ರಚನೆ : ಪುರಂದರ ದಾಸರು
ತುರುಕರು ಕರೆದರೆ ಉಣಬಹುದಣ್ಣ |
ತುರುಕರು ಕರೆದರೆ ಅತಿ ಪುಣ್ಯವಣ್ಣ ||
ತುರುಕರಿಂದ ಮುಟ್ಟು ಮಡಿ ಚಟ್ಟು ಹೋಗೋದು |
ತುರುಕರಿಂದ ಎಂಜಲು ಹೋಗೋದು ||
ತುರುಕರ ಕೂದಲು ತುರುಬಿಗೆ ಸುತ್ತಿದರೆ
ಎಣಿಕೆಯಿಲ್ಲದ ಮುತ್ತೈದೆಯರಣ್ಣ ||
ತುರುಕರಿಂದ ಸ್ವರ್ಗ ಸಾಧನವಾಗೋದು |
ತುರುಕರಿಂದ ನರಕ ದೂರವಯ್ಯ ||
ತುರುಕರು ಬಂದರೆ ಸರಕ್ಕನೆ ಏಳಬೇಕು |
ತುರುಕರ ಪೂಜೆಸೆ ಹರಿ ಒಲಿವ ||
ತುರುಕರ ನೀರ ಎರಕೊಂಡ ನಮ್ಮ ದೇವ |
ಎರಕೊಂಡ ನೀರೆಲ್ಲ ಸನಕಾದಿಗಳಿಗೆ ||
ಬೆರಕೆ ಮಾಡಿದ ಹರಿದಾಸರಿಗೆಲ್ಲ |
ಎರವು ಮಾಡಿದ ನಮ್ಮ ಪುರಂದರ ವಿಠಲ ||
*******************
1. ‘ತುರುಕರು ಕರೆದರೆ ಉಣಬಹುದಣ್ಣಾ’ – ಇದರಲ್ಲಿ ಬಳಕೆಯಾಗಿರುವ ತುರುಕರು ಪದವೂ ಅರ್ಥದ ದೃಷ್ಟಿಯಿಂದ ಸ್ವಾರಸ್ಯವಾಗಿದೆ. ‘ತುರುಕರು’ ಎಂದರೆ ಹಸುಕರು ಎಂಬ ಅರ್ಥವನ್ನು ಇದು ಕೊಡುತ್ತದೆ. ಅಲ್ಲದೆ ತುರುಕರು ಎಂದರೆ ಮುಸಲ್ಮಾನರೆಂಬ ಅರ್ಥವನ್ನೂ ಇದು ಕೊಡುತ್ತದೆ. ಕಾಲದ ದೃಷ್ಟಿಯಿಂದಲೂ ಈ ಕೀರ್ತನೆ ಗಮನಾರ್ಹವಾಗಿದೆ. 15-16ನೆಯ ಶತಮಾನದಲ್ಲಿ ಹಿಂದೂ-ಮುಸಲ್ಮಾನರ ನಡುವೆ ಇದ್ದಂತಹ ಬಾಂಧವ್ಯ ಅನ್ಯೋನ್ಯವಾದುದಲ್ಲ. ಇದನ್ನು ಅರಿತ ದಾಸರು ಇದೇ ವಿಷಯದ ಕುರಿತು ಒಂದು ಕೀರ್ತನೆಯನ್ನೇ ಹಾಡಿದ್ದಾರೆ. ತುರುಕರು ಹಿಂದೂಗಳಲ್ಲಿ ಪೂಜೆಗೆ ಅರ್ಹವಾದ ಒಂದು ಪ್ರಾಣಿ. ಹಿಂದೂಗಳ ಒಂದು ನಂಬಿಕೆಯನ್ನು ಹೇಳುವುದರೊಂದಿಗೆ, ಹಿಂದೂ ಮತ್ತು ಮುಸಲ್ಮಾನರ ಬಾಂಧವ್ಯವನ್ನು ಅನ್ಯೋನ್ಯಗೊಳಿಸುವ ಪ್ರಯತ್ನ ಮಾಡಿದ್ದಾರೆ.
(ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಲೇಖಕಿ : ಡಾ. ಆರ್. ಸುನಂದಮ್ಮ)
2. ಪುರಂದರ ದಾಸರ ಕಾಲಕ್ಕಾಗಲೇ ಭಾರತದಲ್ಲ್ಲಿ ಮಹಮ್ಮದೀಯರು ಪಸರಿಸಿಕೊಂಡಿದ್ದರು. ಉತ್ತರ ಭಾರತದಲ್ಲಂತೂ ಅವರದೇ ಪ್ರಾಬಲ್ಯವಿತ್ತು. ಅವರಲ್ಲಿ ಕೆಲವರು ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಹಿಂದು-ಮುಸಲ್ಮಾನರಲ್ಲಿ ಮೇಲಿಂದ ಮೇಲೆ ಒಳ ಜಗಳಗಳಾಗುತಿದ್ದವು. ಒಂದು ಸಲ ದಾಸರ ಮೈಮೇಲೂ ಈ ಪ್ರಸಂಗ ಬಂದಿರಬಹುದು. ಅದರಿಂದ ಪಾರಾಗಲು ಈ ಹಾಡು ಮಾಡಿರಬಹುದು. ಅಷ್ಟೇ ಅಲ್ಲ, ಆ ಸಮಯದಲ್ಲಿ ಬೆಳೆದಿದ್ದ ವೈಮನಸ್ಯವೂ ಕಡಿಮೆಯಾಗಿರಬಹುದು. ತುರು+ಕರು ಎಂದರೆ ದಾಸರ ಉದ್ದೇಶ ಸಾಧಿಸಿತು. ತುರುಕರು ಎಂದರೆ ದಾಸರು ತಮ್ಮ ಸ್ತುತಿಯನ್ನೇ ಮಾಡುತ್ತಿದ್ದಾರೆಂದು ತಿಳಿದು, ಮಹಮ್ಮದೀಯರು ಸಂತುಷ್ಟರಾಗಿರಬಹುದು.
( ಪುರಂದರ ಪರಿಮಳ, ಲೇಖಕರು: ಆರ್. ಎಚ್ ಕುಲಕರ್ಣಿ)
*******************************************
ರಚನೆ : ಪುರಂದರ ದಾಸರು
ಅರಿಯದೆ ಬಂದೆವು ಕಿಮ್ಸನ್ |
ಪರಿಹರಿಸಯ್ಯ ಭಮ್ಸನ್ ||
ಪರಿಪರಿಯಿಂದಲಿ ಹರಿಹರಿಯೆಂದರೆ |
ದುರಿತದ ಭಯ ಒಂದಿಲ್ಲಲ್ಲಾ ||
ಮತ್ಸ್ಯಾವತಾರಗೆ ಕಿಮ್ಸನ್ |
ಕೂರ್ಮವತಾರಗೆ ಭಮ್ಸನ್ ||
ಸ್ವಚ್ಚಾನಂತರ ಸೇವೆಯ ಮಾಡಲು |
ಮೋಕ್ಷ ಪದವು ತಾನೇಕಿಲ್ಲಾ ||
ಕನಕಾಕ್ಷನ ಕೊಂದವಗೆ ಕಿಮ್ಸನ್ |
ಪ್ರಹ್ಲಾದಗೆ ಒಲಿದಗೆ ಭಮ್ಸನ್ ||
ನಾರಾಯಣ ನಿನ್ನ ನಾಮವ ನೆನೆದರೆ |
ನರಕ ಭಯವೊಂದಲ್ಲಿಲ್ಲಾ ||
