ಹಬ್ಬ ಬಂದರೂ ಹೊಸದೇನಿಲ್ಲ;
ಬಕೇಟಿನಲ್ಲಿ ಕದರಬೇಕಿಲ್ಲ ಸಗಣಿ ನೀರು
ಬೀದಿಯ ಧೂಳಡಗುವಂತೆ ಚಿಲ್ಲನೆ
ನೀರೆರಚಿ ಹೆಣೆಯಬೇಕಿಲ್ಲ
ಚುಕ್ಕಿ ಚೆಲ್ಲಿ ರಂಗೋಲಿ ಚಪ್ಪರವ
ಹೊಸ್ತಿಲಿನ ನೆತ್ತಿಗೆ
ಕೆಮ್ಮಣ್ಣಿನ ಬದಲು ಕೆಂಪು ಪೇಂಟಿದೆ
ತೋರಣಕ್ಕೆ ಮಾವಿಲ್ಲ, ಬೇವೂ ಬೇಕಿಲ್ಲ
ಎಣ್ಣೆಯ ಜಿಗುಟು ತೊಳೆಯಲು
ಸೀಗೆಯ ಘಾಟು ಸಹಿಸಬೇಕಿಲ್ಲ
ಶವರಿನ ಅಡಿ ಮೈತೆರೆದು ನಿಂತರೆ
ನಿತ್ಯ ಅಭ್ಯಂಜನವೇ, ಬೇಕಿಲ್ಲ
ಅದಕೊಂದು ಸಂಭ್ರಮದ ನೆವನ.
ಇಷ್ಟೇ ಮಿಣ್ಣಗೆ ಉರಿಯುವ
ಪುಟ್ಟ ಹಣತೆಗಳು ಸಾಕು
ಹೆಚ್ಚಾದರೆ ಕರಿ ಅಡರೀತು ಛಾವಣಿಗೆ
ಮನೆ ಕಪ್ಪಾದರೆ ಕೊಳ್ಳುವರಾರು?
ಮಾರಲು ಹಾಕಿದಾಗ, ಮೊದಲೇ ರಿಸೆಶನ್ನು!
ಮನೆ ತುಂಬಾ ಕಮಟು ತುಂಬುವ
ಅಗರುಬತ್ತಿಗೂ ನಿಷೇಧವಿದೆ
ಯಾವ ಶಾಸನವೂ ಎಚ್ಚರಿಕೆ ವಿಧಿಸದೆಯೆ.
ಘಂಟೆಗಳ ದನಿಯಿಲ್ಲ,
ಹೂವು, ಪತ್ರೆಗಳ ಹಂಗಿಲ್ಲ
ಪೂಜೆಯೂ ಕ್ಷಿಪ್ರ-ಸಂಕ್ಷಿಪ್ತ
ಹೇಳಿಲ್ಲವೇ ದಾಸರು?
“ಸುಲಭಪೂಜೆಯ ಮಾಡಿ
ಬಲವಿಲ್ಲದವರು!”
ಹಬ್ಬದೂಟಗಳಲ್ಲಿ
ಸಿಹಿ ಯಾಕೆ ಕಡ್ಡಾಯ?
ತುಪ್ಪ, ಸಕ್ಕರೆ ಬೆರೆತು
ಹೆವ್ವಿಯಾಗಿರುವ ರಿಚ್ಚು ತಿನಿಸುಗಳನ್ನು
ಚಪ್ಪರಿಸುವುದೆಂತು ನಿಶ್ಚಿಂತೆಯಲಿ
ಮರೆತು ಕ್ಯಾಲರಿಗಳ?
ಒಬ್ಬಟ್ಟಿಗೆ ಜೊತೆಯೆನಿಸುವ
ಖಾರದಂಬೊಡೆ, ಬೋಂಡಗಳ
ಮಾಡಲು ಉಪಾಯವೇನಾದರೂ ಇದೆಯೆ
ಒಂದಿಷ್ಟೂ ಎಣ್ಣೆ ಬಳಸದಯೆ?
ಮಂಕು ಸುರಿಯುವ ಯುಗಾದಿಗೆ
ಇಷ್ಟಾದರೂ ಕಳೆ ಕಟ್ಟಿಸೋಣವೆಂದು
ಏಕೈಕ ಕನ್ನಡ ಉದಯ ಟಿವಿಗೆ ಮೊರೆ
ಹರಟೆ; ಚಟಪಟ ಮಾತಿನ ಪಟಾಕಿ
ಅದದೇ ಮುಖಗಳ ಅದೇ ಹಳೆ ಮುಖಾಬಿಲೆ
ತಾರೆಯರೊಡನೆ ಸಂದರ್ಶನ; ಅವರಿಗೆ ಹಬ್ಬವಿಲ್ಲವೇ?
