ರಚನೆ : ಪುರಂದರದಾಸರು
ವಿದ್ಯಾಭೂಷಣರ ದನಿಯಲ್ಲಿ

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ
ನಿನಗೆ ನಮೋ ನಮೋ ||ಪಲ್ಲವಿ||

ಸುಂದರ ಮೃಗಧರ ಪಿನಾಕಧನುಕರ
ಗಂಗಾಶಿರ ಗಜಚರ್ಮಾಂಬರಧರ ||ಅನು||

ನಂದಿವಾಹನಾನಂದದಿ೦ದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತಘಟದಿಂದುದಿಸಿದ ವಿಷತ೦ದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿ೦ದ ಕಣ್ತೆರೆದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀರಾಮನ ನಾಮವ ಚಂದದಿ ಪೊಗಳುವ ನೀನೆ ||೧||

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವನು ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೆ
ಕಾಲ ಕೂಟವನುಪಾನಮಾಡಿದ ನೀಲಕಂಠನು ನೀನೆ
ಜಾಲಮಾಡಿದ ಗೋಪಾಲನೆ೦ಬ ಹೆಣ್ಣಿಗೆ ಮರುಳಾದವ ನೀನೆ ||೨||

ಧರೆಗೆ ದಕ್ಷಿಣ ಕಾವೇರೀತೀರ ಕುಂಭಪುರವಾಸನು ನೀನೆ
ಕೊರಳೂಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀ ಪುರಂದರ ವಿಠಲಗೆ ಪ್ರಾಣಪ್ರಿಯನು ನೀನೆ ||೩||

2 thoughts on “ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ”

  1. ಪಿನಾಕ ಎಂದರೆ ಏನು, ಪಿನಾಕಪಾಣಿ ಎಂದರೆ ಏನು? ಕೆಲವರು ಹೇಳುತ್ತಾರೆ ಪಿನಾಕ ಎಂದರೆ ತ್ರಿಶೂಲ ಎಂದು. ಮತ್ತೆ ಕೆಲವರು ಹೇಳುತ್ತಾರೆ ಬಿಲ್ಲು ಎಂದು. ಯಾವುದು ಸರಿ. ದಯಮಾಡಿ ತಿಳಿಸಿ.

    1. ಪಿನಾಕ ಧನುಸ್ಸು – ರಾಮ ಮುರಿದ ಶಿವ ಧನುಸ್ಸು. ಪಿನಾಕವನ್ನು ಹಿಡಿದವನು ಪಿನಾಕಿ. ಆ ಬಿಲ್ಲಿನ ಮೇಲ್ಭಾಗದಲ್ಲಿ ತ್ರಿಶೂಲಾಕಾರ ಇತ್ತು.

      ಶಿವನ ತ್ರಿಶೂಲಕ್ಕೂ ‘ಪಿನಾಕ’ ಎಂಬ ಹೆಸರಿದೆ. ಆದ್ದರಿಂದ ಎರಡು ಸರಿ ಸಾಂದರ್ಭಿಕ ಅರ್ಥವನ್ನು ಮಾಡಬೇಕು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.