ರಚನೆ – ಪುರಂದರದಾಸರು

ಹಾಡು ಕೇಳಿ –

ವಿದ್ಯಾಭೂಷಣ

ಹುಸೇನ್ ಸಾಹೇಬ್

ಕಟಿಯಲ್ಲಿ ಕರವಿಟ್ಟನೊ ಪಂಢರಿರಾಯ
ಕಟಿಯಲ್ಲಿ ಕರವಿಟ್ಟನೊ ||ಪಲ್ಲವಿ||

ಗೊಲ್ಲ ಬಾಲಕರೊಡಗೂಡಿ ತಾ ಬಂದು
ಗೊಲ್ಲತಿಯರ ಮನೆ ಕದ್ದು ಬೆಣ್ಣೆಯ ತಿಂದು
ಬಲ್ಲಿದ ತೃಣಾವರ್ತ ಮೊದಲಾದ ಅಸುರರ
ಮೆಲ್ಲನೆ ಕೊಂದಾಯಾಸದಿಂದಲೋ ?

ಮುದದಿಂದ ವ್ರಜದ ಹದಿನಾರು ಸಾವಿರ
ಸುದತಿಯರಾಳಿದ ಮದದಿಂದಲೊ
ಮದಗಜಗಮನೆಯರ ಮದದಂತಕ ಕೃಷ್ಣ
ಒದಗಿ ಮಾವನ ಕೊಂದ ಆಯಾಸದಿಂದಲೊ?

ರಾಜಸೂಯಯಾಗದಲ್ಲಿ ರಾಜೇಶ್ವರ
ರಾಜರು ಮೊದಲಾದ ಸುರರೆಲ್ಲರು
ಭೋಜನವನು ಮಾಡಿದೆಂಜಲು ಮೊದಲಾದ್ದು
ರಾಜೀವಾಕ್ಷನು ಎತ್ತಿದಾಯಾಸದಿಂದಲೋ ?

ಸುರಪ ತನಯಗೆ ಸಾರಥ್ಯವ ತಾ ಮಾಡಿ
ಭರದಿಂದ ಚಕ್ರವ ಹಿಡಿದುದರಿಂದಲೋ
ಪರಿಪರಿ ವಿಧದಿಂದ ಕುದುರೆಗಳ ತಾ ತೊಳೆದು
ಪರಿಪರಿ ಕೆಲಸದಿಂದಾಯಾಸದಿಂದಲೋ ?

ಪ್ರೇಮದಿಂದಲಿ ಬಂದ ಭಕ್ತರು ತನ್ನ ಚರಣ
ಕಮಲಯುಗ್ಮವ ಮುಟ್ಟಿ ಭಜಿಸುತಿರೆ
ಮಮತೆಯಿಂದಲಿ ಅವರ ಭವವ ಕಳೆವೆನೆಂದು
ಕಮಲನಾಭ ಶ್ರೀ ಪುರಂದರ ವಿಠಲನು ||

______________________________________

ಪಂಢರಾಪುರದ ಪಾಂಡುರಂಗ ಹರಿದಾಸರ ಕುಲದೈವವೆಂದರೂ ಸರಿ. ಬಹುಪಾಲು ಹರಿದಾಸರಿಗೆಲ್ಲಾ ವಿಟ್ಠಲನದೇ ಅಂಕಿತ. ವಾರಕರೀ ಸಂಪ್ರದಾಯದವರು (ವಾರಿ=ಯಾತ್ರೆ, ಯಾತ್ರೆ ಕೈಗೊಳ್ಳುವವರು ವಾರಕರಿ, ಆಡು ಮಾತಿನಲ್ಲಿ ವಾರ್ಕರಿ) ಆಷಾಢ ಮತ್ತು ಕಾರ್ತೀಕ ಏಕಾದಶಿಯ ದಿನ ಚಂದ್ರಭಾಗಾ ನದಿಯಲ್ಲಿ ಸ್ನಾನ, ವಿಠಲನ ದರ್ಶನ ತಪ್ಪದೆ ಕೈಗೊಳ್ಳುತ್ತಿದ್ದರಂತೆ. ಈಗ ಮಹಾರಾಷ್ಟಕ್ಕೆ ಸೇರಿರುವ ಪಂಢರಪುರದ ವಿಟ್ಠಲ ದೇವಾಲಯವನ್ನು ಹೊಯ್ಸಳ ದೊರೆ ವಿಷ್ಣುವರ್ಧನ ಕಟ್ಟಿಸಿದನೆಂದೂ, ಅವನ ಹೆಸರನ್ನೇ ಅಲ್ಲಿಯ ದೇವರಿಗೂ ಇಟ್ಟಿದ್ದರಿಂದ ವಿಷ್ಣು – ಬಿಟ್ಟು – ಬಿಟ್ಟಿಗ – ವಿಟ್ಠಲ ಎಂದಾಯಿತೆಂದು ಕೆಲವು ವಿದ್ವಾಂಸರ ಅಭಿಪ್ರಾಯವಿದೆ.

