ರಚನೆ : ವಿಜಯ ದಾಸರು
ಗಾಯಕ : ವೆಂಕಟೇಶ ಕುಮಾರ್
ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ ಡಂಬವ ತೊಲಗಿಸಿ
ಡಿಂಭದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ||ಪಲ್ಲವಿ||
ಅಂತರಂಗದ ಉಸುರ ಹೊರಗೆ ನೂಕಿ ಅಂತರಂಗಕೆ ಸೇದುವ
ಪಂಥದಾಳು ನೀನೇ ಕಂತುಜನಕನಲ್ಲಿ ಮಂತ್ರಿಯೆನಿಸಿ
ಸರ್ವಾಂತರ್ಯಾಮಿಯಾಗಿ ನಿಂತು ನಾನಾಬಗೆ ತಂತು ನಡೆಸುವ
ಹೊಂತಕಾರಿ ಗುಣವಂತ ಬಲಾಢ್ಯ ||೧||
ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಮ ಹಂಸ ಮಂತರ
ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿ ತಪ್ಪಿಸಿ ಭವವ ಸಮೀಪದಿ ಜೀವರಿಗೆ
ಅಪ್ಪನಂದದಿ ಪುಣ್ಯ ಬಪ್ಪಂತೆ ಕರುಣಿಸು
ಕಪ್ಪುವರ್ಣನ ಕೂಡೊಪ್ಪಿಸಿ ಪಾಲಿಸು ||೨||
ಹತ್ತೇಳು ಎರಡಾಯತ ನಾಡಿಯೊಳು ಸುತ್ತಿಸುತ್ತುವ ಮಾರುತ
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ
ನೆತ್ತಿಯ ದ್ವಾರದಿಂದ ಎತ್ತ ಪೋಗಲೀಸದೆ
ಠಕ್ಕು ಮರುಳ, ಜೀವೋತ್ತಮನೆ ಸಮಚಿತ್ತ ಎನಗೆ ಕೊಡುತ್ತ ಉದ್ಧರಿಸೊ ||೩||
ಯೋಗಾಸನದೊಳಿಪ್ಪ ಯಂತ್ರೋದ್ಧಾರಕ ಭಾಗವತ ಜನರಪ್ಪ
ಯೋಗಿಗಳಿಗೀಶ ವ್ಯಾಸ ಯೋಗಿಗೊಲಿದ ನ್ಯಾಸ
ಶ್ರೀ ತುಂಗಭದ್ರ ನಿವಾಸ ಬಾಗುವೆ ಕೊಡು ಲೇಸ
ಶ್ರೀ ಗುರು ವಿಜಯವಿಠಲನ ಪಾದಕೆ ಬಾಗಿದ ಭವದೂರ ಜಾಗರ ಮಾರುತಿ ||೪||
ತುಲಸಿಯವರಿಗೆ ನಮಸ್ಕಾರಗಳು.
ದಾಸಸಾಹಿತ್ಯದ ಅಪರೂಪದ ಹಾಡುಗಳನ್ನು ಪ್ರಕಟಿಸಿದಕ್ಕಾಗಿ ಧನ್ಯವಾದಗಳು.
ಹತ್ತವತಾರದ ಲಾಲಿಹಾಡು ತಮ್ಮಲ್ಲಿದ್ದರೆ ದಯವಿಟ್ಟು ಪ್ರಕಟಿಸಿ.
ನನ್ನಜ್ಜಿ ಹಾಡುತಿದ್ದ ಈ ಹಾಡಿಗಾಗಿ ಬಹಳ ದಿನಗಳಿಂದ ಹುಡುಕುತ್ತಿದ್ದೆನೆ.
