ಕವಿ : ಜಿ.ಎಸ್.ಶಿವರುದ್ರಪ್ಪ
ಸಂಕಲನ : ನೂರು ಕವಿತೆಗಳು
ತಕ್ಕಡಿಯಿಂದ ತಂಬೂರಿಯ ತನಕ
ಸಹಧರ್ಮಿಣಿಯ ಮೂಗುತಿಯ ಮಿನುಗು,
ತಂಬೂರಿಯಿಂದ ತುಂಬುವತನಕ
ಹಾಡಿನ ಮೊಳಗು.
ತಕ್ಕಡಿಯಲ್ಲಿ ತೂಗಿದನು
ಇಹದ ಸರುಕೆಲ್ಲವನು
ಈ ವ್ಯಾಪಾರಿ.
ಗೊತ್ತಾಗಲಿಲ್ಲ ವೈಕುಂಠಕೆ ದಾರಿ.
‘ದಾರಿ ಯಾವುದಯ್ಯಾ ವೈಕುಂಠಕೆ?’
ಪ್ರಶ್ನೆಗುತ್ತರವಾಗಿ ಮೊಳಗಿತ್ತು ಒಳಗಿಂದಲೇ
ಮರುಪ್ರಶ್ನೆ ; ‘ಯಾರು ಹಿತವರು ನಿನಗೆ
ಈ ಮೂವರೊಳಗೆ
ನಾರಿಯೋ? ಧಾರಿಣಿಯೋ? ಬಲುಧನದ ಸಿರಿಯೋ?’
ಉತ್ತರದ ಬೆಳಕನ್ನು ಕಂಡ ; ಹೆಗಲಿಗೇರಿತ್ತು ತಂಬೂರಿ
ಉದ್ದಕ್ಕೂ ತೆರೆದ ಹಾಡಿನ ದಾರಿ
ಪಲ್ಲವಿ ಅನುಪಲ್ಲವಿಗಳಲಿ ಚಲಿಸಿತು ಚರಣ,
ಕನ್ನಡದ ಜನಮನದ ಹೊಸ್ತಿಲಿನಲಿ
ರಾಗದ ಕಿರಣ
ಊರೂರು ಕೇರಿಕೇರಿಗಳಲ್ಲಿ
ದೇವರನಾಮದನುರಣನ.
ಅಂದಿನಿಂದ ಇಂದಿನತನಕ ಕೇಳುತಿದೆ ಅದೇ
ತಂಬೂರಿಯೋಂಕಾರ
ವಿಟ್ಠಲನ ಚರಣದ ಸುತ್ತ ಝೇಂಗುಡುವ
ಭ್ರಮರ
ಕೃಷ್ಣಮಹಿಮೆಯ ಕಥೆಗೆ ಬರೆದ ನಾದದ ಭಾಷ್ಯ
ಈ ಪುರಂದರ.
ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಶುಭವಾಗಲಿ,
– ಶಮ, ನಂದಿಬೆಟ್ಟ
ಶಮಾ, ಆಹ್ವಾನಕ್ಕೆ ಧನ್ಯವಾದಗಳು.
ನಮ್ಮೆಲ್ಲರ ಬಾಳಿನಲ್ಲಿ ನಿತ್ಯ ಹಬ್ಬದ ಸಂಭ್ರಮ ತುಂಬುವ ಅಮ್ಮನ ನೆನಪಿಗೂ ಒಂದು ಹಬ್ಬ! ಕಲ್ಪನೆಯೇ ಸುಂದರವಾಗಿದೆ. ನೀವು ಹೇಗೂ ಪ್ರತಿ ವರ್ಷವೂ ಈ ಹಬ್ಬ ನಡೆಸುತ್ತೀರಾದ್ದರಿಂದ ಎಂದಾದರೊಮ್ಮೆ ಹಬ್ಬದಲ್ಲಿ ಪಾಲ್ಗೊಳ್ಳುವ ಆಸೆ ಇದೆ. ಅಮ್ಮನ ಹಬ್ಬಕ್ಕೆ ನನ್ನ ಶುಭ ಹಾರೈಕೆಗಳಿವೆ. ನಿಮ್ಮ ಆಹ್ವಾನವನ್ನು ಮತ್ತಷ್ಟು ಸ್ನೇಹಿತರಿಗೆ ತಲುಪಿಸುವೆ.