ಅದೇನೇ ಇರಲಿ, ಆದರೆ ಈ ವಿಟ್ಠಲ ಮಾತ್ರ ಕನ್ನಡಿಗನೆಂದು, ಕನ್ನಡಿಗರ ದೇವರೆಂದೂ ಅಲ್ಲಿಯ ಮರಾಠಿ ಸಂತರೇ ತಮ್ಮ ಕೃತಿಗಳಲ್ಲಿ ಒಪ್ಪಿಕೊಂಡಿದ್ದಾರೆ. (ಸದ್ಯ, ಬೆಳಗಾವಿ ವಿವಾದ ಇಲ್ಲಿಲ್ಲ :)) ಸಂತ ನಾಮದೇವನ ಆಭಂಗಗಳಲ್ಲಿರುವಂತೆ “ನಾಮ ಬರವೇ, ರೂಪ ಬರವೇ, ದರ್ಶನ ಬರವೇ ಕಾನಡಿಯಾ” (ಈ ಕನ್ನಡದವನ ಹೆಸರೇ ಸೊಗಸಿನದು, ರೂಪ ಚೆಲುವಾದುದು, ನೋಟವಂತೂ ಮೋಹಕವಾದುದು!”), ಕಾನಡಾ ವಿಟ್ಠಲ ವೋ, ಉಭಾ ಭೀಮರೇ ತೀರೀ (ಭೀಮಾ ನದಿಯ ದಂಡೆಯ ಮೇಲೆ ನಿಂತ ವಿಟ್ಠಲ ಕನ್ನಡದವನು), ಜ್ಞಾನದೇವನ ಅಭಂಗವೊಂದರಲ್ಲಿರುವ “ಕಾನಡ ಹೋ ವಿಟ್ಠಲೂ, ಕರ್ನಾಟಕೂ” (ವಿಟ್ಠಲನು ಕನ್ನಡಿಗ, ಕರ್ನಾಟಕದವನು)… ಕೆಲವು ನಿದರ್ಶನಗಳು. (ಆಧಾರ : ಪುರಂದರ ಸಾಹಿತ್ಯ ದರ್ಶನ)

ಪುರಂದರ ದಾಸರು ಪಂಢರಾಪುರದ ಪಾಂಡುರಂಗನ ಸನ್ನಿಧಿಯಲ್ಲಿ ರಚಿಸಿದ ಪದಗಳಲ್ಲಿ ಇದೊಂದು.
ಪಂಢರಾಪುರದ ಪಾಂಡುರಂಗ ಕಟಿಯಲ್ಲಿ ಕರವಿಟ್ಟು ನಿಲ್ಲಲು ಬೇರೊಂದು ಕಥೆಯೇ ಇದೆಯಾದರೂ – ಪುಂಡಲೀಕ ಎಂಬ ಭಕ್ತನಿಗಾಗಿ ಇಟ್ಟಿಗೆಯ ಮೇಲೆ ಕಾದು ನಿಂತು, ಅಲ್ಲೇ ಕಲ್ಲಾದನಂತೆ – ಇಲ್ಲಿ ಪುರಂದರ ದಾಸರು ಚಾತುರ್ಯದಿಂದ ತಮ್ಮದೇ ಆದ ಕೆಲವು ಊಹೆಗಳನ್ನು ಮಾಡಿದ್ದಾರೆ. ಶ್ರೀ. ಎಸ್. ಕೆ. ರಾಮಚಂದ್ರರಾಯರು ನಾಲ್ಕು ಸಂಪುಟಗಳಲ್ಲಿ ಸಂಪಾದಿಸಿರುವ “ದಾಸ ಸಾಹಿತ್ಯ ದರ್ಶನ” ಗ್ರಂಥದಲ್ಲಿ “ಕ್ಷೇತ್ರದರ್ಶನ” ಎಂಬ ವಿಭಾಗದಲ್ಲಿ ಪುರಂದರ ದಾಸರು ಸಂದರ್ಶಿಸಿರುವ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ರಚಿಸಿರುವ ಹಾಡುಗಳನ್ನು ಒಟ್ಟುಗೂಡಿಸಿದ್ದಾರೆ. ಆದರೆ ಪಂಢರಾಪುರ ಕ್ಷೇತ್ರದ ಬಗ್ಗೆ ಬರೆಯುವಾಗ ಉಳಿದೆಲ್ಲಾ ಪದಗಳಿದ್ದು, “ಕಟಿಯಲ್ಲಿ ಕರವಿಟ್ಟನು” ಎಂಬ ಈ ಪ್ರಸಿದ್ಧ ಹಾಡು ಮಾತ್ರ ಇಲ್ಲದಿರುವುದು ಆಶ್ಚರ್ಯ ಮೂಡಿಸುತ್ತದೆ. ಈ ಹಾಡನ್ನು ವಿದ್ಯಾಭೂಷಣರು ಹಾಡಿದ ನಂತರವೇ ಜನಪ್ರಿಯವಾಯಿತೆಂದರೆ ತಪ್ಪಾಗುವುದಿಲ್ಲವೇನೊ.

2 thoughts on “ಕಟಿಯಲ್ಲಿ ಕರವಿಟ್ಟನೊ ಪಂಢರಿರಾಯ”

  1. ವಿದ್ಯಾಭೂಷಣರ ದನಿಯಲ್ಲಿ ಈ ಹಾಡನ್ನು ಕೇಳಿ ಕೇಳಿ ಅಭ್ಯಾಸವಾಗಿತ್ತು. ಈಗ ಹುಸೇನ್ ಸಾಹೇಬರ ದನಿಯನ್ನೂ ಕೇಳಿಸಿದ್ದಕ್ಕೆ ಧನ್ಯವಾದಗಳು. ಅವರ ಗಾಯನದಲ್ಲಿ ಈ ಗೀತೆಗೆ ಇನ್ನೊಂದು ಚರಣವೂ ಇದೆ, ಅದನ್ನೂ ಇಲ್ಲಿ ಕೊಡಬಹುದಲ್ಲ.

  2. ಜ್ಯೋತಿ,

    ಬಿಟ್ಟ ಹೋಗಿದ್ದ ಚರಣವನ್ನು ಈಗ ಸೇರಿಸಿದ್ದೇನೆ. ಗಮನಕ್ಕೆ ತಂದಿದ್ದಕ್ಕೆ thanks.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.