ಧರೆಯನಾಳಿದವಗೆ ಕಿಮ್ಸನ್ |
ಕೊಡಲಿಯ ಹಿಡಿದಗೆ ಭಮ್ಸನ್ ||
ಪರಿಪರಿಯಿಂದಲಿ ಹರಿಹರಿಯೆಂದರೆ|
ದುರಿತದ ಭಯ ಒಂದಿಲ್ಲಲ್ಲಾ ||
ರಾವಣನಳಿದಗೆ ಕಿಮ್ಸನ್ |
ಗೋವಳ ಕೃಷ್ಣಗೆ ಭಮ್ಸನ್ ||
ಭಾಮೆ ದ್ರೌಪದಿ ಸಭೆಯಲ್ಲ್ಯಾಗ|
ಮಾನವ ಕಾಯ್ವವ ನೀನಲ್ಲಾ ||
ಬತ್ತಲೆ ನಿಂತಗೆ ಕಿಮ್ಸನ್ |
ಮತ್ತಶ್ವವನೇರ್ದಗೆ ಭಮ್ಸನ್ ||
ನಿತ್ಯದಿ ಪುರಂದರ ವಿಠಲನ
ನೆನೆದರೆ ಸತ್ಯಲೋಕವಾಯ್ತಲ್ಲಲ್ಲಾ ||
( ಮೊಹರಂ ಹಬ್ಬ ಬಂದಾಗ ಹಿಂದೂಗಳು ಅಷ್ಟೇ ಸಂಭ್ರಮದಿಂದ ಅಚರಿಸುವುದುಂಟು. ಮೊಹರಮ್ ಪೀರ್ಲುಗಳಿಗೆ ಎಲ್ಲರೂ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಆನಂದವೆಂದೋ, ಹರಕೆಯೆಂದೋ ಮಸೀದಿಯ ಮುಂದಿನ ಅಲಾಯಿ ಕುಣಿ ಸುತ್ತಲೂ ಹಾಡುತ್ತಾ ಕುಣಿಯುತ್ತಿದ್ದರು. ಆ ಪದ್ಧತಿ ದಾಸರ ಕಾಲಕ್ಕೂ ಇದ್ದಿತು. ಅಲಾಯಿ ಕುಣಿಯುವ ಮುಂದೆ ಆದ ಶ್ರಮವನ್ನು ಪರಿಹರಿಸಲು, ತಾಳ-ಲಯಗಳನ್ನು ಸೂಚಿಸಲು ಕ್ಯಂವಸೈ, ಭೌಸೈ ಎಂದೆನ್ನುತ್ತಾ, ಆಗಾಗ ಅಲ್ಲಲ್ಲಾ, ಇಲ್ಲಿಲ್ಲಾ ಎಂದು ದೇವರನ್ನು ನೆನೆಯುತ್ತಾ ಹಾಡುವ ವಾಡಿಕೆಯುಂಟು. ದಾಸರ ಅನುಯಾಯಿಗಳು ಅಲಾಯಿ ಕುಣಿಯಲು ತಮಗೊಂದು ಹಾಡು ಬೇಕೆಂದು ಕೇಳಿದಾಗ ರಚಿಸಿರಬಹುದು. ಈ ಪದವನ್ನು ಹಿಂದೂಗಳು, ಮುಸ್ಲಿಮರು ಕೂಡಿಯೇ ಹಾಡಿ ಆನಂದದಿಂದ ಕುಣಿಯುತ್ತಿದ್ದರಂತೆ. ಇದರಲ್ಲಿ ದಶಾವತಾರದ ವರ್ಣನೆಯಿದ್ದರೂ ಕುಣಿಯುವವರಿಗೆ ಸಮಯಕ್ಕೆ ಸರಿಯಾಗಿ ಸ್ಫೂರ್ತಿಯನ್ನು ಕೊಡುವಂತಿದ್ದಿತು. ಜೊತೆಯಲ್ಲಿ ಬಂಧು ಪ್ರೇಮ ಬೆಳೆಯಲು ಅನುಕೂಲವಾಗಿತ್ತು.
