ಬಡವನಲ್ಲ ಸ್ವಾಮಿ ನಾನು ; ಒಂದು ಕಾಲದ ಶ್ರೀಮಂತ
ಹತ್ತೂರ ಯಜಮಾನ, ಹೆಸರು ಲಕ್ಷ್ಮೀಕಾಂತ
ಧನ-ಕನಕ, ಸುಖ-ಶಾಂತಿ ತುಂಬಿತ್ತು ನಮ್ಮನೆಯಲ್ಲಿ
ಸಿರಿದೇವಿ ಇದ್ದಳು ಕಾಲ್ಮುರಿದು ಮೂಲೆಯಲ್ಲಿ
ಬೆಳೆದೆ ರಾಜಕುಮಾರನಂತೆ, ಬದುಕೋ ಸುಖದ ಸುಪ್ಪತ್ತಿಗೆ
ಕೈಹಿಡಿದು ಬಂದಳು ಸುಗುಣೆ, ಸುಕುಮಾರಿ ಮಲ್ಲಿಗೆ
ದಾಂಪತ್ಯ ವಲ್ಲರಿಯಲಿ ಅರಳಿದವು ಮೊಗ್ಗೆರಡು
ನೋವೆಂಬುದಿರಲಿಲ್ಲ ಮನೆಯಾಗಿತ್ತು ನಲುಮೆ ಬೀಡು
ಏನಾಯ್ತೋ, ಹೇಗಾಯ್ತೋ ಬಿತ್ತೋ ಯಾರ ಕಣ್ಣು?
ಗಂಟುಬಿದ್ದಳು ಎಲ್ಲೋ ಥಳುಕು-ಬಳುಕಿನ ಮನೆಮುರುಕ ಹೆಣ್ಣು
ದುರ್ವ್ಯಸನ, ದುಷ್ಟ ಸಹವಾಸದಲಿ ಮುದಗೊಂಡಿತು ಮನಸ್ಸು
ಕ್ಷಯಿಸಿತ್ತು ಸಂಪತ್ತು ; ಜೊತೆಗೆ ಆರೋಗ್ಯ, ಆಯಸ್ಸು
ಮಹಾಮಾರಿಯಂಥ ರೋಗ ಅಡರಿತ್ತು ; ವಾಸಿಯಾಗದಂತೆ!
ಬಂಧು-ಬಳಗ, ಗೆಳೆಯರು ದೂರ ಓಡಿ ಮುಗಿದಿತ್ತು ಸಂತೆ
ಚಿಕಿತ್ಸೆಗೂ ಉಳಿಯದಂತೆ ನುಂಗಿ ನೊಣೆದಿದ್ದೆ ವಿತ್ತ
ಅಳಿದುಳಿದ ಬಾಳಿಗೆ ಹಳಹಳಿಕೆಯೇ ಪ್ರಾಯಶ್ಚಿತ್ತ !
ಮುನಿದರು ಮಕ್ಕಳು, ಮುದುಡಿದಳು ಮಡದಿ
ಈಗ ಮುರುಕು ಗುಡಿಸಲಿನಲ್ಲೇ ನನ್ನ ಬಿಡದಿ
ಹೊಟ್ಟೆ ಪಾಡಿಗೆ ಕೊನೆಗೆ ಈ ಭಿಕ್ಷಾಟನೆಯ ಕರ್ಮ
ನನ್ನಂತೆ ನೀವಾಗಬೇಡಿ, ಮಾಡಿ ಸ್ವಾಮಿ ಧರ್ಮ !