ಅದೆಷ್ಟನೆಯ ಬಾರಿಯೋ ಮರುಪ್ರಸಾರವಾಗುತ್ತಿರುವ
ಅದೇ ಮಚ್ಚುಕೊಚ್ಚಿನ ಸೂಪರ್ಹಿಟ್ ಸಿನಿಮ!
ವಾರ್ತೆಯಲ್ಲೂ ಏನಿಲ್ಲ ಹೊಸದು ಅಂಥಾದ್ದು
ಎನ್ಡಿಎ, ಯುಪಿಎ, ಎಡ, ಬಲ, ತೃತೀಯರಂಗ
ಹೆಸರಷ್ಟೇ ಬೇರೆ, ತಿರುಳೊಂದೇ; ಮತದಾರನೇ ಮಂಗ
ಲೋಕಾಯುಕ್ತರ ರೈಡು, ನಾಯಕರ ದೆಹಲಿ ದೌಡು
ಕಣ್ಣೊರೆಸುವ ತನಿಖೆ, ಸಮಾವೇಶ ರದ್ದು
ಅದೂ ಈಗಾಗಲೇ ಇಂಟರ್ನೆಟ್ಟಿನಲ್ಲಿ ಓದಿ ಹಳಸಿದ್ದು!
ಯಾಕಲ್ಲೇ ನಿಂತುಬಿಟ್ಟೆ? ಬಾ ವಿರೋಧಿ ಬಲಗಾಲನ್ನಿಟ್ಟು
ಮುಖವೇಕೆ ಸಪ್ಪಗಿದೆ? ಕೇಳಿಸಿಬಿಟ್ಟಿತೇ ನನ್ನ ಗೊಣಗಾಟ!
ಇರಲಿಬಿಡು, ನಿನ್ನಲ್ಲಿ ಏಕೆ ಮುಚ್ಚುಮರೆ?
ಬೇವು-ಬೆಲ್ಲ, ಸಿಹಿ-ಕಹಿ ಸಾಕಾಗಿದೆ ಕಣೊ ಕ್ಲೀಷೆ
ಈ ಬಾರಿ ಹೇಗಿತ್ತು ಸ್ವಾಗತದ ಹೊಸ ವರಸೆ?
ನಂಬಿಬಿಟ್ಟೆಯಾ ದಡ್ಡ, ಏಪ್ರಿಲ್ ಮುಂದುಂಟು
ಇದುವರೆಗೆ ಬಿಚ್ಚಿದ್ದೆಲ್ಲಾ ಬರೀ ಸುಳ್ಳುಗಳ ಗಂಟು
ಹಬ್ಬವೆಂದರೆ ಅದಕೆ ಶುದ್ಧ ಸಂತಸದ ನಂಟು
ದಿನದ ಬವಣೆಗಳೆಲ್ಲಾ ಇಲ್ಲವೇ ಇಲ್ಲೆನಿಸಿ
ಮೈಮರೆಸಿ ನಗಿಸುವುದೇ ಎಲ್ಲ ಹಬ್ಬಗಳ ಗುಟ್ಟು
ವಿರೋಧ ನಿನಗಿಲ್ಲ ವಿರೋಧಿ, ಬಾರಯ್ಯಾ
ಕಡು ವಿರೋಧಿಗೂ ನಮ್ಮೆದೆಯಲ್ಲಿ ಜಾಗವುಂಟು!
“ಎಲ್ಲರಿಗೂ `ವಿರೋಧಿ’ ಸಂವತ್ಸರದ ಹಾರ್ದಿಕ ಶುಭಾಶಯಗಳು!”
ವಿರೋಧವಿಲ್ಲದ ‘ವಿರೋಧಿ’ಯನ್ನು ವೈರುಧ್ಯಗಳ ನಡುವೆ ವಿಶೇಷವಾಗಿಯೇ ಸ್ವಾಗತಿಸಿದ ರೀತಿ ಇಷ್ಟವಾಗಿದೆ. ಕಡುವಿರೋಧಿಗೂ ಜಾಗವಿರುವ ನಿನ್ನೆದೆಯಲ್ಲಿ ಸದಾ ಹರುಷ ನೆಲೆಯೂರಿರಲಿ.
