ಅವರಿರುತ್ತಾರೆ, ಇರಲೇಬೇಕು
ಮಾತು ಬಲ್ಲ ಜನ
ವೇದಿಕೆ ಮೇಲೇರಿದರೆ ವೇದಿಕೆಗೇ
ಅಲಂಕಾರ, ಕಳಸಪ್ರಾಯ!
ತಿದ್ದಿ ತೀಡಿದಂತಹ
ಆರೋಗ್ಯದ ಕೆಂಪು ಚಿಮ್ಮುವ
ಚೆಲುವಾದ ಮುಖದಲ್ಲಿ
ಕಿರುನಗೆಯದೇ ಕಾರುಬಾರು
ನುಡಿದರೆ ಯಾರೂ ಮೆಚ್ಚಿ
ತಲೆದೂಗಲೇಬೇಕು
‘ಹೌದಪ್ಪಾ ಹೌದು!’
ಏನು ಮಾತಾಡಿದರೂ ಚಂದ.
ನುಡಿವುದೆಲ್ಲ ಬಲು ಸೊಗಸು
ಬೆಣ್ಣೆಯಲ್ಲಿ ಕೂದಲು ತೆಗೆದಂತೆ
ನಯವಾಗಿ, ನುಣುಪಾಗಿ
ಜಾಗರೂಕತೆಯಲ್ಲಿ ಅಳೆದು ತೂಗಿ
ಚಚ್ಚೌಕದ ಮಾತೇ ನೀಟು
ಎಳೆದಂತೆ ನೇರ ಗೀಟು
ಸವಿದಷ್ಟು ಸವಿಕೊಡುವ
ಸವಿ ಮಾತಿನ ಬುತ್ತಿ
ರಾಮಾಯ ಸ್ವಸ್ತಿ;
ರಾವಣನಿಗೂ!
ಅಬ್ಬಾ ಆ ಜಾಣತನವೇ!
ಯಾವ ಹೂಮನವೂ ಬಾಡದು
ಯಾರನ್ನೂ ನೋಯಿಸದು
ಅಪ್ರಿಯ ಸತ್ಯ ಎತ್ತಾಡಬೇಕೇಕೆ?
ಎಲ್ಲವೂ ಸಭ್ಯ, ಸುಂದರ
ಕಾಣುವ ಕಣ್ಣಿರಬೇಕು ಅಷ್ಟೆ.
ಯಾರಿಗೂ ಹೊರೆಯಾಗದ
ಕೊರೆಯಾಗದ, ಕಿರಿಕಿರಿಯಾಗದ
ನಿಷ್ಟುರ ಕ್ರೌರ್ಯವೆನಿಸದ
ಸರಸಭಾರತಿ ವಿಲಾಸ!
ಅಸಮಾಧಾನಕ್ಕೆಡೆಯೆಲ್ಲಿ ಅಲ್ಲಿ
ಸುತ್ತ ನಿರ್ಮಲ ಮಂದಹಾಸ!
ಮಾತಿನ ಮುತ್ತಿನ ಹಾರ
ಇಷ್ಟೊಂದು ಅಚ್ಚುಕಟ್ಟಾಗಿ
ಪೋಣಿಸಿಡುವುದ ಇವರೆಲ್ಲ
ಅದೆಲ್ಲಿ ಕಲಿತರೋಪ್ಪ!
ಎಂದು ಅಚ್ಚರಿಯಾಗುತ್ತದೆ.
ಸೊಗಸಾದ ಕವನ.
ಕಾಕಾ, ವಂದನೆಗಳು.
ಸೊಗಸಾದ ಕವನ