ಸಾಹಿತ್ಯ, ಸಂಗೀತ : ಡಾ. ಚಂದ್ರಶೇಖರ ಕಂಬಾರ
ಮರೆತೇನೆಂದರ ಮರೆಯಲಿ ಹ್ಯಾಂಗ
ಮಾವೋ-ತ್ಸೆ-ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ…. ಹಾ
ಪಂಚಭೂತದಾಗ ವಂಚನೆ ಕಂಡಿ
ಕಣ್ಣಿನಂಚಿನಾಗ ಹೊಸ ಜಗ ಕಂಡಿ
ಸೊನ್ನಿಗೆ ಆಕಾರ ಬರೆದೇನೆಂದಿ
ಬಯಲಿಗೆ ಗೋಡೆ ಕಟ್ಟೇನೆಂದಿ
ಸಚರಾಚರಗಳ ರಚನೆ ಮಾಡೋದಕ್ಕ
ಬೇರೊಬ್ಬ ಸೂರ್ಯನ ತರತೇನೆಂದ್ಯೋ
ಕಣ್ಣೀರಿನ ಹೊಳಿಗಡ್ಡ ಕಟ್ಟಿದಿ
ಹರಿವ ನೆತ್ತರಕ ಒಡ್ಡ ಕಟ್ಟಿದಿ
ಮಡುವಿನ ನಡುವ ಕಾಲನೂರಿಕೊಂಡ
ಬತ್ತಿಯಾಗಿ ತಲಿ ಹೊತ್ತಿಸಿಕೊಂಡಿ
ಮನುಷ್ಯರ ಮುರಿದಿ ತೇರ ಕಟ್ಟಿದಿ
ಹತ್ತವತಾರದ ಕುದುರೆಯ ಜೋಡಿ…ಹಾ
ಹತ್ತಕುದಿರಿಯ ಹಳದಿ ದೇವರು
ಸ್ವಯಂ ಸೂರ್ಯ ನಾ ಬಂದೇನೆಂದ್ಯೋ
ಬೆಂಕಿ ಹಚ್ಚಿದಿ ಬೇಲ್ಯಾಗ ನಿಂತಿ
ಸಿದ್ಧಸಿದ್ಧರ ಗುದ್ದ ಹೊಗೆಸಿದಿ
ಹಂಗ ಬಿಟ್ಟ ಹಂಗಾಮದ ಬೆದಿಗಿ
ಕೈಯ ಬೀಸಿ ಕೈಲಾಸವ ಕರೆದಿ
ಹಳದಿ ಬಿತ್ತಿದಿ ಹಳದಿಯ ಬೆಳೆದಿ
ಮುಳ್ಳಬೇಲಿಗೂ ಹೂವಿನ ಹಳದಿ
ಬಣ್ಣದ ಹೆಸರಾ ಬದಲ ಮಾಡಿದ್ಯೋ
ಕಣ್ಣಿನ ಕಾಮಾಲೆ ತಿಳಿಯದೆ ಹೋದ್ಯೋ
ಹರಕ ಹುಬ್ಬಿನ ತಿರುಕರ ಅರಸ
ಡೊಳ್ಳ ಹೊಟ್ಟೆಯ ಹಸಿದವರರಸ
ದಿನಾ ಹುಟ್ಟಿದಿ ದಿನಕೊಮ್ಮೆ ಸಾಯ್ತಿ
ಸುದ್ದಿಯ ಕಣ್ಣ ಒದ್ದಿ ಮಾಡಿದಿ
ಗ್ಲೋಬಿನರ್ಧಕ ಸಾಯೋದ ಕಲಿಸಿ
ಸ್ವತಃ ಸಾಯಲಿಕೆ ಬಾರದೆ ಹೋದಿ
ಕಟ್ಟಿದ ಗೋಡೆಗೆ ಕಳಸ ಏರಿತು
ಬದುಕಿದ ಜೀವ ಕಥೆಯಾಗಿತ್ತೋ
ಬಟಾಬಯಲಿನಾಗ ಮಟಾಮಾಯಾಗಿ
ಬೆಂಕಿ ಆರಿ ಬರಿ ಬೆಳಕುಳಿದಿತ್ತೋ
ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ-ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ…. ಹಾ
ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪುರಸ್ಕಾರ ತಂದುಕೊಟ್ಟ ಡಾ. ಚಂದ್ರಶೇಖರ ಕಂಬಾರರಿಗೆ ಹಾರ್ದಿಕ ಅಭಿನಂದನೆಗಳು.
ಕಂಬಾರರ ಸರಿಯಾದ ಕವನವನ್ನು ಸಕಾಲಿಕವಾಗಿ ನೀಡಿದ್ದೀರಿ. ನಿಮ್ಮ ತಾಣದ ಮೂಲಕ ಕಂಬಾರರಿಗೆ ಅಭಿನಂದನೆಗಳು.
ಈ ಕಾವ್ಯ ನನಗೆ ಬೇಕು ಎಲ್ಲಿ ಸಿಗುತ್ತದೆ?