ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವಿರಯ್ಯ !
ಬಯಲು ಬತ್ತಲೆಯಾದಡೆ
ಏನನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ – ಗುಹೇಶ್ವರ ?

ಅಲ್ಲಮ ಪ್ರಭುವಿನ ಈ ವಚನ ನನ್ನಲ್ಲಿ ಮೂಡಿಸಿರುವ ಬೆರಗು ಅಪಾರ. ಅಲ್ಲಮನ ಇತರ ವಚನಗಳಿಗಿಂತ ಸುಲಭವಾಗಿ ಅರ್ಥವಾಗುವಂತೆಯೇ ಇದೆ. ಬೆಟ್ಟಕ್ಕೆ ಚಳಿಯಾದರೆ ಹೊದಿಸುವುದೇನು? ಬಯಲಿನ ಬೆತ್ತಲೆ ಮುಚ್ಚಲು ಹೊಚ್ಚುವುದೇನು? ಎಲ್ಲಾ ತಿಳಿದ ಭಕ್ತನೇ ಭವಿಯಾಗಿ ಪರಿಣಮಿಸಿದಲ್ಲಿ ಅದಕ್ಕಿಂತ ಅನರ್ಥವೆಲ್ಲಿದೆ ಎಂಬುವ ಅರ್ಥವನ್ನು ಇದು ಹೊಮ್ಮಿಸುತ್ತದೆ. ಆದರೆ, ಈ ಅರ್ಥದ ಜೊತೆಗೇ, ಬೆಟ್ಟಕ್ಕೆ ಚಳಿಯಾಗುವುದಾಗಲೀ, ಬಯಲಿಗೆ ಬಟ್ಟೆಯುಡಿಸುವುದಾಗಲೀ, ಭಕ್ತ ಭವಿಯಾಗುವುದಾಗಲೀ ಎಂದಿಗೂ ಸಾಧ್ಯವಿಲ್ಲವೆಂಬ ಇನ್ನೊಂದು ಅರ್ಥವೂ ಇದೆ.

ಸಕಲ ಚರಾಚರ ವಸ್ತುಗಳಲ್ಲಿಯೂ ಜೀವವಿದೆಯೆಂದು ಭಾವಿಸುವ ನಾವು, ಬೆಟ್ಟಕ್ಕೆ ಚಳಿಯಾದರೆ ಏನು ಹೊದಿಸುವುದೆಂದು ಯೋಚಿಸುವುದಿರಲಿ, ಬೆಟ್ಟಕ್ಕೂ ಚಳಿಯಾಗಬಹುದೆಂಬ ಕಲ್ಪನೆಯೇ ನಮಗೆ ವಿಚಿತ್ರವಾಗಿ ಕಾಣುತ್ತದೆ. ನಮ್ಮ ವರ್ತನೆ ಇರುವುದೇ ಹಾಗೆ. ನಿತ್ಯ ಅವುಗಳಿಂದ ಉಪಯೋಗಪಡೆಯುತ್ತಿದ್ದರೂ ಅವುಗಳೆಡೆಗೆ ನಮ್ಮದು ಕೃತಜ್ಞತಾಹೀನ ನಡತೆಯೇ. ಅವು/ಅವರು ಇರುವುದೇ ನಮಗಾಗಿ ಎಂಬುವ ಟೇಕನ್ ಫಾರ್ ಗ್ರಾಂಟೆಡ್ ಮನೋಭಾವ. ಇರಲಿ, ಆ ಬಗ್ಗೆ ಇಲ್ಲಿ ಹೆಚ್ಚೇನೂ ಹೇಳುವುದಿಲ್ಲ. ಆದರೆ ಪ್ರತಿ ಬಾರಿ ಈ ವಚನದೊಡನೆ ನನಗೆ ನೆನಪಾಗುವ ಮುಖೇಶ್ ಮತ್ತು ಕಿಶೋರ್ ಕುಮಾರ್ ದನಿಯಲ್ಲಿರುವ ಎರಡು ಹಿಂದಿ ಗೀತೆಗಳ ಬಗ್ಗೆ ಹೇಳಬೇಕೆನಿಸುತ್ತಿದೆ. ಇದೂ ಒಂಥರ ‘ಎತ್ತಣ ಮಾಮರ? ಎತ್ತಣ ಕೋಗಿಲೆ?ಯಂತಹ ಸಂಬಂಧವೇ.