ತ್ರಿವೇಣಿ ಅಕ್ಕಾ…
ವಿರೋಧಿನಾಮ ಸಂವತ್ಸರಕ್ಕೆ ಚೆಂದದ ಕವನದ ಜೊತೆಗೆ ಚೆಂದದ ಶುಭಾಶಯ ಕೋರಿದ ನಿಮಗೆ ಧನ್ಯವಾದಗಳು ಹಾಗೂ ನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು.
“ನಂಬಿಬಿಟ್ಟೆಯಾ ದಡ್ಡ, ಏಪ್ರಿಲ್ ಮುಂದುಂಟು
ಇದುವರೆಗೆ ಬಿಚ್ಚಿದ್ದೆಲ್ಲಾ ಬರೀ ಸುಳ್ಳುಗಳ ಗಂಟು”
“ವಿರೋಧ ನಿನಗಿಲ್ಲ ವಿರೋಧಿ, ಬಾರಯ್ಯಾ
ಕಡು ವಿರೋಧಿಗೂ ನಮ್ಮೆದೆಯಲ್ಲಿ ಜಾಗವುಂಟು!”
ಈ ಸಾಲುಗಳು ಮತ್ತಷ್ಟು ಇಷ್ಟವಾದವು.
“ದಿನದ ಬವಣೆಗಳೆಲ್ಲಾ ಇಲ್ಲವೇ ಇಲ್ಲೆನಿಸಿ
ಮೈಮರೆಸಿ ನಗಿಸುವುದೇ ಎಲ್ಲ ಹಬ್ಬಗಳ ಗುಟ್ಟು”
ತ್ರಿವೇಣಿ,
ಸೂಪರ ಸಾಂಗ್!
ಯುಗಾದಿಯ ಶುಭಾಶಯಗಳು.
ಗೊಣಗಾಟ ಅನ್ನುತ್ತಲೇ ವಿರೋಧಿಯನ್ನು ಎಶ್ಟು ಚೆನ್ನಾಗಿ ಸ್ವಾಗತಿಸಿದ್ದೀರಿ, ತುಂಬಾ ಇಷ್ಟವಾಯ್ತು ಕವನ.ನಿಮಗೂ ಮತ್ತು ನಿಮ್ಮಮನೆಯವರಿಗೆಲ್ಲ ಯುಗಾದಿ ಶುಭಾಶಯಗಳು.
ಕೊನೆಯ ನುಡಿ ಓದೋದಕ್ಕೆ ಬಹಳ ಖುಶಿ ಆಯ್ತು. ಕೊನೆ ಸಾಲಂತೂ ಬಹಳ ಚೆನ್ನಾಗಿದೆ 🙂
ತುಳಸಿಯಮ್ಮಾ,
“ಅದೆಷ್ಟನೆಯ ಬಾರಿಯೋ ಮರುಪ್ರಸಾರವಾಗುತ್ತಿರುವ
ಅದೇ ಮಚ್ಚುಕೊಚ್ಚಿನ ಸೂಪರ್ಹಿಟ್ ಸಿನಿಮ!”
ಈ ಸಾಲುಗಳನ್ನೋದಿ ತುಂಬಾ ನಗು ಬಂತು.:D
ವಿರೋಧಿನಾಮ ಸಂವತ್ಸರ ವಿರೋಧಿಗಳನ್ನೆಲ್ಲಾ ಸ್ನೇಹಿತರನ್ನಾಗಿಸಲಿ ಎಂದೇ ಹಾರೈಸುವೆ. ನಿಮಗೂ ನಿಮ್ಮ ಮನೆಯವರಿಗೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.
ಕವನ ತುಂಬಾ ಇಷ್ಟವಾಯಿತು.
ಜ್ಯೋತಿ, ಕಾಕಾ, ಶಾಂತಲಾ, ಹಂಸಾನಂದಿ,ತೇಜಸ್ವಿನಿ, ಭಾರ್ಗವಿ, ಕವನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನೀವೆಲ್ಲರೂ ಹಬ್ಬವನ್ನು ಚೆನ್ನಾಗಿ ಆಚರಿಸಿರಬಹುದು ಎಂದು ತಿಳಿದಿದ್ದೇನೆ. ವಿವರಗಳನ್ನು ತಿಳಿಸಿದರೆ ತಿಳಿಯಲು ಇಷ್ಟ 🙂
ಭಾರ್ಗವಿಯವರೆ, ಬಹುದಿನಗಳ ನಂತರ ನಿಮ್ಮನ್ನು ಇಲ್ಲಿ ನೋಡಿ ಸಂತೋಷವಾಯಿತು. ತುಳಸಿವನಕ್ಕೆ ಸ್ವಾಗತ. ಬರುತ್ತಿರಿ.