ರಚನೆ : ಕನಕದಾಸರು
ಬಂದಿದೆ ದೂರು ಬರಿದೆ ಪಾಂಡವರಿಗೆ
ಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ||
ಮುನ್ನಿನ ವೈರದಿ ಕಡುಸ್ನೇಹವ ಮಾಡಿ
ಉನ್ನಂತಲೆತ್ತ ಪಗಡೆಯಾಡಿಸಿ
ತನ್ನ ಕುಹಕದಿಂದ ಕುರುಬಲವನು ಕೊಂದ
ಘನ್ನಘಾತುಕ ಶಕುನಿಯೋ? ಪಾಂಡವರೋ? ||೧||
ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನು
ಧುರದಲಿ ಷಂಡನ ನೆಪದಿಂದಲಿ
ಸರಳ ಮಂಚದ ಮೇಲೆ ಮಲಗಿ ಮೊಮ್ಮಗನನ್ನು
ಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||೨||
ಮಗನ ನೆವದಿ ಕಾಳಗವ ಬಿಸುಟು ಸುರ
ನಗರಿಗೆ ನಡೆದು ವೈರಾಗ್ಯದಿಂದ
ಜಗವರಿಯಲು ಕುರುವಂಶಕೆ ಕೇಡನು
ಬಗೆದು ಕೊಂದವ ದ್ರೋಣನೋ? ಪಾಂಡವರೋ? ||೩||
ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ
ಕೊಟ್ಟ ಭಾಷೆಗೆ ನಾಲ್ವರ ಕೊಲ್ಲದೆ
ನೆಟ್ಟನೆ ರಣಮುಖದಲಿ ತನ್ನ ಪ್ರಾಣವ
ಬಿಟ್ಟು ಕೊಂದವ ಕರ್ಣನೋ? ಪಾಂಡವರೋ? ||೪||
ಮಥಿನಿಸಿ ಸೂತತನವ ಮಾಡಿ ರಣದೊಳಗೆ
ಅತಿ ಹೀನಗಳೆಯುತ ರವಿಸುತನ
ರಥದಿಂದಿಳಿದು ಪೋಗಿ ಕೌರವರ ಬಲವನು
ಹತ ಮಾಡಿದವ ಶಲ್ಯನೋ? ಪಾಂಡವರೋ ? ||೫||
ಜಲದೊಳು ಮುಳುಗಿ ತಪವ ಮಾಡಿ ಬಲವನು
ಛಲದಿಂದೆಬ್ಬಿಸಿ ಕಾದುವೆನೆಂದವ
ಕಲಿ ಭೀಮಸೇನನ ನುಡಿ ಕೇಳಿ ಹೊರಹೊರಟು
ಕುಲವ ಕೊಂದವ ಕೌರವನೋ? ಪಾಂಡವರೋ? ||೫||
ಕೌರವ ಪಾಂಡವರಿಗೆ ಭೇದವ ಪುಟ್ಟಿಸಿ
ಗೌಜೊಡ್ಡಿ ಕುರುಕ್ಷೇತ್ರದಿ ಕಾದಿಸಿ
ಸಂಶಯವಿಲ್ಲದೆ ಕುರುಬಲವನು ಕೊಂದ
ಹಿಂಸಕನು ಆದಿಕೇಶವನೋ? ಪಾಂಡವರೋ ||೬||
*****************************
ತ್ರಿವೇಣಿಯವರಿಗೆ ನಮಸ್ಕಾರಗಳು,
ಎಷ್ಟೊಂದು ಅರ್ಥಗರ್ಭಿತವಾಗಿದೆ ಕನಕದಾಸರ ಈ ಪದ್ಯ. ಮೇಲ್ನೋಟಕ್ಕೆ ಕೌರವರ ನಿರ್ನಾಮ ಮಾಡಿದ್ದು ಪಾಂಡವರೆನಿಸಿದರು ಪರೋಕ್ಷ ಕೈಗಳು ಎಷ್ಟಿವೆ ನೋಡಿ.
ಸಕಾರಣವೊ, ಅಕಾರಣವೊ ನೀವು ಇಂಥ ರಚನೆಗಳನ್ನು ಓದಲು ಕೊಡುತ್ತಿದ್ದೀರಿ. ದಯವಿಟ್ಟು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ
-ಧನ್ಯವಾದಗಳೊಂದಿಗೆ,
ಬಸವರಾಜು
ಕನ್ನಡದ ಬ್ಲಾಗುಗಳನ್ನು ಹುಡುಕುತ್ತಿರಬೇಕಾದರೇ,,, ನಿಮ್ಮ ಈ ತುಲಸಿವನಕ್ಕೆ ಅಗಮಿಸಿದೇ.. ತುಂಬಾ ಚೆನ್ನಾಗಿದೆ ನಿಮ್ಮ ಬ್ಲಾಗ್.
ಕನಕದಾಸರ ಈ ಕೀರ್ತನೆ ತುಂಬ ಚೆನ್ನಾಗಿ ಇದೆ… ನಿಮ್ಮ ಬ್ಲಾಗ್ ತುಂಬ ಇಷ್ಟ ಆಯಿತು,,, ಅಲ್ಲಿ ಎಲ್ಲಿಂದನೋ ಇಲ್ಲಿಯ ನಿಮ್ಮ ಮನೆಗೆ (ತುಳಸಿವನಕ್ಕೆ) ಕರೆತರುವ ಕ್ರಿಯೇಟಿವಿಟಿ ಚೆನ್ನಾಗಿ ಇದೆ….
ಗುರು
“ಮೇಲ್ನೋಟಕ್ಕೆ ಕೌರವರ ನಿರ್ನಾಮ ಮಾಡಿದ್ದು ಪಾಂಡವರೆನಿಸಿದರು ಪರೋಕ್ಷ ಕೈಗಳು ಎಷ್ಟಿವೆ!” ಬಸವರಾಜು, ಸರಿಯಾಗಿ ಹೇಳಿದ್ದೀರಿ. ಈ ಹಾಡಿನಲ್ಲಿ ಇಡೀ ಮಹಾಭಾರತವೇ ಅಡಗಿದೆ. ಮಹಾಭಾರತ ತಿಳಿಯದವರಿಗೆ ಅರ್ಥವಾಗುವುದು ಕಷ್ಟ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಗುರು, ಅಲ್ಲಿ, ಎಲ್ಲಿಂದಲೋ ದಾರಿ ತಪ್ಪದೆ ಇಲ್ಲಿಗೇ ಬಂದು ತಲುಪಿದ್ದಕ್ಕೆ ಅಭಿನಂದನೆಗಳು. 🙂 ಈಗ ನಮ್ಮನೆಗೆ ಬರುವ ಸರಿದಾರಿ ಗೊತ್ತಾಗಿದೆಯಲ್ಲ, ಆಗಾಗ ಬರುತ್ತಿರಿ.