ಮೊದನೆಯದು:- (ಚಿತ್ರ : ಅನೋಖಿ ರಾತ್, ಗಾಯಕ: ಮುಕೇಶ್ ) ‘ಓಹ್ ರೆ ತಾಲ್ ಮಿಲೆ ನದಿ ಕೆ ಜಲ್ ಮೆ’ ಹಾಡು. ಅಲ್ಲಿ ಅಲ್ಲಮ ಬಳಸಿದ ಬೆಟ್ಟ, ಬಯಲಿಗೆ ಸರಿಸಾಟಿಯಾಗುವಂತೆ, ಇಲ್ಲಿಯೂ ಬೃಹತ್ ಪ್ರತಿಮೆ ಸಾಗರವಿದೆ. ‘ಸಣ್ಣ ಹಳ್ಳಗಳೆಲ್ಲ ತಮ್ಮ ಗಮ್ಯವನ್ನರಸಿ ನದಿಯತ್ತ ಓಡಿದರೆ, ಓಡುವ ನದಿ ಸಾಗರ ಸೇರಿತು. ಆದರೆ ಸಾಗರ ತನ್ನ ಎದೆಯಳಲನ್ನು ತೋಡಿಕೊಳ್ಳಲು ಮತ್ತಾರ ಆಸರೆ ಬಯಸಿ, ಅದೆಲ್ಲಿ ತಾನೇ ಹೋಗಲಾದೀತು?’

ಎರಡನೆಯದು:- (ಚಿತ್ರ : ಅಮರ ಪ್ರೇಮ್, ಗಾಯಕ: ಕಿಶೋರ್ ಕುಮಾರ್) “ಚಿಂಗಾರಿ ಕೋಯಿ ಬಢಕೆ, ಸಾವನ್ ಉಸೆ ಬುಝಾಯೆ” ಹಾಡು. ಮರಗಿಡಗಳಲ್ಲೇಳುವ ಸಣ್ಣಪುಟ್ಟ ಕಿಡಿಗಳನ್ನು ಶಮನಗೊಳಿಸುತ್ತದೆ ಮಳೆ. ಆದರೆ ಅದೇ ಮಳೆಯೇ ಬೆಂಕಿಯಾಗಿ ಸುರಿಯತೊಡಗಿದರೆ ಅದನ್ನು ಆರಿಸಬಲ್ಲವರು ಯಾರಿಹರು? ಚಳಿಗಾಲದಲ್ಲಿ ನಿರ್ಜೀವವಾಗಿ ತೋರುವ ಹಸಿರು ವಸಂತದಲ್ಲಿ ನಳನಳಿಸುತ್ತದೆ. ಆದರೆ ಅದೇ ವಸಂತವೇ ತೋಟವನ್ನು ನಾಶಪಡಿಸಿದರೆ ಆ ಹಸಿರನ್ನು ನಗಿಸುವವರು ಇನ್ನಾರು? ‘ಮನಮೀತ್ ಜೋ ಘಾವ್ ಲಗಾಯೆ, ಉಸೆ ಕೌನ್ ಮಿಟಾಯೆ?’ ಇದಂತೂ ಜಗತ್ತಿನ ನಿಷ್ಟುರ ಸತ್ಯಗಳಲ್ಲೊಂದು. ಅತಿಯಾಗಿ ಪ್ರೀತಿಸುವವರೇ ನಮ್ಮ ನೋವಿಗೂ ಕಾರಣರಾಗುವುದು ಪ್ರೀತಿಸುವವರ ಪಾಲಿನ ದೊಡ್ಡ ದುರಂತ!

