ರಚನೆ : ಪುರಂದರದಾಸರು
ಗಾಯಕ – ವಿದ್ಯಾಭೂಷಣ
ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ||
ಆನೆ ಕುದುರೆ ಒಂಟೆ ಲೊಳಲೊಟ್ಟೆ
ಸೇನೆ ಭಂಡಾರವು ಲೊಳಲೊಟ್ಟೆ
ಮಾನಿನಿಯರ ಸಂಗ ಲೊಳಲೊಟ್ಟೆ
ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆ ||೧||
ಮುತ್ತು ಮಾಣಿಕ್ಯ ಲೊಳಲೊಟ್ಟೆ
ಚಿನ್ನ ಛತ್ರ ಚಾಮರ ಧ್ವಜ ಲೊಳಲೊಟ್ಟೆ
ಸುತ್ತಗಲ ಕೋಟೆ ಲೊಳಲೊಟ್ಟೆ
ಮತ್ತೆ ಉತ್ತಮಪ್ರಭುತ್ವ ಲೊಳಲೊಟ್ಟೆ ||೨||
ಕಂಟಕರೆಂಬೋದು ಲೊಳಲೊಟ್ಟೆ
ನಮ್ಮ ನೆಂಟರು ಇಷ್ಟರು ಲೊಳಲೊಟ್ಟೆ
ಉಂಟಾದ ಗುಣನಿಧಿ ಪುರಂದರವಿಠಲನ
ಬಂಟನಾಗದವ ಲೊಳಲೊಟ್ಟೆ ||೩||