( ಪುರಂದರ ಪರಿಮಳ, ಲೇಖಕರು: ಆರ್. ಎಚ್ ಕುಲಕರ್ಣಿ)
*************
ಅಲ್ಲಾ ಖುದಾ ಎಂಬ ಅರ್ಥವನು ಅರಿಯದೆ
ಮುಲ್ಲಾ ಶಾಸ್ತ್ರದ ನೆಲೆಯ ಮುನ್ನರಿಯದೆ
ಕಳ್ಳ ಕೂಗನೆ ಕೇಳಿ ಬೊಗಳಿ ಬಾಯ್ದೆರೆವಂಥ
ಕಳ್ಳರಿಗೆ ತಾ ವೀರ ಸ್ವರ್ಗ ದೊರೆಯುವುದೇ?
( ತೀರ್ಥ ಪಿಡಿದವರು ತಿರುನಾಮ ಧಾರಿಗಳೇ? ಜನ್ಮ ಸಾರ್ಥಕವಿರದವರು ಭಾಗವತರೇ? – ಎಂಬ ಕನಕದಾಸರ ಕೀರ್ತನೆಯಿಂದ)
(ದಾಸ ಸಾಹಿತ್ಯ ಹಾಗೂ ಸಾಮಾಜಿಕ ಮೌಲ್ಯಗಳು, ಲೇಖಕರು : ಪ್ರೊ. ಇಲ್ಲೂರು ಜಯರಾಮಪ್ಪ)
ತ್ರಿವೇಣಿ ಅವರೇ,
ಒಳ್ಳೆ ಪದಗಳನ್ನು ಹಾಕಿದ್ದೀರ – ಧನ್ಯವಾದಗಳು
ಕೋಮು ಸಾಮರಸ್ಯಕ್ಕೆ ಉತ್ತಮವಾದ ರಚನೆಗಳು. ಪುರಂದರದಾಸರಿಗೆ ನನ್ನ ನಮನಗಳು.
ತುಂಬಾ ಸ್ವಾರಸ್ಯವಾದ ಮತ್ತು ಕುತೂಹಲಕರವಾದ ಹಾಗೆ ಡಿಬೇಟಬಲ ಸಂಗತಿಗಳನ್ನೂ ದಾಸರ ಕೃತಿಗಳೊಂದಿಗೆ ನೀಡುತ್ತಿರುವುದು ಸ್ವಾಗತಾರ್ಹ. ಅಭಿನಂದನೆಗಳು.
ಸುನಾಥ ಕಾಕಾ, ಹಂಸಾನಂದಿ ಮತ್ತು ರಾಮಸ್ವಾಮಿಯವರೇ,
ತುಳಸಿವನಕ್ಕೆ ಭೇಟಿ ನೀಡಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಪುರಂದರ ದಾಸ ರಿಗೆ ಕೋಟಿ ಕೋಟಿ ಪ್ರಣಾಮಗಳು , ಅವರ ಮೂರ್ತಿ ನಮ್ಮ ಮನೆಯಲ್ಲಿ ಇದೆ . ನಾವೇ ಧನ್ಯರು . ನೀವು ನೋಡಬಹುದು .
ಇಂತಿ ನಮಸ್ಕಾರಗಳು
ಮೋಹನಕುಮಾರ್
ಪುರಂದರ ಪ್ರತಿಷ್ಥಾನ
ಬೆಂಗಳೂರು
ಮೋಹನ್ ಕುಮಾರ್ ಅವರೇ, ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.
ಪುರಂದರದಾಸರ ಮೂರ್ತಿ ನಿಮ್ಮ ಮನೆಯಲ್ಲಿ ಇದೆ ಎಂದಿದ್ದೀರಿ. ಆ ಬಗ್ಗೆ ಮತ್ತಷ್ಟು ವಿವರಗಳು, ಆಸಕ್ತರು ನಿಮ್ಮನ್ನು ಸಂಪರ್ಕಿಸುವುದು ಹೇಗೆಂದು ತಿಳಿಸಿದ್ದರೆ ಚೆನ್ನಾಗಿತ್ತು. ಪುರಂದರ ಪ್ರತಿಷ್ಟಾನ ವೆಬ್ ಸೈಟ್ ಇದ್ದರೆ ಅದರ ಲಿಂಕ್ ಕೊಡಿ. ವಂದನೆಗಳು.