೇಕೆಂಬ ನ್ಯಾಯವ ತಿಳಿದುಕೊ
ಶ್ರೀಕೃಷ್ಣನೊಬ್ಬನೆ ಸರ್ವ ದೋಷಕ್ಕೆ ಸಿ
ಲುಕನೆಂಬುದು ಸಲಹಲಿಕೆ ||೩೭||

ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ
ಸಲ್ಲದು ರೋಗ ರುಜಿನವು
ಬಲ್ಲ ವೈದ್ಯರ ಕೆಳಿ ಅಜೀರ್ತಿಮೂಲವೆಲ್ಲ
ಸಲ್ಲದು ರೋಗ ರುಜಿನವು ||೩೮||

ಇಂಥಾ ಮೂರುತಿಯ ಒಳಗೊಂಬ ನರಕ ಬಹು
ಭ್ರಾಂತ ನೀನೆಲ್ಲಿಂದ ತೋರಿಸುವೆಲೊ
ಸಂತೆಯ ಮರುಳ ಹೋಗೆಲೊ ನಿನ್ನ ಮಾತ
ಸಂತರು ಕೇಳಿ ಸೊಗಸರು ||೩೯||

ಶ್ರೀನಾರಾಯಣರ ಜನನೀ ಜನಕರ
ನಾನೆಂಬ ವಾದೀ ನುಡಿಯಲೊ
ಜಾಣರಿಂದರಿಯ ಮೂಲ ರೂಪವ ತೊರಿ
ಶ್ರೀ ನರಸಿಂಹನ ಅವತಾರ ||೪೦||

ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ
ನೆಂಬ ಶ್ರೀ ಹರಿಯ ಪಿತನಾರು?
ಎಂಬ ಶ್ರೀ ಹರಿಯ ಪಿತನಾರು ಅದರಿಂದ ಸ್ವಾ
ಯಂಭುಗಳೆಲ್ಲ ಅವತಾರ ||೪೧||

ದೇವಕಿಯ ಗರ್ಭದಲಿ ದೇವನವತರಿಸಿದ
ಭಾವವನ್ನು ಬಲ್ಲ ವಿವೇಕಿಗಳು
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ-
ಆವ ಪರಿಯಲ್ಲಿ ನುಡಿಯುವಿಯೊ ||೪೨||

ಆಕಳಿಸುವಾಗ ಯಶೋದಾದೇವಿಗ
ದೇವ ತನ್ನೊಳಗೆ ಹುದುಗಿದ್ದ
ತ್ರಿಭುವನವೆಲ್ಲವ ತೋರಿದುದಿಲ್ಲವೆ
ಆ ವಿಷ್ಣು ಗರ್ಭದೊಳಡಗುವನೆ ||೪೩||

ಆನೆಯ ಮಾನದಲ್ಲಿ ಅಡಗಿಸಿದವರುಂಟೆ
ಅನೇಕ ಕೋಟಿ ಅಜಾಂಡವ
ಅಣುರೇಣು ಕೂಪದಲಿ ಆಳ್ದ ಶ್ರೀ ಹರಿಯ
ಜನನಿ ಜಠರವು ಒಳಗೊಂಬುದೆ ||೪೪||

ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ
ಮದನನಿವನ ಕುಮಾರನು
ಕದನದಿ ಕಣೆಗಳ ಇವನೆದೆಗೆಸೆವನೆ
ಸುದತೇರಿವನಿಂತು ನಿಂತು ಸಿಲುಕುವನೆ ||೪೫||

ಅದರಿಂದ ಕೃಷ್ಣನಿಗೆ ಪರನಾರೀ ಸಂಗವ ಕೋ-
ವಿದರಾದ ಬುಧರು ನುಡಿವರೆ
ಸದರವೆ ಈ ಮಾತು ಸರ್ವ ವೇದಂಗಳು
ಮುದದಿಂದ ತಾವು ಸ್ತುತಿಸುವವು ||೪೬||

ಎಂದ ಭಾಗವತದ ಚೆಂದದ ಮಾತನು
ಮಂದ ಮಾನವ ಮನಸಿಗೆ
ತಂದುಕೊ ಜಗಕ್ಕೆ ಕೈವಲ್ಯವೀವ ಮು-
ಕುಂದಗೆ ಕುಂದು ಕೊರತೆ ಸಲ್ಲದು ||೪೭||

ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ
ಚಿತ್ತ ಸ್ತ್ರೀಯರಿಗೆ ಎರಗುವದೆ
ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ
ಸತ್ಯಸಂಕಲ್ಪ ಬೆರಸಿದ್ದ ||೪೮||

ಹತ್ತು ಮತ್ತಾರು ಸಾಸಿರ ಸ್ತ್ರೀಯರಲ್ಲಿ
ಹತ್ತು ಹತ್ತೆನಿಪ ಕ್ರಮದಿಂದ
ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ
ಅರ್ತಿಯ ಸೃಷ್ಟಿ ಹರಿಗಿದು ||೪೯||

ರೋಮ-ರೋಮಕೂಪ ಕೋಟಿವೃಕಂಗಳ
ನಿರ್ಮಿಸಿ ಗೋಪಾಲರ ತೆರಳಿಸಿದ
ನಮ್ಮ ಶ್ರೀಕೃಷ್ಣನು ಮಕ್ಕಳ ಸೃಜಿಸುವ
ಮಹಿಮೆ ಬಲ್ಲವರಿಗೆ ಸಲಹಲಿಕೆ ||೫೦||

ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ
ಸಣ್ಣ ಬಾಯೊಳಗೆ ಜಗಂಗಳ
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ
ಘನತೆ ಬಲ್ಲವರಿಗೆ ಸಲಹಲಿಕೆ ||೫೧||

ನಾರದ ಸನಕಾದಿಮೊದಲಾದ ಯೋಗಿಗಳು
ನಾರಿಯರಿಗೆ ಮರುಳಾಹರೆ
ಓರಂತೆ ಶ್ರೀಕೃಷ್ಣನಡಿಗೆರಗುವರೆ
ಆರಾಧಿಸುತ್ತ ಭಜಿಸುವರೆ ||೫೨||

ಅಂಬುಜಸಂಭವ ತ್ರಿಯಂಬಕ ಮೊದಲಾದ
ನಂಬಿದವರಿಗೆ ವರವಿತ್ತ
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ
ಇಂಬಿದ್ದರಿವನ ಭಜಿಸುವರೆ ||೫೩||

ಅವನಂಗುಷ್ಠವ ತೊಳೆದ ಗಂಗಾದೇವಿ
ಪಾವನಳೆನಿಸಿ ಮೆರೆಯಳೆ
ಜೀವನ ಸೇರುವ ಪಾಪವ ಕಳೆವಳು
ಈ ವಾಸುದೇವಗೆ ಎಣೆಯುಂಟೆ ||೫೪||

ಕಿಲ್ಬಿಷವಿದ್ದರೆ ಅಗ್ರ ಪೂಜೆಯನು
ಸರ್ವರಾಯರ ಸಭೆಯೊಳಗೆ
ಉಬ್ಬಿದ ಮನದಿಂದ ಧರ್ಮಜ ಮಾಡುವನೆಲೆ
ಕೊಬ್ಬದಿರೆಲೊ ಪರವಾದಿ ||೫೫||

ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ
ಜೀವಂತರಿಗೆ ನರಕದಲ್ಲಿ
ನೋವನೀವನು ನಿಮ್ಮ ಯಮದೇವನು
ನೋವ ನೀ ಹರಿಯ ಗುಣವರಿಯ ||೫೬||

*********************

3 thoughts on “ಲಕ್ಷ್ಮೀ ಶೋಭಾನೆ – Lakshmi Shobhane – 1”

  1. ಲಕ್ಷ್ಮೀ ಶೋಭಾನೆಗೆ ಧನ್ಯವಾದಗಳು. ನಿಮ್ಮಲ್ಲಿ ದಾಸರ ಸುಳಾದಿಗಳಿದ್ದರೆ ಅವುಗಳನ್ನು ಹಾಕುವಿರಾ?

    1. ಈಗಾಗಲೇ ದುರ್ಗಾ ಸುಳಾದಿ, ನರಸಿಂಹ ಸುಳಾದಿ, ಧನ್ವಂತರಿ ಸುಳಾದಿಗಳು ತುಳಸಿವನದಲ್ಲಿ ಲಭ್ಯವಿದೆ. ನೋಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.