ಸ್ವರ್ಣ, ತುಳಸಿವನಕ್ಕೆ ಸ್ವಾಗತ. ‘ಹತ್ತವತಾರದ ಲಾಲಿಹಾಡು’ ಎಂದಷ್ಟೆ ತಿಳಿಸಿದರೆ ಸಾಲದು. ಆ ಹಾಡಿನ ಮೊದಲ ಸಾಲಾದರೂ ನೆನಪಿದ್ದರೆ ತಿಳಿಸಿ. ಆಗ ಸಾಹಿತ್ಯ ಹುಡುಕಲು ಪ್ರಯತ್ನಿಸಬಹುದು.
ಲಾಲಿ ಗೋವಿಂದ ಲಾಲಿ
ಕೀರ್ತನಕಾರರು : ಶ್ರೀಪಾದರಾಜರು
ರಾಗ : ಆನಂದಭೈರವಿ
ತಾಳ : ಝಂಪೆ
ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ ||ಪ||
ಲಾಲಿ ಮುನಿವಂದ್ಯ ಲಾಲಿ ಜಾನಕಿ
ರಮಣ ಶ್ರೀ ರಾಮ ಲಾಲಿ ||ಅ. ಪ||
ಕನಕರತ್ನಗಳಲ್ಲಿ ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಲಗೆಯ ಮಾಡಿ
ಶ್ರೀಕಾಂತನ ಉಯ್ಯಾಲೆಯನು ವಿರಚಿಸಿದರು ||೧||
ಆಶ್ಚರ್ಯಜನಕವಾಗಿ ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು ತೂಗಿದರು
ಮತ್ಸ್ಯಾವತಾರ ಹರಿಯ ||೨||
ಧರ್ಮಸ್ಥಾಪಕನು ಎಂದು ನಿರವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು
ಕೂರ್ಮಾವತಾರ ಹರಿಯ ||೩||
ಸರಸಿಜಾಕ್ಷಿಯರೆಲ್ಲರು ಜನವಶೀ
ಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು
ವರಾಹವತಾರ ಹರಿಯ ||೪||
ಕರಿ ಕುಂಭಗಳ ಪೋಲುವ ಕುಚದಲ್ಲಿ
ಹಾರ ಪದಕವು ಹೊಳೆಯಲು
ವರವರ್ಣಿನಿಯರು ಪಾಡಿ ತೂಗಿದರು
ನರಸಿಂಹಾವತಾರ ಹರಿಯ ||೫||
ಭಾಮಾಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನವತಾರ ಹರಿಯ ||೬||
ಸಾಮಜವರದನೆಂದು ಅತುಳ ಭೃಗು
ರಾಮವತಾರನೆಂದು
ಶ್ರೀಮದಾನಂದ ಹರಿಯ ತೂಗಿದರು
ಪ್ರೇಮಾತಿರೇಕದಿಂದ ||೭||
ಕಾಮನಿಗೆ ಕಾಮನೆಂದು ಸುರಸಾರ್ವ
ಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರಿಯ ಹರಿಯ ||೮||
ಸೃಷ್ಟಿಯ ಕರ್ತನೆಂದು ಜಗದೊಳಗೆ
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರಹಿತನೆಂದು ತೂಗಿದರು
ಕೃಷ್ಣಾವತಾರ ಹರಿಯ ||೯||
ವೃದ್ಧ ನಾರಿಯರೆಲ್ಲರು ಜಗದೊಳಗೆ ಪ್ರ
ಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು
ಬೌದ್ಧಾವಾತಾರಿಯ ಹರಿಯ ||೧೦||
ತಲತಲಾಂತರದಿಂದ ರಂಜಿಸುವ
ಮಲಯಜಲೇಪದಿಂದ
ಜಲಜಗಂಧಿಯರು ಪಾಡಿ ತೂಗಿದರು
ಕಲ್ಕ್ಯಾವತಾರಿಯ ಹರಿಯ ||೧೧||
ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಮಣಿಯರೆಲ್ಲರು ||೧೨||
ಪದ್ಮರಾಗವ ಪೋಲುವ ಹರಿಪಾದ
ಪದ್ಮವನುತ್ತಮ ಹೃದಯ
ಪದ್ಮದಲಿ ನಿಲ್ಲಿಸಿ ಪಾಡಿ ತೂಗಿದರು
ಪದ್ಮಿನೀ ಭಾಮಿನಿಯರು ||೧೩||
ಹಸ್ತಭೂಷಣವ ಮೆರೆಯಲು ದಿವ್ಯತಾರ
ಹಸ್ತಳಗವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನೀ ಭಾಮಿನಿಯರು ||೧೪||
ಮತ್ತಗಜಗಾಮಿನಿಯರು ದಿವ್ಯತರ
ಚಿತ್ರ ವಸ್ತ್ರಗಳನುಟ್ಟು
ಚಿತ್ತ ಸಂತೋಷದಿಂದ ತೂಗಿದರು
ಚಿತ್ತಿನಿ ಭಾಮಿನಿಯರು ||೧೫||
ಕಂಕಣ ಧ್ವನಿಗಳಿಂದ ರಂಜಿಸುವ
ಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿಣಿ ಭಾಮಿನಿಯರು ||೧೬||
ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಾಕರಿಕಾ ಪತ್ರ ಬರೆದು
ಲಿಕುಚಸ್ತನಿಯರು ಪಾಡಿ ತೂಗಿದರು
ಅಕಳಂಕಚರಿತ ಹರಿಯ ||೧೭||
ಪಲ್ಲವಧಾರೆಯರೆಲ್ಲ ಈ ಶಿಶುವು
ತುಲ್ಯವರ್ಜಿತವೆನುತಲಿ
ಸಲ್ಲಲಿತಗಾನದಿಂದ ತೂಗಿದರು
ಕಲ್ಯಾಣಿರಾಗದಿಂದ ||೧೮||
ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದಭೈರವಿಯಿಂದ ||೧೯||
ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವಗಂಧರ್ವರು ಪಾಡಿ ತೂಗಿದರು
ದೇವಗಾಂಧಾರದಿಂದ ||೨೦||
ನೀಲಘನಲೀಲ ಜೋ ಜೋ ಕರುಣಲ
ವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ ಜೋ ಜೋ ಪರಮಾತ್ಮ
ಬಾಲಗೋಪಾಲ ಜೋ ಜೋ ||೨೧||
ಇಂಧುಧರಮಿತ್ರ ಜೋ ಜೋ ಶ್ರೀಕೃಷ್ಣ
ಇಂಧು ರವಿನೇತ್ರ ಜೋ ಜೋ
ಇಂಧು ಕುಲಪುತ್ರ ಜೋ ಜೋ ಪರಮಾತ್ಮ
ಇಂದಿರಾರಮಣ ಜೋ ಜೋ ||೨೨||
ತುಂಗ ಭವಭಂಗ ಜೋ ಜೋ ಪರಮಾತ್ಮ
ರಂಗ ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗ
ರಂಗವಿಠಲನೆ ಜೋ ಜೋ ||೨೩||
https://youtu.be/I-aTuEdVBGA
This is recording of Dashavatara song sung by Smt Shakuntala Samaga in front of Sri Vadiraja Vrindavana in Sode
ನಂಬಿದೆ ನಿನ್ನ ಪಾದ ಹಾಡಿನಲ್ಲಿ, “ಪಂಚ ಪ್ರಾಣ ರೂಪನೆ…” ಎಂಬ ನುಡಿ ಬಿಟ್ಟು ಹೋಗಿದೆ. ದಯವಿಟ್ಟು ಅದನ್ನೂ ಸೇರಿಸಿ. ಇದರ ರಚನೆ ಮಾಡಿದವರು ಮೊದಲಕಲ್ಲು ಶೇಷದಾಸರು.
ಮೊದಲಕಲ್ಲು ಶೇಷದಾಸರ ಅಂಕಿತ “ಗುರು ವಿಜಯವಿಠಲ”