“ಚಿಂಗಾರಿ ಕೋಯಿ ಬಢಕೆ” – ಗೀತೆಯ ಕೆಲವು ನುಡಿಗಳನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ. ಈ ಅವಸರದ ಅನುವಾದವನ್ನು ಮತ್ತಷ್ಟು ಉತ್ತಮಪಡಿಸಿಕೊಡಬಲ್ಲವರಿಗೆ ಸ್ವಾಗತ.

ಗಿಡಮರಗಳಿಂದ ಕಿಡಿಗಳುರಿಯೆ
ತಂಪಾಗುವುದು ಸುರಿದು ಮಳೆ
ಮಳೆಯೇ ಬೆಂಕಿಯಾಗಿ ಸುರಿಯೆ
ಮೊರೆಹೋಗುವುದು ಅದಾರನಿಳೆ?

ಶರದದಲಿ ಹಾಳು ಬೀಳುವ ವನ
ನಗಿಸುವುದದನು ವಸಂತನಾಗಮನ
ವಸಂತದಲೇ ಬೀಳಾಗಲು ಹಸಿರು
ತುಂಬುವರಾರು ಅದಕೆ ಉಸಿರು?

ಕೇಳದಿರು ನನ್ನ ಕೇಳದಿರು
ಸ್ವಪ್ನ ಸೌಧ ಕುಸಿದ ಕಥೆಯ
ಪರರೆದುರಲಿ ಹಂಚುವಂತಿಲ್ಲ
ಒಳಗೇ ಮರುಗಿ ನುಂಗಬೇಕಿದೆ ವ್ಯಥೆಯ

ವೈರಿಯೊಬ್ಬ ಇರಿಯೆ ಎದೆಯ
ಮರೆಸಿ ನೋವ ನಗಿಸಲಿರುವ ಗೆಳೆಯ
ಎದೆಯೊಲವೇ ಎದೆಯ ಗಾಯಗೊಳಿಸಲು
ಯಾರಿಂದಲಾದೀತು ಆ ನೋವ ಶಮನಗೊಳಿಸಲು?

*****************************

8 thoughts on “ಅಲ್ಲಮ, ಮುಕೇಶ್ ಮತ್ತು ಕಿಶೋರ್”

  1. ಅಲ್ಲಮನ ವಚನಕ್ಕೂ, ಕಿಶೋರ ಹಾಗು ಮುಕೇಶ ಅವರ ಹಾಡುಗಳಿಗೂ ನೀವು ತೋರಿಸಿದ ಹೋಲಿಕೆ ಅನನ್ಯವಾಗಿದೆ. ಅದರಂತೆಯೇ ಅನುವಾದವೂ ಸಹ ಸುಂದರವಾಗಿದೆ.

  2. ಕಾಕಾ, ಧನ್ಯವಾದಗಳು. ಅನುವಾದವೆನ್ನದಿರಿ. ಹಾಗೇ ತೋಚಿದ್ದು… ಗೀಚಿದ್ದು….

  3. ಕಾಳ್ಗಿಚ್ಚು ಹತ್ತುರಿಯಲು
    ಶ್ರಾವಣ ಸುರಿಸಿತು ಮಳೆನೀರು
    ಶ್ರಾವಣವೇ ಕಿಚ್ಚ್ನನು ಹಚ್ಚಲು
    ನೀರನು ಎರೆಯುವರಾರು

  4. ಕೇವೆಂ, ನಿಮ್ಮ ಅನುವಾದ ತುಂಬಾ ಚೆನ್ನಾಗಿದೆ. ಎಲ್ಲಾ ಸಾಲುಗಳನ್ನೂ ನೀವು ಅನುವಾದಿಸಿರಬಾರದಿತ್ತೇ? .. ಎಂದು ಅನಿಸುವಂತೆ…. ಇದೆ 🙂

Leave a Reply to deeksha Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.